ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಬೇರ

ವಿಕಿಸೋರ್ಸ್ದಿಂದ
Jump to navigation Jump to search

ಕುಬೇರ  

  ನವನಿಧಿಗಳ ಒಡೆಯ. ಅತುಲೈಶ್ವರ್ಯಸಂಪನ್ನ. ಉತ್ತರ ದಿಕ್ಪಾಲಕ. ಇವನ ವೃತ್ತಾಂತ ರಾಮಾಯಣ, ಭಾಗವತಗಳಲ್ಲಿದೆ. ಈತ ವಿಶ್ರವಸ ಮತ್ತು ಇಲಬಿಲೆಯರ ಮಗ. ರಾವಣ, ಕುಂಭಕರ್ಣರು ಮಲಸಹೋದರರು. ಸೋಮನೆಂಬುದು ಇನ್ನೊಂದು ಹೆಸರು. ಆದುದರಿಂದಲೇ ಉತ್ತರ ದಿಕ್ಕಿಗೆ ಸೌಮ್ಯ ಎಂದೂ ಹೆಸರುಂಟು. ಯಕ್ಷರು ಇವನ ಪ್ರಜೆಗಳು. ಈತ ನರವಾಹನ. ಋದ್ಧಿ ಮತ್ತು ಯಕ್ಷಿಯರು ಇವನ ಹೆಂಡತಿಯರು. ನಳಕೂಬರ ಮಗ. ಈತ ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ಅವನ ಸ್ನೇಹಿತನಾಗಿ ಪುಷ್ವಕವಿಮಾನ ಹಾಗೂ ಲಂಕಾಧಿ ಪತ್ಯವನ್ನು ಪಡೆದು ಲಂಕೆಯಲ್ಲಿ ಅಳುತ್ತಿದ್ದ. ರಾವಣ, ಕುಂಭಕರ್ಣರು ಇವನನ್ನು ಸೋಲಿಸಿ ಲಂಕೆ ಮತ್ತು ಪುಷ್ವಕವಿಮಾನವನ್ನು ಕಸಿದುಕೊಂಡರು. ಅನಂತರ ಶಿವನ ಅನುಮತಿಯಂತೆ ಕೈಲಾಸಪರ್ವತದಲ್ಲಿ ಅಲಕಾನಗರಿಯನ್ನು ನಿರ್ಮಿಸಿಕೊಂಡು ಯಕ್ಷರಿಗೆ ಅಧಿಪತಿಯಾದ. ಮಂತ್ರಿ ಪ್ರಹಾಸ. ಮಣಿಭದ್ರ, ಮಣಿಮಂತ, ಪೂರ್ಣಭದ್ರ, ಮಣಿಕಂಧರ, ಮಣಿಭೂಷ-ಇವರು ಇವನ ಅನುಚರರು.

 ಮಹಾಭಾರತದ ಪ್ರಕಾರ ಕುಬೇರ ಪುಲಸ್ತ್ಯ ಮಹರ್ಷಿ ಮತ್ತು ಗೋ ಎಂಬುವವರ ಮಗ. ಅರ್ಜುನ ಇಂದ್ರಕೀಲ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಬಂದು ಅನೇಕ ದಿವ್ಯಾಸ್ತ್ರಗಳನ್ನು ಅವನಿಗೆ ಕೊಟ್ಟು ಹೋದ. ಭೀಮ ಸೌಗಂಧಿಕಾಪಹರಣಾರ್ಥವಾಗಿ ಹೋದಾಗ ಅವನಿಗೂ ಕುಬೇರನ ಅನುಚರರಿಗೂ ಯುದ್ಧವಾಗಿ ಕುಬೇರನ ಅನುಚರರೆಲ್ಲರೂ ಮಡಿದರು. ಈ ಸಮಾಚಾರ ತಿಳಿದ ಕುಬೇರ ಭೀಮನಲ್ಲಿಗೆ ಬಂದು ಸೌಗಂಧಿಕಪುಷ್ಪವನ್ನು ಕೊಂಡೊಯ್ಯಲು ಅನುಮತಿ ನೀಡಿದ. ಸಮುದ್ರಮಥನ ಕಾಲದಲ್ಲಿ ಬಂದ ರಂಭೆ ಇವನ ಹೆಂಡತಿ.