ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಂಫೆರಿಯ

ವಿಕಿಸೋರ್ಸ್ದಿಂದ

ಕೆಂಫೆರಿಯ

ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಹೂಬಿಡುವ ಲಶುನ ಸಸ್ಯಜಾತಿ. ಸುಂದರವಾದ ಎಲೆ ಮತ್ತು ಹೂಗಳಿಗಾಗಿ ಇದನ್ನು ಕುಂಡಸಸ್ಯ ಇಲ್ಲವೆ ಅಂಚುಸಸ್ಯವಾಗಿ ಉದ್ಯಾನಗಳಲ್ಲಿ, ಮನೆಗಳಲ್ಲಿ ಬೆಳೆಸುತ್ತಾರೆ. ಇದು ಏಕವಾರ್ಷಿಕ ಮೂಲಿಕೆ ಸಸ್ಯ. ಶುಂಠಿಗಿಡವನ್ನು ಇದು ಹೋಲುವುದು ಮಾತ್ರವಲ್ಲ, ಶುಂಠಿಯಂತೆ ಇದರ ಪ್ರಕಂದವೂ (ೈಜೋóಮ್) ಭೂಮಿಯಲ್ಲಿ ಹುದುಗಿಕೊಂಡಿದೆ. ಎಲೆಗಳ ಆಕಾರ ಕರನೆಯಂತೆ ಇಲ್ಲವೆ ಭರ್ಜಿಯಂತೆ. ಅವುಗಳ ಮೇಲ್ಭಾಗದಲ್ಲಿ ಬಿಳಿಯ ಗೆರೆಗಳೂ ತಳಭಾಗದ ಅಂಚಿನಲ್ಲಿ ಕಡುಗೆಂಪು ಇಲ್ಲವೆ ಊದಾ ಬಣ್ಣದ ಗೆರೆಗಳೂ ಇವೆ. ಹೂಗಳು ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿವೆ. ಇವುಗಳ ಬಣ್ಣ ಬಿಳಿ, ಹಳದಿ, ನೇರಿಳೆ, ಊದಾ ಇತ್ಯಾದಿಯಾಗಿ ವೈವಿಧ್ಯಮಯ. ಹೂಗಳಿಗೆ ನವಿರಾದ ಸುವಾಸನೆಯೂ ಇದೆ. ಇದರಲ್ಲಿ ಈ ಕೆಳಗಿನ ಮುಖ್ಯ ಪ್ರಭೇದಗಳಿವೆ:

1 ಕೆಂಫೆರಿಯ ರೊಟಂಡ: ಈ ಪ್ರಭೇದಕ್ಕೆ ನೆಲಸಂಪಿಗೆ ಎಂಬುದು ಬಳಕೆಯ ಹೆಸರು. ಎಲೆಗಳು ಭರ್ಜಿಯಾಕಾರದವು. ಬಣ್ಣ ಕಡುಹಸುರು. ಇದರ ಹೂ ಬಿಡುವ ಶ್ರಾಯ ಏಪ್ರಿಲ್-ಮೇ ತಿಂಗಳುಗಳು. ಆಗ ಇದು ಭೂಮಿಗೆ ಸಮೀಪವಾಗಿ ನೀಲಿ ಮತ್ತು ಬಿಳಿ ಬಣ್ಣದ ಹೂಗಳನ್ನು ಬಿಡುತ್ತದೆ.

2 ಕೆಂಫೆರಿಯ ಗಲಾಂಗ: ಈ ಪ್ರಭೇದಕ್ಕೆ ಚಂದ್ರಮುಖಿ ಎಂಬುದು ಬಳಕೆಯ ಹೆಸರು. ಇದರ ಎಲೆಗಳಿಗೆ ತೊಟ್ಟಿಲ್ಲ. ಎಲೆ ಮತ್ತು ಬೇರುಗಳನ್ನು ಕೊಂಚ ಹಿಸುಕಿದರೆ ಹಿತಕರ ವಾಸನೆ ಬರುತ್ತದೆ. ಹೂಗಳ ಬಣ್ಣ ಬಿಳಿ.

ಇವುಗಳ ಪ್ರಕಂದದ ತುಂಡುಗಳಿಂದ ಕೆಂಫೆರಿಯ ಜಾತಿಯ ಸಸ್ಯಗಳನ್ನು ವೃದ್ಧಿ ಮಾಡಬಹುದು. ಫಲವತ್ತಾದ ಮತ್ತು ಹೆಚ್ಚು ತೇವಾಂಶದಿಂದ ಕೂಡಿದ ಮಣ್ಣು ಅಗತ್ಯ. ನಾಟಿಮಾಡಲು ಫೆಬ್ರುವರಿ ತಿಂಗಳು ಯೋಗ್ಯ ಕಾಲ.

       (ಬಿ.ಎ.ಸಿ.)