ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷಿ ಮತ್ತು ಸರ್ಕಾರ
ಕೃಷಿ ಮತ್ತು ಸರ್ಕಾರ
ಪ್ರತಿಯೊಂದು ದೇಶದ ಸರ್ಕಾರವೂ ಬಹಳ ಹಿಂದಿನಿಂದಲೂ ಕೃಷಿಯಲ್ಲಿ ವಿಶೇಷವಾದ ಆಸಕ್ತಿ ವಹಿಸುತ್ತ ಬಂದಿದೆ; ಅನೇಕ ಸಾರಿ ನಡುವೆ ಪ್ರವೇಶಿಸಿದೆ. ಎರಡನೆಯ ಮಹಾಯುದ್ಧಕ್ಕೆ ಹಿಂದಿನ ಕಾಲದಲ್ಲಿ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಮಧ್ಯ ಪ್ರವೇಶ ಅತ್ಯಂತ ಮುಖ್ಯ ಮತ್ತು ಅವಶ್ಯ ಎಂದು ಭಾವಿಸಲಾಗಿತ್ತು. ಎರಡನೆಯ ಮಹಾಯುದ್ಧದ ಕಾಲದಲ್ಲೂ ಅನಂತರದ ವರ್ಷಗಳಲ್ಲೂ ಈ ನಂಬಿಕೆ ಬಲವಾಯಿತು.
ಎರಡನೆಯ ಮಹಾಯುದ್ಧಕ್ಕೆ ಮುಂಚೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೃಷಿಯ ಬಗ್ಗೆ ಸರ್ಕಾರದ ಕ್ರಮ ಅಗತ್ಯವೆನಿಸಲು ಇದ್ದ ಕಾರಣಗಳು ಹಲವಾರು. ಈ ಕಾರಣಗಳಲ್ಲಿ ಕೆಲವು ಈಚೆಗೆ ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡಿವೆ. ಮತ್ತೆ ಕೆಲವು ಕಾರಣಗಳ ಪ್ರಾಮುಖ್ಯ ಹೆಚ್ಚಿದೆ. ಸರ್ಕಾರದ ಮಧ್ಯಪ್ರವೇಶಕ್ಕೆ ಕಾರಣವಾದ ಹೊಸ ಸನ್ನಿವೇಶಗಳು ಉದ್ಭವಿಸಿವೆ. ವ್ಯವಸಾಯಕಾರ್ಯ ನೆಲವನ್ನೇ ಬಹಳ ಮಟ್ಟಿಗೆ ಅವಲಂಬಿಸಿದ್ದಾಗಿದೆಯಾದ್ದರಿಂದ ಭೂ ಹಿಡುವಳಿ ಮತ್ತು ಉತ್ತರಾಧಿಕಾರ ಕಾನೂನುಗಳು ಕೃಷಿಯ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಇವೆರಡನ್ನೂ ನಿರ್ಣಯಿಸುವುದು ಪ್ರತಿಯೊಂದು ಸರ್ಕಾರದ ಹೊಣೆಯಾಗಿದೆ. ಎರಡನೆಯದಾಗಿ, ವ್ಯವಸಾಯ ಸಾಮಾನ್ಯವಾಗಿ ಸಣ್ಣಗಾತ್ರದ ಉದ್ಯಮ. ಬೃಹದ್ಗಾತ್ರದ ಉದ್ಯಮಗಳಿಗೆ ಒದಗಿಬರುವ ಅನೇಕ ಸೌಲಭ್ಯಗಳನ್ನು ಸಣ್ಣ ರೈತ ಸಂಘಟಿಸಿಕೊಳ್ಳಲಾರ. ಬೃಹದ್ಗಾತ್ರದ ಮಧ್ಯವರ್ತಿಗಳೊಂದಿಗೆ ಚೌಕಾಸಿ ಮಾಡುವ ಶಕ್ತಿ ಇವನಿಗೆ ಇರುವುದಿಲ್ಲ. ಈ ನಿಟ್ಟಿನಿಂದಲೂ ಸರ್ಕಾರದ ಮಧ್ಯಪ್ರವೇಶ ಅವಶ್ಯವೆನಿಸಿದೆ. ಮೂರನೆಯದಾಗಿ, ವಿಶ್ವಾದ್ಯಂತ ಬೇಸಾಯ ಒಂದು ಅವಸನ್ನ (ಡಿಪ್ರೆಸ್ಡ್) ಕೈಗಾರಿಕೆಯೆನಿಸಿದೆ. ಕೃಷಿವಿಧಾನಗಳನ್ನು ಉತ್ತಮಗೊಳಿಸಲು ಬಂಡವಾಳವೇ ಮುಂತಾದ ಉತ್ಪಾದನಾಂಗಗಳು ಸುಲಭವಾಗಿ ಹರಿದು ಬರುವುದಿಲ್ಲ. ಹೊಸ ವಿಧಾನಗಳನ್ನು ಜಾರಿಗೆ ತಂದ ಫಲವಾಗಿ ಅಥವಾ ಕೃಷಿಯ ಅಸ್ಥಿರತೆಯ ಪರಿಣಾಮವಾಗಿ ಹೆಚ್ಚುವರಿಯಾಗುವ ಶ್ರಮ, ಬಂಡವಾಳ ಮುಂತಾದವು ಸುಲಭವಾಗಿ ಬೇರೆಡೆಗೆ ಹರಿದು ಹೋಗುವುದಿಲ್ಲ. ಇಂಥ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ನಾಲ್ಕನೆಯದಾಗಿ, ಅಲ್ಪಾವಧಿಯಲ್ಲಿ ಬೇಡಿಕೆಯ ಏರಿಳಿತಗಳಿಗೆ ಅನುಗುಣವಾಗಿ ಕೃಷಿ ಉತ್ಪನ್ನದ ಸರಬರಾಯಿ ವ್ಯತ್ಯಾಸಗೊಳ್ಳುವುದಿಲ್ಲವಾದ್ದರಿಂದ ಬೆಲೆಗಳೂ ಲಾಭಗಳೂ ಅಸ್ತವ್ಯಸ್ತಗೊಂಡು ಕೃಷಿಕಾರನಿಗೋ ಅನುಭೋಗಿಗೋ ಕೈಗಾರಿಕೆಗೋ ದುಷ್ಪರಿಣಾಮ ಉಂಟಾಗದಂತೆ ಸರ್ಕಾರ ಕ್ರಮ ಕೈಕೊಳ್ಳುವುದು ಅಗತ್ಯ. ಕೊನೆಯದಾಗಿ, ಕೃಷಿಯಲ್ಲಿ ಸರ್ಕಾರ ಹೆಚ್ಚಿನ ಆಸಕ್ತಿ ತಳೆಯಲು ರಾಜಕೀಯ ಮತ್ತು ಸಾಮಾಜಿಕ ಕಾರಣಗಳೂ ಇರುವುದುಂಟು.
ಉತ್ಪಾದನೆ ಮತ್ತು ಸರ್ಕಾರ : ಉತ್ಪಾದನೆಗೆ ನೇರವಾಗಿ ಸಂಬಂಧಿಸಿದ ಅಂಶಗಳಲ್ಲಿ ಮುಖ್ಯವಾದ್ದೆಂದರೆ ಜಮೀನಿನ ಒಡೆತನ ಮತ್ತು ಉತ್ತರಾಧಿಕಾರ, ದೇಶದಲ್ಲಿ ಆದಷ್ಟು ಹೆಚ್ಚು ಮಂದಿ ನೆಲದೊಡೆಯರಿರಬೇಕಂಬ ಉದ್ದೇಶದಿಂದ ಸರ್ಕಾರ ಭೂ ಸ್ವತ್ತನ್ನು ವ್ಯಾಪಕವಾಗಿ ಹಂಚುವ ನೀತಿ ಅನುಸರಿಸಬಹುದು. ಆದರೆ ಈ ಕ್ರಮ ಯಾವುದೋ ಒಂದು ಘಟ್ಟ ಮೀರಿದರೆ ಜಮೀನು ಅನಾರ್ಥಿಕವಾಗಿ ಪರಿಣಮಿಸಬಹುದು. ಅಥವಾ ಜಮೀನು ವಿಂಗಡಣೆಯ ಮೇಲೆ ನಿರ್ಬಂಧ ಹೇರಿದರೆ ಅಥವಾ ಜಮೀನಿನ ಗಾತ್ರ ಹೆಚ್ಚಿಸಲು ಕ್ರಮ ಕೈಗೊಂಡರೆ ಒಂದು ಮಿತಿಯಿಂದಾಚೆಗೆ ಅದೂ ಬಾಧಕವೇ ಆಗಬಹುದು. ಜಮೀನು ಹಿಡುವಳಿಯ ಸ್ವರೂಪವನ್ನು ನಿಷ್ಕರ್ಷಿಸಿ, ಅದರ ಗರಿಷ್ಠ-ಕನಿಷ್ಠ ಮಿತಿ ನಿರ್ಧರಿಸುವುದು ಸರ್ಕಾರದ ಕರ್ತವ್ಯವಾಗಿದೆ. (ನೋಡಿ- ಕೃಷಿ-ಸಂಘಟನೆ). ಗೇಣಿ ಪದ್ಧತಿ ಇರುವುದು ಸೂಕ್ತವೇ ? ಅದಕ್ಕೆ ಯಾವ ಬಗೆಯ ನಿಯಂತ್ರಣ ಇರಬೇಕು ? - ಎಂಬುದನ್ನು ನಿರ್ಧರಿಸುವುದೂ ಸರ್ಕಾರದ ಹೊಣೆಯೇ. (ನೋಡಿ- ಕೃಷಿ-ಕಾನೂನುಗಳು)
ಜಮೀನು ಹಿಡುವಳಿ ಮತ್ತು ಗೇಣಿ ಪದ್ಧತಿಗಳನ್ನು ನಿಯಂತ್ರಣಗೊಳಿಸುವುದೇ ಅಲ್ಲದೆ, ಉತ್ಪಾದನೆಗೆ ನೇರವಾಗಿ ಸಂಬಂಧಿಸಿದಂತೆಯೂ ಸರ್ಕಾರ ನಾನಾ ಕ್ರಮಗಳನ್ನು ಜಾರಿಗೆ ತರಬಹುದು. ಭೂಸಾರ ನಷ್ಟವಾಗದಂತೆ ಕೃಷಿಕಾರ್ಯ ನಡೆಯಲು ಸರ್ಕಾರ ಕಾನೂನು ಮಾಡುವುದುಂಟು. ನೆಲದ ಖಾಸಗಿ ಒಡೆಯರು ಅನೇಕ ವೇಳೆ ಸ್ವಂತ ಲಾಭದೃಷ್ಟಿಯನ್ನೇ ಆಳೆದು, ದೀರ್ಘಕಾಲದ ಹಿತಗಳನ್ನು ಅಲಕ್ಷಿಸಬಹುದು; ಅಥವಾ ಸಮಾಜದ ಅವಶ್ಯಕತೆಗಳನ್ನು ದುರ್ಲಕ್ಷಿಸಬಹುದು. ಗೋಮಾಳಕ್ಕೆ ಮಾತ್ರ ಅರ್ಹವಾದ ನೆಲವೊಂದನ್ನು ಸಾಗುವಳಿಗೆ ಒಳಪಡಿಸಿದರೆ ತತ್ಕಾಲದಲ್ಲಿ ರೈತನಿಗೆ ಲಾಭ ಬಂದೀತು. ಆದರೆ ಯಾವುದೋ ಒಂದು ವರ್ಷ ಮಳೆ ಬಾರದೆ ಭೂಮಿಯ ಮೇಲ್ಮಣ್ಣು ಹುಡಿಯಾಗಿ, ಗಾಳಿಯಲ್ಲಿ ದೂಳಾಗಿ, ಆ ನೆಲ ನಗ್ನೀಕೃತವಾದರೆ ದೇಶಕ್ಕೆ ಅದೊಂದು ಶಾಶ್ವತ ನಷ್ಟವೇ. ಆದ್ದರಿಂದ ಸರ್ಕಾರ ಸೂಕ್ತ ಸರ್ವೇಕ್ಷಣ ನಡೆಸಿ, ನೆಲ ಇಂಥಿಂಥ ಕಾರ್ಯಕ್ಕೇ ಒದಗಿ ಬರತಕ್ಕದ್ದೆಂದು ನಿಗದಿ ಮಾಡಬೇಕಾಗುತ್ತದೆ. ಒಂದು ಕೃಷಿಕ್ಷೇತ್ರವನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿದ ಸಂದರ್ಭದಲ್ಲಿ ಅದನ್ನು ಸರ್ಕಾರ ವಶಪಡಿಸಿಕೊಳ್ಳಲು ಕಾನೂನು ಮಾಡಬಹುದು. ರಾಷ್ಟ್ರಕ್ಕೆ ಅವಶ್ಯಕವಾದ ಬೆಲೆಗಳನ್ನು ಉತ್ಪಾದಿಸಲು ಪ್ರೋತ್ಸಾಹ ನೀಡಬಹುದು. ತತ್‍ಕ್ಷಣದಲ್ಲಿ ಲಾಭದಾಯಕವೆನಿಸಿದ ಬೆಳೆಗಳಿಗೆ ಸಹಾಯಧನ ನೀಡುವುದೂ ಒಂದು ವಿಧಾನ. ಕೆಲವು ಬಾಹ್ಯ ಕಾರಣಗಳಿಂದಾಗಿ ಒಂದು ಜಮೀನಿನ ಬೆಲೆ ಏರಿದರೆ ಆಗ ಅದರ ಲಾಭ ಅದರ ಒಡೆಯನಿಗೇ ಹೋಗದೆ ಸಮಾಜಕ್ಕೆ ಒದಗುವಂತೆ ಕೂಡ ಸರ್ಕಾರ ಕಾನೂನು ಮಾಡುತ್ತದೆ. ನೀರಾವರಿ ಸೌಲಭ್ಯದಿಂದಾಗಿಯೋ, ಸಾರಿಗೆ ಸೌಲಭ್ಯ ಬೆಳವಣಿಗೆಯಿಂದಾಗಿಯೋ, ಹತ್ತಿರದಲ್ಲೆ ಒಂದು ನಗರ ಬೆಳೆದದ್ದರಿಂದಲೋ ಜಮೀನಿನ ಮೌಲ್ಯ ಹೆಚ್ಚಿ, ಮಾಲೀಕ ಆ ಜಮೀನನ್ನು ಹಿಂದಣ ಉದ್ದೇಶದ ಬದಲು ಬೇರೆ ಉದ್ದೇಶಕ್ಕೆ ಬಳಸಿದಾಗ ಆ ಲಾಭ ಸರ್ಕಾರದ ಮೂಲಕ ಸಮಾಜಕ್ಕೆ ಲಭ್ಯವಾಗುವಂತೆ ಸರ್ಕಾರ ಶುಲ್ಕ ವಿಧಿಸುವುದುಂಟು.
ಕೃಷಿಕ್ಷೇತ್ರದ ಒಡೆತನ ಮತ್ತು ಅದರ ಸೂಕ್ತ ಬಳಕೆಗಾಗಿ ಇಂಥ ಹಲವೆಂಟು ಕಾಯಿದೆಗಳನ್ನುಮಾಡುವ ಬದಲು ಎಲ್ಲ ನೆಲವನ್ನೂ ರಾಷ್ಟ್ರೀಕರಣಗೊಳಿಸಿ. ಸರ್ಕಾರವೇ ಅದನ್ನು ನಿರ್ವಹಿಸುವುದು ಸಾಧ್ಯ. ಒಡೆತನದಲ್ಲಿ ಬದಲಾವಣೆಯಿಲ್ಲದೆ, ಯೋಗ್ಯ ಮೇಲ್ವಿಚಾರಕರ ಅಡಿಯಲ್ಲಿ, ನೆಲದ ಸಾರ ಕಡಿಮೆಯಾಗದಂತೆ ಮತ್ತು ಸಮಾಜಕ್ಕೆ ಅನುಕೂಲವಾಗುವಂತೆ ದೀರ್ಘ ದೃಷ್ಟಿಯಿಂದ ಕೃಷಿಕಾರ್ಯ ನೆರವೇರಬಹುದೆಂಬುದು ರಾಷ್ಟ್ರೀಕರಣದ ಪರವಾದ ವಾದ. ರೈತನಿಗೆ ನೆಲದ ಒಡೆತನದಿಂದ ಲಭ್ಯವಾಗುವ ತೃಪ್ತಿಯೂ ಅಗ್ಗವಾದ ಬಂಡವಾಳ ಒದಗಿಬರುವ ಸಾಧ್ಯತೆಯೂ ನೆಲದ ಖಾಸಗಿ ಒಡೆತನದ ಪರವಾದ ಮುಖ್ಯ ವಾದ. ಇದರಿಂದ ಸಮಾಜದಲ್ಲಿ ಸುಖ ನೆಮ್ಮದಿಗಳು ನೆಲೆಗೊಳ್ಳುವುವೆಂದು ಭಾವಿಸಲಾಗಿದೆ. ಜಮೀನನ್ನು ರಾಷ್ಟ್ರೀಕರಣಗೊಳಿಸಿದಾಗ ಬೇಸಾಯವನ್ನು ನಿರ್ವಹಿಸಲು ಸರ್ಕಾರ ನೌಕರರನ್ನು ನೇಮಿಸಬಹುದು. ಆದರೆ ವೈಯಕ್ತಿಕ ಹಿತಾಸಕ್ತಿ ಇಲ್ಲದ್ದರಿಂದ ಇವರು ಖಾಸಗಿ ಒಡೆಯರಷ್ಟೇ ದಕ್ಷತೆಯಿಂದ ಕಾರ್ಯ ಪ್ರವೃತ್ತರಾಗುವುದಿಲ್ಲವೆಂದು ವಾದಿಸಲಾಗಿದೆ. ಅಲ್ಲದೆ ಉತ್ಪಾದನೆಯ ದೃಷ್ಟಿಯಿಂದ ಸಮರ್ಪಕವಾದ ಜಮೀನಿನ ಗಾತ್ರವೆಷ್ಟೆಂಬುದನ್ನು ನಿರ್ಧರಿಸಲು ಸರ್ಕಾರಕ್ಕೆ ಯಾವ ಮಾಪನ ವಿಧಾನವೂ ಇಲ್ಲದೆ ಹೋಗಬಹುದು. ಈ ಕಾರಣಗಳಿಂದ ರಾಷ್ಟ್ರೀಕರಣ ಸೂಕ್ತವಲ್ಲವೆಂಬುದು ವಿರೋಧಿಗಳ ವಾದ.
ನೆಲದ ಒಡೆತನದ ನಿಯಂತ್ರಣವೇ ಅಲ್ಲದೆ ಇನ್ನೂ ಅನೇಕ ಬಗೆಯಾಗಿ ಸರ್ಕಾರವು ಉತ್ಪಾದನ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಬಹುದು. ಕೃಷಿಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ಕ್ರಮಗಳನ್ನು ಒಂದು ಪ್ರದೇಶದ ಎಲ್ಲರೂ ಏಕಪ್ರಕಾರವಾಗಿ ಅನುಸರಿಸುವುದು ಅಗತ್ಯವಾಗುತ್ತದೆ. ಫಸಲಿಗೋ ಪಶುಗಳಿಗೋ ಯಾವುದಾದರೂ ಸಾಂಕ್ರಾಮಿಕ ರೋಗ ಹತ್ತಿದಾಗ ಅದನ್ನು ನಿವಾರಿಸಲು ಸಾರ್ವತ್ರಿಕ ಕ್ರಮ ಅಗತ್ಯ. ಇದನ್ನು ಜಾರಿಗೆ ತರಲು ಸರ್ಕಾರ ಮಾತ್ರವೇ ಅರ್ಹವಾಗಿರುತ್ತದೆ. ಚರಂಡಿ ವ್ಯವಸ್ಥೆ, ನೀರಾವರಿ-ಇಂಥ ಕಾರ್ಯಗಳೂ ಅಷ್ಟೆ. ಸರ್ಕಾರದ ಮಧ್ಯಪ್ರವೇಶ ಅಗತ್ಯವಾದ ಇನ್ನೊಂದು ವಿಷಯವೆಂದರೆ ಹೊಸ ಹೊಸ ಸಂಶೋಧನೆಯ ಪ್ರಯೋಗಗಳು, ದೀರ್ಘಕಾಲದಲ್ಲಿ ಮಾತ್ರವೇ ಫಲಪ್ರದವಾಗುವ ಕ್ರಮಗಳ ಬಗ್ಗೆ ರೈತರಲ್ಲಿ ಜ್ಞಾನಪ್ರಸಾರ- ಮುಂತಾದವು. ಇವನ್ನೆಲ್ಲ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಹೆಚ್ಚು ಬೆಲೆಯ ಯಂತ್ರಗಳನ್ನು ಪಡೆಯಲೂ ಸಾರಪೋಷಕಗಳೇ ಮುಂತಾದವನ್ನು ಒಟ್ಟೊಟ್ಟಿಗೆ ಕೊಳ್ಳಲೂ ರೈತರಿಗೆ ವೈಯಕ್ತಿಕವಾಗಿ ಶಕ್ತಿ ಇರುವುದಿಲ್ಲ. ಇವನ್ನು ಕೊಂಡು ರೈತರಿಗೆ ಒದಗಿಸುವುದು ಅಥವಾ ಅದಕ್ಕಾಗಿ ವ್ಯವಸ್ಥೆ ಏರ್ಪಡಿಸುವುದು ಸರ್ಕಾರದ ಹೊಣೆ. ರೈತರೆಲ್ಲ ಒಟ್ಟಿಗೆ ಸೇರಿ ತಮ್ಮ ಪ್ರತ್ಯಯದ (ಕ್ರೆಡಿಟ್) ಆಧಾರದ ಮೇಲೆ ಉದ್ದರಿ ಪಡೆಯುವುದು ಸಾಧ್ಯವಾಗುವಂತೆ ಸಹಕಾರ ಸಂಘಗಳೇ ಮುಂತಾದವನ್ನು ಸಂಘಟಿಸಲು ಸರ್ಕಾರದ ನೆರವು ಅಗತ್ಯವಾಗುತ್ತದೆ. ಉತ್ಪಾದನೆಯನ್ನು ಅಧಿಕಗೊಳಿಸುವುದು ಅಗತ್ಯವಾದಾಗ, ಕೃಷಿ ಉತ್ಪನ್ನಗಳ ಅಧಿಕಬೆಲೆಗಳಿಂದಾಗಿ ಅದಕ್ಷ ಕೃಷಿಕರೂ ಉತ್ಪಾದನೆಯಲ್ಲಿ ನಿರತರಾಗಿದ್ದಾಗ ಅಂಥ ಉತ್ಪಾದಕರನ್ನು ಉಚ್ಚಾಟಿಸಿ ದಕ್ಷಸ್ಥಿತಿಯನ್ನೇರ್ಪಡಿಸಲು ಸರ್ಕಾರ ಕ್ರಮಕೈಗೊಳ್ಳುವುದುಂಟು. ಉತ್ಪಾದನೆಗೆ ಸಂಬಂಧಿಸಿದಂತೆ ಸರ್ಕಾರದ ಮಧ್ಯಪ್ರವೇಶ ಅಗತ್ಯವೇ, ಅಲ್ಲವೇ- ಎಂಬ ವಿಚಾರವನ್ನು ನಿರ್ಣಯಿಸುವಾಗ ಪರಿಗಣಿಸಬೇಕಾದ ಪ್ರಶ್ನೆಗಳು ಎರಡು ; ಸರ್ಕಾರದ ಮಧ್ಯಪ್ರವೇಶವಿಲ್ಲದ್ದರ ಪರಿಣಾಮವಾಗಿ ರೈತರು ವೈಯಕ್ತಿಕವಾಗಿ ಉತ್ಪಾದನೆಯನ್ನು ಹೆಚ್ಚಿಸುವುದು ಅಸಾಧ್ಯವಾಗಿದೆಯೇ ? ಉತ್ಪಾದನವ್ಯವಸ್ಥೆಯ ಕೊರತೆಯನ್ನು ನಿವಾರಿಸಲು ಸರ್ಕಾರ ಅಥವಾ ಸಹಕಾರ ಸಂಘ ನೀಡುವ ನೆರವಿನಿಂದ ಹೆಚ್ಚಿನ ಫಲ ಲಭ್ಯವಾಗುತ್ತದೆಯೇ ? - ಎಂಬವು ಈ ಪ್ರಶ್ನೆಗಳು.
ಮಾರಾಟದಲ್ಲಿ ಮಧ್ಯ ಪ್ರವೇಶ : ಮಾರಾಟ ಕಾರ್ಯದಲ್ಲಿ ಸರ್ಕಾರದ ಪ್ರವೇಶ ಅಗತ್ಯವೆನಿಸುವ ಸಂದರ್ಭಗಳು ಅನೇಕ. ಒಂದು ಉತ್ಪನ್ನದ ಸರಬರಾಯಿಯಲ್ಲಿ ಕೊರತೆಯಿದ್ದಾಗ ಅದು ಅನುಭೋಗಿಗಳಿಗೆ ನ್ಯಾಯವಾದ ಬೆಲೆಯಲ್ಲಿ, ತಾರತಮ್ಯವಿಲ್ಲದೆ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗುತ್ತದೆ. ಬೆಲೆಯ ನಿಯಂತ್ರಣ, ಪಡಿತರ ವ್ಯವಸ್ಥೆ- ಇವು ಸರ್ಕಾರ ಅನುಸರಿಸುವ ವಿಧಾನಗಳು. ಸರ್ಕಾರವೇ ಉತ್ಪನ್ನವನ್ನೆಲ್ಲ ನಿಗದಿಯಾದ ಬೆಲೆಯಲ್ಲಿ ಕೊಂಡು ಅದನ್ನು ಮಾರಲು ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬಹುದು; ಅಥವಾ ಚಿಲ್ಲರೆ ವಿಕ್ರಯದಾರರು ನ್ಯಾಯಬೆಲೆಗೆ, ನಿಗದಿಯಾದ ಪರಿಮಾಣಗಳಲ್ಲಿ ವಿಕ್ರಯ ಮಾಡುವಂತೆ ವ್ಯವಸ್ಥೆ ಏರ್ಪಡಿಸಬಹುದು. ಮಧ್ಯವರ್ತಿಗಳು ಬಲಿಷ್ಠರಾಗಿ ಉತ್ಪನ್ನವನ್ನೆಲ್ಲ ರೈತರಿಂದ ಸಂಗ್ರಹಿಸಿ ಬೆಲೆ ಏರಿಕೆಗೆ ಕಾರಣರಾದಾಗ ಉತ್ಪಾದಕರಿಗೆ ನ್ಯಾಯಬೆಲೆ ದೊರಕುವಂತೆ, ಅನುಭೋಗಿಗಳು ಹೆಚ್ಚು ಬೆಲೆ ತರಬೇಕಾಗದಂತೆ ಸರ್ಕಾರ ಪ್ರಯತ್ನಿಸುವುದು ಅವಶ್ಯ. ಮಾರಾಟ ಸಹಕಾರ ಸಂಘಗಳನ್ನು ಏರ್ಪಡಿಸಲು ಅದು ಪ್ರೋತ್ಸಾಹ ನೀಡಬಹುದು. ಉತ್ಪನ್ನದ ಗುಣಮಟ್ಟವನ್ನು ನಿಷ್ಕರ್ಷಿಸಿ ಬೆಲೆ ನಿಗದಿ ಮಾಡಬಹುದು. ಇದರಿಂದ ತಮ್ಮ ಉತ್ಪನ್ನಕ್ಕೆ ಯಾವ ಬೆಲೆ ದೊರಕುವುದೆಂಬುದು ಉತ್ಪಾದಕರಿಗೂ, ತಾವು ಕೊಳ್ಳುವ ಸರಕಿಗೆ ಯಾವ ಬೆಲೆ ಕೊಡಬೇಕಾಗುವುದೆಂಬುದು ಅನುಭೋಗಿಗಳಿಗೂ ಖಚಿತವಾಗಿ ಗೊತ್ತಿರುತ್ತದೆ.
ಸಾಧನಗಳ ಕ್ಷೇತ್ರ ಬದಲಾವಣೆ : ಒಂದು ಪದಾರ್ಥಕ್ಕೆ ಬೇಡಿಕೆ ಅಧಿಕವಾದಾಗ ಅದರ ಬೆಲೆ ಏರುವ ಪ್ರವೃತ್ತಿ ಕಂಡುಬರುತ್ತದೆ. ಪದಾರ್ಥದ ಉತ್ಪಾದನೆ ಹೆಚ್ಚು ಲಾಭದಾಯಕವಾಗಿ ಕಂಡುಬರುವುದರಿಂದ ಹೆಚ್ಚು ಉತ್ಪಾದನ ಸಾಧನಗಳು ಅದರಿಂದ ಆಕರ್ಷಿತವಾಗುತ್ತವೆ, ಉತ್ಪಾದನೆ ಅಧಿಕವಾಗುತ್ತದೆ, ಅಧಿಕ ಬೇಡಿಕೆಯ ಪೂರೈಕೆ ಸಾಧ್ಯವಾಗುತ್ತದೆ. ಪದಾರ್ಥಕ್ಕೆ ಬೇಡಿಕೆ ಇಳಿದಾಗ ಹಿಂದೆ ಹೇಳಿದುದಕ್ಕೆ ವಿಪರ್ಯಯವಾದ ಕ್ರಿಯೆಗಳು ಜರುಗುತ್ತವೆ. ಇದು ತಾತ್ತ್ವಿಕವಾಗಿ ಮಾರುಕಟ್ಟೆಯ ನಿಯಮ. ಆದರೆ ಕೃಷಿ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಇಂಥ ಕ್ರಿಯೆಗಳು ಸಂಭವಿಸುವುದಿಲ್ಲ. ದೀರ್ಘಕಾಲದಲ್ಲಿ ಕೂಡ ಅನೇಕ ವೇಳೆ ರೈತರ ಅಜ್ಞಾನ, ಉತ್ಪಾದನ ಸಾಧನಗಳ ಚಲನರಾಹಿತ್ಯ-ಈ ಕಾರಣಗಳಿಂದಾಗಿ ಉತ್ಪಾದನೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಒಂದು ಪದಾರ್ಥಕ್ಕೆ ಬೇಡಿಕೆ ತಗ್ಗಿ, ಬೆಲೆ ಇಳಿದು, ಅದರ ಉತ್ಪಾದನೆ ಅಲಾಭದಾಯಕವಾಗಿದ್ದಾಗಲೂ ಕೃಷಿಯನ್ನು ತ್ಯಜಿಸಿ ಬೇರೆ ಉತ್ಪಾದನ ಕಾರ್ಯದಲ್ಲಿ ನಿರತರಾಗುವುದು ಸಾಧ್ಯವಿಲ್ಲದಿದ್ದರಿಂದ ರೈತರು ಸಂಕಷ್ಟಕ್ಕೀಡಾಗಬಹುದು. ಭಾರತದಲ್ಲಿ ಬಹುತೇಕ ರೈತರಿಗೆ ಬೇರೆ ಯಾವ ಉದ್ಯೊಗವೂ ಇಲ್ಲದ್ದರಿಂದ ಅವರು ನೆಲವನ್ನೇ ಅವಲಂಬಿಸಿರುವುದು ಒಂದು ಉದಾಹರಣೆ. ಉತ್ಪಾದನ ಸಾಧನಗಳು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೂ ಒಂದು ಉತ್ಪನ್ನದಿಂದ ಇನ್ನೊಂದು ಉತ್ಪನ್ನಕ್ಕೂ ಚಲಿಸುವಂತೆ ಸರ್ಕಾರ ಪ್ರಯತ್ನಿಸುವುದು ಅಗತ್ಯವೆನಿಸುತ್ತದೆ. ಯಾವುದೋ ಒಂದು ಆಹಾರಧಾನ್ಯದ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡುವುದು, ಕೈಗಾರಿಕೆಗೆ ಅವಶ್ಯವಾದ ಕಚ್ಚಾಸಾಮಗ್ರಿಯನ್ನು ಹೆಚ್ಚಾಗಿ ಬೆಳೆಯುವಂತೆ ನೆರವು ನೀಡುವುದು, ನೆಲವನ್ನೇ ನಂಬಿದವರಿಗೆ ಅನ್ಯೋದ್ಯೋಗಗಳನ್ನು ಒದಗಿಸಿ ಅವರು ಅವುಗಳತ್ತ ಚಲಿಸುವಂತೆ ಮಾಡುವುದು- ಇವು ಸರ್ಕಾರದ ಕ್ರಮಗಳ ಕೆಲವು ಉದಾಹರಣೆಗಳು.
ಬೆಲೆ ವರಮಾನಗಳ ಸ್ಥಾಯಿಕರಣ : ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಸಂಭವಿಸುವ ಅನಾವಶ್ಯಕವಾದ ಮತ್ತು ತೀವ್ರವಾದ ಏರಿಳಿತಗಳು ಉತ್ಪಾದಕ, ಅನುಭೋಗಿ ಇಬ್ಬರಿಗೂ ಅನಿಷ್ಟಕಾರಕವಾದವು. ಆದರೆ ಈ ಅಸ್ಥಿರತೆ ಅನೇಕ ವೇಳೆ ಅಜ್ಞಾನಜನ್ಯವಾದ್ದು ; ಮಾರುಕಟ್ಟೆಯ ಸ್ಥಿತಿಗತಿಗಳನ್ನು ಅರಿಯದ್ದರಿಂದ ಸಂಭವಿಸುವಂಥದು. ಉತ್ಪನ್ನದ ಬೆಲೆ ಇಳಿದೀತೆಂಬ ಭಯದಿಂದ ರೈತ ಆತುರದಿಂದ ಅದನ್ನು ಮಾರಾಟ ಮಾಡುವುದೂ ಅಭಾವ ಪರಿಸ್ಥಿತಿ ಏರ್ಪಟ್ಟು ಬೆಲೆ ಏರುವುದೆಂಬ ಭಯದಿಂದ ಅನುಭೋಗಿ ತನಗೆ ತತ್‍ಕ್ಷಣದಲ್ಲಿ ಅವಶ್ಯವಾದ್ದಕ್ಕಿಂತ ಹೆಚ್ಚು ಕೊಳ್ಳುವುದೂ ಬೆಲೆಗಳ ತೀವ್ರ ಅಸ್ಥಿರತೆಗೆ ಒಂದು ಕಾರಣ. ಆದ್ದರಿಂದ ಸರ್ಕಾರವೋ ಅದರಿಂದ ಮನ್ನಣೆ ಪಡೆದ ಯಾವುದಾದರೂ ಸಂಸ್ಥೆಯೋ ಮಾರುಕಟ್ಟೆಯ ಪ್ರವೃತ್ತಿಗಳನ್ನು ಕುರಿತ ಅಂಕಿಅಂಶಗಳನ್ನು ಸಂಗ್ರಹಿಸಿ ನಿಯತಕಾಲಿಕ ವರದಿಗಳನ್ನು ಪ್ರಕಟಿಸುವುದರಿಂದ ಈ ಬಗೆಯ ಅಸ್ಥಿರತೆಗಳನ್ನು ನಿವಾರಿಸಬಹುದು. ಋತುವಿಗೆ ಅನುಗುಣವಾಗಿಯೂ ಬೆಲೆಗಳು ಏರಿಳಿಯಬಹುದು. ರೈತ ತನ್ನ ಉತ್ಪನ್ನವನ್ನು ದಾಸ್ತಾನು ಮಾಡಲು ಸರಿಯಾದ ವ್ಯವಸ್ಥೆಯಿಲ್ಲದ್ದರಿಂದಲೂ ಕೃಷಿಕಾರ್ಯಕ್ಕಾಗಿ ಮಾಡಿದ ಸಾಲವನ್ನು ಸುಗ್ಗಿಯಾದೊಡನೆ ತೀರಿಸಬೇಕಾಗಿ ಬರುವುದರಿಂದಲೂ ಆತ ತನ್ನ ಸರಕನ್ನು ಉತ್ಪಾದಿಸಿದೊಡನೆ ಮಾರಾಟ ಮಾಡಲು ಹಾತೊರೆಯುವುದುಂಟು. ಮಧ್ಯವರ್ತಿಗಳು ಈ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡು, ಸರಕನ್ನು ಅಗ್ಗದ ಬೆಲೆಯಲ್ಲಿ ಕೊಂಡು, ದಾಸ್ತಾನು ಮಾಡಿ, ಕೃತಕ ಅಭಾವ ಏರ್ಪಡಿಸಿ ಬೆಲೆ ಏರಿಸಬಹುದು. ರೈತರಿಗೆ ತಮ್ಮ ಉತ್ಪನ್ನವನ್ನು ದಾಸ್ತಾನು ಮಾಡಲು ಸೌಲಭ್ಯಗಳನ್ನು ಕಲ್ಪಿಸಿ, ಅವರಿಗೆ ಹಣಕಾಸಿನ ನೆರವುನೀಡಿ, ಸಾಧ್ಯವಾದಲ್ಲೆಲ್ಲ ಮಧ್ಯವರ್ತಿಗಳನ್ನು ನಿವಾರಿಸಲು ರೈತರನ್ನು ಸಂಘಟಿಸಿ, ಸರ್ಕಾರ ಈ ಶ್ರಾಯೀಣ ಅಸ್ಥಿರತೆಯನ್ನು ಕಡಿಮೆಗೊಳಿಸಬಹುದು. ಆದರೆ ಅತ್ಯಂತ ತ್ರಾಸದಾಯಕವಾದ್ದೆಂದರೆ ದೀರ್ಘ ಕಾಲದಲ್ಲಿ ಸಂಭವಿಸುವ ಅಸ್ಥಿರತೆ ; ಪದಾರ್ಥದ ಅತಿಯಾದ ಉತ್ಪಾದನೆ ಅಥವಾ ಅಭಾವಗಳಿಂದ ಸಂಭವಿಸುವ ಏರಿಳಿತ. ಬೆಲೆಗಳು ಅತಿಯಾಗಿ ಇಳಿಯದಂತೆ ಕನಿಷ್ಠ ಬೆಲೆಗಳನ್ನು ನಿರ್ಧರಿಸುವುದು. ಆ ಬೆಲೆಗಳಲ್ಲಿ ಉತ್ಪನ್ನಗಳನ್ನು ಸರ್ಕಾರವೋ ಯಾವುದಾದರೂ ಸಂಸ್ಥೆಯೋ ರೈತರಿಂದ ಕೊಳ್ಳುವುದು, ಬೆಲೆಗಳು ಅತಿಯಾಗಿ ಏರಿದಾಗಿ ನಿಗದಿಯಾದ ಬೆಲೆಗಳಲ್ಲಿ ರೈತರು ಕಡ್ಡಾಯವಾಗಿ ಉತ್ಪನ್ನವನ್ನು ಸಲ್ಲಿಸುವಂತೆ ಕಾಯಿದೆ ಮಾಡುವುದು-ಇವು ಕೆಲವು ಕ್ರಮಗಳು.
ಕೃಷಿಕನಿಗೆ ಧನಸಹಾಯ, ವಿವಿಧ ಸೌಲಭ್ಯಗಳ ನೀಡಿಕೆ, ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ, ಹೆಚ್ಚು ಉತ್ಪಾದನೆ ಮಾಢುವ ರೈತರಿಗೆ ನಗದು ಬಹುಮಾನ, ಸನ್ಮಾನ, ಸ್ವದೇಶಿ ಉತ್ಪನ್ನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅದರ ಆಮದಿನ ನಿರ್ಬಂಧ, ರಫ್ತಿಗೆ ನೆರವು, ಕೃಷಿ ಅಭಿವೃದ್ಧಿ ಯೋಜನೆ- ಮುಂತಾಗಿ ನಾನಾ ವಿಧವಾಗಿ ಆಧುನಿಕ ಸರ್ಕಾರಗಳು ಕೃಷಿಯಲ್ಲಿ ಆಸಕ್ತಿ ವಹಿಸುತ್ತಿವೆ.
ಭಾರತದಲ್ಲಿ : ಭಾರತದಲ್ಲಂತೂ ಕೃಷಿಯಲ್ಲಿ ಸರ್ಕಾರದ ಮಧ್ಯಪ್ರವೇಶ ಅತ್ಯಂತ ಅವಶ್ಯಕವೆನಿಸಿದೆ. ಇದಕ್ಕೆ ಅನೇಕ ಕಾರಣಗಳುಂಟು ; 1. ಭಾರತದ ವ್ಯವಸಾಯ ಇಂದಿಗೂ ಬಹುತೇಕ ಮಳೆಯನ್ನೇ ಅವಲಂಬಿಸಿದೆ. ಇದೊಂದು ಜೂಜು. ಪ್ರಕೃತಿಯ ಪ್ರಕೋಪದಿಂದ ಸಂಭವಿಸುವ ಸಂಕಟವನ್ನು ಪರಿಹರಿಸಲು ಸರ್ಕಾರದ ನೆರವು ಅಗತ್ಯ. 2. ಭಾರತದ ಕೃಷಿ ಸಂಘಟನೆ ಮತ್ತು ವ್ಯವಸ್ಥೆ ತುಂಬ ಅಸಮರ್ಪಕವಾದ್ದು, ಜಮೀನು ಹಿಡುವಳಿ, ಗೇಣಿಪದ್ಧತಿ, ಧನಪೋಷಣೆ, ಮಾರಾಟ ಮುಂತಾದವನ್ನೆಲ್ಲ ನೇರ್ಪುಗೊಳಿಸಲು ಸರ್ಕಾರ ಪ್ರವೇಶಿಸಬೇಕಾಗುತ್ತದೆ. ಸಾಲಿಗರು, ಮಧ್ಯವರ್ತಿಗಳು, ಮಾರುಕಟ್ಟೆಯ ಏರಿಳಿತಗಳು-ಇವೆಲ್ಲ ಸರ್ಕಾರದ ಆಗಮನವನ್ನು ಆಕರ್ಷಿಸುವ ವ್ಯಾಧಿಸ್ಥಳಗಳು. ಅನಕ್ಷರಸ್ಥನೂ ಆಧುನಿಕ ಕೃಷಿವಿಧಾನಗಳನ್ನರಿಯದವನೂ ಮಾರುಕಟ್ಟೆಯ ಪ್ರವೃತ್ತಿಗಳನ್ನು ತಿಳಿಯಲಾಗದವನೂ ಆದ ರೈತನ ಪ್ರಗತಿಯಲ್ಲಿ ಸರ್ಕಾರದ ಪಾತ್ರ ಅಗಾಧ. 3. ಕೃಷಿ ಈಗಲೂ ಭಾರತದಲ್ಲಿ ಒಂದು ಅವಸನ್ನ ಕೈಗಾರಿಕೆ. ಕೃಷಿ ಉತ್ಪಾದನ ವ್ಯವಸ್ಥೆಯನ್ನು ಸ್ಥಾಯೀಕರಣಗೊಳಿಸುವುದು ಸರ್ಕಾರದಿಂದ ಮಾತ್ರ ಸಾಧ್ಯ. 4. ಕೃಷಿ ಉತ್ಪಾದನಾಂಗಗಳನ್ನು ಚಲನಾತ್ಮಕವನ್ನಾಗಿ ಮಾಡಿ, ಕೃಷಿಯಲ್ಲಿ ಹೆಚ್ಚುವರಿಯಾಗಿರುವ ಕಾರ್ಮಿಕರನ್ನು ಬೇರೆ ಉದ್ಯೋಗಗಳಲ್ಲಿ ನೆಲೆಗೊಳಿಸುವುದು ಅವಶ್ಯವಾಗಿದೆ. 5. ನೀರಾವರಿ ಸೌಲಭ್ಯವನ್ನು ವಿಸ್ತøತಗೊಳಿಸಿ, ಮಳೆಯನ್ನೇ ನೇರವಾಗಿ ಅವಲಂಬಿಸುವ ಪರಿಸ್ಥಿತಿಯನ್ನು ತಪ್ಪಿಸಲು ಅಭಿವೃದ್ಧಿ ಯೋಜನೆಗಳನ್ನು ಸರ್ಕಾರವೇ ಜಾರಿಗೆ ತರಬೇಕಾಗಿದೆ. 6. ಮಿಶ್ರ ಬೇಸಾಯ, ಹೊಸ ತಳಿಗಳ ಮತ್ತು ಸಾರಪೋಷಣಗಳ ಬಳಕೆ, ಸುಧಾರಿತ ಸಾಗುವಳಿ ವಿಧಾನ ಮುಂತಾದವುಗಳಲ್ಲಿ ರೈತರಿಗೆ ನಂಬಿಕೆ ಬರುವಂತೆ ಮಾಡಲು ಪ್ರಾತ್ಯಕ್ಷಿಕ ಕೃಷಿಕ್ಷೇತ್ರಗಳನ್ನು ತೆರೆಯಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಭಾರತದ ಕೃಷಿಯಲ್ಲಿ ಸರ್ಕಾರದ ಪಾತ್ರ ಅಗಾಧ.
ಕೃಷಿ ನೀತಿ : ಬ್ರಿಟಿಷ್ ಸರ್ಕಾರ ಕೃಷಿಯ ಬಗ್ಗೆ ಬಹಳ ಕಾಲ ಅತಿಯಾದ ಉದಾಸೀನ ಧೋರಣೆಯನ್ನೇ ತಳೆದಿತ್ತು. ದೇಶದ ವ್ಯವಸಾಯವ್ಯವಸ್ಥೆಯನ್ನು ಬದಲಿಸುವ ಆಸಕ್ತಿ ಅದಕ್ಕಿರಲಿಲ್ಲ. ಪರಿಸ್ಥಿತಿಯನ್ನು ಉತ್ತಮಪಡಿಸುವ ಯಾವ ಕ್ರಮವನ್ನೂ ಅದು ಜಾರಿಗೆ ಅದು ತರಬಯಸಲಿಲ್ಲ. 19ನೆಯ ಶತಮಾನದ ಕೊನೆಯಲ್ಲಿ ದೇಶದಲ್ಲಿ ಅನೇಕ ಕ್ಷಾಮಗಳು ಸಂಭವಿಸಿದುವು. ಆಗ ಸರ್ಕಾರ ಕೃಷಿಯನ್ನು ಸುಧಾರಿಸುವ ಬಗ್ಗೆ ತೀವ್ರ ಗಮನ ಹರಿಸುವುದು ಅನಿವಾರ್ಯವಾಯಿತು. 1880, 1898 ಮತ್ತು 1901 ರ ಕ್ಷಾಮ ಆಯೋಗಗಳೂ 1903ರ ನೀರಾವರಿ ಆಯೋಗವೂ ಭಾರತದ ಕೃಷಿ ಸುಧಾರಣೆಯ ಬಗ್ಗೆ ರಚನಾತ್ಮಕ ಸಲಹೆಗಳನ್ನು ನೀಡಿದುವು. ಇದಕ್ಕೂ ಮುಂಚೆ ಲ್ಯಾಂಕಷೈರಿನ ಹತ್ತಿ ಜವಳೀ ತಯಾರಕರು ಭಾರತದ ಹತ್ತಿಯಲ್ಲಿ ಆಸಕ್ತಿ ತಳೆದುದರಿಂದ ಅದರ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸರ್ಕಾರ ವ್ಯವಸಾಯ ಇಲಾಖೆಗಳನ್ನು ಸ್ಥಾಪಿಸುವುದು ಅವಶ್ಯವೆಂದು ಬಗೆಯಿತು. ಇವುಗಳ ಸ್ಥಾಪನೆಯಾದ್ದು 1884ರಲ್ಲಿ. ರಾಯಲ್ ಅಗ್ರಿಕಲ್ಚರಲ್ ಸೊಸೈಟಿಯ ವೋಲ್ಕರ್ 1889ರಲ್ಲಿ ಸಲ್ಲಿಸಿದ ಒಂದು ವರದಿಯಲ್ಲಿ ಕೃಷಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಸಂಶೋಧನೆಯ ಆವಶ್ಯಕತೆಯನ್ನು ಒತ್ತಿ ಹೇಳಲಾಗಿತ್ತು. 1890ರಲ್ಲಿ ಸಮಾವೇಶಗೊಂಡಿದ್ದ ಕೃಷಿ ಸಮ್ಮೇಳನದ ಶಿಫಾರಸಿನ ಪ್ರಕಾರ ಸರ್ಕಾರ ಒಬ್ಬ ಕೃಷಿ ರಾಸಾಯನಶಾಸ್ತ್ರಜ್ಞನನ್ನು ನೇಮಕ ಮಾಡಿತು. ಕೃಷಿ ಮಹಾನಿರೀಕ್ಷಕ (ಇನ್‍ಸ್ಪೆಕ್ಟರ್ ಜನರಲ್), ಶಿಲೀಂಧ್ರಶಾಸ್ತ್ರಜ್ಞ (ಮೈಕಾಲಜಿಸ್ಟ್), ಕೀಟವಿಜ್ಞಾನಿ(ಎಂಟೋಮಾಲಜಿಸ್ಟ್)- ಇವರು ಕ್ರಮೇಣ ನೇಮಕವಾದರು. ಪುಣೆಯಲ್ಲಿ ಸಂಶೋಧನಾಲಯ ಸ್ಥಾಪಿತವಾದ್ದು 1903ರಲ್ಲಿ. ಕೃಷಿಗೆ ಹಣಕಾಸು ಒದಗಿಸುವ ಉದ್ದೇಶದಿಂದ ಸಹಕಾರ ಉದ್ದರಿ ಸಂಘಗಳ ಕಾಯಿದೆಯನ್ನು 1904ರಲ್ಲಿ ಜಾರಿಗೆ ತರಲಾಯಿತು. 1905ರಲ್ಲಿ ಕೇಂದ್ರ ಮತ್ತು ಪ್ರಾಂತ್ಯ ವ್ಯವಸಾಯ ಇಲಾಖೆಗಳ ವಿಸ್ತರಣೆಯಾಯಿತು. ಅಖಿಲಭಾರತ ವ್ಯವಸಾಯ ಬೋರ್ಡ್ ಸ್ಥಾಪನೆಯಾದ್ದೂ ಆ ವರ್ಷವೇ. ಇಂಪೀರಿಯಲ್ ಕೃಷಿ ಸೇವಾ ವ್ಯವಸ್ಥೆಯನ್ನು 1906ರಲ್ಲಿ ಆರಂಭಿಸಲಾಯಿತು. ಕೃಷಿ ಸಂಬಂಧವಾದ ವಿಷಯಗಳ ಸಂಶೋಧನೆ ಮತ್ತು ಆಧ್ಯಯನಕ್ಕಾಗಿ ಪುಣೆ, ಕಾನ್ಪುರ, ನಾಗಪುರ, ಲೈಯಲ್‍ಪುರ, ಕೊಯಮತ್ತೂರು ಮತ್ತು ಮಾಂಡಲೆಗಳಲ್ಲಿ (ಬರ್ಮಾ ಆಗ ಭಾರತದ ಭಾಗವಾಗಿತ್ತು)ಕೃಷಿ ಕಾಲೇಜುಗಳು ಸ್ಥಾಪಿತವಾದುವು.
1919ರ ಸುಧಾರಣೆಗಳ ಫಲವಾಗಿ 1921ರಲ್ಲಿ ವ್ಯವಸಾಯ ವಿಷಯವನ್ನು ಪ್ರಾಂತ್ಯ ಸರ್ಕಾರಕ್ಕೆ ವರ್ಗಾಯಿಸಲಾಯಿತು. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೃಷಿ ಸುಧಾರಣೆ ಮಾಡಲು ಪ್ರಾಂತೀಯ ಸರ್ಕಾರಗಳಿಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಲಭ್ಯವಾಯಿತು. 1926ರಲ್ಲಿ ಸರ್ಕಾರ ನೇಮಿಸಿದ ವ್ಯವಸಾಯ ಆಯೋಗ ಸಲ್ಲಿಸಿದ ವರದಿಯಲ್ಲಿ (1928) ಭಾರತದ ವ್ಯವಸಾಯವನ್ನು ಉತ್ತಮಪಡಿಸಲು ಅನೇಕ ಸಲಹೆಗಳನ್ನು ನೀಡಿತು. 1929ರಲ್ಲಿ ಸಂಭವಿಸಿದ ಆರ್ಥಿಕ ಮುಗ್ಗಟ್ಟಿನ ಫಲವಾಗಿ ಭಾರತದಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ಬಹುವಾಗಿ ಕುಸಿದುವು. ಬೆಲೆಗಳನ್ನು ಸ್ಥಾಯೀಕರಿಸಿ ರೈತರ ಸ್ಥಿತಿಯನ್ನು ಸುಧಾರಿಸಲು ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ಭಾರತೀಯ (ಆಗ ಇಂಪೀರಿಯಲ್) ವ್ಯವಸಾಯ ಸಂಶೋಧನ ಮಂಡಲಿ ಆ ವರ್ಷ ಸ್ಥಾಪಿತವಾಯಿತು.
ಮುಂದಣ ದಶಕದಲ್ಲಿ ಸಂಭವಿಸಿದ ಮಹತ್ತ್ವದ ಘಟನೆಯೆಂದರೆ ರಿಸರ್ವ್‍ಬ್ಯಾಂಕಿನ ಸ್ಥಾಪನೆ (1935). ಇದರ ಅಂಗವಾದ ಕೃಷಿ ಉದ್ದರಿ ಇಲಾಖೆ ಭಾರತದ ಕೃಷಿ ಅಭಿವೃದ್ಧಿಗೆ ಅನೇಕ ಬಗೆಯಲ್ಲಿ ಸೇವೆ ಸಲ್ಲಿಸುತ್ತಿದೆ. 1937ರಲ್ಲಿ ಪ್ರಾಂತ್ಯಗಳಲ್ಲಿ ಜನಪ್ರಿಯ ಸರ್ಕಾರಗಳ ಸ್ಥಾಪನೆಯಾದ್ದರಿಂದ ಕೃಷಿಗೆ ಹೆಚ್ಚಿನ ಗಮನ ಲಭ್ಯವಾಗುವ ಸಂದರ್ಭ ಒದಗಿ ಬಂತು. ಆದರೆ ಎರಡೇ ವರ್ಷಗಳಲ್ಲಿ ಈ ಸರ್ಕಾರಗಳು ನಿರ್ಗಮಿಸಿದುವು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ಅತಿಯಾಗಿ ಏರಿದುವು. ಸರ್ಕಾರದ ಬೆಲೆ ನಿಯಂತ್ರಣ ಮತ್ತು ಪಡಿತರ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ.
ಅಭಿವೃದ್ಧಿ ಯೋಜನೆ : ಸ್ವತಂತ್ರ ಭಾರತದಲ್ಲಿ ಕೃಷಿ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಅನೇಕ ದಿಕ್ಕುಗಳಲ್ಲಿ ಪ್ರಯತ್ನ ನಡೆಸುತ್ತಿದೆ. ಭಾರತದ ಪ್ರಥಮ ಪಂಚವಾರ್ಷಿಕ ಯೋಜನೆ ಕೃಷಿಗೆ ಆದ್ಯಗಮನ ನೀಡಿತು. ಅದರ ಒಟ್ಟು ವೆಚ್ಚದಲ್ಲಿ ಶೇ. 32 ರಷ್ಟು ಹಣವನ್ನು ಕೃಷಿ ಸಮುದಾಯ ಅಭಿವೃದ್ಧಿ ಯೋಜನೆ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಕಾರ್ಯಗಳಿಗಾಗಿ ಮೀಸಲಾಗಿರಿಸಿತು. ಒಂದನೆಯ ಯೋಜನೆಯ ಒಟ್ಟು ವೆಚ್ಚವಾದ ರೂ. 1,960 ಕೋಟಿಯಲ್ಲಿ ಇದಕ್ಕಾಗಿ ವೆಚ್ಚವಾದ ಹಣ ರೂ. 601 ಕೋಟಿ (ವ್ಯವಸಾಯ ಮತ್ತು ಸಮುದಾಯ ಅಭಿವೃದ್ಧಿ ರೂ. 291 ಕೋಟಿ ; ನೀರಾವರಿ ಮತ್ತು ಪ್ರವಾಹ ನಿಯಂತ್ರಣ ರೂ. 310 ಕೋಟಿ). ಎಲ್ಲ ಕೃಷಿ ಪದಾರ್ಥಗಳ ಉತ್ಪನ್ನ ಈ ಅವಧಿಯಲ್ಲಿ 22.2% ರಷ್ಟು ಹೆಚ್ಚಿತು. ಸಾಧಿಸಲಾದ ಬೆಳವಣಿಗೆ ದರ 4.2%.
ಬೆಳೆಯುತ್ತಿರುವ ಜನಸಂಖ್ಯೆಗೂ ಕೈಗಾರಿಕಾ ವ್ಯವಸ್ಥೆಗೂ ಅಗತ್ಯವಾದ ಆಹಾರ ಮತ್ತು ಕಚ್ಚಾಸಾಮಗ್ರಿಯನ್ನು ಒದಗಿಸುವುದೂ ಕೃಷಿ ಉತ್ಪನ್ನಗಳು ಹೆಚ್ಚು ಹೆಚ್ಚಾಗಿ ರಫ್ತಿಗಾಗಿ ಒದಗಿ ಬರುವಂತೆ ಮಾಡುವುದೂ ದ್ವೀತೀಯ ಯೋಜನೆಯ ಉದ್ದೇಶವಾಗಿತ್ತು. ಯೋಜನೆಯಲ್ಲಿ ಸೂಚಿಸಲಾಗಿದ್ದ ಒಟ್ಟು ವೆಚ್ಚವಾದ ರೂ. 4,800 ಕೋಟಿಯಲ್ಲಿ ಕೃಷಿಯ ಭಾಗ 22%. ಎರಡನೆಯ ಯೋಜನೆಯಲ್ಲಿ ವಾಸ್ತವವಾಗಿ ಮಾಡಲಾದ ಒಟ್ಟು ವೆಚ್ಚ ರೂ. 4,600 ಕೋಟಿ, ಇದರಲ್ಲಿ ಕೃಷಿಯ ಭಾಗ 20% (ರೂ. 950 ಕೋಟಿ). ಎರಡನೆಯ ಯೋಜನೆಯಲ್ಲಿ ಕೈಗಾರಿಕೆಗೆ ಆದ್ಯತೆ ನೀಡಲಾಗಿತ್ತು. ಆದರೆ ಕೃಷಿಯನ್ನು ಕಡೆಗಣಿಸಲಿಲ್ಲ. ಒಟ್ಟು ಕೃಷಿ ಉತ್ಪಾದನೆಯಲ್ಲಿ 27.1% ಅಧಿಕ್ಯ ಸಾಧಿಸಲಾಯಿತು (ವಾರ್ಷಿಕ ಹೆಚ್ಚಳದ ದರ 3.8%). ಆಹಾರಧಾನ್ಯದ ಉತ್ಪಾದನೆ 18.9% ಹೆಚ್ಚಿತು (ವಾರ್ಷಿಕ ದರ 3.8%).
ಮೂರನೆಯ ಯೋಜನೆಯಲ್ಲಿ ಕೃಷಿಯ ಪ್ರಾಧಾನ್ಯವನ್ನು ಮತ್ತೆ ಹೆಚ್ಚಿಸಲಾಯಿತು. ಬೆಲೆಗಳ ಏರಿಕೆಯನ್ನು ತಡೆಗಟ್ಟಲೂ ಕೈಗಾರಿಕೆಗೆ ತಳಹದಿ ನಿರ್ಮಿಸಲೂ ಇತರ ದೇಶಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸಲೂ ಕೃಷಿಯ ಅಭಿವೃದ್ಧಿ ಅಗತ್ಯವೆಂಬುದನ್ನು ಮನಗಾಣಲಾಯಿತು. ಯೋಜನೆಯ ಒಟ್ಟು ವೆಚ್ಚವಾದ ರೂ. 10.400 ಕೋಟಿಯಲ್ಲಿ ಕೃಷಿಯ ಪಾಲು ರೂ. 2,110 ಕೋಟಿ (20%) ; ವ್ಯವಸಾಯ, ಸಾಮುದಾಯಿಕ ಅಭಿವೃದ್ಧಿ ಇವಕ್ಕಾಗಿ ರೂ. 1,460 ಕೋಟಿ ಮತ್ತು ದೊಡ್ಡ ಮತ್ತು ಮಧ್ಯಮ ಗಾತ್ರದ ನೀರಾವರಿ ಕಾರ್ಯಗಳಿಗಾಗಿ ರೂ.650 ಕೋಟಿ. ಕೃಷಿ ಉತ್ಪಾದನೆಯನ್ನು ಶೇ. 30 ರಷ್ಟು ಹೆಚ್ಚಿಸುವುದು ಮೂರನೆಯ ಯೋಜನೆಯ ಗುರಿಯಾಗಿತ್ತು. ಆದರೆ ಮೂರನೆಯ ಯೋಜನೆಯ ಸಾಧನೆ ನಿರಾಶಾದಾಯಕವಾಗಿತ್ತು. ಆಹಾರ ಧಾನ್ಯದ ಉತ್ಪಾದನೆ 10%ರಷ್ಟು ಮಾತ್ರ ಆಧಿಕವಾಯಿತು. ಇತರ ಅನೇಕ ಉತ್ಪನ್ನಗಳ ಉತ್ಪಾದನೆ ವಾಸ್ತವವಾಗಿ ಇಳಿಮುಖವಾಯಿತು. ಒಟ್ಟು ಹದಿನೈದು ವರ್ಷಗಳ ಅವಧಿಯಲ್ಲಿ ಸಾಧಿಸಲಾದ ವಾರ್ಷಿಕ ಬೆಳವಣಿಗೆಯ ದರ 2.5%. ಅದಕ್ಕೆ ಹಿಂದಣ 50 ವರ್ಷಗಳಲ್ಲಿಯ ಬೆಳವಣಿಗೆಯ ದರವಾದ 1%ರೊಂದಿಗೆ ಹೋಲಿಸಿದರೆ ಇದು ಆಶಾದಾಯಕವೆಂದೇ ಹೇಳಬೇಕು.
ನಾಲ್ಕನೆಯ ಯೋಜನೆಯಲ್ಲಿ ಸರ್ಕಾರಿ ವಲಯದಲ್ಲಿ ವ್ಯವಸಾಯ ಮತ್ತು ತತ್ಸಂಬಂಧಿ ಕಾರ್ಯಗಳಿಗಾಗಿ ಮೀಸಲಾಗಿಟ್ಟ ಹಣ ರೂ. 2.728 ಕೋಟಿ. ಬೆಲೆಗಳ ಸ್ಥಿರತೆ, ಆರ್ಥಿಕ ಬೆಳವಣಿಗೆಯ ಸಾಧನೆ ಇವಕ್ಕಾಗಿ ಕೃಷಿಯ ಅಭಿವೃದ್ಧಿ ಅತ್ಯಗತ್ಯವೆಂಬುದನ್ನು ಮನಗಂಡ ಸರ್ಕಾರ ಉತ್ಪಾದನೆಯನ್ನು ಹೆಚ್ಚಿಸಲು ತೀವ್ರಕ್ರಮಗಳನ್ನು ಜಾರಿಗೆ ತಂದಿವೆ. ಉತ್ತಮ ಬೀಜಗಳೂ, ಸಾರಪೋಷಕ, ಆಧುನಿಕ ಉಪಕರಣಗಳು ಮುಂತಾದವುಗಳ ಬಳಕೆ, ಬೆಲೆಗಳ ನಿಗದಿ, ಉತ್ತೇಜಕಗಳ ನೀಡಿಕೆ, ನೀರಾವರಿ ವಿಸ್ತರಣೆ, ಉದ್ದರಿ ಸೌಲಭ್ಯ ಕಲ್ಪನೆ-ಮುಂತಾದ ನಾನಾ ಕ್ರಮಗಳನ್ನೊಳಗೊಂಡ ಹಸಿರು ಕ್ರಾಂತಿಯ ಪಲವಾಗಿಕೃಷಿ ಉತ್ಪನ್ನಗಳ ವಿಚಾರದಲ್ಲಿ ಸ್ವಯಂ ಪೂರ್ಣತೆ ಸಾಧಿಸುವ ಆಶೆ ಉದ್ಭವಿಸಿದೆ. ಸ್ಟೇಟ್ ಬ್ಯಾಂಕಿನ ವಿಸ್ತರಣೆ, ಹದಿನಾಲ್ಕು ಪ್ರಮುಖ ಬ್ಯಾಂಕುಗಳ ರಾಷ್ಟ್ರೀಕರಣ, ಬ್ಯಾಂಕುಗಳ ಗ್ರಾಮೀಣ ಶಾಖೆಗಳ ಸ್ಥಾಪನೆ, ಜಮೀನು ಹಿಡುವಳಿ ಸುಧಾರಣೆ, ಜಮೀನಿನ ಗಾತ್ರದ ಕನಿಷ್ಠ-ಗರಿಷ್ಠ ಮಿತಿ ನಿಗದಿ-ಮುಂತಾದ ನಾನಾ ಕ್ರಮಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಕೃಷಿ ವಿಶ್ವವಿದ್ಯಾಲಯಗಳು ಸ್ಥಾಪಿತವಾಗಿವೆ. (ಇವುಗಳ ಬಗ್ಗೆ ಹೆಚ್ಚು ವಿಷಯಗಳಿಗೆ ಕೃಷಿಯನ್ನು ಕುರಿತ ಇತರ ಲೇಖನಗಳನ್ನು ನೋಡಿ)
ಕೃಷಿ ಖಾತೆ : ಹಿಂದಿನಿಂದಲೂ ಕೇಂದ್ರದಲ್ಲಿ ಮತ್ತು ಎಲ್ಲ ರಾಜ್ಯಗಳಲ್ಲಿ ಹೆಚ್ಚು ಕಾಲದಿಂದ ವ್ಯವಸಾಯ ಇಲಾಖೆಗಳು ಅಸ್ತಿತ್ವದಲ್ಲಿವೆ. ಮೊದಲ ದಿನಗಳಲ್ಲಿ ಈ ಇಲಾಖೆಗಳು ಕಂದಾಯದ ಇಲಾಕೆಯ ಭಾಗಗಳಾಗಿದ್ದು, ಜಮೀನು ಕಂದಾಯದ ವಸೂಲಿ ದೃಷ್ಟಿಯಿಂದ ಅಗತ್ಯವಾದ ಅಂಕಿಅಂಶಗಳನ್ನು ಶೇಖರಿಸುವುದಷ್ಟೆ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರ ಸ್ಪಲ್ಪಮಟ್ಟಿನ ಕೃಷಿ ಸಂಶೋಧನೆ ಮತ್ತು ಕೃಷಿ ವಿದ್ಯಾಭಿವೃದ್ಧಿಗೆ ಗಮನ ಕೊಟ್ಟಿತ್ತು. ಕೇಂದ್ರ ಪಶುಸಂಶೋಧನ ಸಂಸ್ಥೆ ಮತ್ತು ಸಸ್ಯ ಮತ್ತು ಪ್ರಾಣಿ ಸಂಪತ್ಸಮೀಕ್ಷಾ ಖಾತೆಗಳು ಕಳೆದ ಶತಮಾನದ ಅಂತ್ಯದಲ್ಲಿ ಸ್ಥಾಪಿತವಾದುವು. ಹಾಗೆಯೇ ಕೇಂದ್ರ ಕೃಷಿ ಸಂಶೋಧನ ಸಂಸ್ಥೆ 1906ರಲ್ಲಿ ಬಿಹಾರದ ಪೂಸಾದಲ್ಲಿ ಸ್ಥಾಪಿತವಾಯಿತು. ರಾಜ್ಯಗಳಲ್ಲಿ ವ್ಯವಸಾಯದ ನಿರ್ದೇಶಕರ ನೇಮಕವಾಗಿ, ಸಂಶೋಧನ ಶಾಖೆಗಳು, ವ್ಯವಸಾಯ ಶಾಲೆಗಳು ಮತ್ತು ಕಾಲೇಜುಗಳು ಅಸ್ತಿತ್ವಕ್ಕೆ ಬಂದುವು.
ಕೇಂದ್ರ ಆಡಳಿತ ಉದ್ಯೋಗ ಖಾತೆಯಂತೆ ಪರಿಣತರನ್ನೊಳಗೊಂಡ ಕೇಂದ್ರ ಕೃಷಿ ಸೇವಾ ಖಾತೆಯೂ ಪ್ರಾರಂಭವಾಯಿತು. ಒಂದನೆಯ ಮಹಾಯುದ್ಧದ ಕಾರಣದಿಂದ ಈ ಪ್ರಗತಿಗೆ ಕುಂದಾಗಿ ಬೇಸಾಯದ ಅಭಿವೃದ್ಧಿಯಲ್ಲಿ ಸರ್ಕಾರದ ಆಸಕ್ತಿ ಕೆಲಕಾಲ ಹಿಂದೆ ಬಿತ್ತು.
1927ರಲ್ಲಿ ಲಿನ್‍ಲಿತ್‍ಗೋ ಕೃಷಿ ಆಯೋಗ ಸಲ್ಲಿಸಿದ ವರದಿಯಲ್ಲಿ ಮಾಡಲಾಗಿದ್ದ ಶಿಫಾರಸುಗಳಿಂದ ಮತ್ತೆ ಕೃಷಿ ಅಭಿವೃದ್ಧಿಗೆ ಸರ್ಕಾರದ ಪ್ರೋತ್ಸಾಹ ದೊರೆಯಿತು. ಕೇಂದ್ರ ಕೃಷಿ ಸಂಶೋಧನ ಮಂಡಳಿ ಸ್ಥಾಪಿತವಾಗಿ, ದೇಶಾದ್ಯಂತ ಕೃಷಿ ಸಂಶೋಧನ ಕಾರ್ಯಕ್ಕೆ ಬೇಕಾದ ಧನಸಹಾಯ, ಸೌಕರ್ಯ, ಸೌಲಭ್ಯಗಳು ಸಂಘಟಿತ ರೀತಿಯಲ್ಲಿ ದೊರೆಯುವಂತಾಯಿತು. 1936ರಲ್ಲಿ ಅಂಕಿ ಅಂಶ, ನೀರಾವರಿ, ಮೀನುಗಾರಿಕೆ ಈ ವಿಷಯಗಳಲ್ಲಿ ಸಲಹೆಗಾರರು ನೇಮಕವಾದರು. 1944ರಲ್ಲಿ ಕಬ್ಬು, ಸೆಣಬು, ತಂಬಾಕು, ತೆಂಗು, ಎಣ್ಣೆ ಬೀಜ- ಈ ಬೆಲೆಗಳ ಅಭಿವೃದ್ಧಿಗೆ ಕೇಂದ್ರ ಸಮಿತಿಗಳು ಅಸ್ತಿತ್ವಕ್ಕೆ ಬಂದುವು. ಅದುವರೆವಿಗೂ ಒಟ್ಟಿಗೆ ಇದ್ದ ಕೃಷಿ ಮತ್ತು ಆಹಾರ ಇಲಾಖೆಗಳು ಬೇರೆಯಾದುವು ; ಕೇಂದ್ರ ಬತ್ತ ಸಂಶೋಧನ ಸಂಸ್ಥೆ, ಒಳನಾಡು ಮೀನುಗಾರಿಕೆ ಸಂಶೋಧನಾಲಯಗಳು ಸ್ಥಾಪನೆಯಾದವು.
1942ರಲ್ಲಿ ಎರಡನೆಯ ಮಹಾಯುದ್ಧದ ಕಾರಣದಿಂದ ಬರ್ಮದಿಂದ ಆಮದಾಗುತ್ತಿದ್ದ ಅಕ್ಕಿ ನಿಂತುಹೋಯಿತು. ಬಂಗಾಳದಲ್ಲಿ ಮಹಾಕ್ಷಾಮ ಸಂಭವಿಸಿತು. ಅನೇಕ ಕಾರಣಗಳಿಂದ ಆಹಾರಾಭಾವ ಉಂಟಾಗಿ, ಹೆಚ್ಚು ಆಹಾರ ಬೆಳೆಯುವ ಆಂದೋಲನ ಆರಂಭವಾಯಿತು. ಅದÀುವರೆಗು ಕೇವಲ ರಾಜ್ಯ ಸರ್ಕಾರಗಳಿಗೆ ಸೀಮಿತವಾಗಿದ್ದ ಆಹಾರೋತ್ಪನ್ನ ಮತ್ತು ಸರಬರಾಯಿ ಹೊಣೆಯಲ್ಲಿ ಕೇಂದ್ರ ಸರ್ಕಾರವೂ ಆಸಕ್ತಿ ವಹಿಸಲು ಪ್ರಾರಂಭಿಸಿತು. ಅಧಿಕ ಬೆಳೆಗಳಿಗೆ ಸಾಧಕವಾಗಿ ಅಲ್ಪ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಕಲ್ಪನೆ, ಗೊಬ್ಬರ, ಸಾಧನ ಸಂಪತ್ತು, ಉಕ್ಕು, ಸಿಮೆಂಟ್, ಡೀಸೆಲ್-ಇವುಗಳ ಸರಬರಾಯಿ, ಸಸ್ಯ ಸಂರಕ್ಷಣೆಯ ಕ್ರಮ, ಕೇಂದ್ರ ಟ್ರ್ಯಾಕ್ಟರ್ ಸಂಸ್ಥೆಯ ಸ್ಥಾಪನೆ- ಇವು ಸಾಧ್ಯವಾದುವು. ತತ್ಫಲವಾಗಿ, ಕೇಂದ್ರದಲ್ಲಿ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ, ನೀರಾವರಿ ಮತ್ತು ಶಕ್ತಿ, ಸಮಾಜಕಲ್ಯಾಣ ಮತ್ತು ಸಹಕಾರ, ಆಹಾರ ಮತ್ತು ಕೃಷಿ ಮಂತ್ರಿ ಶಾಖೆಗಳು ಅಸ್ತಿತ್ವಕ್ಕೆ ಬಂದವು. ಯೋಜನಾ ಆಯೋಗದ ಕಾರ್ಯಕ್ರಮದಲ್ಲೂ ಈ ವಿಷಯಕ್ಕೆ ಆದ್ಯತೆ ದೊರೆಯಿತು. ಕೃಷಿ ಮಂತ್ರಿ ಶಾಖೆಯಲ್ಲಿ ಮಣ್ಣಿನ ಸಂರಕ್ಷಣೆ, ಬಂಜರು ಭೂಮಿಗಳ ಪುನರುದ್ದಾರ, ಕೊಳವೆ ಬಾವಿಗಳ ನಿರ್ಮಾಣ, ಕ್ಷೀರೋದ್ಯಮ, ಮೀನುಗಾರಿಕೆ ಅಭಿವೃದ್ಧಿ, ಬಿತ್ತನೆ ಬೀಜಗಳ ಸುಧಾರಣೆ-ಈ ವಿಷಯಗಳಿಗೆ ಸಂಬಂಧಿಸಿದಂತೆ ಕೆಲಸ ತೀವ್ರವಾಗಲು ಕಾರ್ಯವ್ಯವಸ್ಥೆ ಜಾರಿಗೆ ಬಂತು. ಹಾಗೆಯೇ ಕೇಂದ್ರ ವ್ಯವಸಾಯ ವಿಸ್ತರಣ ಡೈರೆಕ್ಟೊರೇಟ್ ನಿರ್ದಿಷ್ಟ ರೂಪ ತಾಳಿತು. ಭಾರತದಲ್ಲಿ ಮೊದಲಿಂದಲೂ ಆಹಾರ ಸರಬರಾಯಿಯ ನಿಯಂತ್ರಣದ ಹೊಣೆ ಮುಖ್ಯವಾಗಿ ರಾಜ್ಯ ಸರ್ಕಾರಗಳಿಗೆ ಸೇರಿದ್ದು, ರಾಜ್ಯದ ಕಂದಾಯ ಇಲಾಖೆಗಳೂ ಆದಷ್ಟು ಮಟ್ಟಿಗೆ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದುವು. ಎಲ್ಲ ರಾಜ್ಯಗಳಲ್ಲೂ ಕೃಷಿ ಇಲಾಖೆಗಳು ಅಸ್ತಿತ್ವದಲ್ಲಿದ್ದು, ರೈತರಲ್ಲಿ ತಕ್ಕಮಟ್ಟಿಗೆ ಆಧುನಿಕ ವ್ಯವಸಾಯ ಜ್ಞಾನದ ವಿಸ್ತರಣೆ ಆಗುತ್ತಾ ಬಂದಿದೆ. ಈಚಿನ ವರ್ಷಗಳಲ್ಲಿ ಜನಸಂಖ್ಯೆ ಬೆಳೆಯುತ್ತ ಬಂದಂತೆ ಆಹಾರ ಸಮಸ್ಯೆಯೂ ಉಲ್ಬಣವಾಗುತ್ತಿದೆ. ಈ ಸಮಸ್ಯೆಯನ್ನು ಎದುರಿಸಲು ರಾಜ್ಯ ಸರ್ಕಾರಗಳು ಕೃಷಿ ಅಭಿವೃದ್ಧಿಯ ಕಾರ್ಯಗಳಿಗೆ ಹೆಚ್ಚಾದ ಗಮನವನ್ನು ಕೊಡುತ್ತ ಬಂದಿವೆ. ಕೃಷಿ ಇಲಾಖೆಗಳು ವ್ಯಾಪಕವಾಗಿ ಬೆಳೆದಿವೆ. ರಾಜ್ಯ ಮಟ್ಟದಲ್ಲಿ ಡೈರೆಕ್ಟರ್ ವಿಭಾಗ ಮಟ್ಟದ ಜಾಯಿಂಟ್ ಡೈರೆಕ್ಟರ್, ಜಿಲ್ಲಾಮಟ್ಟದಲ್ಲಿ ಡೆಪ್ಯುಟಿ ಡೈರೆಕ್ಟರ್, ಉಪವಿಭಾಗ ಮಟ್ಟದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್, ತಾಲ್ಲೂಕು ಮಟ್ಟದಲ್ಲಿ ವ್ಯವಸಾಯ ವಿಸ್ತರಣಾಧಿಕಾರಿ, ಹೀಗೆ ಸಿಬ್ಬಂದಿ ಶ್ರೇಣಿಯಿದ್ದು ವ್ಯವಸಾಯದ ವಿಷಯದಲ್ಲಿ ರೈತರಿಗೆ ಮಾಹಿತಿ ದೊರೆಯುತ್ತದೆ. ಇದಲ್ಲದೆ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಕೃಷಿ ವಿಶ್ವವಿದ್ಯಾಲಯಗಳೂ ಸಹ ವ್ಯವಸಾಯ ಜ್ಞಾನ ಪ್ರಸಾರ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡಿವೆ. ಪಶುಪಾಲನೆ, ತೋಟಗಾರಿಕೆ, ಮೀನುಗಾರಿಕೆ ಈ ವಿಷಯಗಳ ಅಭಿವೃದ್ಧಿಗೂ ಹೆಚ್ಚು ಕಡಿಮೆ ಇದೇ ರೀತಿಯಲ್ಲಿ ವ್ಯವಸ್ಥೆಯ ಏರ್ಪಾಡಾಗಿದೆ. ಅಧಿಕಾರಿಗಳು ತಾಲ್ಲೂಕು ಅಭಿವೃದ್ಧಿ ಸಮಿತಿ ಮತ್ತು ಗ್ರಾಮ ಪಂಚಾಯಿತಿಗಳ ನಡುವೆ ನಿಕಟ ಸಂಪರ್ಕ ಏರ್ಪಡಿಸುವಂಥ ಕಾರ್ಯಕ್ರಮಗಳಿಂದ ರೈತರಿಗೆ ನೆರವು ದೊರೆಯುತ್ತಿದೆ. ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರತ್ಯೇಕ ಕೃಷಿ ಮತ್ತು ಆಹಾರ ಮಂತ್ರಿ ಶಾಖೆಗಳಿವೆ. ಅಭಿವೃದ್ಧಿ ಮತ್ತು ಆಹಾರೋತ್ಪನ್ನ ಕಮಿಷನರ್ ಇರುತ್ತಾರೆ. ವ್ಯವಸಾಯ, ಸಹಕಾರ ಮತ್ತು ಗ್ರಾಮಾಭಿವೃದ್ಧಿಗೆ ಅಗತ್ಯವಾದ ಎಲ್ಲ ಕಾರ್ಯಕ್ರಮಗಳ ಸಂಘಟನೆಗೆ ಇವರು ಜವಾಬುದಾರರು. ಬೇಸಾಯದಲ್ಲಿ ರಾಸಾಯನಿಕ ಗೊಬ್ಬರ, ಸಸ್ಯ ಸಂರಕ್ಷಣೆ, ರಾಸಾಯನಿಕಗಳು, ಸ್ಪ್ರೇಯರ್‍ಗಳು ಮತ್ತು ಇತರ ಅನೇಕ ಉಪಕರಣಗಳು ಜಾರಿಗೆ ಬರುತ್ತಿವೆ. ಕೊಳ್ಳುವ ರೈತರಿಗೆ ವಂಚನೆ ಆಗದಂತೆ ಇವುಗಳ ಗುಣಮಟ್ಟವನ್ನು ಕಾಪಾಡುವುದು ಅಗತ್ಯ. ಈ ನಿಯಂತ್ರಣ ಕಾರ್ಯಕ್ರಮ ಸಹ ಸಂಬಂಧಪಟ್ಟ ಇಲಾಖೆಗಳ ಹೊಣೆ. ಇತ್ತೀಚಿನ ದಿನಗಳ ಮತ್ತೊಂದು ವೈಶಿಷ್ಟ್ಯವೆಂದರೆ ರೈತರಿಗೆ ಕೃಷಿ ಉದ್ಯಮಕ್ಕೆ ಬೇಕಾದ ಬಂಡವಾಳದ ಸರಬರಾಯಿ. ಸಹಕಾರ ಸಂಸ್ಥೆಗಳಿಂದ ಮೊದಲಿನಿಂದಲೂ ಈ ದಿಕ್ಕಿನಲ್ಲಿ ಸ್ವಲ್ಪ ಕೆಲಸ ಆಗುತ್ತಿದೆ. ಎಲ್ಲ ಅನುಸೂಚಿತ ಬ್ಯಾಂಕುಗಳೂ ರೈತರಿಗೆ ಸುಲಭವಾಗಿ ಸಾಲ ಒದಗಿಸಲು ಮುಂದೆ ಬಂದಿವೆ ; ಅನೇಕ ಹೊಸ ಶಾಖೆಗಳನ್ನು ತೆರೆದಿವೆ. ಇವುಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿದ್ದು ರೈತರಿಗೆ ಸುಲಭ ಬಡ್ಡಿಯಲ್ಲಿ ವ್ಯವಸಾಯಾಭಿವೃದ್ಧಿಗೆ ಅಗತ್ಯವಾದ ಬಂಡವಾಳ ದೊರೆಯುತ್ತಿದೆ. (ಬಿ.ವಿ.ವಿ.)