ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೂಚಿಪುಡಿ ನೃತ್ಯ

ವಿಕಿಸೋರ್ಸ್ದಿಂದ

ಕೂಚಿಪುಡಿ ನೃತ್ಯ ಕೃಷ್ಣಾ ಜಿಲ್ಲೆಯ ಕೂಚಿಪುಡಿಯಲ್ಲಿ ಮುಖ್ಯವಾಗಿ, ಮಿಕ್ಕಂತೆ ಅದರ ಸುತ್ತಣ ಪ್ರದೇಶಗಳಲ್ಲಿ ಸುಮಾರು 12 ಮತ್ತು 13ನೆಯ ಶತಕಗಳಲ್ಲಿ ರೂಪುಗೊಂಡು, ಕಾಲಕಾಲಕ್ಕೆ ಬದಲಾಗುತ್ತ ಬಂದಿರುವ ಒಂದು ನೃತ್ಯ ಪದ್ಧತಿ.

ಹಿನ್ನೆಲೆ: ನೃತ್ಯದಲ್ಲಿ ಧಾರ್ಮಿಕ ಮತ್ತು ಲೌಕಿಕ ಎಂಬುದಾಗಿ ಎರಡು ವಿಧಗಳಿವೆಯಷ್ಟೆ. ಧಾರ್ಮಿಕ ನೃತ್ಯ ದೇವದಾಸಿಯರಿಂದ ಅನುಷ್ಠಾನದಲ್ಲಿದ್ದು, ದೇವಾಲಯಗಳಿಗೆ ಮಾತ್ರ ಪರಿಮಿತವಾಗಿತ್ತು. ಲೌಕಿಕ ನೃತ್ಯಗಳು ವೃತ್ತಿನರ್ತಕಿಯರಿಂದ ನಿರ್ವಹಿಸಲ್ಪಡುತ್ತಿದ್ದುವು. ನೃತ್ಯದ ಜೀವಾಳವಾದ ಪರಿಶುದ್ಧತೆ ಮತ್ತು ಉನ್ನತ ತಂತ್ರಕೌಶಲಗಳನ್ನು ವೃತ್ತಿನರ್ತಕಿಯರು ಕಾಪಾಡಿಕೊಂಡು ಬರಲಿಲ್ಲವಾಗಿ ಸುಮಾರು ಕ್ರಿ. ಪೂ. 1000ದ ಹೊತ್ತಿಗೆ ನೃತ್ಯಕಲೆಯ ಅತ್ಯುನ್ನತ ಗುಣವನ್ನು ಸಂರಕ್ಷಿಸಿಕೊಂಡು ಬರುವುದಕ್ಕಾಗಿ ವಿದ್ವಾಂಸರಿಂದ, ಕಲಾವಿದರಿಂದ ಚಳವಳಿಯೊಂದು ಆರಂಭವಾಯಿತು. ಕೂಚಿಪುಡಿ ಈ ಚಳವಳಿಯ ಒಂದು ಕೇಂದ್ರವಾಯಿತು.

ಕೂಚಿಪುಡಿ ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನಲ್ಲಿದೆ. ಕ್ರಿ. ಪೂ. 300ರ ಶಾತವಾಹನರ ಕಾಲದಿಂದ ಕ್ರಿ. ಶ. 16 ನೆಯ ಶತಮಾನದವರೆಗೆ ಆಂಧ್ರ ಸಂಸ್ಕøತಿಯ ನೆಲೆಯಾಗಿದ್ದ ವಿಶಾಲ ಭೂವಲಯದಲ್ಲಿ ಇದು ನೆಲೆಗೊಂಡಿದೆ.

ಕಾಕತೀಯ ರಾಜರು ನೃತ್ಯಕಲೆಯನ್ನು ಪೋಷಿಸಿದರು. ಕ್ರಿ. ಶ. 12ನೆಯ ಶತಮಾನದ ಕಾಕತೀಯ ಗಣಪತಿ ಮಹಾರಾಜನ ಆಳ್ವಿಕೆಯಲ್ಲಿ ಗುಂಡಾಮಾತ್ಯನೆಂಬ ಪ್ರಸಿದ್ಧ ವಿದ್ವಾಂಸನೂ ಕಲಾಚಾರ್ಯನೂ ಇದ್ದ. ಗುಂಡಾಮಾತ್ಯ, ಜಯಪ್ಪನಾಯಕನೆಂಬ ಗಜ ಸೈನ್ಯಾಧಿಪತಿಗೆ ನೃತ್ಯಕಲೆಯನ್ನು ಕಲಿಸಲು ರಾಜನಿಂದ ನಿಯೋಜಿತನಾಗಿದ್ದ. ಜಯಪ್ಪನಾಯಕ ಈ ಕಲೆಯಲ್ಲಿ ದೊಡ್ಡ ಪ್ರವೀಣನಾದುದಲ್ಲದೆ, ಭರತನಾಟ್ಯವನ್ನು ಕುರಿತು ವೃತ್ತ ರತ್ನಾವಳಿ ಎಂಬ ಉನ್ನತಮಟ್ಟದ ಗ್ರಂಥವೊಂದನ್ನು ರಚಿಸಿದ. ಇದು 12ನೆಯ ಶತಮಾನದಲ್ಲಿ ರೂಢಿಯಲ್ಲಿದ್ದ ಧಾರ್ಮಿಕ ಮತ್ತು ಲೌಕಿಕ ನೃತ್ಯಪ್ರಕಾರಗಳ ಪೂರ್ಣ ವಿವರಣೆಯನ್ನು ನೀಡುತ್ತದೆ. ಉದಾಹರಣೆಗೆ ಭುಜಂಗತ್ರಾಸ, ತಾಲಪುಷ್ಪ ಪುಟ, ಭೂಚಾರಿ, ಆಕಾಶಚಾರಿ, ಅಂಗಹಾರನೃತ್ಯ, ಸಪ್ತತಾಂಡವಗಳು ಇತ್ಯಾದಿ. ಇವುಗಳೆಲ್ಲ ಆ ಕಾಲದ ಶಾಸ್ತ್ರೀಯ ನೃತ್ಯದ ವಿವಿಧ ಮಾದರಿಗಳನ್ನು ಸ್ಪಷ್ಟಪಡಿಸುತ್ತವೆ. ಈ ಕಾಲದಲ್ಲಿ ಕಲಾವಿದರು ದಶವಿಧ ಶಿವಲೀಲೆಗಳ ನಾಟ್ಯಗಳನ್ನು ಅಭಿನಯಿಸುತ್ತಿದ್ದರು. ಜೊತೆಗೆ ರಾಮಾಯಾಣ, ಮಹಾಭಾರತಗಳಿಂದ ಆಯ್ದ ಕೆಲವು ಪ್ರಸಿದ್ಧ ಕಥೆಗಳ ಲಘು ವಿಷಯಗಳೂ ಅನುಷ್ಠಾನದಲ್ಲಿದ್ದುವು.

ಮೇಲಿನ ಮಾದರಿಯ ಮಾರ್ಗೀಯ ನೃತ್ಯ ಸಂಪ್ರದಾಯ ಕೂಚಿಪುಡಿಯಲ್ಲಿ ಪ್ರವರ್ಧಮಾನಕ್ಕೆ ಬಂದದ್ದು 12 ಮತ್ತು 13ನೆಯ ಶತಮಾನಗಳ ಅವಧಿಯಲ್ಲೆಂದು ಅನುಮಾನಿಸಬಹುದು. ಕೂಚಿಪುಡಿಯಲ್ಲಿ ರೂಪಿತವಾದ ಬ್ರಾಹ್ಮಣ ಮೇಳಗಳು ಮಾರ್ಗ ಸಂಪ್ರದಾಯದಿಂದ ತಮ್ಮ ಕಲೆಯನ್ನು ಅರಳಿಸಿಕೊಂಡವು. ಈ ಮೇಳಗಳಲ್ಲಿ ಹೆಂಗಸರು ಭಾಗವಹಿಸಲು ಅವಕಾಶ ಕೊಡುತ್ತಿರಲಿಲ್ಲ. ಬ್ರಾಹ್ಮಣ ಮೇಳಗಳ ಸದಸ್ಯರು ಶುದ್ಧ ಹಾಗೂ ಧಾರ್ಮಿಕ ಜೀವನವನ್ನು ನಡೆಸುತ್ತಿದ್ದರು. ಅವರು ಸಂಸ್ಕøತ ಮತ್ತು ತೆಲುಗಿನಲ್ಲಿ ವಿಶಾಲ ಸಾಂಸ್ಕøತಿಕ ಶಿಕ್ಷಣವನ್ನು ಹೊಂದಿರುತ್ತಿದ್ದರು. ಭರತನಾಟ್ಯ, ಸಂಗೀತ ಹಾಗೂ ಅಲಂಕಾರಶಾಸ್ತ್ರಗಳನ್ನು ಕುರಿತಾದ ಪ್ರಮಾಣಭೂತ ಗ್ರಂಥಗಳನ್ನವರು ಅಧ್ಯಯನ ಮಾಡಿದರವರಾಗಿದ್ದು, ಹಲವು ವರ್ಷಗಳ ಕಾಲ ಪಕ್ಷ ಪ್ರಾಯೋಗಿಕ ತರಬೇತನ್ನು ಪಡೆದವರಾಗಿರುತ್ತಿದ್ದರು.

ಕೂಚಿಪುಡಿ ನೃತ್ಯಮಾರ್ಗದ ಆರಂಭ, ಬೆಳೆವಣಿಗೆ : ಕೂಚಿಪುಡಿಯಲ್ಲಿ ಈ ಬ್ರಾಹ್ಮಣ ಮೇಳ ಚಳವಳಿ ಯಾವಾಗ ಆರಂಭವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಿನ ಬ್ರಾಹ್ಮಣ ಭಾಗವತರನ್ನು ಕುರಿತಾದ ಪ್ರಾಚೀನ ಆಧಾರ ಕ್ರಿ. ಶ. 1500ರಷ್ಟು ಹಿಂದಕ್ಕೆ, ವಿಜಯನಗರ ರಾಜ ವೀರನರಸಿಂಹರಾಯನ ಆಳ್ವಿಕೆಗೆ ಹೋಗುತ್ತದೆ. ಸ್ಥಳೀಯ ದಾಖಲೆಗಳ ಮಚುಪಲ್ಲಿ ಕೈಫಿಯತ್ತಿನಲ್ಲಿ ಅದು ಈ ರೀತಿ ಉಲ್ಲೇಖಿತವಾಗಿರುವುದನ್ನು ನೋಡಬಹುದು: 'ಕೂಚಿಪುಡಿಯ ಬ್ರಾಹ್ಮಣ ಭಾಗವತರ ನಾಟಕ ತಂಡವೊಂದು ವಿನುಕೊಂಡ ಮತ್ತು ಚಿಲ್ಲಮ್‍ಕೊಂಡದ ಮಾರ್ಗದಲ್ಲಿ ಬೀಡು ಬಿಟ್ಟಿದ್ದಾಗ, ವೀರನರಸಿಂಹರಾಯದ ಆಳ್ವಿಕೆಯ ಅವಧಿಯಲ್ಲಿ ವಿಜಯನಗರಕ್ಕೆ ಬಂದಿತ್ತು. ಕೋರಿಕೆಯ ಮೇಲೆ ಅವರು ನಾಟಕವೊಂದನ್ನು ಆಡಲು ವ್ಯವಸ್ಥೆ ಮಾಡಿದರು.'

ಕೂಚಿಪುಡಿ ಮೇಳ ನುರಿತದ್ದೆಂದು ಪ್ರಸಿದ್ಧಿಪಡೆದಿದ್ದುದರಿಂದ, ವೀರ ನರಸಿಂಹರಾಯ ತನ್ನ ರಾಣಿ ಮತ್ತು ರಾಜಪರಿವಾರದ ಜೊತೆಯಲ್ಲಿ ಅರಮನೆಯೊಳಗೆ ನಾಟಕವನ್ನು ನೋಡಲು ಅಪೇಕ್ಷಿಸಿದರು. ನಿಜವಾಗಿ ಈ ಮೇಳ ಸಂಚಾರೀ ತಂಡವಾಗಿದ್ದು, ಜನಪ್ರಿಯ ಪೌರಾಣಿಕ ಕಥೆಗಳನ್ನು ಅಭಿನಯಿಸುವುದರ ಮೂಲಕ ಜನತೆಯನ್ನು ರಂಜಿಸುತ್ತಿತ್ತಲ್ಲದೆ ದೇಶದಲ್ಲಿ ಧಾರ್ಮಿಕ ಹಾಗೂ ಭಕ್ತಿಯ ವಾತಾವರಣವನ್ನು ಕಾಪಾಡಿಕೊಂಡು ಬರುತ್ತಿತ್ತು.

ವೈಷ್ಣವ ತತ್ತ್ವದ ಉತ್ಕರ್ಷದಿಂದಾಗಿ ಈ ಸಂಚಾರೀ ತಂಡಗಳು ಭಾಗವತ ಪುರಾಣದಿಂದ ತೆಗೆದುಕೊಂಡ ಕಥೆಗಳನ್ನು ಅಭಿನಯಿಸಲು ಪ್ರಾರಂಭಿಸಿದುವು. ಇದರ ಪರಿಣಾಮವಾಗಿ ಈ ಕಲಾವಿದರಿಗೆ ಕೂಚಿಪುಡಿ ಭಾಗವತರು ಅಥವಾ ಕೂಚಿಪುಡಿ ಭಾಗವತ ಮೇಳ ಎಂದು ಹೆಸರಾಯಿತು. ಈ ನೃತ್ಯ ನಾಟಕದ ನಿಷ್ಕøಷ್ಟ ರೂಪವೆಂಥದ್ದಾಗಿತ್ತು ಎಂಬುದನ್ನು ಯಾರೂ ಹೇಳುವಂತಿಲ್ಲವಾಗಿದೆ. ಅದು ಇಂದು ನಾವು ಯಕ್ಷಗಾನವೆಂದು ಕರೆಯುವ ಜನಪದ ಅಥವಾ ದೇಸೀ ಮಾದರಿಯಿಂದ ಬೆಳೆದು ಬಂದುದೆಂದು ತೋರುತ್ತದೆ.

ಕೂಚಿಪುಡಿ ಕಲಾವಿದರಿಗೆ, ವಿದ್ವಾಂಸರಿಗೆ ವಿಜಯನಗರದ ದೊರೆಗಳ ಆಶ್ರಯವಿತ್ತು. ವಿಜಯನಗರದ ಪತನಾನಂತರ, ಈ ವಿದ್ವಾಂಸರು ಮತ್ತು ನಾಟಕ ತಂಡಗಳವರು ತಂಜಾವೂರಿಗೆ ವಲಸೆಬಂದು, ಅದರ ಸಮೀಪದಲ್ಲಿರುವ ಅಚ್ಯುತಪುರಂ ಎಂಬ ಹಳ್ಳಿಯಲ್ಲಿ ನೆಲೆಸಿದರು. ಇದು ತಂಜಾವೂರಿನ ರಾಜ ಅಚ್ಯುತಪ್ಪ ನಾಯಕನಿಂದ ದಾನವಾಗಿ ದೊರೆತ ಅಗ್ರಹಾರ. ಇಂದು ಇದನ್ನು ಮೇಳತ್ತೂರು ಎಂದು ಕರೆಯುವರು. ಈ ಸ್ಥಳದಲ್ಲಿ ಬ್ರಾಹ್ಮಣ ಮೇಳಗಳು ಪ್ರಹ್ಲಾದ ಚರಿತ್ರೆ, ಮೋಹಿನಿ ರುಕ್ಮಾಂಗದ, ಹರಿಶ್ಚಂದ್ರ ಮತ್ತು ರಾಮನಾಟಕದಂಥ ತಮ್ಮ ಸಾಂಪ್ರದಾಯಿಕ ನೃತ್ಯನಾಟಕಗಳನ್ನು ಆಡತೊಡಗಿದರು.

ಈ ಅವಧಿಯಲ್ಲಿ, ಸರಿಸುಮಾರು 1560ರಿಂದ 1660ರ ವರೆಗೆ ಕೂಚಿಪುಡಿ ಬಹು ದೊಡ್ಡ ಸಾಂಸ್ಕøತಿಕ ಮತ್ತು ಕಲಾಕೇಂದ್ರವಾಗಿ ಮುಂದುವರಿಯಿತು; ನೃತ್ಯ ಹಾಗೂ ಸಂಗೀತ ಕಲೆಗಳಲ್ಲಿ ಕ್ಷೇತ್ರಜ್ಞ , ತೀರ್ಥನಾರಾಯಣ ಯತಿ ಹಾಗೂ ಸಿದ್ಧೇಂದ್ರಯೋಗಿಗಳಂಥ ಶ್ರೇಷ್ಠ ರಚನಕಾರರನ್ನು, ಶಿಕ್ಷಕರನ್ನು ಸೃಷ್ಟಿಸಿತು. ಇವರಲ್ಲಿ ಸಿದ್ಧೇಂದ್ರಯೋಗಿ ಈಗಾಗಲೇ ಅಸ್ತಿತ್ವದಲ್ಲಿದ್ದ ನೃತ್ಯಕಲೆಗೆ ಹೊಸ ತಿರುವೊಂದನ್ನು ತಂದುಕೊಟ್ಟ. ಯಾವುದನ್ನು ನಾವಿಂದು ಕೂಚಿಪುಡಿ ನೃತ್ಯಪಂಥವೆಂದು ಕರೆಯುತ್ತೇವೆಯೋ ಅದರ ಸ್ಥಾಪಕನಾದ.

ನೃತ್ಯನಾಟಕದ ಅದ್ವೀತೀಯ ಮಾದರಿಯಾಗಿ ಆತ ಪಾರಿಜಾತಹರಣದ ಕಥೆಯನ್ನು ರಚಿಸಿ, ಆ ನಾಟಕವನ್ನು ಕೂಚಿಪುಡಿ ಕಲಾವಿದರಿಗೆ ಕಲಿಸಿದ. ಅದು ಕೂಚಿಪುಡಿ ಪಂಥದ ನಾಟಕ ಅಥವಾ ಸಂಗೀತ ಕೃತಿಗಳಲ್ಲಿ ಅತ್ಯುತ್ತಮ ಪ್ರಕರಣವಾಗಿ ಇಂದಿಗೂ ಉಳಿದುಕೊಂಡು ಬಂದಿದೆ.

ಪಾರಿಜಾತ ಹರಣ ಸತ್ಯಭಾಮೆಗೂ ಭಗವಾನ್ ಶ್ರೀಕೃಷ್ಣನಿಗೂ ಇದ್ದ ಗಾಢ ಪ್ರೀತಿಯ ಕಥೆಯಾಗಿದೆ. ಈ ಕಥೆ ರಸಭಾವಗಳನ್ನು ಗರ್ಭೀಕರಿಸಿಕೊಂಡಿದೆ. ಸತ್ಯಭಾಮೆ ಸ್ವಾಧೀನ ಪತಿಕಾ ನಾಯಿಕೆಯಾಗಿರುವುದರಿಂದ ಭಗವಾನ್ ಶ್ರೀಕೃಷ್ಣನನ್ನು ಆಜ್ಞಾನುವರ್ತಿಯನ್ನಾಗಿ ಮಾಡಬಹುದು ಮತ್ತು ಅವನ ಜೊತೆಯಲ್ಲಿ ಸ್ವಾತಂತ್ರ್ಯ ವಹಿಸಬಹುದು.

ರಹಸ್ಯಾರ್ಥದಲ್ಲಿ, ಇದು ಮಧುರಭಕ್ತಿಯ ಅಂದರೆ ಜೀವಾತ್ಮ ಪರಮಾತ್ಮ ಸಮಾಗಮದ ಪ್ರತಿಪಾದನೆಗೆ ಯುಕ್ತವಸ್ತುವಾಗಿದೆ. ಜೀವಾತ್ಮನ ಪ್ರಯತ್ನದ ಮೂಲಕ ಪರಿಹಾರವಾಗಬಲ್ಲ ಸಂಕಷ್ಟಗಳು ಮತ್ತು ಯಾತನೆಗಳನ್ನು ವಿಪ್ರಲುಭ ಶೃಂಗಾರ ಚಿತ್ರಿಸುತ್ತದೆ.

ಕೂಚಿಪುಡಿ ಸಂಸಾರಗಳ ಪ್ರತಿಯೊಬ್ಬ ಪುರುಷ ಸದಸ್ಯನೂ ಈ ಕಲೆಯ ಅನುಷ್ಠಾನಕ್ಕಾಗಿ ತನ್ನನ್ನು ತಾನು ಒತ್ತೆಯಿಡುವಂತೆ ತನ್ನ ಜೀವಮಾನದಲ್ಲಿ ಕೊನೆಯ ಪಕ್ಷ ಒಂದು ಬಾರಿಯಾದರೂ ಸತ್ಯಭಾಮಾ ಪಾತ್ರವನ್ನು ಅಭಿನಯಿಸಲು ಪ್ರತಿಜ್ಞೆ ಮಾಡುವಂತೆ ಸಿದ್ಧೇಂದ್ರ ಯೋಗಿಗಳು ಸದಸ್ಯರ ಮನವೊಲಿಸಿದ್ದರು. ಇದಲ್ಲದೆ, ಈ ಪ್ರೌಢಕಲೆಗಾಗಿ, ತನ್ಮೂಲಕ ಧಾರ್ಮಿಕ ಪ್ರಚಾರಕ್ಕಾಗಿ ತಮ್ಮ ಜೀವನವನ್ನೆ ಮೀಸಲಿಟ್ಟ ಸಂಸಾರಗಳಿಗೆಂದು ಕೂಚಿಪುಡಿಯನ್ನು ಅಗ್ರಹಾರವಾಗಿ ಕೊಡಲು ಗೊಲ್ಕೊಂಡದ ನವಾಬ (ಕ್ರಿ. ಶ. 1672-1687) ಅಬ್ಬುಲ್ ಹಸನ್ ಕುತಾಬ್ ಅವರಿಂದ ತಾಮ್ರ ಫಲಕ ದತ್ತಿಯನ್ನು ಹೊರಡಿಸಲು ಸಿದ್ಧೇಂದ್ರಯೋಗಿಗಳೇ ಕಾರಣರಾದರು. ಈ ವಾಗ್ದಾನವನ್ನು ಗೌರವಿಸುತ್ತ ಈ ಕಲೆ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿದೆ.

ಈಗಾಗಲೆ ತಿಳಿಸಿದಂತೆ, ಸಿದ್ಧೇಂದ್ರಯೋಗಿಯವರು ನೃತ್ಯನಾಟಕದ ವಸ್ತು ಮತ್ತು ರೂಪವನ್ನು ಬಹಳ ಮಟ್ಟಿಗೆ ಉತ್ತಮಪಡಿಸಿದರು. ಪಾರಿಜಾತಹರಣ ನಾಟಕ ಹೆಚ್ಚು ಪ್ರೌಢವಾದದ್ದು ಮತ್ತು ನಾಟ್ಯಶಾಸ್ತ್ರ, ಸಂಗೀತಶಾಸ್ತ್ರ ಹಾಗೂ ತಾಳಶಾಸ್ತ್ರಗಳ ಆವಶ್ಯಕ ಅಂಶಗಳನ್ನೆಲ್ಲ ಒಳಗೊಂಡಿರುವಂಥದು. ಕಾಲ ಕಳೆದಂತೆ ಕೂಚಿಪುಡಿ ಭಾಗವತರ ಸಂಚಾರೀ ಮೇಳಗಳು ವಿವಿಧ ದೇವಾಲಯಗಳಲ್ಲಿ ಮತ್ತು ದರ್ಬಾರುಗಳಲ್ಲಿ ನಡೆಯುತ್ತಿದ್ದ ದೇವದಾಸಿಯರ ಮತ್ತು ರಾಜನರ್ತಕಿಯರ ಪ್ರದರ್ಶನಗಳ ಜೊತೆ ಸಂಪರ್ಕ ಕಲ್ಪಿಸಿಕೊಂಡುವು. ಅದರ ಫಲವಾಗಿ, ಕೂಚಿಪುಡಿ ಪಂಥದ ಕಲೆ ಸಣ್ಣ ಪುಟ್ಟ ಮಾರ್ಪಾಡುಗಳಿಗೆ, ಭಿನ್ನತೆಗಳಿಗೆ ಒಳಗಾಗಬೇಕಾಯಿತು. ಕ್ಷೇತ್ರಜ್ಞರ ಮೂವ್ವ ಗೋಪಾಲ ಪದಗಳ ಗಾಯನ ಮತ್ತು ನರ್ತನದಿಂದ ದಕ್ಷಿಣ ಭಾರತಾದ್ಯಂತ ನೃತ್ಯಕಲೆಯ ಮೇಲಾದ ಬಹುದೊಡ್ಡ ಪ್ರಭಾವ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ. ಇದರ ಫಲಿತಾಂಶವಾಗಿ, ಪಾರಿಜಾತ ಹರಣ ನಾಟಕದಲ್ಲಿನ ಸತ್ಯಭಾಮಾ ಪಾತ್ರ ಅಲಂಕಾರಶಾಸ್ತ್ರದಲ್ಲಿ ವರ್ಣಿತವಾದ ನಾಯಿಕೆಯ ಎಂಟು ಬಗೆಯ ಪೂರ್ಣ ನಿರೂಪಣೆಗೆ ಇಂಬುಕೊಟ್ಟು ಮಾರ್ಪಟ್ಟಿತು. ಹೀಗೆ ಕಥೆಯಲ್ಲಿ ಹಲವಾರು ಪಾತ್ರ ವೈಲಕ್ಷಣ್ಯಗಳನ್ನು ಒಳಗೊಂಡಿರುವ ಪಾರಿಜಾತ ಹರಣ ನಾಟಕದ ಮೂಲ ರೂಪ ಮಾರ್ಪಟ್ಟು ಪ್ರಮುಖವಾಗಿ ಸತ್ಯಭಾಮಾ ಮತ್ತು ಮಾಧವಿ ಎಂಬೆರಡು ಪಾತ್ರಗಳು ಮಾತ್ರ ಉಳಿದು ಬಂದುವು. ಸಮಸ್ತವೂ ಸತ್ಯಭಾಮೆಯ ಕಲಾಪವಾಯಿತು. ಹೀಗಾಗಿ ಪಾರಿಜಾತಹರಣ ನಾಟಕಕ್ಕೆ ಭಾಮಾಕಲಾಪ ಎಂದು ಹೆಸರಾಯಿತು. ಇಲ್ಲಿ ಮಾಧವಿ ಸತ್ಯಭಾಮೆಯ ಪ್ರಿಯ ಗೆಳತಿ, ಆಕೆಯ ಆತ್ಮಸಾಕ್ಷ್ಯ ರಕ್ಷಕಳು, ಒಂದು ದೃಷ್ಟಿಯಲ್ಲಿ ಆಕೆಯ ಆತ್ಮವಿವೇಕ ಸ್ವರೂಪಳು.

ರಂಗಭೂಮಿ, ನಾಟಕ : ಕೂಚಿಪುಡಿ ನೃತ್ಯನಾಟಕವನ್ನು ಕುರಿತಾದ ಕೆಲವು ಸ್ವಾರಸ್ಯಕರವಾದ ಅಂಶಗಳನ್ನೀಗ ನೋಡಬಹುದು. ಅವರ ರಂಗಭೂಮಿ ಸರಳವಾದುದು. ಗ್ರಾಮದ ದೇವಾಲಯವೊಂದರ ಮುಂದು ಸಮತಟ್ಟಾದ, ತೆಂಗಿನಗರಿಗಳಿಂದ ಮುಚ್ಚಿದ ಚಪ್ಪರದವೇ ಸಾಮಾನ್ಯವಾಗಿ ಅವರ ನಾಟಕರಂಗ. ಪ್ರೇಕ್ಷಕರು ಎದುರಿನ ಬಯಲಿನಲ್ಲಿ ನೆಲದ ಮೇಲೆ ಕುಳಿತು ನಾಟಕವನ್ನು ನೋಡುತ್ತಾರೆ. ನಾಟಕ ರಾತ್ರಿ ಹತ್ತರಿಂದ ಬೆಳಗಿನ ನಾಲ್ಕು ಗಂಟೆಯವರೆಗೂ ನಡೆಯಬಹುದು. ಸುಂದರ ನಮೂನೆಯ ಬಣ್ಣದ ಪರದೆಯೊಂದನ್ನು ಇಬ್ಬರು ಯುವಕರು ರಂಗಭೂಮಿಗೆ ಅಡ್ಡಲಾಗಿ ಹಿಡಿದಿರುತ್ತಾರೆ. ಗ್ರಾಮದ ಅಗಸರಿಬ್ಬರು ರಂಗಸ್ಥಳದ ಎರಡು ಕಡೆಯಲ್ಲಿಯೂ ನಿಂತು ಹರಳೆಣ್ಣೆಯಿಂದ ಉರಿಯುವ ಪಂಜುಗಳನ್ನು ಹಿಡಿದಿದ್ದು ರಂಗಸ್ಥಳಕ್ಕೆ ಬೆಳಕನ್ನು ಒದಗಿಸುತ್ತಾರೆ. ನಾಟಕ ನಡೆಯುತ್ತಿದ್ದಾಗ ನಿರ್ದಿಷ್ಟ ಕ್ಷಣಗಳಲ್ಲಿ ಉದಾಹರಣೆಗೆ, ಪರದೆಯ ಹಿಂದಿನಿಂದ ಸತ್ಯಭಾಮೆ ಪ್ರವೇಶಿಸುತ್ತಿದ್ದಾಗ, ನಾಟಕೀಯ ಪರಿಣಾಮವನ್ನು ಅಧಿಕಗೊಳಿಸುವ ಸಲುವಾಗಿ, ಬೆಳಕನ್ನು ಹೆಚ್ಚಿಸಲು ಪಂಜಿನಮೇಲೆ ಗುಗ್ಗಿಲು ಎಂಬ ರಾಳವನ್ನು ಎರಚುತ್ತಾರೆ. ಅದು ಭುಗ್ ಎಂದು ಹತ್ತಿ ಉರಿಯುತ್ತದೆ. ರಂಗಸ್ಥಳದ ಮೇಲೆ ಪಾತ್ರ ಪ್ರವೇಶಿಸುತ್ತಿದ್ದಂತೆ ದ್ವಾರದಲ್ಲಿನ ವಾದ್ಯಗಾನ ಹಠಾತ್ತನೆ ಪ್ರಾರಂಭವಾಗುತ್ತದಲ್ಲದೆ ತೆರೆ ಬಿದ್ದು ರಾಳದ ಉರಿ ಭುಗಿಲೆನ್ನುತ್ತದೆ.

ಇಲ್ಲಿ ಗಮನಿಸಬೇಕಾದ ಸ್ವಾರಸ್ಯವೆಂದರೆ ಪಾತ್ರ ತನ್ನನ್ನು ತಾನೆ ಪರಿಚಯಿಸಿಕೊಳ್ಳುವುದು. ನಟರ ಹಿಂದೆ, ಅವರನ್ನು ಸಮೀಪಿಸಿದಂತೆ, ಮೃದಂಗ, ಕೊಳಲು ಶ್ರುತಿಗಳನ್ನೊಳಗೊಂಡಂತಿರುವ ವಾದ್ಯಗಾರರು ಮತ್ತು ಇಬ್ಬರು ಹಿನ್ನೆಲೆ ಗಾಯಕರು ನಿಂತಿರುತ್ತಾರೆ. ತಂಡದ ಮುಖಂಡನಾದವ ಕೈನಲ್ಲಿನ ತಾಳಗಳ ಮೂಲಕ ಕಾಲ ವ್ಯವಸ್ಥೆ ಮಾಡುತ್ತ ನಾಟಕವನ್ನು ನಿಯಂತ್ರಿಸುತ್ತಾರೆ. ಆತ ಎತ್ತರವಾದ ಆಳಾಗಿದ್ದು ಸಂಪ್ರದಾಯ ಶುದ್ಧವಾದ ಮಂತ್ರಶಾಸ್ತ್ರದಲ್ಲಿ ನುರಿತವನಾಗಿರುತ್ತಾನೆ. ಕಲಾವಿದರ ಮೇಲೆ ಬೀಳಬಹುದಾದ ಕೆಟ್ಟದೃಷ್ಟಿಯನ್ನು ನಿವಾರಿಸಲು ಆತ ಸದಾ ಜಾಗರೂಕನಾಗಿರುತ್ತಾನೆ.

ಕಾಲ ಸರಿದಂತೆ ನೃತ್ಯ ನಾಟಕಗಳಲ್ಲಿ ನೂತರ ಪ್ರಕಾರಗಳು ನಿರ್ಮಿತವಾದುವು. ಅವುಗಳಲ್ಲಿ ಗೊಲ್ಲಕಲಾಪ ಒಂದು. ಇದು ಕೂಚಿಪುಡಿಯ ಇನ್ನೊಂದು ವಿಶೇಷ. ಇದು ಗೌಳಿಗಿತ್ತಿ ಮತ್ತು ಬ್ರಾಹ್ಮಣನೊಬ್ಬನ ನಡುವೆ ನಡೆದ ತಾತ್ತ್ವಿಕ ಸಂವಾದವೇ ಆಗಿದೆ. ಈ ಭಾಗಗಳನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಸ್ಕøತದ ಸ್ವಾಮ್ಯ ಅವಶ್ಯ ಇರಬೇಕಾಗುತ್ತದೆ. ಇದು ಕ್ರಮಬದ್ಧ ಕಥೆಯಾಗಿರದೆ ವಿಶದವಾದ ಮತಾನುಚರಣೆಯಲ್ಲಿನ ಯಜ್ಞಗಳ ನಿಷ್ಟ್ರಯೋಜಕತೆ, ಮಾನಸಿಕ ಯಜ್ಞದ ಶ್ರೇಷ್ಠತೆ, ಆದರ್ಶಪ್ರಾಯ ಸಾಂಸಾರಿಕ ಜೀವನ ಮತ್ತು ಪಿಂಡೋತ್ಪತ್ತಿ ಕರ್ಮಗಳಂತೆ ವಿವಿಧ ಸಾಂಸ್ಕøತಿಕ ಪ್ರಕರಣಗಳನ್ನು ಕುರಿತ ಪ್ರವಚನವಾಗಿದೆ. ಇದೊಂದು ಸಾಮಾಜಿಕ ವಿಡಂಬನೆಯಾಗಿದ್ದು ಮನೋರಂಜನೆಗಿಂತ ಹೆಚ್ಚಾಗಿ ಬೋಧಪರವಾದುದಾಗಿದೆ. ಗೌಳಿಗಿತ್ತಿ, ತಾನು ಸಂಸ್ಕøತಿ, ಜ್ಞಾನ, ಶಿಕ್ಷಣ ಹಾಗೂ ಗೌರವದಲ್ಲಿ ಬ್ರಾಹ್ಮಣನಿಗಿಂತ ಕೀಳಾದವಳಲ್ಲ ಎಂಬುದನ್ನು ಸಿದ್ಧಪಡಿಸುತ್ತಾಳಲ್ಲದೆ ಶೂದ್ರನಾಗಿ ಹುಟ್ಟಿದ ಮನುಷ್ಯನೊಬ್ಬ ದೀಕ್ಷೆಪಡೆದ ಅನಂತರ ಬ್ರಾಹ್ಮಣ್ಯವನ್ನು ಗಳಿಸಿಕೊಳ್ಳಬಹುದೆಂದು ವಾದಿಸುತ್ತಾಳೆ.

ವೇಷಭೂಷಣ : ಕೂಚಿಪುಡಿ ಕಲಾವಿದರ ವೇಷಭೂಷಣ ವಿಶದವಾದುದಲ್ಲ. ಪಾತ್ರಕ್ಕೆ ತಕ್ಕ, ಒಂದೇ ಬಣ್ಣ ಮತ್ತು ಒಂದೇ ಹುಡಿಯನ್ನು ಉಪಯೋಗಿಸಲಾಗುತ್ತದೆ. ಆಧುನಿಕ ವೇಷಭೂಷಣಗಳ ವಸ್ತುಗಳು ಬರುವ ಮುನ್ನ, ಅವಶ್ಯವಿದ್ದ ಬಣ್ಣ, ಹುಡಿಗಳನ್ನು ಖನಿಜ ಮತ್ತು ವನಸ್ಪತಿಗಳಿಂದ ಸಿದ್ಧಗೊಳಿಸಲಾಗುತ್ತಿತ್ತು.

ರಾಜ ಸುಂದರ ಕಿರೀಟ ಮತ್ತು ಅಲಂಕೃತ ಭುಜಕೀರ್ತಿಗಳನ್ನು ಧರಿಸುತ್ತಿದ್ದ. ಸತ್ಯಭಾಮೆಯ ಶೃಂಗಾರ ವಿಶದವಾಗಿರುತ್ತಿತ್ತು. ಅವಳ ಅಲಂಕಾರ ಸಾಧನಗಳು ಹಲವು. ಅವಳು ವಾರದ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ರೀತಿಯ ಒಡವೆಗಳನ್ನು ಧರಿಸುತ್ತಿದ್ದಳು. ಇವು ಅಂದಿನ ಸಮಾಜದ ರಾಣಿ ಧರಿಸುವ ಒಡವೆಗಳ ಪಡಿಯಚ್ಚುಗಳಾಗಿರುತ್ತಿದ್ದುವು. ಅವನ್ನು ಹಗುರವಾದ ಮರದಿಂದ ಮಾಡಿ ಹೊಳೆವ ಬಣ್ಣದ ಕಾಗದಗಳಿಂದ ಅಲಂಕರಿಸುತ್ತಿದ್ದರು.

ಸಂಗೀತ: ಕೂಚಿಪುಡಿಯ ಸಂಗೀತದ ಸಂಪ್ರದಾಯ ಮಾರ್ಗೀಯವಾದುದೇ.

ತೀರ್ಥನಾರಾಯಣ ಯತಿ : ತರಂಗ ನೃತ್ಯಪದ್ಧತಿಗೆ ಕಾರಣನಾದ ಒಬ್ಬ ಕವಿ ಮತ್ತು ಕಲಾವಿದ. ಪೂರ್ಣಗೋದಾವರಿ ಜಿಲ್ಲೆಯ ಅಮಲಪುರಂನ ಕುಚಿಮಂಚಿವರಿ ಅಗ್ರಹಾರಕ್ಕೆ ಸೇರಿದ ಈತ ವೇದಾದ್ರಿ ನರಸಿಂಹಸ್ವಾಮಿಯ ಶ್ರೇಷ್ಠ ಭಕ್ತ. ಚಿಕ್ಕವನಿರುವಾಗಲೆ ಯತ್ಯಾಶ್ರಮವನ್ನು ಪ್ರವೇಶಿಸಿ ಸಂಸ್ಕøತ, ಸಂಗೀತ, ನೃತ್ಯಕಲೆಗಳನ್ನು ಕಲಿತು, ತಂಜವೂರು ಜಿಲ್ಲೆಗೆ ವಲಸೆ ಬಂದ. ತೆಲುಗಿನಲ್ಲಿ ಪಾರಿಜಾತ ಹರಣ ನಾಟಕ ಎಂಬ ಚಿಕ್ಕ ಸಂಗೀತ ನಾಟಕವೊಂದನ್ನು ಈತ ರಚಿಸಿ ಅಚ್ಯುತಪುರದ (ಇಂದಿನ ಮೇಳತೂರು) ವರದರಾಜಸ್ವಾಮಿಗೆ ಅರ್ಪಿಸಿದ್ದಾನೆ. ಕಾವೇರಿಯ ಉಪನದಿಯೊಂದರ ಮೇಲಿರುವ ವರಹೂರಿನಲ್ಲಿ ಈತ ಕಡೆಗೆ ನೆಲೆಸಿದ. ಅಲ್ಲಿದ್ದು ಕೃಷ್ಣಲೀಲಾ ತರಂಗಿಣಿ ಎಂಬ ಬಹುಪ್ರಸಿದ್ಧ ಯಕ್ಷಗಾನವನ್ನು ಸಂಸ್ಕøತದಲ್ಲಿ ರಚಿಸಿದ ವರಹೂರಿನ ದೇವಾಲಯದ ದೇವರ ಮುಂದೆ ತರಂಗಗಳನ್ನು ಭಾವಪರವಶತೆಯಲ್ಲಿ ಹಾಡಿದುದಾಗಿಯೂ ನೃತ್ಯಮಾಡಿದುದಾಗಿಯೂ ಈತ ಹೇಳಿಕೊಂಡಿದ್ದಾನೆ. ಲಯ ವಿನ್ಯಾಸದ ಜಟಿಲ ಉದಾಹರಣೆಗಳು, ವಿಶೇಷವಾಗಿ, ಕೆಲವು ತರಂಗಗಳ ಚರಣಗಳ ಅಂತ್ಯದಲ್ಲಿ ಬರುವ ಶಬ್ದಗಳು ನೃತ್ಯಕ್ಕೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಕೂಚಿಪುಡಿಯ ಕಲಾವಿದರು ತರಂಗ ನೃತ್ಯದ ತಂತ್ರವನ್ನು ಕರಗತಮಾಡಿಕೊಂಡಿದ್ದು ಉದ್ದಕ್ಕೂ ಅದು ಈ ಪಂಥದ ವಿಶೇಷತೆಯಾಗಿ ಮುಂದುವರಿದಿದೆ.

ಕೂಚಿಪುಡಿ ನೃತ್ಯಕ್ಕೂ ಮತ್ತು ಇಂದಿನ ಭರತನಾಟ್ಯಕ್ಕೂ ಇರುವ ವ್ಯತ್ಯಾಸವಿದು : ಕೂಚಿಪುಡಿ ಪಂಥದ ನೃತ್ಯ ಅವಶ್ಯವಾಗಿ, ಮೂಲಭೂತವಾಗಿ ಭರತಮುನಿಯಿಂದ ಪ್ರತಿಪಾದಿತವಾದ ನೃತ್ಯನಾಟಕವಾಗಿದೆ. ನಾಟ್ಯರೂಪದ ಇದು ವಾಚಿಕ, ಆಂಗಿಕ, ಆಹಾರ್ಯ ಮತ್ತು ಸಾತ್ತ್ವಿಕ ಮೊದಲಾದ ನಾಟ್ಯಾಂಶಗಳನ್ನು ಒಳಗೊಂಡಿದ್ದು, ಶೈಕ್ಷಣಿಕ ಹಾಗೂ ಮನೋರಂಜಕ ಉದ್ದೇಶಗಳುಳ್ಳದಾಗಿದೆ. ಇದು ಹೃದಯ ಮುಟ್ಟುವಂಥ ವಿವಿಧ ಭಾವಗಳ ಪ್ರದರ್ಶನಕ್ಕೆ ಆಸ್ಪದ ಕೊಟ್ಟಿದ್ದು, ಅತ್ಯುನ್ನತ ಸಾಂಸ್ಕøತಿಕ ಮೌಲ್ಯವನ್ನು ಹೊಂದಿದೆ. ವಿಶೇಷವಾಗಿ ಉಲ್ಲೇಖಿಸಬಹುದಾದ್ದೆಂದರೆ, ಸ್ತ್ರೀಪಾತ್ರಗಳ ಕಾರ್ಯಭಾಗಗಳೆಲ್ಲವನ್ನೂ ಪುರುಷರು ವಹಿಸಿಕೊಂಡಿರುವುದೇ ಆಗಿದೆ. ಇಂದಿನ ಭರತನಾಟ್ಯ ಪ್ರಾಯಶಃ 120 ವರ್ಷಗಳಷ್ಟು ಹಿಂದಿನದು, ಅಷ್ಟೆ. ಅಲರಿಪು, ಜತಿಸ್ವರ, ಶಬ್ದ, ವರ್ಣ, ಪಾದ ಮತ್ತು ತಿಲ್ಲಾನ ಮೊದಲಾದ ಅಂಶಗಳು ತರ್ಕಬದ್ಧ ಅನುಪೂರ್ವಿಯೊಂದನ್ನು ಅನುಸರಿಸಿದ್ದು, ನೃತ್ತ, ನೃತ್ಯ ಮತ್ತು ಅಭಿನಯಗಳ ಮೂಲಕ ನೃತ್ಯಕಲೆ ಹೇಗೆ ಅಭಿವೃದ್ಧಿಹೊಂದಿತು ಎಂಬುದನ್ನು ತೋರಿಸುತ್ತವೆ. ಈ ಅಂಶಗಳು ವಿಷಯಾನುಕ್ರಮಣಿಕೆಯಲ್ಲಿ ಒಂದು ಮತ್ತೊಂದರ ಜೊತೆ ಸಂಬಂಧವಾವುದನ್ನೂ ಹೊಂದಿರುವುದಿಲ್ಲ. ಪ್ರತಿಯೊಂದು ಅಂಶವೂ ತನಗೆ ತಾನೆ ಪೂರ್ಣವಾದುದಾಗಿದ್ದು, ಉನ್ನತಮಟ್ಟದ ಚಿಕ್ಕದಾದರೂ ಚೊಕ್ಕದಾದ ಮನೋರಂಜನೆಯನ್ನು ಒದಗಿಸುತ್ತದೆ. ಈ ಭರತನಾಟ್ಯಯೋಜನೆ ತಂಜವೂರು ದರ್ಬಾರಿನಲ್ಲಿ ವಡಿವೇಲು ಮತ್ತು ಅವನ ಸೋದರರಿಂದ ರಚಿತವಾದುದು. ಸಾಮಾನ್ಯವಾಗಿ ಒಬ್ಬಳೇ ಒಬ್ಬ ಯುವಸ್ತ್ರೀ ಪ್ರವೀಣೆ ಈ ಎಲ್ಲ ಅಂಶಗಳನ್ನೂ ನಿರ್ವಹಿಸುತ್ತಾಳೆ.

ಇತ್ತೀಚಿನ ವರ್ಷಗಳಲ್ಲಿ ಕೂಚಿಪುಡಿ ಕಲಾವಿದರು ಕೂಡಿ ಮೇಲಿನಂತೆ ತರಂಗ ನೃತ್ಯವನ್ನು, ವಿಶೇಷವಾಗಿ ಬಾಲಗೋಪಾಲ ತರಂಗ, ಮುವ್ವಾ ಗೋಪಾಲಪಾದ ಅಭಿನಯ, ತಿಲ್ಲಾನ ಮತ್ತು ದಶಾವತಾರ ನೃತ್ಯಗಳನ್ನು ಒಳಗೊಂಡಂತೆ ವಿನೋದ ಪ್ರದರ್ಶನಗಳನ್ನು ಕೊಡುತ್ತಿದ್ದಾರೆ. ಪ್ರದರ್ಶನ ಪುಷ್ಪಾಂಜಲಿಯಿಂದ ಪ್ರಾರಂಭವಾಗಿ ತಿಲ್ಲಾನದಿಂದ ಮುಕ್ತಾಯವಾಗುತ್ತದೆ.

ಕೂಚಿಪುಡಿ ಕಲೆಯ ಭವ್ಯತೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯದಲ್ಲಿ ಆಂಧ್ರಪ್ರದೇಶ ಸಂಗೀತ ನಾಟಕ ಅಕೆಡಮಿ ಮಾರ್ಗದರ್ಶನವೀಯುತ್ತಿದೆ. ಕೂಚಿಪುಡಿಯ ವೆಂಕಟರಾಮ ನಾಟ್ಯ ಮಂಡಲಿಯ ಮುಖಂಡರಾದ ಚಿಂತಾಕೃಷ್ಣಮೂರ್ತಿಯವರು ತಮ್ಮ ತಂಡದೊಡನೆ ಸಾರ್ವಜನಿಕ ಪ್ರದರ್ಶನಗಳನ್ನು ಕೊಡುತ್ತಿದ್ದಾರೆ. ಪ್ರಮುಖ ಸ್ತ್ರೀಪಾತ್ರದಲ್ಲಿ ಭಾಗವಹಿಸುವ ವೇದಾಂತಂ ಸತ್ಯನಾರಾಯಣ ಅವರು 1961ರ ರಾಷ್ಟ್ರಪತಿ ಪಾರಿತೋಷಕವನ್ನು ಪಡೆದವರಾಗಿದ್ದಾರೆ.

(ವಿ.ಎ.)