ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲನಿಷ್ಠ ಜನಸಮುದಾಯಗಳು

ವಿಕಿಸೋರ್ಸ್ದಿಂದ

ಕುಲನಿಷ್ಠ ಜನಸಮುದಾಯಗಳು

ನಾಗರಿಕತೆಯಲ್ಲಿ ತಮ್ಮವೇ ಆದ ವರ್ಣಭೇದ, ರಾಷ್ಟ್ರೀಯತೆ ಮತ್ತು ಸಾಂಸ್ಕøತಿಕ ಭೇದಗಳನ್ನು ಹೊಂದಿರುವ ಜನ ಸಮುದಾಯಗಳಿಗೆ ಈ ಹೆಸರಿದೆ (ಎತ್ನಿಕ್ ಕಮ್ಯೂನಿಟೀಸ್). ಮೇಲಿನ ಗುಣಲಕ್ಷಣಗಳನ್ನು ಗಮನಿಸಿದರೆ ಇವುಗಳೊಂದೊಂದರ ಜೀವನ ಕ್ರಮವೂ ವಿಶಿಷ್ಟ ರೀತಿಯದೆಂಬ ಅಂಶ ಸ್ಪಷ್ಟವಾಗುತ್ತದೆ. ಇವುಗಳಲ್ಲಿ ಕೆಲವು ಇತರ ನಾಗರಿಕತೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರಬಹುದು. ಕೆಲವು ಯಾವ ಸಂಪರ್ಕಕ್ಕೂ ಒಳಗಾಗದೆ ಇರಬಹುದು. ಕುಲನಿಷ್ಠ ಸಮುದಾಯದ ಶಬ್ದಶಃ ಅರ್ಥ ಜನಾಂಗ ಇಲ್ಲವೆ ವರ್ಣವೆಂದು (ಜಾತಿ) ಆಗುತ್ತಿದ್ದರೂ ವಿಶಾಲವಾದ ಅರ್ಥದಲ್ಲಿ ಸಂಸ್ಕøತಿಯೆಂದೇ ಆಗುತ್ತದೆ.

ಕುಲನಿಷ್ಠ ಸಮುದಾಯಗಳು ತಮ್ಮ ಸಾಮಾಜಿಕ ಸಂಸ್ಥೆಗಳ ಏಕರೂಪತೆ ಮತ್ತು ವಿವಿಧತೆಗಳಿಂದ ಸ್ವಯಂಸ್ಫೂರ್ತಿಯನ್ನು ಪಡೆದು ಬದುಕಿವೆ. ಬಹುಸಂಖ್ಯೆಯ ಜನಸಮುದಾಯಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾಯಂ ಆಗಿ ವಲಸೆ ಹೋದಾಗ ಅವುಗಳಲ್ಲೇ ಪ್ರತ್ಯೇಕತೆ ಏರ್ಪಟ್ಟು ಕುಲನಿಷ್ಠ ಸಮುದಾಯಗಳ ಜನನವಾಗಬಹುದು. ಇಂಥ ಘಟನೆಗಳಲ್ಲಿ ಮೂಲನಿವಾಸಿಗಳು ತಮ್ಮತನವನ್ನು ಕಳೆದುಕೊಳ್ಳುವುದಿಲ್ಲ. ಹೊರಗಿನಿಂದ ಬಂದವರೊಡನೆ ಒಂದು ವೇಳೆ ಕೂಡಿಕೊಂಡರೂ ತಮ್ಮ ಪುರಾತನ ರೀತಿ ನೀತಿಗಳನ್ನು, ತಮ್ಮ ಭಾಷೆಯನ್ನು , ತಮ್ಮ ಸಾಂಘಿಕ ಪ್ರಜ್ಞೆಯನ್ನು ಉಳಿಸಿಟ್ಟುಕೊಳ್ಳುತ್ತಾರೆ. ಆಧುನಿಕ ತುರ್ಕಿಸ್ತಾನ ತನ್ನ ರಾಷ್ಟ್ರೀಯ ಗುಣಧರ್ಮವನ್ನು ಬೆಳೆಯಿಸುವಲ್ಲಿ ಅಲ್ಲಿನ ಕುಲನಿಷ್ಠ ಸಮುದಾಯಗಳಿಂದ ಆಗುತ್ತಿದ್ದ ತೊಂದರೆಗಳನ್ನು ಗಮನಿಸಿ ಕೂಡಲೆ ಅಂಥ ಸಮುದಾಯಗಳ ವೈಶಿಷ್ಟ್ಯಗಳನ್ನು ಕಡಿಮೆ ಮಾಡಲುದ್ಯೋಗಿಸಿತು. ಇಡೀ ಜನತೆಯಲ್ಲಿ ಇಂಥ ಒಂದು ಸಮತೆಯನ್ನು ತರುವುದು ಹಳೆಯ ಸಾರ್ವಭೌಮ ಸರ್ಕಾರಕ್ಕೆ ಶಕ್ಯವಾಗಿರಲಿಲ್ಲ.

ಕುಲನಿಷ್ಠ ಸಮುದಾಯಗಳು ಬೇರೆ ಪ್ರದೇಶದಿಂದ ವಲಸೆ ಬಂದಿದ್ದಂಥವಾಗಿದ್ದರೆ ಅವು ತಮ್ಮತಮ್ಮಲ್ಲಿರುವ ಒಕ್ಕಟ್ಟನ್ನು ಬಲಪಡಿಸಿಕೊಳ್ಳುತ್ತವಲ್ಲದೆ ಉಳಿದ ಸಮುದಾಯಗಳೊಡನೆ ಕೂಡಿಕೊಳ್ಳದೆ ಪ್ರತ್ಯೇಕವಾಗಿರಲು ಯತ್ನಿಸುತ್ತವೆ. ವಲಸೆಗೆ ಕಾರಣಗಳು ಮುಖ್ಯವಾಗಿ ಎರಡು. ಒಂದು ಜೀವನೋಪಾಯಕ್ಕೆ ಸಂಬಂಧಿಸಿದ್ದು. ತನ್ನ ಜನಕ್ಕೆ ಅನ್ನ, ಆಹಾರ, ಉಡಿಗೆ, ತೊಡಿಗೆ, ದನಕರುಗಳಿಗೆ ಹುಲ್ಲು, ನೀರು ಬೇಕಾಗಿರುವುದರಿಂದ ಅದನ್ನು ಅರಸಿ ಇಡೀ ಪಾಳೆಯವೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆಯಬಹುದು. ಇನ್ನೊಂದು ಘರ್ಷಣೆ ಮತ್ತು ಯುದ್ಧಗಳಿಗೆ ಸಂಬಂಧಿಸಿದ್ದು. ಗೆದ್ದವರು ನೆಲವನ್ನು ಆಕ್ರಮಿಸಿದಾಗ ಸೋತವರು ಜಾಗ ಬಿಡಬೇಕಾಗುತ್ತದೆ. ಬ್ಯಾಬಿಲೋನದಲ್ಲಿನ ಜ್ಯೂ ಜನಕ್ಕೆ ಹೀಗಾಯಿತು. ಒಂದು ಜನಸಮೂಹ ಬಂಧಿಸಲ್ಪಟ್ಟಾಗ ಇಲ್ಲವೆ ಅಮೆರಿಕದಲ್ಲಿನ ನೀಗ್ರೋ ಜನರಂತೆ ಗುಲಾಮಗಿರಿಗೆ ತುತ್ತಾದಾಗ ನಿಷ್ಠ ಸಮುದಾಯಗಳು ತಮ್ಮವೇ ಆದ ರೀತಿಯಲ್ಲಿ ಬೆಳೆಯಬಹುದು.

ಪರದೇಶಗಳಲ್ಲಿ ಮುಖ್ಯವಾಗಿ ಹಿಂದುಳಿದ ದೇಶಗಳಲ್ಲಿ ಆಡಳಿತ ಹಾಗೂ ವ್ಯಾಪಾರಗಳನ್ನು ತಮ್ಮ ಕೈಲಿಟ್ಟುಕೊಂಡಿರುವ ಜನಸಮೂಹಗಳು ಕುಲನಿಷ್ಠ ಸಮುದಾಯಗಳೇ ಆಗಿವೆ. ಇಂಗ್ಲಿಷ್ ಜನ ಐರಿಷ್ ಜನರನ್ನು ಮದುವೆಯಾಗಬಾರದೆಂಬ ಕಾನೂನನ್ನು ಇಂಗ್ಲಿಷರು ತಂದದ್ದು ಐರಿಷ್ ಜನರ ಮೇಲೆ ತಮ್ಮ ಅಧಿಕಾರವನ್ನು ಉಳಿಸಿ ಕೊಳ್ಳುವುದಕ್ಕಾಗಿಯೇ. ಹಾಗೆಯೆ ದಕ್ಷಿಣ ಆಫ್ರಿಕೆಯಲ್ಲಿ ಮೂಲನಿವಾಸಿಗಳಿಂದ ಮತ್ತು ಇನ್ನಿತರ ಜನಾಂಗಗಳಿಂದ ತಮ್ಮ ಅಧಿಕಾರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಬಿಳಿಯರು ವರ್ಣಭೇಧ ನೀತಿಯ ಕಾನೂನನ್ನು ಜಾರಿಗೆ ತಂದರು. ಇಂಗ್ಲಿಷರು ಭಾರತದಲ್ಲಿ ವ್ಯಾಪಾರಕ್ಕಾಗಿ ಬಂದಾಗ ಈಸ್ಟ್ ಇಂಡಿಯ ಕಂಪನಿಯಲ್ಲಿಯ ಕೆಲಸಗಾರರು ತಮ್ಮದೇ ಆದ ಪ್ರದೇಶಗಳನ್ನು ಹೊಂದಿ ತಮ್ಮ ಭಾಷೆ ಮತ್ತು ಸಂಸ್ಕøತಿಯನ್ನು ಬೆಳೆಯಿಸಿಕೊಂಡದ್ದು ತಮ್ಮ ಶ್ರೇಷ್ಠತೆಯನ್ನು ಕಾಯ್ದಕೊಳ್ಳುವುದಕ್ಕಾಗಿಯೇ.

ಕೆಲವೊಮ್ಮೆ ಸೈನಿಕ ಸಮೂಹಗಳು ಯುದ್ಧ ಮುಗಿದ ಅನಂತರ ಆಕ್ರಮಿತ ಪ್ರದೇಶದಲ್ಲೇ ಶಾಶ್ವತವಾಗಿ ನೆಲೆಯೂರಿ ತಮ್ಮವೇ ಆದ ಕುಲನಿಷ್ಠ ಸಮುದಾಯಗಳನ್ನು ನಿರ್ಮಿಸುತ್ತವೆ. ತಮ್ಮ ಕುಟುಂಬಗಳೇ ಜೊತೆಗಿರದಿದ್ದಲ್ಲಿ ಇಂಥ ಸಮುದಾಯಗಳು ಸೋತ ಸಮುದಾಯಗಳಲ್ಲಿ ಮದುವೆಯಾಗಿ ಬಾಳು ನಡೆಸುತ್ತವೆ.

ಆಧುನಿಕ ರಾಷ್ಟ್ರೀಯವಾದಿ ರಾಜ್ಯಗಳು ತಮ್ಮ ಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶಗಳನ್ನು ಆಕ್ರಮಿಸಿದಾಗ ತಮ್ಮ ಸಂಸ್ಕøತಿಗೆ ಸಮೀಪವಾದ ಮತ್ತು ಪ್ರಾದೇಶಿಕ ಸಂಸ್ಕøತಿಗೆ ಭಿನ್ನವಾದ ಸಂಸ್ಕøತಿಯುಳ್ಳ ಕುಲನಿಷ್ಠ ಸಮುದಾಯಗಳನ್ನು ನಿರ್ಮಿಸುತ್ತವೆ.

ಸ್ವಯಂ ಪ್ರೇರಣೆಯಿಂದ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಬಂದ ಜನಸಮೂಹಗಳು ಇಂದು ಅತ್ಯಂತ ಜನಪ್ರಿಯ ಕುಲನಿಷ್ಠ ಸಮುದಾಯಗಳಾಗಿವೆ. ಬೇರೆ ಕಾರಣಗಳಿಂದ ವಲಸೆ ಬಂದಿದ್ದಂಥವಾಗಿದ್ದರೆ ಅವು ತಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಎಸಗುತ್ತವೆ. ಕುಲನಿಷ್ಠ ಸಮುದಾಯಗಳ ದೃಢತೆ ಜನಸಮೂಹಗಳ ಗಾತ್ರ ಮತ್ತು ಅವನ್ನು ಹಿಂದಾಗಿಸುವ ಅಂಶಗಳ ಗುಣಧರ್ಮಗಳನ್ನು ಅವಲಂಬಿಸಿದೆ. ಮೂಲತಃ ಈ ದೃಢಕ್ಕೆ ಜನಸಮೂಹ ಯಾವ ದೇಶದಲ್ಲಿ ವಲಸೆ ಹೋಗುತ್ತದೆಯೋ ಆ ದೇಶದ ಜನ ಅದಕ್ಕೆ ಕೊಡುವ ಮಹತ್ತ್ವ ಮತ್ತು ಅದಕ್ಕೆ ಸಿಗುವ ಸಾಮಾಜಿಕ ಸ್ಥಾನಮಾನಗಳನ್ನವಲಂಬಿಸಿದೆಯಲ್ಲದೆ ಅಂಥವುಗಳ ಅಸ್ತಿತ್ವ ದೇಶದ ಜನರ ಮನೋವೃತ್ತಿಗಳ ಮೇಲೂ ಅವಲಂಬನೆ ಪಡೆದಿರುತ್ತದೆ. ಜನರ ಬಣ್ಣ ಅವರ ಐಕ್ಯದ ಮುಖ್ಯ ತಳಹದಿಗಳಲ್ಲೊಂದು. ಶಾರೀರಿಕ ಭೇದಗಳು ಬದಲಿಸಲಿಕ್ಕೆ ಇಲ್ಲವೆ ಬಚ್ಚಿಡಲಿಕ್ಕೆ ಬಾರವಾದ್ದರಿಂದ ಅವು ಆ ಜನರನ್ನು ಇತರರಿಂದ ಪ್ರತ್ಯೇಕಿಸುತ್ತವೆ. ಸವರ್ಣಪ್ರೇಮದ ಜೊತೆಗೆ ಪರವರ್ಣದ್ವೇಷವೂ ಪ್ರತ್ಯೇಕತೆಗೆ ಕಾರಣವಾಗಬಲ್ಲುದು. ಇದರೊಡನೆ ಸಾಂಸ್ಕøತಿಕ ಇಲ್ಲವೆ ಸಾಮಾಜಿಕ ಸ್ಥಾನಮಾನಗಳ ಅಂಶಗಳೂ ಕೂಡಿಕೊಂಡರೆ ಪ್ರತ್ಯೇಕತೆ ನಿಷ್ಕøಷ್ಟವಾಗುತ್ತದೆ.

ಎಲ್ಲ ಬಣ್ಣಗಳ ಭೇದ ಸ್ಪಷ್ಟವಾಗಿ ಇರುವುದಿಲ್ಲವೋ ಅಲ್ಲಿ ಕಂಡುಬರುವ ಸಾಂಸ್ಕøತಿಕ ಭೇದಗಳು ಒಂದುಗೂಡಿಸುವ ಅಂಶಗಳಾದರೂ ಆಗಬಹುದು. ಭಾಷೆ ಮತ್ತು ಧರ್ಮಗಳು ರಾಷ್ಟ್ರೀಯತೆ ಮತ್ತು ಬಣ್ಣಗಳಂತೆ ಸಮುದಾಯಗಳನ್ನು ಒಂದುಗೂಡಿಸುವ ಅಂಶಗಳಾಗಿವೆ. ಭಾಷೆ ರಾಷ್ಟ್ರೀಯತೆಯ ಮತ್ತು ಸಂಪ್ರದಾಯದ ಒಂದು ಪ್ರತೀಕವಾಗಿದೆ. ಕುಲನಿಷ್ಠ ವರ್ಗಗಳು ತಮ್ಮ ಗುಂಪುಗಳ ಅಸ್ತಿತ್ವಕ್ಕಾಗಿ ತಮ್ಮ ಸಾಂಪ್ರದಾಯಿಕ ಭಾಷೆಯನ್ನು ಇಟ್ಟುಕೊಳ್ಳುತ್ತವೆ. ಧರ್ಮ ತನ್ನ ಸಂಸ್ಥೆಯ ಮತ್ತು ನಾಯಕತ್ವದ ಗುಣಧರ್ಮದಿಂದಾಗಿ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುತ್ತದೆ. ಆರ್ಥಿಕ ಸಂಘಟನೆಯ ಭೇದಗಳು ಕೆಲವೊಂದು ಸಲ ಕುಲನಿಷ್ಠ ಸಮುದಾಯಗಳನ್ನು ಪ್ರತ್ಯೇಕಿಸುವಲ್ಲಿ ಮಹತ್ತ್ವದ ಅಂಶಗಳಾಗಿವೆ. ಕಾಡು ಜನಾಂಗಗಳ ಸಂಘಟನಾ ವ್ಯವಸ್ಥೆಯನ್ನೂ ಸಂಚಾರಿ ಜನಾಂಗಗಳ ಪದ್ಧತಿಗಳನ್ನೂ ಮೂಲನಿವಾಸಿಗಳಲ್ಲಿರುವ ಆರ್ಥಿಕ ರೀತಿಗಳನ್ನೂ ಇಟ್ಟುಕೊಂಡು ಜಿಪ್ಸಿ ಜನ ಪ್ರತ್ಯೇಕವಾದ ಮಾನವಕುಲ ಸಮುದಾಯವೆನಿಸಿದೆ. ಬಹುತರವಾಗಿ ಆರ್ಥಿಕ ಸ್ಥಾನಮಾನಗಳು ಆರ್ಥಿಕ ಸಂಘಟನೆಗಳಿಗಿಂತ ಹೆಚ್ಚಾಗಿ ಪ್ರತ್ಯೇಕವಾದ ಗುಂಪುಗಳನ್ನು ನಿರ್ಮಿಸುತ್ತವೆ. ಉದಾಹರಣೆಗೆ ಮೆರಿಕೆಯಲ್ಲಿ ನೀಗ್ರೋ ಜನ.

ಕೆಲವು ಸಮೂಹಗಳು ವಿಶೇಷಗುಣ ಧರ್ಮಗಳನ್ನು ಹೊಂದಿದ ಸಂಸ್ಥೆಗಳಿಂದಾಗಿ ಒಂದಾಗಿ ಬಾಳುತ್ತವೆ. ಗಾಯನ, ನೃತ್ಯ, ವ್ಯಾಯಮ ಮುಂತಾದವುಗಳಲ್ಲಿ ಪರಿಣತಿ ಪಡೆದ ಸಮೂಹಗಳು ತಮ್ಮ ವಿಶೇಷ ತಲೆಗಳಿಂದ ಪ್ರತ್ಯೇಕ ಕುಲನಿಷ್ಠ ಸಮುದಾಯಗಳನ್ನು ನಿರ್ಮಿಸುತ್ತವೆ. ಪ್ರತ್ಯೇಕವಾದ ರೀತಿನೀತಿಗಳು-ಮುಖ್ಯವಾಗಿ ಹಬ್ಬಗಳು, ಮದುವೆ ಸಮಾರಂಭಗಳು, ಮರಣೋತ್ತರ ಕ್ರಿಯೆಯ ರೀತಿಗಳು-ಜನಸಮೂಹಗಳನ್ನು ವಿಭಜಿಸುತ್ತವೆ. ಭಿನ್ನ ಭಿನ್ನ ಆಹಾರ ರೂಢಿಗಳೂ ಅವುಗಳನ್ನೇ ಒದಗಿಸುವ ಸಮೂಹಗಳೂ ಇತರ ಜನ ಸಮೂಹಗಳಿಂದ ಪ್ರತ್ಯೇಕಿಸಲ್ಪಡುತ್ತವೆ. ಇದರಂತೆ ವಾಙ್ಮಯ ಮತ್ತು ಸಾಹಿತ್ಯಗಳು ಜನಸಮೂಹಗಳನ್ನು ಪ್ರತ್ಯೇಕಿಸುವ ಮಹತ್ತ್ವದ ಅಂಶಗಳಾಗಿರುತ್ತವೆ. ಕುಲನಿಷ್ಠ ಸಮುದಾಯಗಳ ಭವಿಷ್ಯ ಅವು ಪಡೆವ ನಾಯಕತ್ವ ಅವುಗಳ ಸಂಪರ್ಕ ಸಾಮಥ್ರ್ಯ ಅಥವಾ ನಿರ್ಬಂಧನೆಗಳು ಮತ್ತು ದೊಡ್ಡ ಜನಸಮೂಹಗಳು ಅವುಗಳ ಬಗ್ಗೆ ಇಟ್ಟುಕೊಂಡ ಮನೋಭಾವಗಳನ್ನವಲಂಬಿಸಿರುತ್ತವೆ.

ಯೂರೋಪಿನ ರಾಷ್ಟ್ರಗಳಲ್ಲಿ, ಅಮೆರಿಕದಲ್ಲಿ ಮತ್ತು ರಷ್ಯದಲ್ಲಿ ಕುಲನಿಷ್ಠ ಸಮುದಾಯಗಳ ಅಸ್ತಿತ್ವ ಮತ್ತು ಬೆಳೆವಣಿಗೆ ಅಂಗೀಕೃತ ವಿಷಯವಾಗಿದೆ. ಅನೇಕ ಸರ್ಕಾರಗಳು ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಯ ಭರವಸೆಯನ್ನು ಕೊಟ್ಟಿವೆ.

ಆರ್ಥಿಕ ಒತ್ತಡ ಸಮುದಾಯಗಳಲ್ಲಿನ ಪ್ರತ್ಯೇಕತೆಯನ್ನು ಮುರಿದು ಹಾಕುತ್ತಿದೆ. ರಾಷ್ಟ್ರಗಳು ತಮ್ಮ ಪ್ರದೇಶಗಳಲ್ಲಿನ ಐಕ್ಯ ಭಾವನೆಯನ್ನು ಬೆಳೆಸಲು ಕುಲನಿಷ್ಠ ಸಮುದಾಯಗಳ ಪ್ರಾಬಲ್ಯವನ್ನು ಕಡಿಮೆಗೊಳಿಸುತ್ತಿವೆ. ಅಂತರರಾಷ್ಟ್ರೀಯ ಭಾಷೆ, ಎಲ್ಲ ದೇಶಗಳಲ್ಲಿಯೂ ಏಕ ರೀತಿಯದಾಗುತ್ತಿರುವ ಸಂಸ್ಕøತಿಯ ಬೆಳೆವಣಿಗೆ ಮತ್ತು ರಾಷ್ಟ್ರಗಳ ನಡುವಿನ ಸಂಪರ್ಕ ಸಾಧನಗಳಿಂದಾಗಿ ರಾಷ್ಟ್ರಗಳ ನಡುವಿನ ಅಂತರ ಕಡಿಮೆಯಾಗುತ್ತಿರುವುದರಿಂದ ಕುಲನಿಷ್ಠ ಸಮುದಾಯಗಳ ಕಲ್ಪನೆ ಸಂಕುಚಿತ ಮನೋವೃತ್ತಿಯದೆಂದು ಅನಿಸಹತ್ತಿದೆ.

ಭಾರತದಲ್ಲಿ ದ್ರಾವಿಡ ಮತ್ತು ಆರ್ಯ ಸಂಸ್ಕøತಿಗಳು ಜನರಲ್ಲಿ ಪ್ರತ್ಯೇಕತಾ ಭಾವನೆಗೆ ಎಡೆಮಾಡಿಕೊಟ್ಟಿವೆ. ದ್ರಾವಿಡ ಭಾಷೆಗಳು ಸಂಸ್ಕøತ ಭಾಷೆಯಿಂದ ಬಹಳಷ್ಟು ಪ್ರಭಾವಿತವಾಗಿ ಈ ಪ್ರತ್ಯೇಕತೆಯನ್ನು ಬಹಳ ಮಟ್ಟಿಗೆ ಕಡಿಮೆಗೊಳಿಸಿವೆ. ಭಾರತದ ಹಿಂದುಳಿದ ಸಮಾಜಗಳು ಮೂಲನಿವಾಸಿಗಳು ಮತ್ತು ಹರಿಜನ ಗಿರಿಜನ ತಮ್ಮವೇ ಆದ ಸಂಸ್ಕøತಿ, ರೀತಿನೀತಿ, ಸಂಪ್ರದಾಯಗಳಿಂದ ಪ್ರತ್ಯೇಕವಾದ ಕುಲನಿಷ್ಠ ಸಮುದಾಯಗಳಂತಾಗಿವೆ. ಆದರೆ ಇವುಗಳಲ್ಲಿಯ ಅಂತರ ಸುಧಾರಣೆ ಮತ್ತು ಸರ್ಕಾರದ ನೀತಿಯಿಂದಾಗಿ ಕಡಿಮೆಯಾಗಿ ಭಾರತದವರೆಲ್ಲ ಭಾರತೀಯರೆಂಬ ರಾಷ್ಟ್ರೀಯ ಮನೋವೃತ್ತಿ ಸಾವಕಾಶವಾಗಿಯಾದರೂ ಬರಬರುತ್ತ ಕುಲನಿಷ್ಠ ಸಮುದಾಯಗಳ ಕಟ್ಟು ಕಳಚಿ ಹೊಂದಾಣಿಕೆ ಏರ್ಪಡುವ ವಿಷಯ ಸ್ಪಷ್ಟವಾಗಿದೆ. (ನೋಡಿ- ಕುಲನಿಷ್ಠ-ವರ್ಗಗಳು) (ಎನ್.ಕೆ.ಕೆ.ಟಿ.)