ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಳ್ದಿಮೀನು

ವಿಕಿಸೋರ್ಸ್ದಿಂದ

ಕುಳ್ದಿಮೀನು

ಬಗಾರಿಯಸ್ ಯಾರೆಲ್ಲಿಯೈ ಎಂಬ ಶಾಸ್ತ್ರೀಯ ಹೆಸರಿನ ಮೀನು. ಭಾರತ, ಬರ್ಮ, ಮಲಯದ್ವೀಪ ಸಮುದಾಯ, ಸಯಾಂ ಮತ್ತು ಇಂಡೋಚೀನಗಳ ಸಿಹಿನೀರಿನಲ್ಲಿ ವಾಸಿಸುತ್ತದೆ. ದೊಡ್ಡ ನದಿಗಳಲ್ಲಿ ನೆಲೆಸುವ ಈ ಮೀನು ಸಾಮಾನ್ಯವಾಗಿ ಅಳಿವೆಗಳಿಗೆ ಪ್ರವೇಶಿಸುವುದುಂಟು. ಇದು ಸುಮಾರು 5"-6" ಉದ್ದದ ವರೆಗೆ ಬೆಳೆಯುತ್ತದೆ. ಇದರ ಹೊಟ್ಟೆಬಾಕತನದಿಂದಲೂ ಅನೇಕ ವೇಳೆ ಇದನ್ನು ಸಿಹಿನೀರಿನ ಶಾರ್ಕ್ ಎಂದು ಕರೆಯುವುದುಂಟು. ಇದರ ಕಣ್ಣುಗಳು ಚಿಕ್ಕವಾಗಿದ್ದು ತಲೆಯ ಮಧ್ಯಭಾಗದಲ್ಲಿವೆ. ಮೇಲಿನ ದವಡೆ ಉದ್ದವಾಗಿದೆ. ತೆರೆದಿರುವ ಬಾಯಿಯ ಬಿರುಕು ತಲೆಯ ಉದ್ದದ ಅರ್ಧದಷ್ಟಿದೆ. ಬಾಯಸುತ್ತ ಎಂಟು ದಾಡಿಗಳಂತಿರುವ ಸ್ಪರ್ಶಂಗಾಗಳಿವೆ. ಮೇಲುದವಡೆಯ ಸ್ಪರ್ಶಾಂಗಗಳು ತಲೆಗಿಂತ ಉದ್ದವಾಗಿವೆ; ನಾಸಿಕದ ಬಳಿಯಿರುವ ಸ್ಪರ್ಶಾಂಗಗಳು ಚಿಕ್ಕವು. ಹಲ್ಲುಗಳು ಚೂಪಾಗಿದ್ದು ಅಸಮ ಆಕಾರವುಳ್ಳವು. ಈ ಮೀನಿಗೆ ಅಂಗುಳಿನ ಹಲ್ಲುಗಳಿಲ್ಲ. ಬೆನ್ನಿನ ಈಜುರೆಕ್ಕೆಯ ಮುಳ್ಳು ನುಣುಪಾಗಿದೆ. ಎದೆಯ ಈಜುರೆಕ್ಕೆಯ ಮುಳ್ಳು ಬೆನ್ನಿನ ಈಜುರೆಕ್ಕೆಯ ಮುಳ್ಳಿನಷ್ಟೆ ಉದ್ದ ಇದೆ. ಅದರೆ ಅದಕ್ಕಿಂತ ಹೆಚ್ಚು ಬಲಯುತವಾಗಿದೆ. ಅದರ ಒಳಭಾಗದ ಅಂಚು ಗರಗಸದಂತಿದೆ. ಬಾಲದ ಈಜುರೆಕ್ಕೆ ವಿಪುಲವಾಗಿ ಕವಲೊಡೆದಿದೆ. ಕುಳ್ದಿಮೀನಿನ ಚರ್ಮ ಒರಟಾಗಿದ್ದು, ಬೂದಿ ಹಾಗೂ ಹಳದಿ ಬಣ್ಣದಿಂದ ಕೂಡಿದೆ; ಅಲ್ಲಲ್ಲಿ ಕಂದು ಮತ್ತು ಕರಿಯ ಬಣ್ಣದ ದೊಡ್ಡ ಮಚ್ಚೆಗಳಿವೆ. ಎಲ್ಲ ಈಜುರೆಕ್ಕೆಗಳ ತಳಭಾಗ ಕಪ್ಪು ಬಣ್ಣದ್ದಾಗಿದ್ದು ಕೆಲವು ವೇಳೆ ಅದರ ಮೇಲೆ ಕರಿಯ ಬಣ್ಣದ ಪಟ್ಟೆಯಿರುತ್ತದೆ. (ಬಿ.ಎಚ್.ಎಂ.)