ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುರುಡು (ಅಂಧತ್ವ)
ಕುರುಡು (ಅಂಧತ್ವ)
ಕುರುಡುತನ ಅಥವಾ ಅಂಧತ್ವ ಒಂದು ಜಾಗತಿಕ ಸಮಸ್ಯೆ. ಈ ಸಮಸ್ಯೆ ಮಾನವನಷ್ಟೇ ಹಳೆಯದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 27-33 ಮಿಲಿಯನ್ ಕುರುಡರು ಜಗತ್ತಿನಾದ್ಯಂತ ಇದ್ದರೆ, ಶೇಕಡಾ 65ರಷ್ಟು ಏಶಿಯಾ ಖಂಡದಲ್ಲೂ, ಶೇಕಡಾ 20ರಷ್ಟು ಆಫ್ರಿಕಾ ಖಂಡದಲ್ಲಿಯೂ ಇದ್ದಾರೆ. ಮುಂದುವರಿಯುತ್ತಿರುವ ದೇಶಗಳಲ್ಲಿ ಮುಂದುವರಿದ ದೇಶಗಳಿಗಿಂತ ಅಂಧತ್ವ ಶೇಕಡಾ 10ರಿಂದ 40 ಪಟ್ಟು ಜಾಸ್ತಿ ಇದೆ. ಮುಂದುವರಿಯುತ್ತಿರುವ ದೇಶಗಳಲ್ಲಿ ಶೇಕಡಾ 40ರಿಂದ 80ರಷ್ಟು ಅಂಧತ್ವಕ್ಕೆ ಕಣ್ಣಿನ ಪೊರೆಯೇ ಕಾರಣ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕುರುಡುತನ ಮುಖ್ಯವಾಗಿ ಒಣಗಿದ ಕಣ್ಣು ಮತ್ತು ದಡಾರ ಕಾಯಿಲೆಗಳಿಂದ ಬರುತ್ತದೆ. ಅಂಧತ್ವ, ಮಗು ಹುಟ್ಟುವಾಗ ಜನನಾಗತ ಕಾರಣಗಳಿಂದ ಬರುವ ಕುರುಡುತನದ ರೀತಿಯಲ್ಲಿ ಕಾಣಿಸಿಕೊಂಡು ವಯಸ್ಸಾದಂತೆ ಹೆಚ್ಚಾಗುತ್ತಾ ಹೋಗಿ ವ್ಯಕ್ತಿಗೆ 40 ವರ್ಷಗಳಾಗುವ ಹೊತ್ತಿಗೆ ಒಮ್ಮೆಲೇ ಜಾಸ್ತಿಯಾಗುತ್ತದೆ. ಕುರುಡುತನದ ಸಮಸ್ಯೆ ಜಾಗತಿಕವಾದರೂ, ಅದರ ಪ್ರಮಾಣ ಭಾರತದಲ್ಲಿ ಬಹಳ ಜಾಸ್ತಿ.
ಇತ್ತೀಚಿನ ರಾಷ್ಟ್ರೀಯ ಅಂಧತ್ವ ನಿವಾರಣಾ ಯೋಜನೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 12 ಮಿಲಿಯನ್ ಅಂಧರಿದ್ದಾರೆ. ಈ ಅಂಧತ್ವದ ಮುಖ್ಯ ಕಾರಣಗಳು ಕಣ್ಣಿನಪೊರೆ (ಶೇಕಡಾ 81), ಪಾರದರ್ಶಕ ಪಟಲ ಕಾರ್ನಿಯ ಮಸಕಾಗಿರುವುದು (ಶೇಕಡಾ 3), ದೃಷ್ಟಿದೋಷಗಳು (ಶೇಕಡಾ 7), ಟ್ರಕೋಮಾ ಮತ್ತಿತರ ಸೋಂಕುರೋಗಗಳು(ಶೇಕಡಾ 0.2) `ಎ' ಅನ್ನಾಂಗದ ಕೊರತೆ (ಶೇಕಡಾ 0.04), ಗ್ಲೊಕೋಮಾ (ಶೇಕಡಾ 2), ಇನ್ನುಳಿದ ಕಾರಣಗಳು ಶೇಕಡಾ 6.76, ಪ್ರತೀ ವರ್ಷ ಈ ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತದೆ.
ಭಾರತದಲ್ಲಿನ ಅಂಧತ್ವಕ್ಕೆ ಮುಖ್ಯ ಕಾರಣಗಳು ಅಗಾಧವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಹೆಂಗಸರು ಮತ್ತು ಗಂಡಸರು ಇಬ್ಬರಲ್ಲಿಯೂ ಮೊದಲಿಗಿಂತ ಹೆಚ್ಚಿರುವ ಆಯುಷ್ಯ, ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಿಗೆ ಕಣ್ಣಿನ ಚಿಕಿತ್ಸೆ ಸಮರ್ಪಕವಾಗಿ ಲಭಿಸದೆ ಇರುವುದು, ತಾಯಿ ಮತ್ತು ಮಗುವಿನಲ್ಲಿ ಆಹಾರದಲ್ಲಿನ ಪೌಷ್ಠಿಕಾಂಶಗಳ ಕೊರತೆ, ಅನಾರೋಗ್ಯಕರ ವಾತಾವರಣ, ಮನೆಗಳಲ್ಲಿನ ಗಲೀಜಿನ ಪರಿಸರ, ಕಣ್ಣಿನ ಚಿಕಿತ್ಸೆ-ಅದರ ಲಭ್ಯತೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದು, ಕಣ್ಣಿನ ಶಸ್ತ್ರಕ್ರಿಯೆಗಳ ಬಗ್ಗೆ ಹುಟ್ಟಿಕೊಂಡಿರುವ ವಿವಿಧ ತಪ್ಪುಕಲ್ಪನೆಗಳು, ಕಣ್ಣಿನ ಚಿಕಿತ್ಸೆ, ಸೌಲಭ್ಯ-ಸರಿಯಾದ ಪ್ರಮಾಣದಲ್ಲಿ ಬೆಳವಣಿಗೆ ಆಗದಿರುವುದು ಇತ್ಯಾದಿ.
(ಪರಿಷ್ಕರಣೆ: ಡಾ|| ಎಚ್.ಎಸ್.ಮೋಹನ್)