ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಟಿಲ ಲಿಪಿ

ವಿಕಿಸೋರ್ಸ್ ಇಂದ
Jump to navigation Jump to search

ಕುಟಿಲ ಲಿಪಿ

ಒಂದು ವಿಶೇಷ ರೀತಿಯ ನಾಗರೀ ಲಿಪಿ. ಸು.6ನೆಯ ಶತಮಾನದಿಂದ 9ನೆಯ ಶತಮಾನದವರೆಗೆ ಇದು ಉತ್ತರ ಭಾರತದಲ್ಲಿ ಪ್ರಚಲಿತವಾಗಿತ್ತು. ಅಕ್ಷರಗಳ ನೇರ ಗೆರೆಗಳೆಲ್ಲ ಕೆಳಭಾಗದಲ್ಲಿ ಬಲಕ್ಕೆ ಬಾಗಿದಂತಿರುವುದೂ ಸಂಯುಕ್ತ ಸ್ವರಚಿಹ್ನೆಗಳು ಉದ್ದಕ್ಕೆ ಅಂಕುಡೊಂಕಾಗಿರುವುದೂ ಇದರ ವೈಶಿಷ್ಟ್ಯ. ಈ ರೀತಿಯ ಅಕ್ಷರಗಳ ವಕ್ರರೂಪದಿಂದಲೇ ಈ ಲಿಪಿಗೆ ಕುಟಿಲ ಎಂಬ ಹೆಸರು ರೂಢವಾದಂತೆ ಕಾಣುತ್ತದೆ. ಕುಟಿಲ ಲಿಪಿಯ ಪ್ರಾರಂಭಿಕ ಘಟ್ಟವನ್ನು ಯಶೋವರ್ಮನ ಮಂಡಸೋರ್ ಶಿಲಾಲೇಖದಲ್ಲೂ ಮಹಾನಾಮನ ಬುದ್ದಗಯೆಯ ಶಾಸನಗಳಲ್ಲೂ ಕಾಣಬಹುದು. ಮೌಖರಿ ಅರಸರ ಶಾಸನಗಳು, ಹರ್ಷವರ್ಧನನ ತಾಮ್ರಪಟಗಳು, ಚಂಬಾದ ಮೇರುವರ್ಮನ ಶಾಸನಗಳು, ಮಾಳವ ಮತ್ತು ರಾಜಾಸ್ಥಾನದಲ್ಲಿ ದೊರಕಿರುವ ಪ್ರತಿಹಾರ ರಾಜರ ಶಾಸನಗಳು, ಜಪಾನಿನಲ್ಲಿ ಹೊರ್ಯುಜೀ ಬೌದ್ಧ ಮಂದಿರದಲ್ಲಿಟ್ಟಿರುವ ಪ್ರಜ್ಞಾಪಾರಮಿತ, ಹೃದಯ ಸೂತ್ರ ಮತ್ತು ಉಷ್ಣೀಪ ವಿಜಯ ಎಂಬ ಹಸ್ತಪತ್ರಿಗಳು- ಇವೆಲ್ಲ ಈ ಲಿಪಿಯಲ್ಲೇ ಇವೆ. ಇಂದಿನ ದೇವನಾಗರೀ ಅಕ್ಷರಗಳ ಮೂಲರೂಪಗಳು ಈ ಲಿಪಿಯಲ್ಲಿ ಕಂಡುಬರುತ್ತವೆ.

 

(ಎಸ್.ಎನ್.)