ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಶಧ್ವಜ
ಕುಶಧ್ವಜ
ಒಬ್ಬ ರಾಜ. ವಿದೇಹ ವಂಶದ ಹ್ರಸ್ವರೋಮಜನಕನಮಗ. ಸೀರಧ್ವಜಜನಕನ ತಮ್ಮ. ಸೀರಧ್ವಜ ಇಂದ್ರದೇಶವನ್ನು ಗೆದ್ದು ಕುಶಧ್ವಜನನ್ನು ಅಲ್ಲಿಯ ರಾಜನನ್ನಾಗಿ ಮಾಡಿ ಸಾಂಕಾಶ್ಯ ನಗರಿಯನ್ನು ರಾಜಧಾನಿಯಾಗಿ ಮಾಡಿದ. ಈತನಿಗೆ ಮಾಂಡವೀ, ಶ್ರುತಕೀರ್ತಿಯರೆಂಬ ಮಕ್ಕಳಿದ್ದರು. ಇವರನ್ನು ಭರತ ಶತ್ರುಘ್ನರಿಗೆ ಕೊಟ್ಟು ಮದುವೆ ಮಾಡಲಾಯಿತು. ಈ ವೃತ್ತಾಂತ ರಾಮಾಯಣದಲ್ಲಿ ಬರುತ್ತದೆ.
ಇನ್ನೊಂದು ಹೇಳಿಕೆಯ ಪ್ರಕಾರ ಕುಶಧ್ವಜ ವೃಷಧ್ವಜ ಜನಕನ ಮಗನಾದ ರಥಧ್ವಜನ ಮಗ. ಈತನ ಮಗಳು ವೇದವತಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು. ಆಕೆಯೇ ಮುಂದಣ ಜನ್ಮದಲ್ಲಿ ಸೀತೆಯಾಗಿ ಜನಿಸಿದಳು.
ಕಾಶೀರಾಜನ ಮಗನೊಬ್ಬನಿಗೆ ಕುಶಧ್ವಜನೆಂಬ ಹೆಸರಿದೆ. ಪೂರ್ವಜನ್ಮದಲ್ಲೀತ ಕಪಿಯಾಗಿದ್ದ. ಆ ಕಪಿ ಕಾಶೀವಿಶ್ವೇಶ್ವರನ ಮಂದಿರದ ಪ್ರಾಕಾರದಲ್ಲಿ ವಾಸವಾಗಿತ್ತು. ಒಮ್ಮೆ ಚೈತ್ರ ಶುಕ್ಲ 14 ಹರ್ಷಣಯೋಗದಲ್ಲಿ ವಿಶ್ವೇಶ್ವರನ ಉತ್ಸವಮೂರ್ತಿಯನ್ನು ಚಿನ್ನದ ತೊಟ್ಟಿಲಲ್ಲಿರಿಸಿ ದಮನೋತ್ಸವ ನೇರವೇರಿಸಿದ್ದರು. ಆ ರಾತ್ರಿ ಕಪಿ ಗರ್ಭಗುಡಿಯನ್ನು ಹೊಕ್ಕು ಚಾಪಲ್ಯದಿಂದ ಇರುಳೆಲ್ಲ ದೇವರ ಉಯ್ಯಾಲೆಯನ್ನು ತೂಗುತ್ತಿತ್ತು. ಉಯ್ಯಾಲೆಯ ಕಿರುಗಂಟೆಯ ನಾದವನ್ನು ಕೇಳಿ ಉಷಃಕಾಲದಲ್ಲಿಯೇ ಬಾಗಿಲು ತೆಗೆದ ಪೂಜಾರಿಗಳು ಕಪಿಯನ್ನು ಕೊಂದರು. ರಾತ್ರಿಯೆಲ್ಲ ಶಿವನಿಗೆ ಡೋಲೋತ್ಸವ ಮಾಡಿದ ಪುಣ್ಯದಿಂದದು ಕ್ಷತ್ರಿಯನಾಗಿ ಜನಿಸಿತು. ಕಪಿಯಾಗಿದ್ದ ಈತ ಹಿಂದಣ ಜನ್ಮದ ಸ್ಮರಣೆ ಪಡೆದು ದೇಶದಲ್ಲೆಲ್ಲ ಜೈತ್ರ ಶುಕ್ಲ 14 ದಮನೋತ್ಸವ ನಡೆಯುವಂತೆ ಮಾಡಿದ. ಈ ಸೇವೆಗೆ ಮೆಚ್ಚಿದ ಶಿವ ಈತನನ್ನು ತನ್ನ ಗಣ ಸಮೂಹಕ್ಕೆ ಸೇರಿಸಿಕೊಂಡ.
ಒಮ್ಮೆ ತಪೋವನದ ತಾವರೆಯ ಕೊಳದಲ್ಲಿ ಕೆಳದಿಯರೊಂದಿಗೆ ಜಲಕೇಳಿಯಲ್ಲಿದ್ದ ಅಗ್ನಿವೇಶ್ಯಮುನಿಯ ಮಗಳನ್ನು ಕಂಡು ಮೋಹಭರಿತನಾಗಿ ಆಕೆಯನ್ನು ಅಪಹರಿಸಿ ವಿಮಾನದಲ್ಲಿ ಕುಳ್ಳಿರಿಸಿಕೊಂಡು ಹೊರಟ. ಆ ಯುವತಿ ಆರ್ತನಾದ ಮಾಡಲು ಅದನ್ನು ಕೇಳಿದ ಅಗ್ನಿವೇಶ್ಯಮುನಿ ಈತನನ್ನು ಹಿಂಬಾಲಿಸಿ, ಹದ್ದಿನ ಜನ್ಮ ಪಡೆಯೆಂದು ಶಾಪವಿತ್ತ. ದುಃಖಗೊಂಡ ಕುಶಧ್ವಜ ಮುನಿಯನ್ನು ಮೊರೆಹೊಗಲು ಕನಿಕರ ಹುಟ್ಟಿ ಮುಂದೆ ಇಂದ್ರದ್ಯುಮ್ನ ರಾಜನ ಕೀರ್ತಿಯನ್ನು ಬೆಳಗಿಸಲು ಯತ್ನಿಸಿ ಮರಳಿ ಶಿವನ ಪಾದ ಸೇರುವಂತೆ ಶಾಪವಿಮೋಚನೆ ನೀಡಿದ. *