ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಥೀಡ್ರಲ್

ವಿಕಿಸೋರ್ಸ್ದಿಂದ

ಕೆಥೀಡ್ರಲ್- ಧರ್ಮಾಧ್ಯಕ್ಷನ (ಬಿಷಪ್) ಆಡಳಿತಕ್ಕೊಳಪಟ್ಟಿರುವ ಪ್ರಧಾನ ಚರ್ಚು. ಬಿಷಪ್, ಆರ್ಚ್‍ಬಿಷಪ್, ಪೋಪ್ ಮೊದಲಾದ ವಿವಿಧ ದರ್ಜೆಯ ಧರ್ಮಾಧಿಕಾರಿಗಳ ಸ್ಥಾನಗಳನ್ನವಲಂಬಿಸಿ ಕೆಥೀಡ್ರಲ್‍ಗಳ ಪ್ರಾಮುಖ್ಯ ವ್ಯತ್ಯಾಸವಾಗುತ್ತದೆ. ಒಬ್ಬ ಧರ್ಮಾಧ್ಯಕ್ಷನ ಆಡಳಿತಕ್ಕೊಳಪಟ್ಟ ಪ್ರದೇಶದಲ್ಲಿರುವ ಅನೇಕ ದೇವಾಲಯಗಳಲ್ಲಿ ಪ್ರಧಾನವಾದುದು ಕೆಥೀಡ್ರಲ್. ಅನೇಕ ಕೆಥೀಡ್ರಲ್‍ಗಳು ಕಾಲಕ್ರಮೇಣ ಸೌಂದರ್ಯದಲ್ಲಿ, ಭವ್ಯತೆಯಲ್ಲಿ ಇತರ ದೇವಾಲಯಗಳನ್ನು ಮೀರಿಸಿವೆಯಾದರೂ ಕೆಥೀಡ್ರಲ್ ಯಾವಾಗಲೂ ಇತರ ದೇವಾಲಯಗಳಿಗಿಂತ ಹೆಚ್ಚು ಸುಂದರವಾಗಿರಬೇಕೆಂಬ ಯಾವ ನಿಯಮವೂ ಇಲ್ಲ.

ಹಿಂದಿನ ಕಾಲದಲ್ಲಿ ಪ್ರಧಾನ ದೇವಾಲಯದಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲು ಕ್ರೈಸ್ತ ಪುರೋಹಿತರ ಒಂದು ವಿಶಿಷ್ಟ ವರ್ಗವಿದ್ದು, ಅವರಿಗೆ ವಿಶೇಷ ಸ್ಥಾನಮಾನಗಳು ಸಲ್ಲುತ್ತಿದ್ದುವು. ಈಚೆಗೆ ಇಂಥ ವ್ಯವಸ್ಥೆ ಇಲ್ಲವಾಗುತ್ತಿದೆ. ಧರ್ಮಾಧ್ಯಕ್ಷನೇ ಪ್ರಧಾನ ದೇವಾಲಯದ ಆಡಳಿತಾಧಿಕಾರಿಯಾದರೂ ಅವನಿಂದ ನೇಮಕಗೊಂಡ ಇತರ ಕ್ರೈಸ್ತ ಗುರುಗಳು ಸಾಮಾನ್ಯವಾಗಿ ಇದರ ಧಾರ್ಮಿಕ ಮತ್ತು ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. (ಡಿ.ವಿ.ಡಬ್ಲ್ಯು.)