ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃತವರ್ಮ

ವಿಕಿಸೋರ್ಸ್ ಇಂದ
Jump to navigation Jump to search

ಕೃತವರ್ಮ

ಮಹಾಭಾರತದ ವೀರರಲೊಬ್ಬ, ಅತಿರಥ, ವೃಷ್ಣಿವಂಶದ ಅರಸು. ಹೃದಿಕ ಇವನ ತಂದೆ. ಭೋಜ, ಹಾರ್ವಿಕ, ಹಾರ್ದಿಕ್ಯ, ವಾಷ್ರ್ಣೇಯ, ವೃಷ್ಣಿಸಿಂಹ- ಎಂಬವು ಇವನ ನಾಮಾಂತರಗಳು. ಬಲರಾಮನ ಅಣತಿಯಂತೆ ಒಂದು ಅಕ್ಷೌಹಿಣೀ ಸೈನ್ಯದೊಡನೆ ಕೌರವ ಪಕ್ಷವನ್ನು ಸೇರಿ ಪಾಂಡವರ ವಿರುದ್ಧ ಯುದ್ಧ ಮಾಡಿದ. ಭೀಷ್ಮ ಅಭೇದ್ಯವಾದ ಕ್ರೌಂಚವ್ಯೂಹವನ್ನು ರಚಿಸಿ ಅದರ ಮುಖಸ್ಥಾನದಲ್ಲಿ ಇವನನ್ನು ನಿಲ್ಲಿಸಿದ. ಪಾಂಡವರ ಸೇನಾನಿ ದೃಷ್ಟದ್ಯುಮ್ನನ ಆಟ ಇವನ ಮುಂದೆ ಸಾಗಲಿಲ್ಲ. ಯುದ್ಧ ಮಧ್ಯದಲ್ಲಿ ಸಾತ್ಯಕಿ ಮೇಲೇರಿ ಬಂದು ಘಾತಿಸಿದಾಗ ಶಲ್ಯ ಇವನಿಗೆ ರಕ್ಷಣೆ ಕೊಟ್ಟ.

ದ್ರೋಣ ಗರುಡವ್ಯೂಹವನ್ನು ರಚಿಸಿದಾಗ ಗರುಡಾಕೃತಿಯ ಸೂಕ್ಷ್ಮಸ್ಥಳವಾದ ಅಕ್ಷಿಸ್ಥಾನದಲ್ಲಿ ಕೃತವರ್ಮನಿದ್ದ. ವ್ಯೂಹವನ್ನು ಭೇದಿಸಿಕೊಂಡು ಒಳನುಗ್ಗಿದ ಅಭಿಮನ್ಯುವನ್ನು ಆಕ್ರಮಿಸಿ ಘಾತಿಸಿದ ಆರು ಜನರಲ್ಲಿ ಇವನೊಬ್ಬ. ಅಭಿಮನ್ಯುವಿನ ಕುದುರೆಗಳನ್ನು ಈತ ಕೊಂದು ಅವನನ್ನು ವಿರಥನನ್ನಾಗಿ ಮಾಡಿದ.

ಇವನಿಗೂ ಸಾತ್ಯಕಿಗೂ ಬದ್ಧದ್ವೇಷ. ಅರ್ಜುನ ಇವನ ರಥಾಶ್ವಗಳನ್ನು ಕೊಲ್ಲಲು ಸಾತ್ಯಕಿ ರಥವನ್ನೇ ನುಚ್ಚುನೂರಾಗಿಸಿದ. ಮಹಾಭಾರತದ ಯುದ್ಧದಲ್ಲಿ ಕೌರವರ ಕಡೆಯಲ್ಲಿ ಕೃಪ, ಅಶ್ವತ್ಥಾಮರ ಜೊತೆಗೆ ಈತನೂ ಉಳಿದ. ಅಶ್ವತ್ಥಾಮ ತಂದೆಯ ಮರಣದಿಂದ ಉದ್ವಿಗ್ನನಾಗಿ ಪಾಂಡವರ ಮೇಲೆ ರಾತ್ರಿಯುದ್ಧ ಮಾಡಲು ಹವಣಿಸಿದಾಗ ಈತ ತಡೆದು ನಿಷ್ಫಲನಾದ. ಕಡೆಗೆ ಊರುಭಂಗದಿಂದ ಪರಿತಪಿಸುತ್ತಿದ್ದ ದುರ್ಯೋಧನನನ್ನು ಸಂಧಿಸಿ ಆತನನ್ನು ಸಂತೈಸಿದ.

ಕೃತವರ್ಮ ಶ್ರೀ ಕೃಷ್ಣನ ಅಚ್ಚುಮೆಚ್ಚಿನ ಅನುವರ್ತಿ. ಮೌಸಲಪರ್ವದಲಿ,್ಲ ಕುಡಿದು ಮತ್ತರಾದ ಯಾದವರಲ್ಲಿ ಕಲಹವಾದಾಗ ಸಾತ್ಯಕಿ ಇವನನ್ನು ಕೊಂದ.

ಇದೇ ಹೆಸರಿನ ಮತ್ತೊಬ್ಬ, ಸುಪ್ರಸಿದ್ಧ ಕಾರ್ತವೀರ್ಯಾರ್ಜುನನ ಚಿಕ್ಕಪ್ಪ. ಧನಕ (ಕನಕ) ಎಂಬ ಮಹಾರಾಜನ ದಾಯಾದಿಗಳಲ್ಲಿ-ಕೃತವೀರ್ಯ, ಕೃತೌಜ, ಕೃತವರ್ಮ, ಕೃತಾಗ್ನಿ ಎಂಬುವರಲ್ಲಿ-ಒಬ್ಬ.

ಕೃತವರ್ಮನೆಂಬ ಮತ್ತೊಬ್ಬ, ಪ್ರಸ್ತುತ ಅವಸರ್ಪಿಣೀಯುಗದ ಹದಿಮೂರನೆಯ ಜೈನತೀರ್ಥಂಕರನ ತಂದೆ. (ಸಿ.ಜಿ.ವಿ.)