ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಂಟಕಿ

ವಿಕಿಸೋರ್ಸ್ದಿಂದ

ಕೆಂಟಕಿ - ಅಮೆರಿಕ ಸಂಯುಕ್ತಸಂಸ್ಥಾನದ ದಕ್ಷಿಣ ಮಧ್ಯದಲ್ಲಿರುವ ಒಂದು ರಾಜ್ಯ. ನೀಲಿಹುಲ್ಲು ಸಮೃದ್ಧಿಯಾಗಿ ಈ ರಾಜ್ಯದಲ್ಲಿ ಬೆಳೆಯುವುದರಿಂದ ನೀಲಿ ಹುಲ್ಲಿನ ರಾಜ್ಯ ಎಂಬುದು ಇದರ ಜನಪ್ರಿಯ ಹೆಸರು. ಇದು 1792ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ 15ನೆಯ ರಾಜ್ಯವಾಯಿತು. ಆಲೆಗೇನಿ ಪರ್ವತಗಳಿಗೆ ಪಶ್ಚಿಮದಲ್ಲಿರುವ ಈ ರಾಜ್ಯದ ವಾಯುವ್ಯ ಈಶಾನ್ಯಗಳಲ್ಲಿ ಒಹಾಯೊ ನದಿಯೇ ಗಡಿಯಾಗಿದೆ. ಆ ನದಿಯಿಂದಾಗಿ ಈ ರಾಜ್ಯ ಇಲಿನಾಯ್, ಒಹಾಯೊ ಮತ್ತು ಇಂಡಿಯಾನ ರಾಜ್ಯಗಳಿಂದ ಬೇರ್ಪಟ್ಟಿದೆ. ಪೂರ್ವದಲ್ಲಿ ವರ್ಜಿನಿಯ, ಬಿಗ್ ಸ್ಯಾಂಡಿ ನದಿ ಮತ್ತು ಅದರ ಕವಲಾದ ಟಗ್ ಇವು ಮೇರೆಗಳು. ಟಗ್ ನದಿಯಿಂದಾಗಿ ಕೆಂಟಕಿ ರಾಜ್ಯ ವೆಸ್ಟ್ ವರ್ಜಿನಿಯದಿಂದ ಪ್ರತ್ಯೇಕಗೊಂಡಿದೆ. ಆಗ್ನೇಯ ಮತ್ತು ದಕ್ಷಿಣಗಳಲ್ಲಿ ವರ್ಜಿನಿಯ ಮತ್ತು ಟನೆಸೀಗಳಿವೆ. ಪಶ್ಚಿಮದ ಗಡಿಯಾಗಿ ಹರಿಯುವ ನದಿ ಮಿಸಿಸಿಪಿ. ಈ ನದಿಯಿಂದಾಗಿ ಕೆಂಟಕಿ ರಾಜ್ಯ ಮಿಸೂರಿಯಿಂದ ಪ್ರತ್ಯೇಕಗೊಂಡಿದೆ. ಕೆಂಟಕಿಯ ವಿಸ್ತೀರ್ಣ 40,395 ಚ.ಮೈ. ಇದರಲ್ಲಿ 532 ಚ.ಮೈ. ಜಲಾವೃತಪ್ರದೇಶವೂ ಸೇರಿದೆ. ಸಂಯುಕ್ತಸಂಸ್ಥಾನದ ರಾಜ್ಯಗಳ ಪೈಕಿ ಇದು ವಿಸ್ತೀರ್ಣದಲ್ಲಿ 37ನೆಯದು ಮತ್ತು ಜನಸಂಖ್ಯೆಯಲ್ಲಿ 22ನೆಯದು. ಕೆಂಟಕಿ ಎಂಬ ಹೆಸರು ಇಂಡಿಯನ್ ಮೂಲದ್ದು. ರಾಜ್ಯದ ಉತ್ತರದ ಮಧ್ಯಭಾಗದಲ್ಲಿ 250 ಮೈಲಿಗಳಷ್ಟು ದೂರ ಹರಿದು ಒಹಾಯೊ ನದಿಯನ್ನು ಸೇರುವ ಕೆಂಟಕಿ ನದಿಯಿಂದಾಗಿ ಇದಕ್ಕೆ ಕೆಂಟಕಿ ಎಂಬ ಹೆಸರು ಬಂದಿದೆ.

ಭೌತಲಕ್ಷಣ

ಪೂರ್ವದಲ್ಲಿಯ ಪರ್ವತ ಪ್ರದೇಶಗಳಿಂದ ಪಶ್ಚಿಮದೆಡೆಗೆ ಸಾಗುತ್ತ ಬಂದಂತೆ ನೆಲ ತೆವರುತೆವರಾಗಿ ತಗ್ಗುತ್ತ ಸಾಗುತ್ತದೆ. ಉ.ಅ.36º 30 ಮತ್ತು 39º 6 ಇಂಚುಗಳಿಗೂ ಪ.ರೇ. 82º ಮತ್ತು 89º 33 ಗಳಿಗೂ ನಡುವಣ ಮಿಸಿಸಿಪಿ ಜಲಾನಯನ ಪ್ರದೇಶದಲ್ಲಿ ಈ ರಾಜ್ಯ ಹಬ್ಬಿದೆ. ಆಗ್ನೇಯ ದಿಕ್ಕಿನಲ್ಲಿ ಕೆಲಭಾಗ ಕಂಬರ್ಲೆಂಡ್ ಮತ್ತು ಪೈನ್ ಪರ್ವತಗಳಿಂದ ಆವೃತವಾಗಿದೆ. ರಾಜ್ಯದಲ್ಲಿಯ ಅತ್ಯುನ್ನತ ಪ್ರದೇಶವೆಂದರೆ ಹಾರ್ಲಾನ್ ಕೌಂಟಿಯಲ್ಲಿಯ ಬಿಗ್ ಬ್ಲ್ಯಾಕ್ ಪರ್ವತ (4,145); ಅತಿ ತಗ್ಗಿನ ಪ್ರದೇಶವೆಂದರೆ ಮಿಸಿಸಿಪಿ ನದಿಯ ದಂಡೆಯ ಮೇಲಿರುವ ಪುಲ್ಟನ್ ಕೌಂಟಿ (257). ರಾಜ್ಯದ ಸರಾಸರಿ ಎತ್ತರ 750. ರಾಜ್ಯದ ಪೂರ್ವದ ಕಾಲುಭಾಗ ಪೂರ್ತಿ ಪರ್ವತಮಯ; ಆದರೆ ವಾಸ್ತವವಾಗಿ ನೋಡಿದರೆ ಕಂಬರ್ಲೆಂಡ್ ಮತ್ತು ಪೈನ್ ಪರ್ವತಗಳನ್ನು ಬಿಟ್ಟು ಉಳಿದೆಲ್ಲ ಭಾಗವೂ ಆಲೆಗೇನಿ ಪ್ರಸ್ಥಭೂಮಿಯೆಂದೇ ಹೇಳಬೇಕು. ಕಿರಿದಾದ ಕಣಿವೆಗಳಿಂದಲೂ ಕಡಿದಾದ ಗುಡ್ಡಗಳಿಂದಲೂ ಕೂಡಿರುವ ಈ ಪ್ರದೇಶದ ಗರಿಷ್ಠ ಎತ್ತರ 1500. ಟೆನೆಸೀ ನದಿಗೆ ಪೂರ್ವಕ್ಕಿರುವ ಉಳಿದ ಭಾಗ ನೀಲಿ ಹುಲ್ಲಿನಿಂದಲೂ ದಕ್ಷಿಣದಲ್ಲಿ ಹೈಲೆಂಡ್ ರಿಮ್ ಪ್ರಸ್ಥಭೂಮಿಯಿಂದಲೂ ಕೂಡಿದೆ. ನೀಲಿ ಹುಲ್ಲಿನ ಭೂಮಿ ಸವೆತಕ್ಕೀಡಾದ್ದು. ಕೆಲವೆಡೆ ಸಮತಲ ಪ್ರದೇಶಗಳಲ್ಲಿ ಸೊಂಪಾದ ನೀಲಿ ಹುಲ್ಲಿನಿಂದೊಡಗೂಡಿದ ಬೆಟ್ಟಗಳು ಹಾಗೂ ಕಣಿವೆಗಳು ಸುತ್ತುವರಿದ ನೈಸರ್ಗಿಕ ಉದ್ಯಾನಗಳು ಮನೋಹರವಾಗಿವೆ. ಜೂನ್ ತಿಂಗಳ ಮಧ್ಯಭಾಗದಲ್ಲಂತೂ ನೀಲಿ ಹುಲ್ಲು ಅತ್ಯಂತ ಸಮೃದ್ಧವಾಗಿ, ಪ್ರಕೃತಿ ನೀಲಿಯನ್ನೇ ಹೊದ್ದಂತೆ ತೋರಿ ಬರುತ್ತದೆ. ರಾಜ್ಯದಲ್ಲಿ ಹರಿಯುವ ನದಿಗಳಲ್ಲಿ ಕೆಂಟಕಿ, ಲಿಕಿಂಗ್, ರಾಕ್ ಕ್ಯಾಸಲ್, ಸಾಲ್ಟ್, ಗ್ರೀನ್ ಮತ್ತು ಟ್ರೇಡ್ ವಾಟರ್ ಮುಖ್ಯವಾದವು. ಕಂಬರ್ಲೆಂಡ್ ನದಿ ರಾಜ್ಯದ ಆಗ್ನೇಯ ಹಾಗೂ ದಕ್ಷಿಣ ಮಧ್ಯಭಾಗಗಳಲ್ಲಿ ಹರಿದು, ದಕ್ಷಿಣ ಎಲ್ಲೆಕಟ್ಟಿನ ಬಳಿ ಟೆನೆಸೀಯನ್ನು ಹೋಗುತ್ತದೆ. ನೈಋತ್ಯಭಾಗದ ಕೊನೆಯಲ್ಲಿ ಕಂಬರ್ಲೆಂಡ್ ನದಿ ಪುನ: ಕೆಂಟಕಿಯನ್ನು ಪ್ರವೇಶಿಸಿ ಒಹಾಯೊ ನದಿಯನ್ನು ಸೇರುತ್ತದೆ. ಅನತಿ ದೂರದಲ್ಲಿ ಟೆನೆಸೀ ನದಿಯೂ ಈ ರಾಜ್ಯದ ಗಡಿಯನ್ನು ದಾಟಿ ಒಹಾಯೊದಲ್ಲಿ ಸಂಗಮಿಸುತ್ತದೆ.

ವಾಯುಗುಣ

ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದಲ್ಲಿ ಕೆಂಟಕಿಯ ವಾಯುಗುಣ ಹೆಚ್ಚು ಹಿತಕರ. ಆಗ್ನೇಯ ಭಾಗದಲ್ಲಿ ಮಧ್ಯಕ ವಾರ್ಷಿಕ ಉಷ್ಣತೆ 50º ಫ್ಯಾ. ನೈಋತ್ಯದಲ್ಲಿ ಟನೇಸಿಗೆ ಪಶ್ಚಿಮದಲ್ಲಿ 60º ಫ್ಯಾ. ಇಡೀ ರಾಜ್ಯದ ಮಧ್ಯಕ ಉಷ್ಣತೆ 55º ಫ್ಯಾ. ವಾರ್ಷಿಕ ಸರಾಸರಿ ಅವಪತನ ಈಶಾನ್ಯದಲ್ಲಿ 38" ಇಂದ ದಕ್ಷಿಣದಲ್ಲಿ 50"ವರೆಗೆ ವ್ಯತ್ಯಾಸವಾಗುತ್ತದೆ. ಇಡೀ ರಾಜ್ಯದಲ್ಲಿ 46". ಸಾಮಾನ್ಯವಾಗಿ ವರ್ಷ ಪೂರ್ತಿ ಅವಪತನವಾಗುತ್ತದೆ. ಹಿಮಪಾತ ಇಲ್ಲವೇ ಇಲ್ಲವೆನ್ನಬಹುದು. ಪಶ್ಚಿಮದಿಂದ ಅಥವಾ ನೈಋತ್ಯದಿಂದ ಗಾಳಿ ಬೀಸಿ ತೇವವನ್ನು ಹೊತ್ತು ತರುತ್ತದೆ. ಉತ್ತರ ಹಾಗೂ ವಾಯುವ್ಯ ದಿಕ್ಕುಗಳಿಂದ ಬೀಸುವ ಚಳಿಮಾರುತಗಳು ಹಣ್ಣಿನ ತೋಟಗಳಿಗೆ ಅಪಾಯಕರ.


ಮಣ್ಣಿನ ಗುಣ

ನದೀತೀರದ ಮೆಕ್ಕಲು ಮಣ್ಣಿನ ಪ್ರದೇಶವನ್ನು ಬಿಟ್ಟರೆ, ರಾಜ್ಯದ ಮಣ್ಣೆಲ್ಲ ಬಂಡೆಗಳ ಸವೆತದಿಂದ ಸಂಭವಿಸಿದ್ದು. ಆದ್ದರಿಂದ ಅವುಗಳ ಫಲವತ್ತು ಕಡಿಮೆ. ನೀಲಿ ಹುಲ್ಲಿನ ಪ್ರದೇಶಗಳಲ್ಲಿಯ ಮಣ್ಣೂ ಫಲವತ್ತಾಗಿರುತ್ತದೆ. ಲೆಕ್ಸಿಂಗ್‍ಟನ್ ಸುತ್ತಮುತ್ತಲ ಇಪ್ಪತ್ತೈದು ಮೈಲಿಗಳಷ್ಟು ಪ್ರದೇಶದ ಮಣ್ಣು ಅತ್ಯಂತ ಫಲವತ್ತಾದ್ದು. ಸಮತಲ ಪ್ರದೇಶ ಹಾಗೂ ಟನೇಸಿ ನದಿಯ ಪಶ್ಚಿಮದ ಕೆಳಗಿನ ಪ್ರದೇಶಗಳಲ್ಲಿ ಮಣ್ಣಿನ ಗುಣಗಳೂ ಬದಲಾಗುತ್ತಿರುತ್ತವೆ. ಪರ್ವತ ಪ್ರದೇಶಗಳಲ್ಲಿ ಹಾಗೂ ಆಲೆಗೇನಿಯಲ್ಲಿ ಮಣ್ಣು ಹಗುರವಾಗಿಯೂ ತೆಳುವಾಗಿಯೂ ಇದೆ.

ಸಸ್ಯಗಳು, ಪ್ರಾಣಿಗಳು

ಕೆಂಟಕಿಯ ಪೂರ್ವಪರ್ವತ ಪ್ರದೇಶಗಳಲ್ಲಿ ವಿವಿಧ ರೀತಿಯ ಸಸ್ಯಗಳಿವೆ. ಅಜೇಲಿಯ, ಗ್ರೇಟ್ ಲಾರೆಲ್, ಕಣಿಗಲು, ರೋಡೊಡೆಂಡ್ರಾನ್, ಹಕಲ್ ಬೆರಿ. ಮ್ಯಾಗ್ನೋಲಿಯ, ಬ್ಲೂಬೆರಿ ಮತ್ತು ಅನೇಕ ಫರ್ನ್‍ಗಳನ್ನು ಇಲ್ಲಿ ಕಾಣಬಹುದು. ಟ್ಯುಲಿಪ್, ರೆಡ್‍ಬಡ್ ಮತ್ತು ಡಾಗ್‍ವುಡ್ ಮರಗಳು ಸಾಮಾನ್ಯ. ಟ್ರಿಲಿಯಂ ಮುಂತಾದ ಕಾಡುಹೂವುಗಳು, ಜವುಗು ಸಸ್ಯಗಳು, ನೀಲಿ ಹುಲ್ಲು ಮೊದಲಾದವು ಉಳಿದ ಸ್ವಾಭಾವಿಕ ಸಸ್ಯಗಳು.

ರಾಜ್ಯದ ಮಧ್ಯಭಾಗದಲ್ಲಿ ಒಮ್ಮೆ ಕೋಣಗಳೂ ಪ್ಯೂಮಗಳು ಇದ್ದುವು. ಅಳಿಲು, ಮೊಲ, ನರಿ ಮೊದಲಾದ ಸಸ್ತನಿ ಪ್ರಾಣಿಗಳು ಅಧಿಕ ಸಂಖ್ಯೆಯಲ್ಲಿವೆ. ರಕೂನ್ ಸಾಮಾನ್ಯವಾಗಿ ಕಂಡುಬರುತ್ತದೆ. ವಿವಿಧ ಜಾತಿಯ ಪಕ್ಷಿಗಳೂ ಮೀನುಗಳೂ ರಾಜ್ಯದಾದ್ಯಂತ ಇವೆ.

ಚರಿತ್ರೆ

ಐರೋಪ್ಯ ವಲಸೆಗಾರರು ಬರುವ ಮುನ್ನ ಇಲ್ಲಿ ಸಂಸ್ಕøತಿಯ ಎರಡು ಮೂರು ಘಟ್ಟಗಳಿದ್ದುವೆಂಬುದಕ್ಕೆ ಆಧಾರಗಳು ದೊರೆತಿವೆ. ಇಲ್ಲಿಯ ಆದಿವಾಸಿಗಳದು ಕೃಷಿ ಮತ್ತು ಬೇಟೆಗಾರಿಕೆಯ ನಾಗರಿಕತೆಯಾಗಿತ್ತು. ಅನಂತರ ಕಾಲದಲ್ಲಿದ್ದ ಇಂಡಿಯನರು ಬೇಟೆಯಾಡುತ್ತಿದ್ದರಲ್ಲದೆ ರಾಜ್ಯದ ಎಲ್ಲೆಕಟ್ಟಿನ ಉದ್ದಕ್ಕೂ ಹಳ್ಳಿಗಳನ್ನು ಕಟ್ಟಿ ನೆಲಸಿದ್ದರು. ಒಹಾಯೊ ಕಡೆಯಿಂದ ಷಾನೀ ಜನರೂ ದಕ್ಷಿಣದಿಂದ ಚೆರೊಕೀಗಳೂ ಈ ಪ್ರದೇಶದ ಮೇಲೆ ಆಕ್ರಮಣ ನಡೆಸಿದ್ದರು. ಈ ಜನರಲ್ಲಿ ಪರಸ್ಪರ ಕದನಗಳು ನಡೆಯುತ್ತಲೇ ಇದ್ದುವು. 18ನೆಯ ಶತಮಾನದ ನಡುಗಾಲದಲ್ಲಿ ಇದು ವಿಶೇಷವಾಗಿ ಐರೋಪ್ಯರ ಗಮನ ಸೆಳೆಯಿತು. 1749ರಲ್ಲಿ ಮಾಂಟ್ರೇಲಿನಿಂದ ಸೆಲೊರಾನ್-ದ-ಬ್ಲೇನ್ ವಿಲ್ ಇಲ್ಲಿಗೆ ಬಂದು ತನ್ನ ಸ್ವಾಮ್ಯ ಸ್ಥಾಪಿಸಲು ಯತ್ನಿಸಿದ. ವರ್ಜಿನಿಯ ಮತ್ತು ಪೆನ್ಸಿಲ್ವೇನಿಯದ ವ್ಯಾಪಾರಿಗಳೂ ಇದಕ್ಕೆ ಮುಂಚೆ ಇಲ್ಲಿಗೆ ಬಂದಿದ್ದರು. ಫ್ರೆಂಚರೂ ಈ ಸ್ಪರ್ಧೆಯಲ್ಲಿ ಸೇರಿದ್ದರು. ಒಹಾಯೊ ಕಣಿವೆಯ ವಿಸ್ತಾರಪ್ರದೇಶಗಳ ಮೇಲೆ ಹಕ್ಕು ಸ್ಥಾಪಿಸುವ ಉದ್ದೇಶದಿಂದ ಅನೇಕ ಕಂಪನಿಗಳು ಸ್ಥಾಪಿತವಾದುವು. ಫ್ರೆಂಚರಿಗೂ ಸ್ಥಳೀಯ ಇಂಡಿಯನರಿಗೂ ನಡುವೆ ನಡೆದ ಯುದ್ಧದಿಂದಾಗಿ ಕೆಂಟಕಿಯ ಪರಿಶೋಧನೆ ಸ್ವಲ್ಪಕಾಲ ತಟಸ್ಥವಾಗಿತ್ತು. ವರ್ಜಿನಿಯದ ವ್ಯಾಪಾರಿ ಜಾನ್ ಫಿನ್ಲೆ ಈ ಪ್ರದೇಶದಲ್ಲಿ ಸಂಚಾರ ಮಾಡುತ್ತ ಪ್ರಾಣ ನೀಗಿದ. ಅನಂತರ ಬೂನ್ ಬಂದ. ಕ್ರಮಕ್ರಮವಾಗಿ ವಲಸೆಗಾರರು ಪರ್ವತಗಳ ಅಡಚಣೆಗಳನ್ನು ದಾಟಿ ಇಲ್ಲಿಗೆ ಬಂದು ನೆಲಸಲಾರಂಭಿಸಿದರು. ಬ್ರಿಟಿಷರ ಆಡಳಿತದಿಂದ ಸ್ವತಂತ್ರವಾಗಲು ಅಮೆರಿಕನರು ನಡೆಸಿದ ಸಂಗ್ರಾಮದ ಫಲವನ್ನು ಕೆಂಟಕಿಯ ನೆಲಸಿಗರೂ ಅನುಭವಿಸಬೇಕಾಯಿತು. ಇವರ ವಿರುದ್ಧ ಹೋರಾಟ ನಡೆಸಲು ಬ್ರಿಟಿಷರು ಇಂಡಿಯನರನ್ನು ಪ್ರೇರೇಪಿಸಿದರು.

ಇಂಡಿಯನರ ವಿರುದ್ಧ ನಡೆದ ಯುದ್ಧಗಳಲ್ಲಿ ಇವರು ವಿಜಯಸಾಧಿಸುತ್ತಿದ್ದಂತೆ ಇನ್ನೊಂದು ಸಮಸ್ಯೆ ಉದ್ಭವಿಸಿತು. ವರ್ಜೀನಿಯ ಮತ್ತು ಉತ್ತರ ಕೆರೋಲೀನಗಳು ಕೆಂಟಕಿಯ ಮೇಲಿನ ಸ್ವಾಮ್ಯಕ್ಕಾಗಿ ಪರಸ್ಪರ ಬಡಿದಾಡಿದುವು. 1776ರಲ್ಲಿ ವರ್ಜೀನಿಯಾದ ವಿಧಾನಸಭೆ ಕೆಂಟಕಿ ಕೌಂಟಿಯನ್ನು ನಿರ್ಮಿಸಿತು. 1780ರಲ್ಲಿ ಇದನ್ನು ಮೂರು ಕೌಂಟಿಗಳಾಗಿ ವಿಭಾಗಿಸಲಾಯಿತು. ಈ ಮೂರನ್ನು ಒಳಗೊಂಡ ಜಿಲ್ಲೆಗೆ 1783ರಲ್ಲಿ ಕೆಂಟಕಿ ಎಂಬ ಹೆಸರು ಬಂತು.

1775-84ರಲ್ಲಿ ಇಲ್ಲಿಯ ಜನಸಂಖ್ಯೆ 100ರಿಂದ 30,000ಕ್ಕೆ ಏರಿತು. ಅಮೇರಿಕನ್ ಕ್ರಾಂತಿಯ ಅನಂತರ ದೇಶದ ಪೂರ್ವಭಾಗಗಳಿಂದ ಜನರು ಅಧಿಕವಾಗಿ ಬರಲಾರಂಭಿಸಿದರು. ಇವರಲ್ಲಿ ಇಂಗ್ಲೀಷ್, ಸ್ಕಾಟಿಷ್, ಐರಿಷ್, ಜರ್ಮನ್ ಮತ್ತು ಫ್ರೆಂಚ್ ಮೂಲಗಳ ಜನರೇ ಅಲ್ಲದೆ ನೀಗ್ರೋ ಗುಲಾಮರೂ ಇದ್ದರು. ಪಟ್ಟಣಗಳು ಬೆಳೆದವು.

ನಾಡಿನಲ್ಲಿ ನೆಮ್ಮದಿ ನೆಲಸೆ, ಪ್ರಗತಿಯಾಗತೊಡಗಿದ ಮೇಲೆ ಕೆಂಟಕಿಯ ಜನರಲ್ಲಿ ವರ್ಜೀನಿಯಾದಿಂದ ಪ್ರತ್ಯೇಕವಾಗಬೇಕೆಂಬ ಅಭಿಷ್ಟೆ ಬಲವಾಯಿತು. ಇದಕ್ಕಾಗಿ ಚಳವಳಿ ನಡೆಯಿತು. ಕೊನೆಗೆ ಕೆಂಟಕಿ ಪ್ರತ್ಯೇಕವಾದ್ದು 1792ರಲ್ಲಿ. ಆ ವರ್ಷದ ಜೂನ್ 1ರಂದು ಅದು ಒಕ್ಕೂಟ ರಾಜ್ಯವಾಯಿತು.

19ನೇ ಶತಮಾನದಲ್ಲಿ ಕೆಂಟಕಿಯಲ್ಲಾದ ಬದಲಾವಣೆಗಳು ಅಗಾಧ. ಕೃಷಿ ಅಭ್ಯುದಯ ಹೊಂದಿತು. ಮಿಸಿಸಿಪಿ ನೀರಿನ ಬಳಕೆಯ ಬಗ್ಗೆ ವ್ಯಾಜ್ಯ ಪರಿಹಾರವಾಗಿತ್ತು. ನೆಲದಾಹ ಅಧಿಕವಾದಾಗ ನೆಲಸಿಗರು ಇಂಡಿಯನ್ ಭೂಮಿಯ ಮೇಲೆ ಕಣ್ಣು ಹಾಯಿಸಿದರು. ಶಾನೀಗಳ ಯಜಮಾನ ಟೆಕುಮ್ಸೇ ಈ ಪ್ರಯತ್ನವನ್ನು ವಿರೋಧಿಸಿದ. ದಕ್ಷಿಣದ ಇಂಡಿಯನ್ನರ ಒಕ್ಕೂಟವೊಂದನ್ನು ಸ್ಥಾಪಿಸಿದ. ಕೆಂಟಕಿಗೂ ಇಂಡಿಯನ್ನರಿಗೂ 1811ರಲ್ಲಿ ನಡೆದ ಕದನವೇ 1812ರ ಯುದ್ಧಕ್ಕೆ ನಾಂದಿಯಾಯಿತು. ಇಂಡಿಯನರಿಗೆ ಪ್ರೇರಣೆ ನೀಡುತ್ತಿದ್ದ ಬ್ರಿಟಿಷರನ್ನೂ ಕೆಂಟಕಿ ಎದುರಿಸಬೇಕಾಯಿತು.

1812ರ ಯುದ್ಧದಿಂದಾಗಿ ಕೆಂಟಕಿಯ ಆರ್ಥಿಕ ಸ್ಥಿತಿ ಹದಗೆಟ್ಟಿತು. ಅಮೇರಿಕನ್ ಮಾರುಕಟ್ಟೆಗಳಲ್ಲಿ ಬ್ರಿಟೀಷರು ತಂದು ತುಂಬಿದ ಸರಕುಗಳಿಂದಾಗಿ ಕೆಂಟಕಿಯನರು ದಿವಾಳಿ ಏಳುವ ಸ್ಥಿತಿಗೆ ಬಂದರು. ಸಾಲ ಮಿತಿ ಮೀರಿ ಬೆಳೆಯಿತು. ಸಾಲಗಾರರ ಪರಿಹಾರಾರ್ಥವಾಗಿ ಕಾನೂನನ್ನು ಜಾರಿಗೆ ತರುವುದನ್ನು ಅಲ್ಲಿಯ ಕೆಲವು ಆಸಕ್ತರು ವಿರೋಧಿಸಿದರು. ಹಳೆಯ ಕಾನೂನುಗಳನ್ನು ಎತ್ತಿ ಹಿಡಿದ ನ್ಯಾಯಾಲಯಗಳನ್ನು ರದ್ಧು ಮಾಡಿ ಹೊಸ ನ್ಯಾಯಾಲಯಗಳನ್ನು ಅಲ್ಲಿಯ ವಿಧಾನಮಂಡಲ ಜಾರಿಗೆ ತಂದಿತು. ಇದು ಅನವಶ್ಯಕವಾದ ವಾದ ಪ್ರತಿವಾದಗಳಿಗೆ ಎಡೆಕೊಟ್ಟಿತು.

ಕೆಂಟಕಿಯಲ್ಲಿದ್ದ ಗುಲಾಮಗಿರಿಯನ್ನು ರದ್ದು ಮಾಡಲು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದು ನಡೆಸಿದ ಪ್ರಯತ್ನಗಳಿಗೂ ತೀವ್ರ ವಿರೋಧವಿತ್ತು. 1820ರಿಂದ 1860ರವರೆಗೆ ಈ ಚರ್ಚೆ ಮುಂದುವರಿಯಿತು. ಗುಲಾಮಗಿರಿ ರದ್ದು ಮಾಡುವುದು ಚುನಾವಣೆಗಳ ಒಂದು ಪ್ರಶ್ನೆಯಾಗಿತ್ತಾದರೂ ಸಾಮಾನ್ಯವಾಗಿ ಗುಲಮಗಿರಿಯ ಪರವಾಗಿದ್ದವರೇ ಆರಿಸಿ ಬರುತ್ತಿದ್ದರು. ಕೊನೆಗೆ ಇದನ್ನು ತೊಡೆದು ಹಾಕಲು ಸಾಧ್ಯವಾದದ್ದು 1865ರಲ್ಲಿ.

ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ ಕೆಂಟಕಿಯ ನಾಯಕತ್ವ ನಿರ್ಣಾಯಕವಾದ ರೀತಿಯಲ್ಲಿ ವರ್ತಿಸಲಿಲ್ಲ. ಅದು ತಟಸ್ಥ ನೀತಿ ಅನುಸರಿಸಬಯಸಿತು. ಆದರೂ ಎರಡು ಪಕ್ಷಗಳೂ ಇದರ ಮೇಲೆ ಆಕ್ರಮಣ ನಡೆಸಿದವು. ಯುದ್ಧಾನಂತರವೂ ಬಹುಕಾಲ ಇಲ್ಲಿ ಅಶಾಂತಿಯಿತ್ತು. ಕ್ರಮಕ್ರಮವಾಗಿ ಕೆಂಟಕಿ ಪ್ರಗತಿ ಹೊಂದಿತು. ಒಂದನೇ ಮಹಾಯುದ್ಧದ ನಂತರ ಅನೇಕ ಕೈಗಾರಿಕೆಗಳು ಬೆಳೆದವು. ಸಾಮಾಜಿಕವಾಗಿಯೂ ಇಲ್ಲಿ ಅಗಾಧ ಪರಿವರ್ತನೆಗಳಾಗಿವೆ. ಆಡಳಿತ

ರಾಜ್ಯದ ನಾಲ್ಕನೆಯ ಸಂವಿಧಾನದ (1891) ಪ್ರಕಾರ ಅದರ ಕಾರ್ಯಾಂಗದ ಪ್ರಾಧಿಕಾರಿ ಗವರ್ನರ್. ಸೆನೆಟ್ ಸದಸ್ಯರ ಅಧಿಕಾರದ ಅವಧಿ ನಾಲ್ಕು ವರ್ಷ. ಒಟ್ಟು ಸದಸ್ಯರಲ್ಲಿ ಅರ್ಧಸಂಖ್ಯೆಯ ಜನ ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ಪ್ರತಿನಿಧಿ ಸಭೆಯ ಸದಸ್ಯತ್ವದ ಅವಧಿ ಎರಡು ವರ್ಷ. ರಾಜ್ಯದಲ್ಲಿ ವಿಧಿಬದ್ಧವಾದ ನ್ಯಾಯವ್ಯವಸ್ಥೆಯು ಇದೆ. ಪೌರಸಭೆಗಳು ಆಯಾ ಸ್ಥಳಗಳ ಜನಸಂಖ್ಯೆಗೆ ಅನುಗುಣವಾಗಿ ಆರು ವರ್ಗಗಳಾಗಿ ವಿಂಗಡವಾಗಿವೆ.

ಜನಸಂಖ್ಯೆ

1960ರ ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆ 30,38,156. 1956ರಿಂದ 1969ರವರೆಗಿನ ಹತ್ತು ವರ್ಷಗಳಲ್ಲಿ ಜನಸಂಖ್ಯೆ ಶೇಕಡಾ 3.2ರಷ್ಟು ಹೆಚ್ಚಿತು. ಜನಸಾಂದ್ರತೆ ಚ.ಮೈ.ಗೆ 75.2. ಜನಸಂಖ್ಯೆಯಲ್ಲಿ ಶೇಕಡಾ44.5 ನಗರವಾಸಿಗಳು. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 92.3 ಜನ ಸ್ಥಳೀಯ ಬಿಳಿಯರು. 7.2ರಷ್ಟು ಬಿಳಿಯರಲ್ಲದವರು. ಇವರಲ್ಲಿ ಬಹುತೇಕ ನೀಗ್ರೋಗಳೇ. ಉದ್ಯೋಗಿಗಳಾದ ಪುರುಷರಲ್ಲಿ 7% ಜನರು ವಿವಿಧ ನಿರ್ಮಾಣ ಕಾರ್ಯಗಳಲ್ಲೂ 31.9% ಜನ ವ್ಯವಸಾಯದಲ್ಲೂ 14.8ರಷ್ಟು ಜನ ವಿವಿಧ ವಸ್ತುಗಳ ತಯಾರಿಕೆಯಲ್ಲೂ 19.8ರಷ್ಟು ಜನ ವ್ಯಾಪಾರ ಮತ್ತು ಸಾರಿಗೆ ಉದ್ಯಮಗಳಲ್ಲೂ ನಿರತರಾಗಿದ್ದಾರೆ.

ವಿದ್ಯಾಭ್ಯಾಸ

ರಾಜ್ಯದಲ್ಲಿ 1849ರಲ್ಲಿ ಜಾರಿಗೆ ಬಂದ ಮೂರನೆಯ ಸಂವಿಧಾನದ ಮೇರೆಗೆ ಸಾರ್ವಜನಿಕ ಶಾಲೆಗಳು ಅಸ್ತಿತ್ವಕ್ಕೆ ಬಂದುವು. 1908ರಲ್ಲಿ ಸರ್ಕಾರದಿಂದ ಇವಕ್ಕೆ ಹೆಚ್ಚಿನ ಧನ ಸಹಾಯ ದೊರೆಯಲಾರಂಭವಾಯಿತು. 1908ರಿಂದ ಈಚೆಗೆ ಕೆಂಟಕಿ ಸ್ಟೇಟ್ ಕಾಲೇಜು (ಕೆಂಟಕಿ ವಿಶ್ವವಿದ್ಯಾಲಯ) ಸಾಕಷ್ಟು ಪ್ರಮಾಣದಲ್ಲಿ ಸ್ನಾತಕ ಶಿಕ್ಷಣ ನೀಡುತ್ತಿದೆ. 1948ರಲ್ಲಿ ನೀಡಲಾದ ನ್ಯಾಯಾಲಯದ ತೀರ್ಪಿನ ಪ್ರಕಾರ ಕೆಂಟಕಿ ವಿಶ್ವವಿದ್ಯಾಲಯದ ವಿಶೇಷ ಶಾಲೆಗಳಲ್ಲಿ ನೀಗ್ರೋಗಳಿಗೂ ಪ್ರವೇಶ ದೊರಕಿತು. 1954ರಿಂದೀಚೆಗೆ ಮೂಲ ಶಿಕ್ಷಣ ಕ್ಷೇತ್ರದಲ್ಲಿ ವರ್ಣಭೇದವನ್ನು ಸಂಪೂರ್ಣವಾಗಿ ಅಳಿಸಿ ಹಾಕುವಂತೆ ಆಜ್ಞೆ ಮಾಡಲಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೆಂಟಕಿ ವಿಶ್ವವಿದ್ಯಾಲಯವೂ ಸೇರಿದಂತೆ ಎಂಟು ಚತುರ್ವರ್ಷೀಯ ಕಾಲೇಜುಗಳಿವೆ. ಕೆಂಟಕಿ ವಿಶ್ವವಿದ್ಯಾಲಯದ ಕೇಂದ್ರ ಲೆಕ್ಸಿಂಗ್‍ಟನ್. ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಾಮಾನ್ಯ ಶಿಕ್ಷಣವನ್ನು ಒದಗಿಸುವ ಕಾಲೇಜುಗಳೇ ಅಲ್ಲದೆ ಕಾನೂನು, ವ್ಯೆದ್ಯ, ದಂತ ಚಿಕಿತ್ಸೆ ಮುಂತಾದ ಶಿಕ್ಷಣವನ್ನು ಒದಗಿಸುವ ಕಾಲೇಜುಗಳು ಇವೆ. ಇವೆ ಅಲ್ಲದೆ ವಿವಿಧ ಎಡೆಗಳಲ್ಲಿ ಅನೇಕ ರಾಜ್ಯ ಕಾಲೇಜುಗಳು ಜೂನಿಯರ್ ಕಾಲೇಜುಗಳೂ ಇವೆ.