ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಶಿಕ

ವಿಕಿಸೋರ್ಸ್ದಿಂದ

ಕುಶಿಕ

	ಚಂದ್ರ ವಂಶದ ಕುಶನ ಮಗ. ಪುರು ಚಕ್ರವರ್ತಿ ಈ ವಂಶದ ಮೂಲಪುರುಷನಾದ್ದರಿಂದ ಅದಕ್ಕೆ ಪೌರವ ವಂಶವೆಂದೂ ಹೆಸರು ಬಂದಿದೆ. ಕುಶಕ ಗಾಧಿರಾಜನ ತಂದೆ. ವಿಶ್ವಾಮಿತ್ರನ ತಾತ. ಋಗ್ವೇದ ಮತ್ತು ಶಾಂಖಾಯನ ಗೃಹ್ಯಸೂತ್ರಾದಿಗಳಲ್ಲಿ ಕುಶಿಕ ಶಬ್ದ ಕಂಡುಬರದಿದ್ದರೂ ವಿವರವಾದ ಪ್ರಸ್ತಾಪ ಮಹಾಭಾರತ ಮತ್ತು ಹರಿವಂಶಗಳಲ್ಲಿದೆ.

ಮಹಾನ್ ಪಾರ್ಥಿವನಾದ ಈತ ಕಾನ್ಯಕುಬ್ಜದಲ್ಲಿ ರಾಜ್ಯವಾಳುತ್ತಿರಲು ಭೃಗುವಂಶವೂ ಕುಶಿಕ ವಂಶವೂ ಬೆರೆತು ಬ್ರಾಹ್ಮಣ ಕ್ಷತ್ರಿಯರ ನಡುವೆ ವರ್ಣಸಂಕರ ಉಂಟಾಗುವುದೆಂಬ ಬ್ರಹ್ಮವಾಣಿಯನ್ನರಿತ ಭೃಗುವಂಶೋದ್ಭವ ಚ್ಯವನ ಕುಶಿಕವಂಶವನ್ನೇ ನಿರ್ಮೂಲಗೊಳಿಸುವ ಉದ್ದೇಶದಿಂದ ಅವನ ಅರಮನೆಗೆ ಬಂದ. ಬಂದವನು ಆಹಾರ ನಿದ್ರಾದಿಗಳನ್ನು ತೊರೆದು ಇಪ್ಪತ್ತೊಂದು ದಿನ ಒಂದೇ ಮಗ್ಗುಲಲ್ಲಿ ಮಲಗಿದ. ರಾಜದಂಪತಿಗಳು ನಿಶ್ಚಲ ಮನಸ್ಸಿನಿಂದ ಅವನನ್ನೇ ಅನುಸರಿಸಿದರು. ತರುವಾಯ ಇದ್ದಕ್ಕಿದ್ದಂತೆ ಚ್ಯವನ ಕಣ್ಣಿಗೆ ಕಾಣದಂತಾಗಲು ಇಬ್ಬರೂ ಅವನನ್ನು ಹುಡುಕಿ ಪ್ರೀತ್ಯಾದರಗಳಿಂದ ಮತ್ತೆ ಅರಮನೆಗೆ ಕರೆದೊಯ್ದರು. ಆದರೆ ಹಠಯೋಗಿ ಚ್ಯವನನಾದರೋ ಮತ್ತೆ ಇಪ್ಪತೊಂದು ದಿನ ಇನ್ನೊಂದು ಮಗ್ಗುಲಲ್ಲಿ ಮೊದಲಿನಂತೆಯೇ ಆಹಾರ ನಿದ್ರೆಗಳನ್ನು ತೊರೆದು ಮಲಗಲು ಅವರೂ ಅತಿಥೇಯ ಧರ್ಮವನ್ನನುಸರಿಸಿ ಆತನ ಶುಶ್ರೂಷೆ ಮಾಡಿದರು. ಇಷ್ಟಾದ ಮೇಲೆ ಚ್ಯವನ ಸ್ನಾನ ಮಾಡುವ ಅಪೇಕ್ಷೆಯನ್ನು ತಿಳಿಸಿ ರಾಜದಂಪತಿಗಳನ್ನು ತನ್ನ ಕೈಕಾಲುಗಳನ್ನುಜ್ಜಲು ಆಜ್ಞಾಪಿಸಿದ. ಪ್ರಶಾಂತ ಮನಸ್ಸಿನಿಂದ ಅವರು ಹಾಗೆಯೇ ಮಾಡಿದರು. ಅನಂತರ ಚ್ಯವನ ತಾನೇ ಸಿಂಹಾಸನಾರೂಢನಾಗಿ, ಕೊನೆಗೆ ಎಲ್ಲವನ್ನೂ ಸುಟ್ಟು ಬೂದಿ ಮಾಡಿದ. ರಾಜದಂಪತಿಗಳಲ್ಲಿ ಇದರಿಂದ ಲೇಶಮಾತ್ರವೂ ಕೋಪತಾಪಾದಿಗಳ ಕುರುಹೂ ಕಾಣಲಿಲ್ಲ. ಅಷ್ಟಕ್ಕೇ ತೃಪ್ತನಾಗದೆ ಚ್ಯವನ ತನ್ನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಇಬ್ಬರೂ ಕುದುರೆಗಳಂತೆ ರಾಜಬೀದಿಯಲ್ಲಿ ಎಳೆಯಲು ಆಜ್ಞಾಪಿಸಿ ರಥವನ್ನೆಳೆಯುತ್ತಿದ್ದ ದಂಪತಿಗಳನ್ನು ಚಾಟಿಯಿಂದ ಹೊಡೆದು ಘಾತಿಸಿದ. ಅದರಿಂದಲೂ ಅವರು ವಿಚಲಿತರಾಗಲಿಲ್ಲ. ಸ್ಥಿತಪ್ರಜ್ಞರಾದ ಅವರನ್ನು ಕಂಡು ಚ್ಯವನನಿಗೆ ತೀರ ಮುಖಭಂಗವಾಯಿತು. ಕೊನೆಗವನು ತನ್ನ ಶಪಥವನ್ನು ತೊರೆದು ತೀರ್ಥಯಾತ್ರೆಗೆ ಹೊರಟುಹೋದ.

ಕಾಲಕ್ರಮದಲ್ಲಿ ಕ್ಷತ್ರಿಯರು ಊರ್ವನೆಂಬೊಬ್ಬನನ್ನು ಬಿಟ್ಟು ಉಳಿದ ಭಾರ್ಗವ ವಂಶದವರನ್ನೆಲ್ಲ ನಾಶಪಡಿಸಿದರು. ಊರ್ವನ ಮಗ ಋಚೀಕ. ಈತನಿಗೆ ವಿಶ್ವಾಮಿತ್ರನ ತಂಗಿ ಸತ್ಯವತಿಯೊಡನೆ ವಿವಾಹವಾಗಿ ಜಮದಗ್ನಿ ಹುಟ್ಟಿದ. ಆತನ ಮಗನೇ ಪರಶುರಾಮ. ಬ್ರಹ್ಮನ ವಾಣಿಯಂತೆ ಬ್ರಾಹ್ಮಣ ಕ್ಷತ್ರಿಯ ಸಾಂಕರ್ಯ ನಿಯತವಾಯಿತು. ಕುಶಿಕನಿಗೆ ಬ್ರಾಹ್ಮಣನಾಗಬೇಕೆಂಬ ಹಂಬಲವಿದ್ದರೂ ತನ್ನ ಜೀವನದಲ್ಲಿ ಅದು ಫಲಿಸಲಿಲ್ಲ. ಆದರೆ ಆತನ ಮೊಮ್ಮಗ ವಿಶ್ವಾಮಿತ್ರನ ಕಾಲಕ್ಕೆ ಅದು ಫಲಿಸಿತು.

   (ಸಿ.ಜಿ.ಪಿ.)