ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃತಕ ವಜ್ರ

ವಿಕಿಸೋರ್ಸ್ದಿಂದ

ಕೃತಕ ವಜ್ರ

ನೈಸರ್ಗಿಕ ವಜ್ರದ ಅಣುರಚನೆಯನ್ನು ಅನುಕರಿಸಿ ಪಡೆದಿರುವ ರಚನೆ (ಆರ್ಟಿಫಿಷಿಯಲ್ ಡೈಮಂಡ್). ವಜ್ರ ಇಂಗಾಲದ ಒಂದು ರೂಪವೆಂದು ತಿಳಿದಾಗಿನಿಂದಲೂ ಗ್ರಾಫೈಟ್, ಕೋಕ್ ಮೊದಲಾದ ಅಗ್ಗವಾಗಿರುವ ಇಂಗಾಲದ ರೂಪಗಳನ್ನು ವಜ್ರರೂಪಕ್ಕೆ ಪರಿವರ್ತಿಸುವ ಯತ್ನಗಳು ನಡೆದಿವೆ. ಜೆ.ಬಿ.ಹನ್ನೈ (1880), ಹೆನ್ರಿ ಮಾಯಿಸನ್(1893) ಮುಂತಾದವರ ಯತ್ನಗಳು ಸರಿಯಾದ ಹಾದಿಯಲ್ಲೇ ಇದ್ದರೂ ಸಫಲವಾಗಲ್ಲಿಲ್ಲ. ಕಬ್ಬಿಣ ಮತ್ತು ಗ್ರಾಫೈಟ್‍ಗಳ ಮಿಶ್ರಣವನ್ನು ಕಾಸಿ ಕೂಡಲೇ ತಣಿಸುವುದರಿಂದ ಮೇಲ್ಮೈಯಲ್ಲಿ ಕಬ್ಬಿಣ ಘನೀಭೂತವಾಗಿ ಹೆಚ್ಚಿನ ಒತ್ತಡ ಏರ್ಪಡುತ್ತದೆ. ಈ ಒತ್ತಡದಿಂದ ಗ್ರಾಫೈಟ್ ವಜ್ರರೂಪಕ್ಕೆ ಬರುವುದು- ಇದು ಮಾಯಿಸನ್ ಅನುಸರಿಸಿದ ವಿಧಾನ. ಅಂದರೆ ಇಂಗಾಲವನ್ನು ಹೆಚ್ಚು ಉಷ್ಣ ಮತ್ತು ಒತ್ತಡಗಳಿಗೆ ಒಳಪಡಿಸುವುದು. ಒತ್ತಡ ಸಾಲದಿದ್ದುದೇ ಬಹುಶಃ ಈ ಪ್ರಾರಂಭದ ಯತ್ನಗಳು ಫಲಿಸದಿರುವುದಕ್ಕೆ ಕಾರಣ.

ಅಮೆರಿಕದ ಬ್ರಿಡ್‍ಗ್ಮನ್ ಎಂಬಾತ ಅಧಿಕಾಧಿಕ ಒತ್ತಡಗಳನ್ನು ಉಂಟುಮಾಡುವ ವಿಧಾನವನ್ನು ಕಂಡುಹಿಡಿದ ಮೇಲೆ ಕೃತಕವಜ್ರದ ತಯಾರಿಕೆಗೆ ಜನರಲ್ ಎಲೆಕ್ಟ್ರಿಕ್ ಕಂಪೆನಿ ಕೈಹಾಕಿತು. ಅನೇಕ ಪ್ರಯೋಗಗಳನ್ನು ನಡೆಸಿದ ಬಳಿಕ 1955ರಲ್ಲಿ ತಯಾರಿಕೆಯ ವಿಧಾನ ಫಲಿಸಿತು. ಪ್ರಯೋಗಗಳು ಬಹು ದಿಕ್ಕುಗಳಲ್ಲಿ ನಡೆದುವು. 1953ರಲ್ಲಿ ವೆನ್‍ಟಾರ್ಫ್ ಎಂಬಾತ ಲಿಥಿಯಂ ಕಾರ್ಬೈಡ್ ಸಂಯುಕ್ತ ವಸ್ತುವನ್ನು ಅಧಿಕ ಉಷ್ಣತೆ ಮತ್ತು ಒತ್ತಡಗಳಲ್ಲಿ ವಿಭಜಿಸಿ ಕೆಲವು ಸಣ್ಣ ಹರಳುಗಳನ್ನು ಪಡೆದ. ಇವು ವಜ್ರಗಳಿರಬಹುದು. ಆದರೆ ಖಚಿತವಾದ ರುಜುವಾತು ಸಿಗಲಿಲ್ಲ. ಎಚ್. ಟಿ. ಹಾಲ್ ಎಂಬಾತ ಲಿಥಿಯಂ ಕಾರ್ಬೊನೇಟನ್ನು ತೆಗೆದುಕೊಂಡು ಸಣ್ಣ ಹರಳುಗಳನ್ನು ಪಡೆದ. ಆದರೆ ಅವು ವಜ್ರಗಳೇ ಎಂಬುದು ಸ್ಪಷ್ಟ ಪಡಲಿಲ್ಲ. ಹೆಚ್. ಎಂ. ಸ್ಟ್ರಾಂಗ್ ಪ್ರಯೋಗ ಮೊದಲನೆಯ ಸಫಲ ಯತ್ನ. ಕಬ್ಬಿಣದ ತಗಡಿನಲ್ಲಿ ಒಂದು ವಜ್ರದ ಹರಳನ್ನಿಟ್ಟು ಅದನ್ನು ಕೋಕ್ ಸೋಡಿಯಂ ಮತ್ತು ಬೇರಿಯಂ ಕಾರ್ಬೊನೇಟ್‍ಗಳ ಮಿಶ್ರಣದಲ್ಲಿಟ್ಟು, 54,000 ವಾಯುಮಂಡಲಗಳಲ್ಲಿ (ಅಟ್ಮಾಸ್ಫಿಯರ್ಸ್) 12600 ಸೆಂ. ಉಷ್ಣತೆಯಲ್ಲಿ 16 ಗಂಟೆಗಳ ಕಾಲ ಕಾಸಿದ ಪರಿಣಾಮವಾಗಿ ಮೊದಲಿಟ್ಟಿದ್ದ ಹರಳಿಗೂ ದಪ್ಪವಾಗಿರುವ ಮತ್ತು ಬರಿಗಣ್ಣಿಗೆ ಕಾಣುವಂಥ ಹಲವು ಹರಳುಗಳು ಉತ್ಪನ್ನವಾದುವು. ಎಕ್ಸ್‍ಕಿರಣಗಳ ಪರೀಕ್ಷೆಯಿಂದ ಇವು ವಜ್ರಗಳೇ ಎಂದು ಸಿದ್ಧವಾಯಿತು. ಕೆಲವು ದಿನಗಳ ತರುವಾಯ ಹಾಲ್ ಎಂಬಾತ ಕಬ್ಬಿಣದ ಸಲ್ಫೈಡನ್ನು ಒಂದು ಗ್ರಾಫೈಟ್ ಕೊಳವೆಯಲ್ಲಿ 95,000 ವಾಯುಮಂಡಲ ಮತ್ತು 1,6000 ಸೆಂ. ಉಷ್ಣತೆಗೆ ಕೆಲವು ಮಿನಿಟುಗಳ ಕಾಲ ಒಳಪಡಿಸಿದ. ಆಗ ಹಲವಾರು ವಜ್ರದ ಹರಳುಗಳು ಉತ್ಪನ್ನವಾದುವು.

ವಜ್ರದ ಹರಳನ್ನು ಬೀಜ ರೂಪದಲ್ಲಿ ಇಡಬೇಕಾಗಿಲ್ಲ. ಲೋಹಗಳನ್ನು ಬೆರೆಸಿ ಗ್ರಾಫೈಟನ್ನು ಪರಿವರ್ತಿಸಬಹುದು. ಲೋಹ ವೇಗವರ್ಧಕವಾಗಿ ಪರಿವರ್ತನೆಗೆ ಬೇಕಾದ ಉಷ್ಣತೆ ಮತ್ತು ಒತ್ತಡಗಳನ್ನು ಏರ್ಪಡಿಸುತ್ತದೆ. 55,000-130,000 ವಾಯುಮಂಡಲ ಒತ್ತಡ ಮತ್ತು 1,4000-2,3500 ಸೆಂ. ಉಷ್ಣತೆಗಳನ್ನು ಬಳಸಿ, ಸಣ್ಣ ವಜ್ರಗಳನ್ನು ತಯಾರಿಸಲಾಗಿದೆ. ಕತ್ತರಿಸುವುದು. ಉಜ್ಜುವುದು ಮತ್ತು ಹೊಳಪು ಕೊಡುವ ಕೆಲಸಗಳಲ್ಲಿ ನೈಸರ್ಗಿಕ ವಜ್ರಗಳಿಗಿಂತಲೂ ಉತ್ತಮವೆನಿಸಿವೆ. ದೊಡ್ಡ ವಜ್ರಗಳನ್ನೂ ತಯಾರುಮಾಡಿದ್ದಾರೆ. ಆದರೆ ಇವುಗಳ ಬಣ್ಣ ಕಪ್ಪು ಮತ್ತು ಔದ್ಯೋಗಿಕ ಉಪಯೋಗದ ದೃಷ್ಟಿಯಿಂದ ಇವುಗಳ ಕಾಠಿಣ್ಯ ಸಾಲದು. (ಎನ್.ಎಸ್.ಕೆ)