ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣಾಚಾರ್ಯ, ಗರಣಿ

ವಿಕಿಸೋರ್ಸ್ದಿಂದ

ಕೃಷ್ಣಾಚಾರ್ಯ, ಗರಣಿ 1857-1918. ಹೆಸರಾಂತ ವಿದ್ವಾಂಸರು. ಸಂಸ್ಕøತ ಕನ್ನಡಗಳೆರಡರಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೃಷ್ಣಾಚಾರ್ಯ ತಿಮ್ಮಣ್ಣಾಚಾರ್ಯ ಗರಣಿ ಎಂಬುದು ಇವರ ಪೂರ್ತಿ ಹೆಸರು. ಹುಟ್ಟಿದ್ದು ಗರಣಿಯಲ್ಲಿ. ಕೆಲವು ಕಾಲ ಮದ್ರಾಸಿನ ಕ್ರಿಶ್ಚನ್ ಕಾಲೇಜಿನಲ್ಲೂ ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲೂ ಕನ್ನಡ ಪಂಡಿತರಾಗಿ ಕೆಲಸ ಮಾಡಿದರು. ಇವರು ಖ್ಯಾತ ವ್ಯಾಕರಣ ಪಂಡಿತರು. ಮೈಸೂರು ಮಹಾರಾಜರ ಆಸ್ಥಾನವಿದ್ವಾಂಸರೆಂಬ ಗೌರವಕ್ಕಿವರು ಪಾತ್ರರಾಗಿದ್ದರು. ಧರ್ಮ, ವೈದ್ಯಶಾಸ್ತ್ರ, ವನಸ್ಪತಿಶಾಸ್ತ್ರ, ಭಾಷಾಶಾಸ್ತ್ರ, ಸಾಹಿತ್ಯ, ಕಲೆ ಇತ್ಯಾದಿ ವಿಷಯಗಳನ್ನು ಕುರಿತು ಇವರು ರಚಿಸಿರುವ ಗ್ರಂಥಗಳಲ್ಲಿ ಕೆಲವು ಹೀಗಿವೆ:

ಆಯುರಾರೋಗ್ಯ ಸಂಗ್ರಹ: ಕರ್ಣಾಟಕ ಭಾಷಾ ವಿಷಯವು (1891); ಕರ್ಣಾಟಕ ಭಾಷಾ ಸಮೀಕರಣೋಪನ್ಯಾಸ; ಕಾದಂಬರೀ ಕಥೆ(ಬಾಣಕವಿಯ ಸಂಸ್ಕøತ ಗ್ರಂಥದ ಕಥಾಸಾರ, 1899); ಗಜೇಂದ್ರಮೋಕ್ಷ ಟೀಕೆ; ದೀರ್ಘಾಯುಸೂತ್ರ (1909); ನಾಗಾನಂದ ನಾಟಕಂ (ಸಂಸ್ಕøತ ನಾಟಕದ ಕಥಾಸಾರ, 1888); ನೀತಿಶತಕ; ಭಗವತ್ಪ್ರಾರ್ಥನೆ-ಎರಡು ಭಾಗಗಳು (1911); ಮೃಚ್ಛಕಟಿಕ ಪ್ರಕರಣಂ (1890); ವಿಶೇಷ ಧರ್ಮ ಪ್ರಶ್ನೆ; ಸತ್ಕಥಾ (1912); ಸದ್ವøತ್ತಾನುಷ್ಠಾನ (1931); ಸನಾತನಾರ್ಯಧರ್ಮಸಾರ-2 ಭಾಗಗಳು; ಸ್ಮøತಿಧರ್ಮ ಪದ್ಧತಿ; ಸಂಸ್ಕಾರ ವಿಶೇಷ ಪ್ರಶ್ನೆ (1912); ಸಾಮಾನ್ಯ ಕರ್ಮ ಪ್ರಶ್ನೆ (1912); ಹವ್ಯಪಾಕ ಪದ್ಧತಿ (1911)- ಇವು ಕನ್ನಡ ಗ್ರಂಥಗಳು. ಸಂಸ್ಕøತದಲ್ಲಿ ಧಾತುರೂಪಾವಳಿ, ಶಬ್ದ ರತ್ನಾವಳಿ ಇತ್ಯಾದಿ ಗ್ರಂಥಗಳನ್ನಿವರು ರಚಿಸಿದ್ದಾರೆ.

  (ಜೆ.ಎಸ್.ಪಿ.ಎಂ.)