ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣಗಿರಿ
ಕೃಷ್ಣಗಿರಿ ತಮಿಳುನಾಡಿನ ಸೇಲಂ ಜಿಲ್ಲೆಗೆ ಸೇರಿದ ತಾಲ್ಲೂಕು; ಮತ್ತು ಆ ತಾಲ್ಲೂಕಿನ ಮುಖ್ಯಪಟ್ಟಣ. ಉ.ಅ. 12( 14'-12(43' ಮತ್ತು ಪೂ.ರೇ. 77 58'-78( 30' ನಡುವೆ ಈ ತಾಲ್ಲೂಕು ಹಬ್ಬಿದೆ. ವಿಸ್ತೀರ್ಣ 659 ಚ.ಮೈ. ತಾಲ್ಲೂಕಿನ ಸುತ್ತಣ ಪ್ರದೇಶದಲ್ಲಿ ಎತ್ತರದ ಬೆಟ್ಟಗಳಿವೆ. ಅನೇಕ ಬೆಟ್ಟಗಳ ನೆತ್ತಿಗಳ ಮೇಲೆ ಕೋಟೆಗಳುಂಟು. ಈ ಬೆಟ್ಟಗಳಲ್ಲಿ ಅನೇಕ ತೊರೆಗಳು ಹುಟ್ಟಿ ಪೊನ್ನಯಾರ್ ನದಿಯನ್ನು ಸೇರುತ್ತವೆ. ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಹಳ್ಳಿಗಳುಂಟು. ಆದರೆ ಪಟ್ಟಣ ಮಾತ್ರ ಒಂದೇ-ಕೃಷ್ಣಗಿರಿ.
ಕೃಷ್ಣಗಿರಿ ಪಟ್ಟಣ ತಾಲ್ಲೂಕಿನ ಕೇಂದ್ರ. ಉ.ಅ. 12( 31' ಮತ್ತು ಪೂ.ರೇ. 78( 13' ಮೇಲಿದೆ. ವಿಸ್ತೀರ್ಣ ಸುಮಾರು 12 ಚ.ಕಿ.ಮೀ. ಜನಸಂಖ್ಯೆ 35,359 (1971). ದಕ್ಷಿಣ ರೈಲ್ವೆಗೆ ಸೇರಿದ ತಿರುಪ್ಪತ್ತೂರ್ ನಿಲ್ದಾಣಕ್ಕೆ 24 ಮೈ. ದೂರದಲ್ಲಿದೆ. ತಿರುಪ್ಪತ್ತೂರಿಗೂ ಕೃಷ್ಣಗಿರಿಗೂ ರಸ್ತೆ ಸಂಪರ್ಕವುಂಟು. ಮೊದಲು ಇವುಗಳ ನಡುವೆ ನ್ಯಾರೋ ಗೇಜ್ ರೈಲು ಸಂಪರ್ಕವಿತ್ತು. ಈಗ ಇದನ್ನು ತೆಗೆದುಹಾಕಲಾಗಿದೆ. ಪಟ್ಟಣದ ಹಳೆಯ ಭಾಗವನ್ನು ಕೃಷ್ಣಗಿರಿಯೆಂದೂ ಹೊಸಬಡಾವಣೆಯಿರುವ ಭಾಗವನ್ನು ದೌಲತಾಬಾದ್ ಎಂದೂ ಕರೆಯುತ್ತಾರೆ. ಸರ್ಕಾರಿ ಕಚೇರಿಗಳು ದೌಲತಾಬಾದಿನಲ್ಲಿವೆ. ಜಿಲ್ಲೆಯ ಪ್ರಥಮ ಸಹಾಯಕ ಕಲೆಕ್ಟರುಗಳಾಗಿದ್ದ ಮನ್ರೋ ಮತ್ತು ಗ್ರಾಹಾಮರ ಕಾಲದಲ್ಲಿ ಈ ಬಡಾವಣೆಯನ್ನು ಕಟ್ಟಲಾಯಿತು. ಪಟ್ಟಣದ ರಕ್ಷಣೆಗಾಗಿ ಕಡಿದಾದ ಬೆಟ್ಟದ ಮೇಲೆ ಕಟ್ಟಲಾದ ದುರ್ಗದಿಂದ ಕಾಣುವ ನೋಟ ಭವ್ಯವಾದ್ದು. ದುರ್ಗಮವಾದ ಈ ಕೋಟೆಯನ್ನು ಗೆಲ್ಲಲು ಬ್ರಿಟಿಷರು ಬಹಳ ಸಾಹಸ ಮಾಡಿದರು. ಬ್ರಿಟಿಷರು ಮೈಸೂರು ಸಂಸ್ಥಾನದ ಮೇಲೆ ಯುದ್ಧ ನಡೆಸಿದಾಗಲೆಲ್ಲ ಈ ಕೋಟೆಯನ್ನು ದಿಗ್ಬಂಧಿಸುತ್ತಿದ್ದರು. 1767 ಮತ್ತು 1791ರಲ್ಲಿ ನಡೆಸಿದ ಮುತ್ತಿಗೆಗಳಲ್ಲಿ ಅವರು ಸೋಲನ್ನು ಅನುಭವಿಸಿದರು. 1768ರಲ್ಲಿ ಮಾತ್ರ್ರ ಕೋಟೆ ಬ್ರಿಟಿಷರಿಗೆ ಶರಣಾಗಿತ್ತು. ಆಗ ಕೆಲವು ವರ್ಷಗಳ ಕಾಲ ಇದು ಬ್ರಿಟಿಷ್ ಪಡೆಯೊಂದರ ಅಧೀನದಲ್ಲಿತ್ತು.
ಕೃಷ್ಣಗಿರಿಯ ಸುತ್ತಣ ಪ್ರದೇಶದಲ್ಲಿ ಒಳ್ಳೆಯ ದ್ರಾಕ್ಷಿ ಬೆಳೆಯುತ್ತದೆ. (ಯು.ಜೆ.ಎಂ.)