ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್
ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವಾರು ಬ್ಯಾಂಕುಗಳು ಜನ್ಮ ತಾಳಿವೆ. ಅವುಗಳಲ್ಲಿ ಮುಖ್ಯವಾದವು ಕೆನರಾ ಹಿಂದು ಪರ್ಮನೆಂಟ್ ಫಂಡ್ ಲಿಮಿಟೆಡ್ (ಈಗಿನ ಕೆನರಾ ಬ್ಯಾಂಕ್), ಕೆನರಾ ಬ್ಯಾಂಕಿಂಗ್ ಕಾರ್ಪೊರೇಷò (ಈಗಿನ ಕಾರ್ಪೊರೇಷನ್ ಬ್ಯಾಂಕ್), ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಎಂಟರ್‍ಪ್ರೈಸಸ್ ಲಿಮಿಟೆಡ್, ದಿ ಪಂಗಾಳ್‍ನಾಯಕ್ ಬ್ಯಾಂಕ್, ದಿ ಜಯಲಕ್ಷ್ಮಿ ಬ್ಯಾಂಕ್ ಲಿಮಿಟೆಡ್, ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಉಡುಪಿ ಬ್ಯಾಂಕ್, ಕೆನರಾ ಇಂಡಸ್ಟ್ರಿಯಲ್ ಅಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್, ಕ್ಯಾಥೋಲಿಕ್ ಬ್ಯಾಂಕ್ ಲಿಮಿಟೆಡ್, ಮುಲ್ಕಿ ಬ್ಯಾಂಕ್ ಲಿಮಿಟೆಡ್, ತುಳುನಾಡ್ ಬ್ಯಾಂಕ್ ಆಫ್ ಸಪ್ಲೈ ಏಜೆನ್ಸಿ ಲಿಮಿಟೆಡ್, ಪೈ ಮನಿ ಬ್ಯಾಂಕ್ ಪ್ರೈವೇಟ್ ಲಿಮಿಟೆಡ್ . ಈ ಎಲ್ಲ ಬ್ಯಾಂಕುಗಳು 20 ನೇ ಶತಮಾನದ ಆದಿಭಾಗದಲ್ಲಿ ಸ್ಥಾಪಿತವಾಗಿವೆ. ಅದರೆ ಇಂದು ಅವುಗಳ ಪೈಕಿ ಕೆಲವು ಬ್ಯಾಂಕುಗಳು ಮಾತ್ರ ಉಳಿದುಕೊಂಡಿವೆ. ಇನ್ನು ಉಳಿದ ಬ್ಯಾಂಕುಗಳು ಬೇರೆ ಬೇರೆ ಬ್ಯಾಂಕುಗಳೊಡನೆ ವಿಲೀನವಾಗಿವೆ.
ಕೆನರಾ ಬ್ಯಾಂಕ್ ಮಂಗಳೂರಿನಲ್ಲಿ 1906ರ ಜುಲೈ ತಿಂಗಳ ಒಂದನೇ ತಾರೀಖಿನಂದು ಆರಂಭವಾಯಿತು. ಉದಯವಾಯಿತು. ಇದರ ಸ್ಥಾಪಕರು ಅಮ್ಮೆಂಬಾಳ್ ಸುಬ್ಬರಾವ್ ಪೈ.
ಬ್ಯಾಂಕು ಉತ್ತಮ ಬ್ಯಾಂಕಿಂಗ್ ಅನ್ನು ತನ್ನ ಧ್ಯೇಯವಾಗಿ ಹೊಂದಿದೆ.. ಅಭಿವೃದ್ಧಿಗಾಗಿ ಸೇವೆ, ಸೇವೆಗಾಗಿ ಅಭಿವೃದ್ಧಿ ಎಂಬುದು ಬ್ಯಾಂಕಿನ ಘೋಷಣೆಯಾಗಿದೆ.
ಇಂದಿನ ಮಂಗಳೂರು ಜಿಲ್ಲೆಯು ಮುಂಚೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. 19 ನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ಹಣಕಾಸು ವ್ಯವಹಾರ ಮಾಡಲು ಇಂದಿನಂತೆ ಯಾವುದೇ ಪ್ರಮುಖ ಬ್ಯಾಂಕಿಂಗ್ ಸಂಸ್ಥಗಳಿರಲಿಲ್ಲ. ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಅರ್ಬುತ್ನಾಟ್ ಅಂಡ್ ಕೋ ಎಂಬ ಖಾಸಗಿ ಲೇವಾದೇವಿ ಸಂಸ್ಥೆಯೊಂದು ಇದ್ದಿತು. ಆದರೆ ಈ ಸಂಸ್ಥೆಯು 20 ನೇ ಶತಮಾನದ ಆದಿಯಲ್ಲಿ ಹಲವಾರು ಪ್ರಮುಖ ಕಾರಣಗಳಿಂದಾಗಿ ತನ್ನ ಅವನತಿಯನ್ನು ಕಂಡಿತು. ಈ ವಿಷಯ ಸಾರ್ವಜನಿಕರಲ್ಲಿ, ಪ್ರಮುಖವಾಗಿ ವಾಣಿಜ್ಯ ಪ್ರಪಂಚದಲ್ಲಿ ಹೆಚ್ಚಿಗೆ ಚರ್ಚೆಗೆ ಬಂದಿತು. ಈ ಸಮಯಕ್ಕೆ ಮುಂಚಿತ ವಾಗಿಯೇ ಮದ್ರಾಸ್ ನ್ಯಾಯಾಲಯದಲ್ಲಿ ವಕೀಲಿವೃತ್ತಿಯನ್ನು ಮಾಡುತ್ತಿದ್ದ ಅಮ್ಮೆಂಬಾಳ್ ಸುಬ್ಬರಾವ್ ಪೈ ಎಂಬುವರು ಜನತೆಯ ಉಳಿತಾಯ ಮತ್ತು ಆಪತ್ತಿನಕಾಲಕ್ಕೆ ಬೇಕಾದ ಹಣಕಾಸಿನ ವಿಚಾರವನ್ನು ಯೋಚಿಸುತ್ತಿದ್ದರು. ಇನ್ನೊಂದು ಪ್ರಮುಖ ವಿಷಯವೆಂದರೆ ಮಂಗಳೂರಿನ ಪಟ್ಟಣಶೆಟ್ಟಿ ಎಂಬ ಶ್ರೀಮಂತವರ್ಗದ ಜನರಲ್ಲಿ ಯಾವುದೇ ಕುಟಂಬದಲ್ಲಿ ಮಗುವು ಹುಟ್ಟಿದ ತಕ್ಷಣವೇ ಅದರ ಹೆಸರಿನಲ್ಲಿ ಸ್ವಲ್ಪ ಹಣವನ್ನು ಊರಿನ ಪ್ರತಿಷ್ಠಿತ ವ್ಯಕ್ತಿಯ ಬಳಿ ತೊಡಗಿಸಿ ಆ ಮಗುವು ಪ್ರಾಪ್ತವಯಸ್ಕ ನಾದಮೇಲೆ ಆ ಹಣವನ್ನು ಹಿಂತಿರುಗಿಸುವ ಪದ್ಧತಿಯಿತ್ತು. ಈ ರೀತಿ ತೊಡಗಿಸಿದ ಹಣಕ್ಕೆ ಯಾವ ವಿಧವಾದ ರಸೀತಿಯೂ ಇರುತ್ತಿರಲಿಲ್ಲ. ಆದ್ದರಿಂದ 18 ವರ್ಷದ ದೀರ್ಘ ಅವಧಿಯು ಮುಗಿದ ಮೇಲೆ ತೊಡಗಿಸಿದ ಹಣವನ್ನು ಹಿಂತಿರುಗಿ ಪಡೆಯಲು ಅನೇಕ ವೇಳೆ ಕಷ್ಟಪಡುತ್ತಿದ್ದರು. ಸುಬ್ಬರಾವ್ ಪೈಗಳ ಮುಂದೆ ಊರಿನ ಜನರು ತಮ್ಮ ಕಷ್ಟವನ್ನು ಹೇಳಿ ಕೊಳ್ಳುತ್ತಿದ್ದರು. ಆಗ ಈ ವಕೀಲರ ಮನಸ್ಸಿನಲ್ಲಿ ನಾವೇ ಏಕೆ ಒಂದು ಬ್ಯಾಂಕಿಂಗ್ ಸಂಸ್ಥೆಯನ್ನು ಪ್ರಾರಂಭಿಸಬಾರದು ಎಂಬ ವಿಚಾರ ಬಂದಿತು. ಅವರು 1906ನೇ ಇಸವಿ ಜುಲೈ ಒಂದನೆಯ ತಾರೀಖು "ಕೆನರಾ ಹಿಂದೂ ಪರ್ಮನೆಂಟ್ ಫಂಡ್ ಲಿಮಿಟೆಡ್" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಮುಂದೆ "ಕೆನರಾ ಬ್ಯಾಂಕ್" ಎಂದು ಬೃಹದಾಕಾರವಾಗಿ ಬೆಳೆಯಿತು. ಇದರಲ್ಲಿ ಪ್ರಾರಂಭದಲ್ಲಿ 18 ಜನ ಡೈರೆಕ್ಟರ್‍ಗಳು ಇದ್ದರು. ಅವರಲ್ಲಿ ಪ್ರಮುಖರು ಮದ್ರಾಸ್ ಹೈಕೋರ್ಟ್‍ನ ವಕೀಲರು, ಪ್ರಮುಖ ವ್ಯಾಪಾರಿಗಳು ಮತ್ತು ಜಮೀನುದಾರರುಗಳು. ಸಂಸ್ಥೆಯು ಮೂಲಭೂತ ವಾಗಿ ಈ ಮುಂದಿನÀ ಆದರ್ಶಗಳನ್ನಿಟ್ಟುಕೊಂಡು ಪ್ರಾರಂಭವಾಯಿತು. ಅಜ್ಞಾನ ಮತ್ತು ಮೂಢ ನಂಬಿಕೆಗಳನ್ನು ಹೋಗಲಾಡಿಸುವುದು. ಈ ಗುರಿ ಸಾಧಿಸಲು ವಿದ್ಯೆಯನ್ನು ಎಲ್ಲಡೆಗೂ ಹರಡುವುದು. ಉಳಿತಾಯ ಪ್ರವೃತ್ತಿಯನ್ನು ಬೆಳೆಸುವುದು. .ಹಣಕಾಸಿನ ಸಂಸ್ಥೆಯೆಂಬುದನ್ನು ಸಮಾಜದ ಜತೆ ಸ್ಪಂದಿಸುವಂತಹ ಸಂಸ್ಥೆಯನ್ನಾಗಿ ಪರಿವರ್ತಿಸುವುದು..ನೆರವು ಬೇಕಾದವರಿಗೆ ಸಹಾಯ ಹಸ್ತವನ್ನು ಚಾಚುವುದು. ಸೇವಾ ಮತ್ತು ಶ್ರದ್ಧೆಯಿಂದ ದುಡಿಯುವ ಪ್ರವೃತ್ತಿಯನ್ನು ಬೆಳೆಸುವುದು..ಮಾನವೀಯತೆಯನ್ನು ಬೆಳೆಸಿಕೊಂಡು ನಮ್ಮ ಸುತ್ತಲಿನ ಆಗುಹೋಗುಗಳಿಗೆ, ಕಷ್ಟ,ನಷ್ಟ ಗಳಿಗೆ ಸ್ಪಂದಿಸುವುದು. ಬೆಲೆ ಬಾಳುವ ವಸ್ತುಗಳನ್ನು ಒತ್ತೆಯಿಟ್ಟುಕೊಂಡು ಸಾಲ ಕೊಡುವುದು. ಸ್ಥಿರ ಆಸ್ತಿಗಳನ್ನು ಅಡಮಾನ ಮಾಡಿಕೊಂಡು ಅದರ ಆಧಾರದ ಮೇಲೆ ಸದುದ್ದೇಶಗಳಿಗಾಗಿ ಸಾಲಗಳನ್ನು ಕೊಡುವುದು. ಬೆಲೆ ಬಾಳುವ ವಸ್ತುಗಳನ್ನು ಸಂಸ್ಥೆಯ ಭದ್ರತಾ ಕಪಾಟುಗಳಲ್ಲಿ ಇಟ್ಟುಕೊಳ್ಳುವ ಸೇವೆಯನ್ನು ಕೊಡುವುದು. ಶ್ರೀಸಾಮಾನ್ಯನಿಗೂ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸುವುದು ಮತ್ತು ಅದನ್ನು ಉಪಯೋಗಿಸಿಕೊಳ್ಳುವಂತೆ ಮಾಡುವುದು.
ದÀಕ್ಷಿಣ ಜಿಲ್ಲೆಯಲ್ಲಿ ಬ್ಯಾಂಕುಗಳು ಪ್ರಸಿದ್ಧಿಗೆ ಬರಲು ಪ್ರಮುಖ ಕಾರಣವೆಂದರೆ ಇಲ್ಲಿ ಅಕ್ಷರಸ್ಥರ ಸಂಖ್ಯೆಯು ಬಹಳವಾಗಿತ್ತು. ಜನರಿಗೆ ಬ್ಯಾಂಕಿಂಗ್ ಸೇವೆಯನ್ನು ಉಪಯೋಗಿಸಿಕೊಳ್ಳುವಷ್ಟು ತಿಳಿವಳಿಕೆಯು ಇದ್ದಿತು. ಶ್ರೀಯುತ ಪಿ. ಗೋಪಾಲ್ ನಾಯಕ್‍ರವರು. ಈ ಸಂಸ್ಥೆಯ ಮೊದಲನೆಯ ಕಾರ್ಯದರ್ಶಿಗಳಾಗಿದ್ದರು.
ದಿ ಕೆನರಾ ಹಿಂದೂ ಪರ್ಮನೆಂಟ್ ಫಂಡ್ ಲಿ ಸಂಸ್ಥೆಯು ತಿಂಗಳಿಗೆ 120 ರೂಪಾಯಿಗಳ ಬಾಡಿಗೆಯ ಕರಾರಿನ ಮೇಲೆ ತೆಗೆದುಕೊಂಡ ಒಂದು ಕೊಠಡಿಯಲ್ಲಿ ಪ್ರಾರಂಭವಾಯಿತು. ಇದರ ವಿಳಾಸವೆಂದರೆ "ನಂ.75/ಎ , ಡೋಂಗರಕೇರಿ, ಮಂಗಳೂರು. ಕಾರ್ಯದರ್ಶಿಗಳು, ಒಬ್ಬ ಗುಮಾಸ್ತ, ಇಬ್ಬರು ಬಿಲ್ ಕಲೆಕ್ಟರ್‍ಗಳು ಈ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.. ಸಂಸ್ಥೆಯನ್ನು 1910ನೇ ಇಸವಿಯಲ್ಲಿ `ಕೆನರಾ ಬ್ಯಾಂಕ್ ಲಿಮಿಟೆಡ್ ಎಂದು ಪುನಾರಚಿಸಲಾಯಿತು. 1915ನೇ ಇಸವಿಯಲ್ಲಿ ಈ ಸಂಸ್ಥೆಯ ಪ್ರಗತಿಯ ವಿಚಾರ ಈ ರೀತಿ ಇದ್ದಿತು. (ಲಕ್ಷ ರೂಪಾಯಿಗಳಲ್ಲಿ) 1. ವಿನಿಯೋಜಿತ (ಹೂಡಿದ) ಬಂಡವಾಳ 1 . 94 2. ಮೀಸಲು ಧನ (ಸಂಚಿತಿ) 0 . 57 3. ಠೇವಣಿಗಳ ಮೊತ್ತ 4 . 33 4. ಮುಂಗಡಗಳು(ಅಡ್ವಾನ್ಸಸ್) 6 . 17 5. ವಿನಿಯೋಜಿತ ಧನ(ಇನ್ವೆಸ್ಟ್‍ಮೆಂಟ್ಸ್) 0 . 28
ಈ ಕೆಳಗೆ ನಮೂದಿಸಿರುವ ಬ್ಯಾಂಕುಗಳು ಕಾಲಾನುಕ್ರಮದಲ್ಲಿ ಕೆನರಾ ಬ್ಯಾಂಕಿನಲ್ಲಿ ವಿಲೀನಗೊಂಡವು.
1. ದಿ ಬ್ಯಾಂಕ್ ಆಫ್ ಕೇರಳ ಲಿಮಿಟೆಡ್ 20.05.1961 2. ಸೇಸಿಯಾ ಮಿಡ್‍ಲ್ಯಾಂಡ್ ಬ್ಯಾಂಕ್ ಲಿಮಿಟೆಡ್ 17.06.1961 3. ಜಿ. ರಘುನಾಥಮಲ್ ಬ್ಯಾಂಕ್ ಲಿಮಿಟೆಡ್ 04.09.1961 4. ಟ್ರಿವೇಂಡ್ರಂ ಪರ್ಮನೆಂಟ್ ಬ್ಯಾಂಕ್ ಲಿಮಿಟೆಡ್ 11,09,1961 5. ಶ್ರೀ ಪೂರ್ಣತ್ರಾಯೀಶ ವಿಲಾಸಂ ಬ್ಯಾಂಕ್ ಲಿಮಿಟೆಡ್ 29.04.1963 6. ದಿ ಆರ್ನಾಡ್ ಬ್ಯಾಂಕ್ ಲಿಮಿಟೆಡ್ 03.10.1963 7. ದಿ ಕೊಚಿನ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್. 18.11.1963 8. ದಿ ಪಾಂಡ್ಯನ್ ಬ್ಯಾಂಕ್ ಲಿಮಿಟೆಡ್ 02.12.1963 9. ಪೊಲ್ಲಾಚಿ ಯೂನಿಯನ್ ಬ್ಯಾಂಕ್ ಲಿಮಿಟೆಡ್ 05.03.1963 10. ಪಂಗಾಳ್ ನಾಯಕ್ ಬ್ಯಾಂಕ್ ಲಿಮಿಟೆಡ್ 26.09.1968 11. ಲಕ್ಷ್ಮೀ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್ 24.08.1985
ಸಂಸ್ಥೆಯು ಸ್ಥಾಪಿತವಾದಾಗಿನಿಂದ ಅನೇಕ ಪ್ರಮುಖ ಘಟನೆಗಳು ಜರುಗಿದವು. ಮುಖ್ಯವಾಗಿ ಕೆನರಾ ಹಿಂದೂ ಪರ್ಮನೆಂಟ್ ಫಂಡ್ ಸಂಸ್ಥೆಗೆ ಕೆನರಾ ಬ್ಯಾಂಕ್ ಎಂದು ಮರುನಾಮಕರಣ ಮಾಡಿಲಾಯಿತು. ಬೆಂಗಳೂರು ನಗರದಲ್ಲಿ ಮೊದಲನೆಯ ಶಾಖೆಯನ್ನು ಸ್ಥಾಪಿಸಿಲಾಯಿತು.ಬ್ಯಾಂಕಿನ ಠೇವಣಿಯು 1.00 ಕೋಟಿ ರೂಪಾಯಿಗಳವರೆಗೆ ಬೆ¼ಯಿತು. ಮಹಾಪ್ರಬಂಧಕರ ಕಛೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಮೊತ್ತಮೊದಲಬಾರಿಗೆ ಮಂಗಳೂರು, ಮದ್ರಾಸು ಮತ್ತು ಮುಂಬಯಿನಗರಗಳ ಕಛೇರಿಗಳಿಗೆ ವಿಭಾಗ ವ್ಯವಸ್ಥಾಪಕರುಗಳನ್ನು ನೇಮಕ ಮಾಡಲಾಯಿತು.
ಬ್ಯಾಂಕಿನ ಆಡಳಿತ ವರ್ಗವು ಮೆಸರ್ಸ್ ಇಬ್ಕಾನ್ ಎಂಬ ಸಂಸ್ಥೆಯ ಸೇವೆಯನ್ನು ಬಳಸಿಕೊಂಡು ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿತು. ವಿದೇಶಿ ವಿನಿಮಯ ಶಾಖೆಯನ್ನು ತೆರೆಯಲು ಪರವಾನಗಿಯನ್ನು ಪಡೆದು 27.04.1953ರಲ್ಲಿ ತನ್ನ ಮೊದಲ ವಿದೇಶಿ ಖಾತೆಯನ್ನು ತೆರೆಯಲಾಯಿತು. ಅಂತರಾಷ್ಟ್ರೀಯ ಮಟ್ಟವನ್ನು ಮುಟ್ಟಲು ಕೆನರಾ ಬ್ಯಾಂಕ್ ಕೈರೋ ಸಮ್ಮೇಳನ, ಟೊರಾಂಟೋ ಸಮ್ಮೇಳನ ಮತ್ತು ಸ್ವಿಟ್ಸರ್ಲೆಂಡ್ ಸಮ್ಮೇಳನಗಳಲ್ಲಿ ಭಾಗವಹಿಸಿದುದು. ಪ್ರಧಾನ ಕಛೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಯಿತು. ಬ್ಯಾಂಕ್ `ಎ' ದರ್ಜೆಗೆ ಏರಿದುದು. ಠೇವಣಿಯು 50 ಕೋಟಿರೂಪಾಯಿಗಳಿಗೆ ಏರಿತು. ದಿನಾಂಕ 19-07-1969ರಂದು ಕೆನರಾ ಬ್ಯಾಂಕ್ ಇನ್ನಿತರ 13 ಪ್ರಮುಖ ಬ್ಯಾಂಕುಗಳೊಂದಿಗೆ ರಾಷ್ಟ್ರೀಕರಣವಾಯಿತು. ಪೂರ್ಣಪ್ರಮಾಣದಲ್ಲಿ ಅಂತರಾಷ್ಟ್ರೀಯ ವಿಭಾಗವನ್ನು ಮುಂಬಯಿ ನಗರದಲ್ಲಿ ಮತ್ತು ಕರ್ನಾಟಕದ ಬಸವಕಲ್ಯಾಣದಲ್ಲಿ ಸಾವಿರದ ಶಾಖೆಯನ್ನು ಸ್ಥಾಪಿಸಲಾಯಿತು.
ಬ್ಯಾಂಕಿನ ಪ್ಲಾಟಿನಂ ಜೂಬಿಲಿ ಮಹೋತ್ಸವ ಆಚರಣೆ. ಹೊರದೇಶದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲು ದುಬೈನ ಅಲ್ ರeóÁಕಿ ವಿನಿಮಯ ಸಂಸ್ಥೆಯ ಹಾಗೂ ಮಧ್ಯ ಪೂರ್ವರಾಷ್ಟ್ರದ ಒಂದು ವಿನಿಮಯ ಸಂಸ್ಥೆಯ ಆಡಳಿತವನ್ನು ವಹಿಸಿಕೊಂಡಿತು.ಬ್ಯಾಂಕು ಕ್ಯಾನ್‍ಕಾರ್ಡ್ ಸೇವೆಯನ್ನು ಪ್ರಾರಂಭಿಸಿತು.
ಬ್ಯಾಂಕು 1080ರ ದಶಕದಲ್ಲಿ ಕೆಲವು ಏರುಪೇರುಗಳನ್ನು ಕಂಡಿತು ಬಂಡವಾಳ ಮಾರುಕಟ್ಟೆ ವ್ಯವಹಾರಗಳಲ್ಲಿ ನಷ್ಟವನ್ನು ಭರಿಸಿತು. ಇದರ ಪರಿಣಾಮ ಹಲವು ವರ್ಷಗಳತನಕ ವಿಸ್ತರಿಸಿತು. ಆದರೆ ಬ್ಯಾಂಕು ಶೀಘ್ರವಾಗಿ ಚೇತರಿಸಿಕೊಂಡು ಮುನ್ನಡೆಯತೊಡಗಿತು.
ಬ್ಯಾಂಕಿನಲ್ಲಿ ಪೂರ್ಣಮಟ್ಟದ ಗಣಕದ ಸೇವೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮೊದಲನೆಯ ಸಂಸ್ಥೆಯಾಗಿ ಪ್ರಾರಂಭವಾಯಿತು 1995 - 96ರಲ್ಲಿ ಐ.ಏಸ್.ಓ 9002 ಪ್ರಮಾಣಪತ್ರವು ಕೆನರಾಬ್ಯಾಂಕಿನ ಬೆಂಗಳೂರಿನ ಒಂದು ಶಾಖೆಗೆ ಲಭಿಸಿತು. 1996-97ರಲ್ಲಿ ಬ್ಯಾಂಕಿನ ಮೊದಲ ಎಟಿಎಂ ಯಂತ್ರವನ್ನು ಅನೇಕ ನಗರಗಳ ಶಾಖೆಗಳೊಂದಿಗೆ ಪರಸ್ಪರ ಜಾಲಬಂಧದೊಂದಿಗೆ ಸ್ಥಾಪಿಸಲಾಯಿತು. 2001-02ರಲ್ಲಿ ಮೊದಲ ಮಹಿಳಾ ಶಾಖೆ ಪ್ರಾರಂಭವಾಯಿತು. ಆಯ್ದ ಪ್ರಮುಖ 180ಶಾಖೆಗಳಲ್ಲಿ ಯಾವ ಶಾಖೆಯಲ್ಲಿ ಬೇಕಾದರೂ ವ್ಯವಹರಿಸುವ ಸರ್ವಸ್ಥಳ ಸೇವೆ ಆರಂಭವಾಯಿತು.
2003-04ರಲ್ಲಿ ಬ್ಯಾಂಕಿನ ನಿವ್ವಳ ಆದಾಯವು 1019 ಕೋಟಿ ರೂಪಾಯಿಗಳನ್ನು ಮುಟ್ಟಿತು. ಅಂತರಜಾಲ ಚರದೂರವಾಣಿ ಬ್ಯಾಂಕಿಂಗ್ ಸೇವೆಯು ಪ್ರಾರಂಭವಾಯಿತು..
31 ಮಾರ್ಚ್ 2005 ರವರೆಗೆ ಬ್ಯಾಂಕಿನಲ್ಲಿ ಇರುವ ಒಟ್ಟು ಸಿಬ್ಬಂದಿಗಳ ಸಂಖ್ಯೆ 47388. ಇವರಲ್ಲಿ 14, 958 ಅಧಿಕಾರಿಗಳು, 21, 512 ಕ್ಲರ್ಕ್‍ಗಳು ಮತ್ತು 10, 918 ಜನ ಅಧೀನ ಸಿಬ್ಬಂದಿ. ಒಟ್ಟು 9876 ಮಹಿಳೆಯರು ಇದ್ದರು. ಬ್ಯಾಂಕಿನ 2004-05 ವಾರ್ಷಿಕ ವರದಿ ಮೇರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದವರ ಸಂಖ್ಯೆ 2815. ಇದುವರೆಗೆ 14, 844 ಜನ ಸಿಬ್ಬಂದಿಗೆ ಬ್ಯಾಂಕಿನ ವಿವಿಧ ಮಹಾ ತರಬೇತಿ ವಿದ್ಯಾಲಯದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತರಬೇತಿಯನ್ನು ಕೊಡಲಾಗಿದೆ.
ಬ್ಯಾಂಕಿನ ದಶಕದ ಅಭಿವದ್ಧಿಯ ಒಂದು ಪಕ್ಷಿ ನೋಟ ಹೀಗಿದೆ. ರೂ. ಗಳು ಕೋಟಿಗಳಲ್ಲಿ
1995-96 1996-97 1997-98 1998-99 1999-2000 2000-01 2001-02 2002-03 2003-04 2004-05
ಶಾಖೆಗಳ ಸಂಖ್ಯೆ 2192 2262 2312 2379 2397 2405 2409 2424 2469 2513
ಬಂಡವಾಳ 485 485 578 578 578 578 578 410 410 40
ಮೀಸಲು ನಿಧಿಗಳು 1446 1564 1725 1835 2018 2237 2894 3739 4842 5699
ಠೇವಣಿಗಳು 26243 31445 38045 41959 48001 59070 64030 72095 86345 96908
ಪರಿಮಾಣದಲ್ಲಿ ಹೆಚ್ಚುವರಿ 3768 5202
6600
3914 6042 11069 4960 8065 14250 10563
ಶೇಕಡಾವಾರು ಹೆಚ್ಚಳ 16.77 19.82 20.99 10.29 14.40 23.06 8.40 12.60 19.77 12.23
ಅನಿವಾಸಿ ಭಾರತೀಯರ ಠೇವಣಿ 3879 4984 6302 7589 8918 9877 11358 12482 12909 12476
ವಿದೇಶಿ ವ್ಯವಹಾರದ ಒಟ್ಟು ವಹಿವಾಟು 26438 27741 34238 39859 53634 61119 59333 65676 67347 84517
ನಿವ್ವಳ ಸಾಲ-ಮುಂಗಡಗ¼ು 13096 14413 16825 19530 23547 27832 33127 40472 47639 60421
ಒಟ್ಟು ಆದ್ಯತಾ ಸಾಲಗಳು 4892 5702 6735 7034 7667 9139 10536 14604 19580 24777
ರಫ್ತು ಸಾಲ 2434 2603 2813 2789 3007 3517 3672 4429 5497 6183
ಸಿಬ್ಬಂದಿ ವರ್ಗದ ಒಟ್ಟು ಸಂಖ್ಯೆ 54044 54316 54703 55097
55363 48257 47796 47566 47613 47389
ಒಟ್ಟು ಆದಾಯ 3382 3869 4431 5319 5687 6536 7799 8170 9080 9116
ಒಟ್ಟು ವೆಚ್ಚ 3129 3721 4228 5094 5451 6251 7058 6173 6221 6513
ವ್ಯಾವಹಾರಿಕ ಒಟ್ಟು ಲಾಭ 651 654 673 957 923 1131 1656 1997 2859 2585
ನಿವ್ವಳ ಲಾಭ 253 147 203 225 236 285 741 1019 1338 1110
ಬೆಂಗಳೂರು, ಮಂಗಳೂರು, ಚೆನ್ನೈ, ಮದುರೈ, ತಿರುವನಂತರಪುರ (ಟ್ರಿವೇಂಡ್ರಂ), ಹೈದರಾಬಾದ್, ಮುಂಬಯಿ ನಗರ, ಮುಂಬಯಿ ಉತ್ತರ, ಕೊಲ್ಕತ್ತಾ, ಪಾಟ್ನಾ, ಲಕ್ನೋ, ದೆಹಲಿ, ಚಂಡಿಗಡ.ಗಳಲ್ಲಿ ಬ್ಯಾಂಕಿನ ವಲಯ ಕಛೇರಿಗಳಿವೆ.
ಈ ಎಲ್ಲ ವಲಯ ಕಛೇರಿಗಳೂ ಸಹ ಜನರಲ್ ಮ್ಯಾನೇಜರ್‍ಗಳ ನೇತೃತ್ವದಲ್ಲಿ ತಮ್ಮ ಕಾರ್ಯಭಾರವನ್ನು ನಡೆಸುತ್ತಿವೆ. ಇದಲ್ಲದೆ ಹಲವಾರು ಮುಖ್ಯ ಪಟ್ಟಣಗಳಲ್ಲಿರುವ 38 ಸ್ಥಳೀಯ ಕಛೇರಿಗಳನ್ನೂ, ವಲಯ ಕಛೇರಿಗಳಿರುವ ಊರುಗಳಲ್ಲಿ ಸಿಬ್ಬಂದಿ ತರಬೇತಿಯ ಮಹಾವಿದ್ಯಾಲಯಗಳನ್ನೂ ಹೊಂದಿದೆ. ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ತನ್ನದೇ ಆದ ಕೋಶಾಗಾರಗಳನ್ನು ಹೊಂದಿದೆ. ಕೆಲವು ಪ್ರಮುಖ ನಗರಗಳಲ್ಲಿ ತೀರುವಳಿ ವ್ಯವಸ್ಥೆಯ ಜವಾಬ್ದಾರಿಯನ್ನು ರಿಸರ್ವ್ ಬ್ಯಾಂಕಿನ ಆದೇಶದ ಮೇರೆಗೆ ಒಪ್ಪಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದೆ. (ಉದಾಹರಣೆಗೆ : ಬೆಂಗಳೂರು ನಗರದಲ್ಲಿ) ಕರ್ನಾಟಕದಲ್ಲಿ ದಿನಾಂಕ 01-09-2005ರಂದು ಬ್ಯಾಂಕಿನ 536 ಶಾಖೆಗಳಿವೆ. ಅವುಗಳಲ್ಲಿ : ಮಹಾನಗರ ಪಟ್ಟಣ ಅರೆ-ಪಟ್ಟಣ ಗ್ರಾಮೀಣ ಒಟ್ಟು ಶಾಖೆಗಳು
102 85 115 234 536
ಕೆನರಾ ಬ್ಯಾಂಕ್ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗಳ ವಿವರಗಳು :
ಗ್ರಾಮೀಣ ಪ್ರದೇಶಗಳಲ್ಲಿ : ಇದುವರೆಗೆ ಬ್ಯಾಂಕು 8 ಗ್ರಾಮೀಣ ಬ್ಯಾಂಕುಗಳನ್ನು ಪ್ರಾಯೋಜಿಸಿದೆ. (31-03-2005ರ ವರೆಗೆ)
ಕೆನರಾ ಬ್ಯಾಂಕ್ ಪ್ರಾಯೋಜಿಸಿದ ಗ್ರಾಮೀಣ ಬ್ಯಾಂಕ್‍ಗಳು :
ತುಂಗಭದ್ರ ಗ್ರಾಮೀಣ ಬ್ಯಾಂಕ್ ,
ಸೌತ್ ಮಲಬಾರ್ ಗ್ರಾಮೀಣ ಬ್ಯಾಂಕ್ ಅಲಿಘರ್ ಗ್ರಾಮೀಣ ಬ್ಯಾಂಕ್ ಜಮುನಾ ಗ್ರಾಮೀಣ ಬ್ಯಾಂಕ್ ಸಹ್ಯಾದ್ರಿ ಗ್ರಾಮೀಣ ಬ್ಯಾಂಕ್ ಏಟಾ ಗ್ರಾಮೀಣ ಬ್ಯಾಂಕ್ ಕೋಲಾರ್ ಗ್ರಾಮೀಣ ಬ್ಯಾಂಕ್ ಚಿತ್ರದುರ್ಗ ಗ್ರಾಮೀಣ ಬ್ಯಾಂಕ್
ಈ ಎಲ್ಲ ಗ್ರಾಮೀಣ ಬ್ಯಾಂಕ್‍ಗಳು ಅತ್ಯುತ್ತಮವಾಗಿ ಕಾರ್ಯಭಾರ ಮಾಡುತ್ತಿವೆ.
ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಕೆನರಾ ಬ್ಯಾಂಕು ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
1. ಸ್ವಯಂ ಉದ್ಯೋಗವನ್ನು ಪಡೆಯಲು ಸಹಾಯವಾಗುವಂತೆ ಗ್ರಾಮೀಣ ಪ್ರದೇಶದ ಜನತೆಗಾಗಿ 2005 ಮಾರ್ಚ್ ವರೆಗೆ 20 ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಿದೆ. ಇದುವರೆಗೆ ಈ ಸಂಸ್ಥೆಗಳಲ್ಲಿ ಸುಮಾರು 1,56,000 ಅಭ್ಯರ್ಥಿಗಳನ್ನು ತಯಾರುಮಾಡಲಾಗಿದೆ. ಕೆನರಾ ಬ್ಯಾಂಕ್ ಪ್ಲಾಟಿನಂ ಮಹೋತ್ಸವ ಗ್ರಾಮೀಣ ಅಭಿವೃದ್ಧಿ ದತ್ತಿಸಂಸ್ಥೆಯ ವತಿಯಿಂದ ಪ್ರತ್ಯೇಕವಾಗಿ 13 ಸ್ವಯಂ ಉದ್ಯೋಗ ಸಂಸ್ಥೆಗಳನ್ನು ಪ್ರಾರಂಭಿಸಿದೆ. ಈ ಸಂಸ್ಥೆಗಳಲ್ಲಿ 2005 ಮಾರ್ಚ್ ವರೆಗೆ ಸುಮಾರು 43 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿದೆ.
2. ಅತಿ ದೂರದಲ್ಲಿರುವ ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಅನೇಕ ಚಿಕಿತ್ಸಾಲಯಗಳನ್ನು ಇದುವರೆಗೆ ತೆರೆದಿದ್ದಾರೆ. ಇದುವರೆಗೆ ಅಂದರೆ 31-03-2005 ತನಕ 442 ಚಿಕಿತ್ಸಾಲಯ ಗಳನ್ನು ತೆರೆಯಲಾಗಿದೆ.
3. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ ಇದುವರೆಗೆ `ಜಲಯೋಗ ಯೋಜನೆಯಡಿಯಲ್ಲಿ 32 ಪೂರ್ಣ ಯೋಜನೆಗಳನ್ನು ಪೂರೈಸಿದೆ. 1985 ನೇ ಇಸವಿಯಿಂದ ಇದುವರೆಗೆ ಸುಮಾರು 2 ಲಕ್ಷ ಜನಗಳಿಗೆ ಸಹಾಯಹಸ್ತವನ್ನು ನೀಡಿದೆ.
ಅಗ್ರ ಬ್ಯಾಂಕ್ ಯೋಜನೆ : ಈ ಯೋಜನೆಯಡಿಯಲ್ಲಿ ದೇಶಾದ್ಯಂತ 23 ಜಿಲ್ಲೆಗಳಲ್ಲಿ ತನ್ನ ಅಗ್ರಬ್ಯಾಂಕ್ ಜವಾಬ್ದಾರಿಯನ್ನು ಹೊತ್ತಿದೆ. [ಕರ್ನಾಟಕದಲ್ಲಿ ಏಳು, ತಮಿಳುನಾಡಿನಲ್ಲಿ ಆರು, ಕೇರಳದಲ್ಲಿ ಐದು, ಉತ್ತರ ಪ್ರದೇಶದಲ್ಲಿ ನಾಲ್ಕು ಮತ್ತು ಬಿಹಾರದಲ್ಲಿ ಒಂದು] ರಾಜ್ಯಮಟ್ಟದಲ್ಲಿ ನಡೆಸುವ ಬ್ಯಾಂಕರುಗಳ ಸಮಿತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಹೊತ್ತಿದೆ.
ವಿದೇಶೀ ಸೇವಾ ವಿಭಾಗ: ಕೆನರಾ ಬ್ಯಾಂಕಿಗೆ 1953 ರಲ್ಲಿ ವಿದೇಶಿ ವಿಭಾಗವನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕಿನ ಪರವಾನಿಗೆ ದೊರೆಯಿತು. ಬ್ಯಾಂಕ್ ತನ್ನ ಮೊದಲ ವಿದೇಶಿ ಶಾಖೆಯನ್ನು ಲಂಡನ್ನಿನಲ್ಲಿ ಶ್ರೀಯುತ ಫ್ರೀಮನ್ ಅವರ ನೇತೃತ್ವದೊಂದಿಗೆ 27.04.1953 ರಲ್ಲಿ ಪ್ರಾರಂಭಿಸಿತು. ನಂತರದ ದಶಕಗಳಲ್ಲಿ ನಮ್ಮ ದೇಶದಲ್ಲಿ ವಿದೇಶಿ ವ್ಯವಹಾರ ವಿಭಾಗಗಳನ್ನು ಪ್ರಾರಂಭಿಸಿತು. ಇಂದು ಕೆನರಾ ಬ್ಯಾಂಕ್ ಒಂದು ಅಂತರಾಷ್ಟ್ರೀಯ ವಿಭಾಗವನ್ನು ಹೊಂದಿದೆ. ಇದರ ಪ್ರಮುಖ ಕಛೇರಿಯು ಮುಂಬಯಿ ನಗರದಲ್ಲಿದೆ. ಇದಲ್ಲದೆ ದೆಹಲಿ, ಕೊಲ್ಕತ್ತಾ, ಚೆನ್ನೈ, ಬೆಂಗಳೂರು, ಮೊದಲಾದ ದೊಡ್ಡ ದೊಡ್ಡ ನಗರಗಳಲ್ಲಿ ವಿದೇಶಿ ವಿಭಾಗಳನ್ನು ಹೊಂದಿದೆ. ಪ್ರಸ್ತುತ ವರ್ಷ ಅಂದರೆ 31.03.2005ರಲ್ಲಿ ಕೆನರಾ ಬ್ಯಾಂಕ್ 84,517 ಕೋಟಿ ರೂಪಾಯಿಗಳ ವಿದೇಶಿ ವಹಿವಾಟನ್ನು ಮಾಡಿದೆ. ಮಾರ್ಚ್ 2005 ರವರೆಗೆ ಬ್ಯಾಂಕ್ 98 ಅನ್ಯ ದೇಶಗಳಲ್ಲಿ 698 ವಿವಿಧ ಬ್ಯಾಂಕಗಳ ಅಂತರಜಾಲರೂಪೀ ಸಂಪರ್ಕವನ್ನು ಹೊಂದಿದೆ. ಭಾರತೀಯ ಹಣವನ್ನು ಅನ್ಯದೇಶಗಳಲ್ಲಿ ವ್ಯವಹರಿಸುವಂತಹ 20 ವಿನಿಮಯ ಸಂಸ್ಥೆಗಳನ್ನು ಮಧ್ಯಪ್ರಾಚ್ಯ ದೇಶಗಳಲ್ಲಿ ಹೊಂದಿದೆ. ಅನಿವಾಸಿ ಭಾರತೀಯರಿಗೆ ಉತ್ತಮ ಸೇವೆಗಳನ್ನು ನೀಡಲು ದೇಶದ ಒಳಗೆ ಅನೇಕ ಪ್ರತ್ಯೇಕ ಶಾಖೆಗಳನ್ನು ತೆರೆದಿದೆ. ಇದಲ್ಲದೆ ತನ್ನ ಪ್ರತಿನಿಧಿ ಕಛೇರಿಗಳನ್ನು ವಿದೇಶಗಳಲ್ಲಿ ಸ್ಥಾಪಿಸಿದೆ. ಬ್ಯಾಂಕಿನ ಗಣಕೀಕರಣ : ಇದಕ್ಕಾಗಿಯೇ ಬ್ಯಾಂಕ್ ಒಂದು ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿದೆ. ಹೆಚ್ಚು ಕಡಿಮೆ ಎಲ್ಲ ನಗರ ಹಾಗೂ ಅರೆ ನಗರ ಶಾಖೆಗಳನ್ನು ಗಣಕೀಕರಣಗೊಳಿಸಲಾಗಿದೆ. 2005 ನೇ ಮಾರ್ಚ್ ತಿಂಗಳವರೆಗೆ 1420 ಶಾಖೆಗಳ ಅಂತರಜಾಲ ಸಂಪರ್ಕವನ್ನು ಸಾಧಿಸಿದೆ. 710 ಯಾವ ಸಮಯದಲ್ಲಾದರೂ ಹಣ ನೀಡುವ ಯಂತ್ರಗಳ ಜಾಲ()ವನ್ನು ಹೊಂದಿದೆ. ಇದುವರೆಗೆ 11 ಲಕ್ಷ ಗ್ರಾಹಕರು ಈ ಸೌಲಭ್ಯವನ್ನು ಉಪಯೋಗಿಸುತ್ತಿದ್ದಾರೆ. ಯಾವ ಊರಿನಲ್ಲಿದ್ದರೂ ಅಂತರಜಾಲದ ಒಳಗೆ ಇರುವ ಶಾಖೆಗಳ ವ್ಯವಹಾರವನ್ನು ಸೌಲಭ್ಯವನ್ನು 901 ಶಾಖೆಗಳಲ್ಲಿ ಒದಗಿಸಲಾಗಿದೆ. ಬ್ಯಾಂಕಿನ ಎಲ್ಲ ನಗರ ಹಾಗು ಪಟ್ಟಣ ಬ್ಯಾಂಕುಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಸಧ್ಯದಲ್ಲೇ ಅಳವಡಿಸಲಾಗುತ್ತಿದೆ.
ಬ್ಯಾಂಕ್ ಇದುವರೆಗೆ ಪಡೆದ ಪ್ರಶಸ್ತಿಗಳು : ಕೆನರಾ ಬ್ಯಾಂಕ್ 26.02.1990 ರಲ್ಲಿ ತನ್ನ ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಭಾಗಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ರಾಜಭಾಷಾ ಪ್ರಶಸ್ತಿಯನ್ನು ಅನೇಕ ವರ್ಷಗಳ ವರೆಗೆ ಪಡೆದಿದೆ. ಇದಲ್ಲದೆ 2002 - 03ರಲ್ಲಿ ಉತ್ತಮ ರಫ್ತು ವಹಿವಾಟಿನ ವಿಭಾಗಕ್ಕೆ "ನಿರ್ಯಾತ್ ಬಂಧು" ಎಂಬ ಪ್ರಶಸ್ತಿಯನ್ನು ಪಡೆದಿದೆ. ಭಾರತ ಸರ್ಕಾರದ ಗೃಹ ಖಾತೆಯವರು ಇಟ್ಟಿರುವ ಇಂದಿರಾಗಾಂಧಿ ರಾಜಭಾಷಾ ಪುರಸ್ಕಾರ ಯೋಜನೆಯಯಡಿಯಲ್ಲಿ 2002 -03ರಲ್ಲಿ ಪ್ರಶಸ್ತಿಯನ್ನು ಪಡೆದಿದೆ. ಬ್ಯಾಂಕಿನ ನಿಯತಕಾಲಿಕವಾದ "ಶ್ರೇಯಸ್" ಅಖಿಲ ಭಾರತ ನಿಯತಕಾಲಿಕೆಗಳ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು 08.02.1990 ಇಸವಿಯಲ್ಲಿ ಮತ್ತು 2003 ನೇ ವರ್ಷಕ್ಕೆ "ಅತ್ಯುತ್ತಮ ಮುದ್ರಣದ" ಬಹುಮಾನವನ್ನು ಪಡೆದಿದೆ.
ನಿಷ್ಕ್ರಿಯ ಆಸ್ತಿ ನಿರ್ವಹಣೆ : ಈ ವಿಭಾಗದಲ್ಲಿ ಕೆನರಾ ಬ್ಯಾಂಕ್ ಗಣನೀಯ ಪ್ರಗತಿಯನ್ನು ಸಾಧಿಸಿದೆ. 2004-05 ನೇ ವರ್ಷದಲ್ಲಿ ಲಾಭವನ್ನು ತರದ ಸಾಲ / ಮುಂಗಡಗಳ ಪ್ರಮಾಣವು ಗಣನೀಯವಾಗಿ ಇಳಿದಿದೆ. ಕೆನರಾ ಬ್ಯಾಂಕಿನ 2004-2005ನೆಯ ಸಾಲಿನ ವಾರ್ಷಿಕ ವರದಿಯಂತೆ 2004-05 ನೇ ವರ್ಷದಲ್ಲಿ ಇವುಗಳ ಪ್ರಮಾಣ 2371 ಕೋಟಿ ರೂಪಾಯಿಗಳು (2003-04 ನೇ ವರ್ಷದಲ್ಲಿ ಇದರ ಪ್ರಮಾಣವು 3127 ಕೋಟಿ ರೂಪಾಯಿಗಳಿದ್ದವು.) ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳ ಮೇಲೆ ವಿಧಿಸಿರುವ ಬಂಡವಾಳ ಪರ್ಯಾಪ್ತತಾ ಅನುಪಾತ (ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ-: 2004 -05 ನೇ ವರ್ಷದಲ್ಲಿ ಈ ಅನುಪಾತವು 12 . 78 .[ ರಿಸರ್ವ್ ಬ್ಯಾಂಕ್ ವಿಧಿಸಿರುವ ಅನುಪಾತ 5% ಈ ಅನುಪಾತವು ಹೆಚ್ಚಿದಷ್ಟೂ ಸಂಸ್ಥೆಯ ಉತ್ತಮ ಕಾರ್ಯದಕ್ಷತೆಯನ್ನು ಸೂಚಿಸುತ್ತದೆ.] (ನೋಡಿ : ಕೇಂದ್ರೀಯ ಬ್ಯಾಂಕ್)
ಬ್ಯಾಂಕಿನ ಠೇವಣಿ, ಸಾಲ-ಮುಂಗಡ ಮತ್ತು ಸೇವಾ ವಿವರಗಳು : ಕ್ರಮ ಠೇವಣಿ ಯೋಜನೆಗಳು ಸಾಲ-ಮುಂಗಡಗಳ ವಿವರಗಳು ಸೇವಾ ವಿವರಗಳು
1 ಉಳಿತಾಯ ಖಾತೆ ಮೀರೆಳೆತ ಸಾಲ ಭದ್ರತಾ ಕಪಾಟು
2 ಚಾಲ್ತಿ ಖಾತೆ ನಗದು ಉದರಿ ಸಾಲ ವಿಶ್ವಸ್ಥ ಮಂಡಳಿ ಕಾರ್ಯ ನಿರ್ವಾಹಕ ಮತ್ತು ತೆರಿಗೆ
3
ಚೆಕ್ಕುಗಳು ಮತ್ತು ಬಿಲ್ಸ್‍ಗಳÀ ಖರೀದಿ ಮತ್ತು ವಟಾಯಿಸುವುದು. ಬ್ಯಾಂಕ್ ಡ್ರಾಫ್ಟ್, ಪಾವತಿ ಆದೇಶ
4 ಸಾವಧಿ ಠೇವಣಿ ಸಾವಧಿ ಠೇವಣಿ ಮೇಲಿನ ಸಾಲ ಆದಾಯ ತೆರಿಗೆದಾರರ ಫಾರಂ ಸಲ್ಲಿಸುವ ಸೇವೆ.
5 ಕಾಮಧೇನು ಠೇವಣಿ ವ್ಯಾಪಾರಸ್ಥರಿಗೆ ಸಾಲ ಆಯ್ದ ಶಾಖೆಗಳಲ್ಲಿ ಗ್ರಾಹಕರ ವಿದ್ಯುತ್ ಶುಲ್ಕ ಪಾವತಿ ಸೇವೆ
6 ಕೆನರಾ ಸ್ವಯಂ ವಿಸ್ತರಣಾ ಠೇವಣಿ ಸಣ್ಣ ಕೈಗಾರಿಕೆಗಳಿಗೆ ಸಾಲ ಚೆಕ್ಕು ಮತ್ತು ಬಿಲ್ಸ್‍ಗಳನ್ನು ವಸೂಲು ಮಾಡಿ ಕೊಡುವುದು
7 ಕ್ಯಾನ್ ಫ್ಲೆಕ್ಸಿ ಕೃಷಿ ಸಾಲಗಳು ದೂರವಾಣಿ ಮೂಲಕಬ್ಯಾಂಕಿಂಗ್
8 ಆಶ್ರಯ ಠೇವಣಿ ಇತರೇಆದ್ಯತಾ ಕ್ಷೇತ್ರದ ಸಾಲಗಳು ಅ).ಸಣ್ಣ ಉದ್ದಿಮೆದಾರರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಬ).ವೃತ್ತಿಪರ ಮತ್ತು ಸ್ವಯಂ ಉದ್ಯೋಗಿಗಳಿಗೆ ಅಂತರಜಾಲ ಮೂಲಕ ಬ್ಯಾಂಕಿಂಗ್
9 ಚರ ದರ ಠೇವಣಿ) ವಿದ್ಯಾಸಾಗರ ಸಾಲ (ಶಿಕ್ಷಣಕ್ಕೆ ಸಾಲ) ಚರ ದೂರವಾಣಿ ಬ್ಯಾಂಕಿಂಗ್
10 ಅನಿವಾಸಿ ಠೇವಣಿಗಳು ಅ)ಅನಿವಾಸಿ ರೂಪಾಯಿ ಠೇವಣಿಗಳು ಮನೆ ಕಟ್ಟಲು ಸಾಲ ಎ. ಟಿ. ಎಮ್.
11 ವಿದೇಶಿ ಕರೆನ್ಸಿ ಅನಿವಾಸಿಗಳ ಠೇವಣಿ (ಬಿ)) ಕ್ಯಾನ್-ಆಭರಣ ಸಾಲ ಬಿ.ಡಿ.ಎ. ಮೊದಲಾದ ಸಂಸ್ಥೆಗಳ ಪರವಾಗಿ ಅರ್ಜಿ/ಹಣ ಸ್ವೀಕೃತಿ
12 ನಿವಾಸಿಗಳ ವಿದೇಶಿ ಕರೆನ್ಸಿ ಉಳಿತಾಯ ಖಾತೆ( ಕ್ಯಾನ್ ಟೆಕ್ ಸಾಲ ವಣಿಕ ಬ್ಯಾಂಕಿಂಗ್
13 ನಿವಾಸಿಗಳ ವಿದೇಶಿ ಕರೆನ್ಸಿ ಸಾವಧಿ ಠೇವಣಿ ಖಾತೆ ಕ್ಯಾನ್ ಟ್ರಾವೆಲ್ ಸಾಲ
14
ಕ್ಯಾನ್-ಮೋಬೈಲ್(ಕಾರ್ ಸಾಲ)
15
ಕ್ಯಾನ್ - ನಗದು
16
ಕ್ಯಾನ್-ಕ್ಯಾರಿ(ದ್ವಿಚಕ್ರವಾಹನ ಸಾಲ)
ಚಿನ್ನದ ಕಾರ್ಡ್ ಸೇವೆ : ಕೆನರಾ ಬ್ಯಾಂಕಿನ ರಫ್ತುದಾರ ಗ್ರಾಹಕರಿಗೆ ವಿಶೇಷವಾಗಿ ಚಿನ್ನದ ಕಾರ್ಡು ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಚಿನ್ನದ ಕಾರ್ಡನ್ನು ಕೇವಲ ಆಯ್ದ ಮತ್ತು ಈ ಕೆಳಗಿನ ನಿಯಮಗಳಿಗೆ ಹೊಂದುವ ರಫ್ತುದಾರರಿಗೆ ಮಾತ್ರ ನೀಡಲಾಗುವುದು.
ರಫ್ತುದಾರನ ಎಲ್ಲ ಆಸ್ತಿಗಳು ಕನಿಷ್ಠ ಮೂರು ವರ್ಷಗಳ ವರೆಗೆ ಶಿಷ್ಟ ಆಸ್ತಿಯಗಿರಬೇಕು. ಆ ಮೂರು ವರ್ಷಗಳು ಬ್ಯಾಂಕಿನೊಡನೆ ಮಾಡಿದ ವ್ಯವಹಾರಗಳು ಉತ್ತಮ ಗುಣಮಟ್ಟದ್ದಾಗಿರ ಬೇಕು. ಈ ಚಿನ್ನದ ಕಾರ್ಡನ್ನು ಕೇವಲ ಮೂರು ವರ್ಷಗಳ ಅವಧಿಯವರೆಗೆ ಮಾತ್ರ ನೀಡಲಾಗುವುದು ಮತ್ತು ಅದನ್ನು ರಫ್ತುದಾರರ ಶ್ರೇಣಿಯನ್ನನುಸರಿಸಿ ಮತ್ತೆ ಮೂರು ವರ್ಷಗಳವರೆಗೆ ಬ್ಯಾಂಕೇ ನವೀಕರಿಸುವುದು. ರಫ್ತುದಾರ ಗ್ರಾಹಕರಿಗೆ ಚಿನ್ನದ ಕಾರ್ಡಿನ ಲಾಭಗಳು: ಸಾಲ ಬೇಡಿಕೆಯ ಅರ್ಜಿಗಳನ್ನು ಬೇರೆ ರಫ್ತುದಾರರಿಗಿಂತ ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು. ಬಡ್ಡಿದರ ಮತ್ತು ಸೇವಾ ಶುಲ್ಕಗಳಲ್ಲಿ ಬೇರೆ ರಫ್ತುದಾರರಿಗಿಂತ ಶೇಕಡಾ 25ರಷ್ಟು ಕಡಿಮೆ ಮಾಡಲಾಗುವುದು.ಶೀಘ್ರದಲ್ಲಿ ಈ ಚಿನ್ನದ ಕಾರ್ಡು ಹೊಂದಿದವರಿಗೆ ಅಂತರರಾಷ್ಟ್ರೀಯ ಉದರಿ ಕಾರ್ಡು ಹಾಗು ಋಣಿಕೆ ಕಾರ್ಡುಗಳನ್ನು, ಅಂತರಜಾಲ ಬ್ಯಾಂಕಿಂಗ್, ಮೋಬೈಲ್ ಬ್ಯಾಂಕಿಂಗ್, ಎಟಿಎಂ ಕಾರ್ಡುಗಳನ್ನು ನೀಡ ಲಾಗುವುದು. ರಫ್ತಾದನಂತರದ ಸಾಲದ ಅವಧಿಯನ್ನು 90 ದಿನಗಳಿಂದ 365 ದಿನಗಳಿಗೆ ಹೆಚ್ಚಿಸಲಾಗುವುದು.ಉಳಿದ ವಿವರಣೆಗೆ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು.
ಕೋರ್ ಬ್ಯಾಂಕಿಂಗ್ : ಬ್ಯಾಂಕಿನ ಬಹುತೇಕ ಶಾಖೆಗಳನ್ನು ಏಕೀಕರಿಸಿ ಯಾವುದೇ ಶಾಖೆಯ ಖಾತೆಯನ್ನು ಯಾವುದೇ ಶಾಖೆಯಿಂದಲೂ ಅವಲೋಕಿಸುವ, ವ್ಯವಹರಿಸುವ, ಜಮಾಖರ್ಚು ಹಾಕುವ, ಖಾತಾ ನಕಲು ಸಮಗ್ರ ಗಣಕೀಕರಣ ಪದ್ಧತಿಯನ್ನು ಕೋರ್ ಬ್ಯಾಂಕಿಂಗ್ ಪದ್ಧತಿ ಎನ್ನುತ್ತಾರೆ. ಇಂದು ಎಲ್ಲ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳು, ವಿದೇಶೀ ಬ್ಯಾಂಕುಗಳು, ಬಹುರಾಷ್ಟ್ರೀಯ ಕಂಪನಿಗಳ ಬ್ಯಾಂಕುಗಳು ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಕೆನರಾ ಬ್ಯಾಂಕಿನಲ್ಲೂ ಈ ಪದ್ಧತಿಯು ಆಗಲೇ ಪ್ರಮುಖ ಶಾಖೆಗಳಲ್ಲಿ ಚಾಲನೆಗೆ ಬಂದು ಉಳಿದ ಬಹುತೇಕ ಶಾಖೆಗಳನ್ನು ಈ ವ್ಯಾಪ್ತಿಯಲ್ಲಿ ತರುವ ಪ್ರಯತ್ನಗಳು ನಡೆದಿವೆ.
ಕೆನರಾ ಬ್ಯಾಂಕ್ ಇದುವರೆಗೆ ಈ ಕೆಳಗೆ ಕಾಣಿಸಿರುವ ಅಂಗಸಂಸ್ಥೆಗಳನ್ನು ಪ್ರಾಯೋಜಿಸಿದೆ.
ಇಂಡೋ ಹಾಂಕಾಂಗ್ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ನಿಯಮಿತ ಕ್ಯಾನ್ ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್ ಕ್ಯಾನ್‍ಫಿನ್ ಹೋಂಸ್ ಲಿಮಿಟೆಡ್ ಕ್ಯಾನ್‍ಬ್ಯಾಂಕ್ ಇನ್ವೆಸ್ಟ್‍ಮೆಂಟ್ ಮಾನೇಜ್‍ಮೆಂಟ್ ಸರ್ವಿಸಸ್ ಲಿಮಿಟೆಡ್ ಕ್ಯಾನ್‍ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್ ಕ್ಯಾನ್‍ಬ್ಯಾಂಕ್ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್/ಗಿಲ್ಟ್ ಸೆಕ್ಯೂರಿಟೀಸ್ ಟ್ರೇಡಿಂಗ್ ಕಾರ್ಪೊರೇಷನ್ ಲಿಮಿಟೆಡ್ ಕ್ಯಾನ್‍ಬ್ಯಾಂಕ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ ಕೆನರಾ ಬ್ಯಾಂಕು ತನ್ನದೇ ಆದ ಅಂತರಜಾಲ ತಾಣವನ್ನು ಹೊಂದಿದೆ. ತಾಣದ ವಿಳಾಸ : ತಿತಿತಿ.ಛಿಚಿಟಿbಚಿಟಿಞiಟಿಜiಚಿ.ಛಿom. ಅದರಲ್ಲಿ ಬ್ಯಾಂಕು ತನ್ನ ಬ್ಯಾಂಕಿನ ವ್ಯವಹಾರಗಳು, ಮಾರುಕಟ್ಟೆಯಲ್ಲಿರುವ ತನ್ನ ಠೇವಣಿ, ಸಾಲ-ಮುಂಗಡಗಳು, ವಿವಿಧ ಸೇವೆಗಳು ಮತ್ತು ಉತ್ಪನ್ನಗಳ ಬಗ್ಗೆ ವಿವರಗಳನ್ನು ನೀಡುತ್ತದೆ. ಹಲವಾರು ಪ್ರಚಲಿತ ಬ್ಯಾಂಕಿನ ವಿಷಯಗಳು, ವಿವಿಧ ಪ್ರಗತಿಗಳ ಅಂಕಿ-ಅಂಶಗಳು ಇಲ್ಲಿ ದೊರೆಯುತ್ತವೆ. ಅಲ್ಲದೆ ಕೆಲವು ಬ್ಯಾಂಕಿಂಗ್ ವ್ಯವಹಾರಗಳಿಗೆ ಬೇಕಾಗುವ ವಿವಿಧ ನಮೂನೆಗಳನ್ನು ಬ್ಯಾಂಕಿನ ಅಂತರಜಾಲತಾಣದಿಂದ ನೇರವಾಗಿ ಇಳಿಸಿಕೊಂಡು ಅದನ್ನೇ ಭರ್ತಿಮಾಡಿ ಸಂಬಂಧಪಟ್ಟ ಶಾಖೆ, ಕಛೇರಿಗಳಿಗೆ ಸಲ್ಲಿಸಬಹುದು. ಇದರಲ್ಲಿ ನೇರವಾಗಿ ಪತ್ರ ಬರೆಯಬಹುದು. ಏನೇ ದೂರುಗಳಿದ್ದರೂ ಇಲ್ಲಿನ ವಿಳಾಸಕ್ಕೆ ವಿದ್ಯುನ್ಮಾನ ಅಂಚೆ ಕಳಿಸಬಹುದು. ಇದಲ್ಲದೆ ಬ್ಯಾಂಕು 24 ಗಂಟೆಗಳೂ ಕಾರ್ಯ ನಿರ್ವಹಿಸುವ ಶುಲ್ಕ ರಹಿತ ದೂರವಾಣಿಯನ್ನು ಗ್ರಾಹಕರ ದೂರು ನಿವಾರಣಾ ಸೌಲಭ್ಯಕ್ಕಾಗಿಯೆ ವ್ಯವಸ್ಥೆ ಮಾಡಿದೆ.
ಒಟ್ಟಾರೆ ಕೆನರಾಬ್ಯಾಂಕು ದೇಶದ ಪ್ರಮುಖ ಬ್ಯಾಂಕುಗಳ ಪೈಕಿ ಒಂದಾಗಿ ಸಮಾಜಕ್ಕೆ ಆರ್ಥಿಕ ರಂಗಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಮುನ್ನಡೆದಿದೆ.