ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಂಪು ಆಲ್ಗೆ

ವಿಕಿಸೋರ್ಸ್ದಿಂದ

ಕೆಂಪು ಆಲ್ಗೆ ಆಲ್ಗೆ ಸಸ್ಯಗಳ ಗುಂಪಿನಲ್ಲಿ ರೋಡೋಫೈಸೀ ವರ್ಗಕ್ಕೆ ಸೇರಿದ ಸಸ್ಯಗಳು. ಈ ಸಸ್ಯಗಳ ಜೀವಕೋಶಗಳಲ್ಲಿ ಫೈಕೋಎರಿತ್ರಿನ್ ಎಂಬ ಹೆಸರಿನ ಕೆಂಪು ಬಣ್ಣದ ವರ್ಣಕವಿದ್ದು ಸಸ್ಯಗಳು ಸಾಮಾನ್ಯವಾಗಿ ಕೆಂಪು ಬಣ್ಣದವಾಗಿ ಕಾಣುವುದರಿಂದ ಇವಕ್ಕೆ ಈ ಹೆಸರು ಬಂದಿದೆ. ಸುಮಾರು 400 ಜಾತಿ ಹಾಗೂ 3,000 ಪ್ರಭೇದಗಳನ್ನೊಳಗೊಂಡ ಈ ವರ್ಗ ಆಲ್ಗೆಗಳಲ್ಲೆ ಅತ್ಯಂತ ದೊಡ್ಡದು ಎನ್ನಿಸಿದೆ. ಸಂಪೂರ್ಣವಾಗಿ ಜಲವಾಸಿಗಳಾದ ಇವುಗಳಲ್ಲಿ ಬಹುಪಾಲು ಪ್ರಭೇದಗಳು ಸಮುದ್ರವಾಸಿಗಳು. ಉದಾಹರಣೆಗೆ, ಕಾಂಡ್ರಸ್, ಜೆಲಿಡಿಯಮ್, ಗ್ರಾಸಿಲೇರಿಯ, ನೆಮಲಿಯನ್, ಬಾಂಗಿಯ ಇತ್ಯಾದಿ. ಸುಮಾರು 10-12 ಜಾತಿಗೆ ಸೇರಿದ 200 ಪ್ರಭೇದಗಳು ಮಾತ್ರ ಸಿಹಿನೀರಿನಲ್ಲಿ ಬೆಳೆಯುವಂಥವು. ಸಿಹಿ ನೀರಿನ ಪ್ರಭೇದಗಳಲ್ಲಿ ಮುಖ್ಯವಾದವು ಲೆಮಾನಿಯ, ಬಟ್ರಕೋಸ್ಪರ್ಮಮ್, ತೋರಿಯ, ಹಿಲ್ಡನ್ ಬ್ರಾಂಡಿಯ, ಕಾಂಪ್ಸೊಪೋಗಾನ್ ಇತ್ಯಾದಿ. ಬಹುಪಾಲು ಪ್ರಭೇದಗಳು ನೀರಿನಲ್ಲಿ ಮುಳುಗಿರುವ ಬಂಡೆಗಳ ಮೇಲೆ ಅಥವಾ ಬೇರೆ ಜಾತಿಯ ಗಿಡಗಳ ಮೇಲೆ ಅಪ್ಪುಗಿಡಗಳಾಗಿ ಬೆಳೆಯುತ್ತವೆ. ಕೆಲವು ಪರತಂತ್ರ ಜೀವಿಗಳಾಗಿ ವಾಸಿಸುವುದೂ ಉಂಟು. ಕೆಂಪು ಆಲ್ಗೆಗಳು ತಮ್ಮ ದೇಹದ ಗಾತ್ರ, ಆಕಾರ, ರಚನೆಗಳಲ್ಲಿ ವೈವಿಧ್ಯವನ್ನು ಪ್ರದರ್ಶಿಸುತ್ತವೆ. ಕೆಲವು ಜಾತಿಗಳು ಸೂಕ್ಷ್ಮ ಗಾತ್ರದ ಏಕಕೋಶಜೀವಿಗಳಾದರೆ (ಉದಾ: ಪಾರ್ ಫೈರಿಡಿಯಮ್) ಉಳಿದವು ಬಹುಕೋಶಜೀವಿಗಳು. ಬಹುಕೋಶಜೀವಿಗಳಲ್ಲಿ ಕೆಲವು ಪ್ರಭೇದಗಳಲ್ಲಿ ದೇಹ ಎಳೆಯಂತಿದ್ದು ಅಕ್ಕಪಕ್ಕಗಳಲ್ಲಿ ಮಾತ್ರ ಕವಲೊಡೆದಿರಬಹುದು (ಉದಾ: ರೋಡೋ ಕಾರ್ಟನ್), ಇಲ್ಲವೆ ಎಲ್ಲದಿಕ್ಕಗಳಲ್ಲೂ ಕವಲುಗಳಿರಬಹುದು (ಉದಾ: ಲೆಮಾನಿಯ), ಇನ್ನು ಕೆಲವು ಪ್ರಭೇದಗಳಲ್ಲಿ ಹಲವಾರು ಎಳೆಗಳು ವಿಶಿಷ್ಟ ಹಾಗೂ ಸಂಕೀರ್ಣ ರೀತಿಯಲ್ಲಿ ಒಂದರೊಡನೊಂದು ಸೇರಿಕೊಂಡು ಕಾಂಡ, ಬೇರು, ಎಲೆಗಳನ್ನು ಹೋಲುವಂಥ ದೇಹವಾಗಿ ರೂಪುಗೊಳ್ಳಬಹುದು (ಉದಾ: ಕಾಂಡ್ರಸ್, ಜೆಲಿಡಿಯಮ್ ಇತ್ಯಾದಿ). ಮತ್ತೆ ಕೆಲವು ಪ್ರಭೇದಗಳಲ್ಲಿ ದೇಹದ ಹೊರಭಾಗದಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟಿನ ದಪ್ಪ ಸಂಗ್ರಹವಿದ್ದು ಸಸ್ಯಗಳು ಹವಳಗಳಂತೆ ಕಾಣುತ್ತವೆ. ಬಹುಕೋಶಜೀವಿಗಳಲ್ಲಿ ಕೆಲವು ಪ್ರಭೇದಗಳು ಕೇವಲ ಕೆಲವೇ ಸೆಂಟಿಮೀಟರ್ ಉದ್ದಕ್ಕೆ ಬೆಳೆದರೆ ಮಿಕ್ಕವು 2-3 ಮೀ. ಉದ್ದಕ್ಕೆ ಬೆಳೆಯುವುದು ಕೂಡ ಉಂಟು.

ಕೆಂಪು ಆಲ್ಗೆಗಳ ಜೀವಕೋಶ ಭಿತ್ತಿಯಲ್ಲಿ ಪೆಕ್ಟಿನ್ ವಸ್ತುವಿನಿಂದ ಕೂಡಿದ ಹೊರಪದರವನ್ನೂ ಸೆಲ್ಯುಲೋಸಿನಿಂದ ಕೂಡಿದ ಒಳ ಪದರವನ್ನೂ ಗುರುತಿಸಬಹುದು. ಜೀವಕೋಶಗಳ ಒಳಗೆ ಒಂದು ದೊಡ್ಡ ಅವಕಾಶ, ಅದನ್ನು ಸುತ್ತುವರಿದಂತೆ ಕೋಶದ್ರವ್ಯದ ಒಂದು ತೆಳುವಾದ ಪದರು, ಒಂದು ದೊಡ್ಡದಾದ (ಉದಾ: ಪಾರ್ ಫೈರ) ಇಲ್ಲವೆ ಹಲವಾರು ಚಿಕ್ಕ ಹಾಗೂ ತಟ್ಟೆಯಾಕಾರದ (ಉದಾ : ಉನ್ನತ ದರ್ಜೆಯ ಕೆಂಪು ಆಲ್ಗೆಗಳು) ಪ್ಲಾಸ್ಟಿಡ್ಡುಗಳಿವೆ. ಪ್ಲಾಸ್ಟಿಡ್ಡುಗಳಲ್ಲಿ ಕ್ಲೋರೊಫಿಲ್ ಎ ಮತ್ತು ಡಿ, ಚಿ ಮತ್ತು ( ಕ್ಯಾರೋಟೀನ್, ಜ್ಯಾಂತೋಫಿಲ್, ಫೈಕೋಎರಿತ್ರಿನ್ ಎಂಬ ವರ್ಣಕಗಳಿವೆ. ಕೆಲವು ಪ್ರಭೇದಗಳ ಪ್ಲಾಸ್ಟಿಡ್ಡುಗಳಲ್ಲಿ ಫೈಕೋಸಯಾನಿನ್ ಎಂಬ ನೀಲಿ ವರ್ಣಕವಿರುವುದುಂಟು. ಕೆಳದರ್ಜೆಯ ಕೆಂಪು ಆಲ್ಗೆಗಳ ಒಂದೊಂದು ಜೀವಕೋಶದಲ್ಲಿ ಒಂದೊಂದೇ ಕಣ ಬೀಜವಿರುವುದು (ನ್ಯೂಕ್ಲಿಯಸ್) ಸಾಮಾನ್ಯವಾದರೂ ಉನ್ನತ ದರ್ಜೆಯವುಗಳಲ್ಲಿ ಹಲವಾರು (ಕೆಲವೊಮ್ಮೆ ಸಹಸ್ರಾರು) ಕಣಬೀಜಗಳಿರುವುದನ್ನು ನೋಡಬಹುದು. ದ್ಯುತಿಸಂಶ್ಲೇಷಣೆಯ ಫಲವಾಗಿ ತಯಾರಾಗುವ ಆಹಾರ ಫ್ಲಾರಿಡಿಯನ್ ಪಿಷ್ಟ ಎಂಬ ವಸ್ತುವಾಗಿ ಪರಿವರ್ತಿತವಾಗಿ ಸಣ್ಣಸಣ್ಣ ಕಣಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಈ ಗುಣ ಕೆಂಪು ಆಲ್ಗೆಗಳಿಗೆ ವಿಶಿಷ್ಟವಾದುದು. ದೇಹದ ಬೆಳೆವಣಿಗೆ ಮುಖ್ಯ ಹಾಗೂ ಪಕ್ಕದ ಕವಲುಗಳ ತುದಿ ಭಾಗದಲ್ಲಿರುವ ಅಗ್ರ ಜೀವಕೋಶಗಳ ಚಟುವಟಿಕೆಯಿಂದ ಮುಂದುವರಿಯುತ್ತದೆ. ಕೆಲವೊಮ್ಮೆ ದೇಹದ ಕೆಳಭಾಗದಲ್ಲಿ ಅಲ್ಲಲ್ಲಿ ಇರುವ ವಿಭಜನಶಕ್ತ ಜೀವಕೋಶಗಳ ಚಟುವಟಿಕೆಯಿಂದಲೂ ದೇಹ ಬೆಳೆಯುವುದುಂಟು.

ಕೆಂಪು ಆಲ್ಗೆಗಳು ನಿರ್ಲಿಂಗ ರೀತಿ ಮತ್ತು ಲಿಂಗರೀತಿ ಎಂಬ ಎರಡು ರೀತಿಯ ಸಂತಾನ ವೃದ್ಧಿಯ ಕ್ರಮಗಳನ್ನು ಪ್ರದರ್ಶಿಸುತ್ತವೆ. ಲಿಂಗರೀತಿಯಲ್ಲಾಗಲಿ ನಿರ್ಲಿಂಗರೀತಿಯಲ್ಲಾಗಲಿ ಯಾವುದೇ ಬಗೆಯ ಕಶಾಂಗೀ ಸಂತಾನೋತ್ಪತ್ತಿಯ ಕಣಗಳು ಇಲ್ಲದಿರುವುದು ಕೆಂಪು ಆಲ್ಗೆಗಳ ಪ್ರಮುಖ ಲಕ್ಷಣಗಳಲ್ಲೊಂದು. ನಿರ್ಲಿಂಗರೀತಿ ಸಂತಾನಾಭಿವೃದ್ಧಿ ವಿಭಿನ್ನ ಸ್ಪೋರುಗಳಿಂದ ನಡೆಯುತ್ತದೆ. ಮಾನೋಸ್ಪೋರ್, ಬೈಸ್ಫೋರ್, ಟೆಟ್ರಸ್ಪೋರ್, ಪಾಲಿಸ್ಪೋರ್, ಪ್ಯಾರಸ್ಪೋರ್ ಮುಂತಾದವು ಈ ಬಗೆಯ ಸಂತಾನಾಭಿವೃದ್ಧಿಯಲ್ಲಿ ಉತ್ಪತ್ತಿಯಾಗುವ ಸ್ಪೋರುಗಳು. ಇವುಗಳಲ್ಲಿ ಯಾವುದಕ್ಕೂ ಕಶಾಂಗವಿಲ್ಲದಿದ್ದರೂ ಇವು ಅಮೀಬ ತೋರುವಂಥ ಚಲನೆಯನ್ನು ಪ್ರದರ್ಶಿಸುತ್ತವೆ.

ಲಿಂಗರೀತಿ ಸಂತಾನಾಭಿವೃದ್ಧಿ ಸಂಕೀರ್ಣ ಬಗೆಯದು. ಇದು ವಿಷಮಯುಗ್ಮ ಗ್ಯಾಮೀಟುಗಳ ಮೂಲಕ ನಡೆಯುತ್ತದೆ. ಈ ವಿಧಾನದಲ್ಲಿ ಕಾಣಬರುವ ಲೈಂಗಿಕ ರಚನೆಗಳು ಕೆಂಪು ಆಲ್ಗೆಗಳಲ್ಲಿ ಮಾತ್ರ ಕಾಣಬರುವಂಥವಾಗಿದ್ದು ಅವಕ್ಕೆ ವಿಶೇಷ ಹೆಸರುಗಳನ್ನು ಕೊಡಲಾಗಿದೆ. ಗಂಡು ಜನನಾಂಗಕ್ಕೆ ಸ್ಪರ್ಮಟ್ಯಾಂಜಿಯಂ ಎಂದು ಹೆಸರು. ಇದು ಒಂದೇ ನ್ಯೂಕ್ಲಿಯಸ್ ಉಳ್ಳ, ವರ್ಣರಹಿತವಾದ ಸ್ಪರ್ಮೇಷಿಯಂ ಎಂಬ ಒಂದೇ ಒಂದು ಗಂಡು ಗ್ಯಾಮೀಟನ್ನು ಉತ್ಪಾದಿಸುತ್ತದೆ. ಹೆಣ್ಣು ಜನನಾಂಗಕ್ಕೆ ಕಾರ್ಪೊಗೋನಿಯಂ ಎಂದು ಹೆಸರು. ಇದರ ಅಗ್ರಭಾಗ ಉದ್ದವಾದ ಎಳೆಯಂತೆ ಚಾಚಿದೆ. ಈ ಭಾಗಕ್ಕೆ ಟ್ರೈಕೋಗೈನ್ ಎಂದು ಹೆಸರು. ಒಂದು ಸಸ್ಯದಿಂದ ಬಿಡುಗಡೆಯಾದ ಸ್ಪರ್ಮೇಷಿಯಂ ನೀರಿನ ಪ್ರವಾಹದೊಂದಿಗೆ ಚಲಿಸಿ ಹೆಣ್ಣು ಜನನಾಂಗವನ್ನು ತಲುಪಿದಾಗ ಟ್ರೈಕೋಗೈನ್‍ಗೆ ಅಂಟಿಕೊಳ್ಳುತ್ತದೆ. ಆಗ ಟ್ರೈಕೋಗೈನಿನ ಭಿತ್ತಿ ಕರಗಿ ಹೋಗಿ ಅದರ ಮೂಲಕ ಸ್ಪರ್ಮೇಷಿಯಮಿನ ನ್ಯೂಕ್ಲಿಯಸ್ ಕಾರ್ಪೊಗೋನಿಯಮಿನ ಒಳಗೆ ಸಾಗಿ ಬಂದು ಅದರ ನ್ಯೂಕ್ಲಿಯಸಿನೊಂದಿಗೆ ಕೂಡಿಕೊಳ್ಳುತ್ತದೆ. ಈ ಕ್ರಿಯೆಯೇ ಗರ್ಭಾಂಕುರತೆ. ಇದರಿಂದಾಗಿ ಉತ್ಪತ್ತಿಯಾದ ಯುಗ್ಮಕಣ ಸ್ವಲ್ಪ ಸಮಯದ ಅನಂತರ ಸಂಖ್ಯಾಕ್ಷೀಣ ವಿಭಜನೆ ಹೊಂದಿ ಕಾರ್ಪೊಸ್ಪೋರ್ ಎಂಬ ಸ್ಪೋರುಗಳನ್ನು ಉತ್ಪಾದಿಸುತ್ತದೆ. ಕೆಲವು ಬಗೆಯ ಕೆಂಪು ಆಲ್ಗೆಗಳಲ್ಲಿ ಕಾರ್ಪೊಸ್ಪೋರುಗಳು ಬಿಡುಗಡೆಯಾಗಿ ನೇರವಾಗಿ ಮೊಳಕೆಯೊಡೆದು ಹೊಸ ಸಸ್ಯಗಳಾಗುತ್ತವೆ. ಇನ್ನು ಕೆಲವು ಬಗೆಗಳಲ್ಲಿ ಯುಗ್ಮಕಣ ಸಂಖ್ಯಾಕ್ಷೀಣ ವಿಭಜನೆಯಾಗದೆ ಕಾರ್ಪೊಸ್ಪೋರುಗಳನ್ನು ಉತ್ಪಾದಿಸುತ್ತದೆ. ಇವು ಟೆಟ್ರಸ್ಪೋರೋ ಫೈಟ್‍ಗಳೆಂಬ ಅಲೈಂಗಿಕ ಪೀಳಿಗೆಯ ಗಿಡಗಳಾಗಿ ಬೆಳೆಯುತ್ತವೆ. ಇಂಥ ಗಿಡಗಳು ನೋಡಲು ಲೈಂಗಿಕ ಗಿಡಗಳಂತೆಯೇ ಇದ್ದರೂ ಲೈಂಗಿಕ ಕಣಗಳನ್ನುಉತ್ಪಾದಿಸದೆ ಟೆಟ್ರಸ್ಟೋರ್ ಎಂಬ ಅಲೈಂಗಿಕ ಸ್ಟೋರುಗಲನ್ನು ಉತ್ಪಾದಿಸುತ್ತವೆ. ಟೆಟ್ರಸ್ಪೋರುಗಳು ಕಾಲಕ್ರಮೇಣ ಬಿಡುಗಡೆಯಾಗಿ ಹೊಸ ಸಸ್ಯಗಳಾಗಿ ಬೆಳೆಯುತ್ತವೆ. ಇದರಿಂದಾಗಿ ಕೊನೆಯಲ್ಲಿ ಹೇಳಿದ ಲಿಂಗರೀತಿ ಸಂತಾನಾಭಿವೃದ್ಧಿಯನ್ನು ಪ್ರದರ್ಶಿಸುವ ಕೆಂಪು ಆಲ್ಗೆಗಳ ಜೀವನ ಚಕ್ರದಲ್ಲಿ ಎರಡು ಬಗೆಯ ಪೀಳಿಗೆಗಳನ್ನುಳ್ಳ ಪರ್ಯಾಯ ಕ್ರಮವನ್ನು ನೋಡಬಹುದು. ಒಂದು ಪೀಳಿಗೆ ಲೈಂಗಿಕ ಕಣಗಳನ್ನು ಉತ್ಪಾದಿಸುವ ಗ್ಯಾಮಿಟೋಫೈಟ್, ಇನ್ನೊಂದು ಅಲೈಂಗಿಕ ಕಣಗಳನ್ನು ಉತ್ಪಾದಿಸುವ ಸ್ಪೋರೋಫೈಟ್.

ಕೆಂಪು ಆಲ್ಗೆಗಳಿಂದ ಹಲವಾರು ಉಪಯೋಗಗಳಿವೆ. ಅಟ್ಲಾಂಟಿಕ್ ಸಾಗರದ ತೀರಪ್ರದೇಶಗಳಲ್ಲಿ ಸಿಕ್ಕುವ ರೋಡಿಮೀನಿಯ ಪಾಮೇಟ, ಪಾರ್ಫೈರ ಜಾತಿಯ ಕೆಲವು ಪ್ರಭೇದಗಳು, ಹಾಗೂ ಕಾಂಡ್ರಸ್ ಕ್ರಿಸ್ಪಸ್ ಪ್ರಭೇದಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಗ್ರಾಸಿಲೇರಿಯ ಮತ್ತು ಇತರ ಜಾತಿಗಳಿಂದ ಅಗಾರ್ ಎಂಬ ವಸ್ತುವನ್ನು ತಯಾರಿಸಿ ಸಿಹಿತಿಂಡಿ ಮತ್ತು ಐಸ್‍ಕ್ರೀಮ್‍ಗಳನ್ನು ಮಾಡಲು ಬಳಸುವುದುಂಟು. (ನೋಡಿ- ಆಲ್ಗೆ) (ನೋಡಿ- ಕಂದು-ಆಲ್ಗೆ)

(ಬಿ.ಪಿ.)