ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಪ್ಪಳುಕೀಟ
ಕುಪ್ಪಳುಕೀಟ
ಕುಪ್ಪಳಿಸುತ್ತ ಹಾರುವ ಮಧ್ಯಮಗಾತ್ರದ ಕೀಟ. (ವಿಭಾಗ: ಆತ್ರ್ರೊಪೊಡ, ವರ್ಗ: ಇನ್ಸೆಕ್ಟ, ಗಣ : ಆರ್ಥಾಪ್ಟಿರ, ಕುಟುಂಬ: ಗ್ರಿಲ್ಲಿಡೀ). ಚಿಮ್ಮಂಡೆ ಎಂಬ ಹೆಸರೂ ಇದೆ. ಇದರ ವದನಾಂಗಗಳು ಕಚ್ಚುವುದಕ್ಕೆ ಅನುಕೂಲವಾಗಿದೆ. ಉದ್ದನೆಯ ಕುಡಿಮೀಸೆಗಳಿವೆ. ಹಿಂದಿನ ಕಾಲುಗಳು ಉದ್ದವಾಗಿ ಮತ್ತು ದಪ್ಪನಾಗಿ ನೆಗೆಯುವುದಕ್ಕೆ ಮಾರ್ಪಟ್ಟಿವೆ. ಕಾಲಿನ ಕೊನೆಯ ಖಂಡ (ಟಾರ್ಸಸ್) ಮೂರು ತುಂಡುಗಳನ್ನೊಳಗೊಂಡಿದೆ. ಮುಂದಿನ ರೆಕ್ಕೆಗಳು ದಪ್ಪವಾಗಿವೆ, ಹೆಣ್ಣಿಗೆ ಸಾಮಾನ್ಯವಾಗಿ ಪ್ರಬಲವಾದ ಬಾಹ್ಯ ಅಂಡೋಪಕರಣವಿದೆ. (ಓವಿಪಾಸಿಟರ್) ವಿಶೇಷ ತರದ ಧ್ವನಿ ಉತ್ಪಾದಕ ಮತ್ತು ಧ್ವನಿಗ್ರಾಹಕ ಅಂಗಗಳೇ ಕುಪ್ಪಳುಕೀಟಗಳ ವೈಶಿಷ್ಟ್ಯ. ಧ್ವನಿಗ್ರಾಹಕ ಅಂಗಗಳು ಮುಂಗಾಲುಗಳ ನಾಲ್ಕನೆಯ ಖಂಡದ (ಟಿಬಿಯ) ಮೇಲೆ ಇವೆ.
ಕುಪ್ಪಳುಕೀಟಗಳು ತಾವು ಮಾಡುವ ಜಿರ್ರೆಂಬ ಶಬ್ದಕ್ಕೆ ಹೆಸರಾಗಿವೆ. ಧ್ವನಿ ಉತ್ಪಾದಕ ಅಂಗಗಳೇ ಈ ಶಬ್ದಕ್ಕೆ ಕಾರಣ. ಮುಂದಿನ ಎರಡು ರೆಕ್ಕೆಗಳ ಮೇಲೆ ಅರದಂತಿರುವ ಪ್ರದೇಶಗಳ ಮೇಲೆ ರೆಕ್ಕೆಗಳನ್ನು ಪರಸ್ಪರ ಉಜ್ಜುವುದರಿಂದ ಈ ತರಹ ಶಬ್ದ ಉಂಟಾಗುತ್ತದೆ. ಕೆಲವು ಕುಪ್ಪಳುಕೀಟಗಳು (ಉದಾ: ಬ್ರಾಕಿಟ್ರೈಪಿಸ್ ಮೆಗಸಿಫ್ಯಾಲಸ್) ಮಾಡುವ ಶಬ್ದ ಸುಮಾರು ಒಂದು ಕಿಲೋ ಮೀಟರ್‍ಗೂ ದೂರ ಕೇಳುವುದುಂಟು.
ಉಷ್ಣವಲಯದಲ್ಲಿ ಕುಪ್ಪಳುಕೀಟಗಳು, ಹೆಚ್ಚು. ಇವು ಸಿಕ್ಕದ್ದನ್ನೆಲ್ಲ ತಿಂದು ಕೊಂಡು ಬೆಚ್ಚನೆಯ ಸ್ಧಳಗಳಲ್ಲಿನ ಪೊಟರೆಗಳು, ಭೂಮಿಯಲ್ಲಿರುವ ಬಿರುಕುಗಳು, ಮರದ ದಿಮ್ಮಿ, ಕಸಕಡ್ದಿ ಮುಂತಾದವುಗಳಲ್ಲಿ ವಾಸಿಸುತ್ತವೆ. ಮೋಲ್ ಕುಪ್ಪಳು ಕೀಟದಲ್ಲಿ ತೇವವಾದ ಮರಳು ನೆಲದಲ್ಲಿ ತೋಡಿಕೊಂಡು ಹೋಗುವುದಕ್ಕೆ ಅನುಕೂಲವಾಗಿ, ಮುಂಗಾಲುಗಳು ಮಾರ್ಪಟ್ಟಿವೆ. ಅಗಲವಾದ ಈ ಕಾಲುಗಳ ಮೇಲೆ ಮೊಟಕಾದ ಮುಳ್ಳಗಳಿವೆ.
ಕುಪ್ಪಳುಕೀಟಗಳು ಸಾಮಾನ್ಯವಾಗಿ ಭೂಮಿಯೊಳಗೆ ಒಂದು ಅಥವಾ ಹಲವಾರು ಮೊಟ್ಟೆಗಳನ್ನಿಡುತ್ತವೆ. ಕೆಲವು ಪ್ರಭೇದಗಳು ಸಸ್ಯಗಳ ಕಾಂಡದೊಳಗೂ ಇಡುವುದುಂಟು.
(ಜಿ.ಪಿ.ಸಿ.)