ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆನ್ಯೂಟ್

ವಿಕಿಸೋರ್ಸ್ದಿಂದ

ಕೆನ್ಯೂಟ್ ಡೆನ್ಮಾರ್ಕ್, ನಾರ್ವೇ ಮತ್ತು ಇಂಗ್ಲೆಂಡ್ ದೇಶಗಳ ದೊರೆ. ಡೆನ್ಮಾರ್ಕಿನ ದೊರೆಯಾಗಿದ್ದ ಸ್ವೇನನ ಮಗ. ಸ್ವೇನ್ ಇಂಗ್ಲೆಂಡಿನ ಮೇಲೆ ದಂಡೆತ್ತಿ ಹೋಗಿ ಅದನ್ನು ಗೆದ್ದು ಅಲ್ಲಿಯ ದೊರೆ 2ನೆಯ ಎತೆಲ್‍ರೆಡ್ಡನ್ನು ಓಡಿಸಿದ್ದ. 1014ರಲ್ಲಿ ಸ್ವೇನ್ ತೀರಿಕೊಂಡಾಗ ಎತೆಲ್‍ರೆಡ್ ಇಂಗ್ಲೆಂಡಿಗೆ ಹಿಂದಿರುಗಿದ. ಆದರೆ ತಂದೆಯ ಸ್ಥಾನದಲ್ಲಿ ಪಟ್ಟಕ್ಕೆ ಬಂದಿದ್ದ ಕೆನ್ಯೂಟ್ ಕೈಕಟ್ಟಿ ಕೂರಲಿಲ್ಲ. 1015ರಲ್ಲಿ ಆತ ಇಂಗ್ಲೆಂಡಿನ ಮೇಲೆ ಏರಿ ಹೋಗಿ, ಬಹುಭಾಗವನ್ನಾಕ್ರಮಿಸಿಕೊಂಡ.

ಕೆನ್ಯೂಟನಿಂದ ಸೋತಿದ್ದ ಎತೆಲ್‍ರೆಡ್ 1016ರಲ್ಲಿ ತೀರಿಕೊಂಡ ಮೇಲೆ ಅವನ ಮಗ ಎಡ್ಮಂಡ್ ಐರನ್‍ಸೈಡನೊಂದಿಗೆ ಕೆನ್ಯೂಟ್ ಹೋರಾಡಬೇಕಾಗಿ ಬಂತು. ಆಷಿಂಗ್‍ಟನ್‍ನಲ್ಲಿ ಎಡ್ಮಂಡ್ ಸೋತ. ಆಗ ಆದ ಒಪ್ಪಂದದ ಪ್ರಕಾರ ಅವರಿಬ್ಬರೂ ನಾಡನ್ನು ಹಂಚಿಕೊಂಡರು. ವೆಸೆಕ್ಸ್ ಪ್ರದೇಶ ಎಡ್ಮಂಡನಿಗೂ ಮರ್ಸಿಯ ಪ್ರದೇಶ ಕೆನ್ಯೂಟನಿಗೂ ಸೇರಿದುವು.

ಈ ಒಪ್ಪಂದ ಶಾಶ್ವತವಾಗಿ ಜಾರಿಯಲ್ಲಿರುವುದೆಂಬ ಸೂಚನೆಗಳೇನೂ ಇರಲಿಲ್ಲ. ಅಷ್ಟರಲ್ಲಿ ಎಡ್ಮಂಡ್ ಸತ್ತ. ಕೆನ್ಯೂಟನೇ ಅಖಿಲ ಇಂಗ್ಲೆಂಡಿನ ಪ್ರಭುವಾಗಲು ಯಾವ ತಡೆಯೂ ಉಳಿಯಲಿಲ್ಲ. ಎಡ್ಮಂಡನ ಮಕ್ಕಳು ಹಂಗರಿಗೆ ಓಡಿಹೋದರು. ಎತೆಲ್‍ರೆಡ್ಡನ ವಿಧವೆಯನ್ನು (ನಾರ್ಮಂಡಿಯ ಎಮ್ಮ) ಕೆನ್ಯೂಟ್ ಮದುವೆಯಾದ್ದರಿಂದ ಆ ಕಡೆಯಿಂದ ಬರಬಹುದಾಗಿದ್ದ ವಿರೋಧ ತಣ್ಣಗಾಯಿತು. ಇಂಗ್ಲೆಂಡನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಆತ ಅದರ ಆಡಳಿತದಲ್ಲಿ ಸುಧಾರಣೆಗಳನ್ನು ತಂದ. ಡೆನ್ಮಾರ್ಕಿನ ಮಾದರಿಯಲ್ಲಿ ಇಂಗ್ಲೆಂಡನ್ನೂ ಹಲವು ಅರ್ಲ್ ಪರಭುತ್ವಗಳಾಗಿ ವಿಂಗಡಿಸಿದ. ಡೆನ್ಮಾರ್ಕಿನಿಂದ ಕರೆತಂದಿದ್ದ ಸೈನಿಕರನ್ನು ಹಿಂದಕ್ಕೆ ಕಳುಹಿಸಿ ಸ್ಯಾಕ್ಸನರನ್ನು ಮುಖ್ಯ ಹುದ್ದೆಗಳಿಗೆ ನೇಮಿಸಲು ಆತ ಒಪ್ಪಿಕೊಂಡದ್ದರಿಂದ ಕೆನ್ಯೂಟಿನ ಜನಪ್ರಿಯತೆ ವರ್ಧಿಸಿತು. ಸ್ಯಾಕ್ಸನ್ ಶ್ರೀಮಂತರು ಅವನೊಂದಿಗೆ ನಾರ್ವೇ ಸ್ವೀಡನ್‍ಗಳ ದಂಡಯಾತ್ರೆಯಲ್ಲಿ ಭಾಗವಹಿಸಿದರು.

ಕೆನ್ಯೂಟನ ಆಳ್ವಿಕೆಯಲ್ಲಿ ಇಂಗ್ಲೆಂಡಿನ ವ್ಯಾಪಾರ ಅಧಿಕವಾಯಿತು. ಯೂರೋಪಿನೊಂದಿಗೆ ಸಾಂಸ್ಕøತಿಕ ಸಂಬಂಧ ಬೆಳೆಯಿತು. ಸಮಗ್ರವಾದ ನ್ಯಾಯ ಸಂಹಿತೆಯೊಂದು ರಚಿತವಾದ್ದು ಆತನ ಆಳ್ವಿಕೆಯ ಮುಖ್ಯ ವಿಕ್ರಮ. ಕೆನ್ಯೂಟ್ ದಯಾಮಯನಾದ ದೊರೆಯೆಂದು ಜನರ ನೆನಪಿನಲ್ಲಿ ಉಳಿದಿದ್ದಾನೆ. ಆದರೆ ಸ್ವಹಿತಸಾಧನೆಗಾಗಿ ಆತ ಅನೇಕ ಕ್ರೂರಕೃತ್ಯಗಳನ್ನು ಎಸಗಲು ಹಿಂದೆಗೆಯಲಿಲ್ಲ. ಅವನಿಂದ ಇಂಗ್ಲೆಂಡಿಗೆ ಅನೇಕ ಅನುಕೂಲಗಳೇನೋ ಲಭ್ಯವಾದುವು. ಆದರೆ ವಿದೇಶಗಳಲ್ಲಿ ಆತ ಇರಿಸಿದ್ದ ಹಲವಾರು ಸೈನಿಕ ಠಾಣ್ಯಗಳಿಗೂ ಅವನು ನಡೆಸಿದ ಅನೇಕ ಯುದ್ಧಗಳಿಗೂ ಇಂಗ್ಲೆಂಡಿನ ಪ್ರಜೆಗಳು ವಿಪರೀತವಾದ ತೆರಿಗೆಯ ಭಾರ ಹೊರಬೇಕಾಯಿತು. ತನ್ನ ಅನುಯಾಯಿಗಳಿಗೆ ಕೆನ್ಯೂಟ್ ಇಂಗ್ಲೆಂಡಿನ ನೆಲವನ್ನು ಧಾರಾಳವಾಗಿ ಉಂಬಳಿಯಾಗಿ ಕೊಟ್ಟ. ಈ ಬಗ್ಗೆ ಅನೇಕ ಉಲ್ಲೇಖಗಳಿವೆ.

ಕೆನ್ಯೂಟ್ 1018ರಲ್ಲಿ ಡೆನ್ಮಾರ್ಕಿಗೂ 1030ರಲ್ಲಿ ನಾರ್ವೇಗೂ ದೊರೆಯಾದ. 1035ರಲ್ಲಿ ಆತ ಮರಣ ಹೊಂದಿದಾಗ ಅವನ ಅನೌರಸ ಪುತ್ರ 1ನೆಯ ಹೆರಲ್ಡ್ ಸಿಂಹಾಸನವನ್ನೇರಿದ.

ಕೆನ್ಯೂಟ್ ತನ್ನ ಆಸ್ಥಾನದಲ್ಲಿ ಹೊಗಳುಭಟ್ಟರಿಗೆ ಛೀಮಾರಿ ಮಾಡಿದ ಪ್ರಸಂಗವೊಂದನ್ನು ಹಂಟಿಂಗ್ಟನಿನ ಹೆನ್ರಿ ಬಣ್ಣಿಸಿದ್ದಾನೆ. ಒಮ್ಮೆ ದೊರೆ ಸಮುದ್ರದಂಡೆಯ ಬಳಿ ಅಸೀನನಾಗಿದ್ದ. ಕಡಲತೆರೆ ಒಂದೇ ಸಮನೆ ಅವನ ಬಳಿಗೆ ಬರುತ್ತಿತ್ತು. ನೀವು ನನ್ನನ್ನು ದೊರೆಯೆಂದು ಕರೆಯುತ್ತೀರಿ. ಆದರೂ ಈ ಕಡಲಿನ ಆಕ್ರಮಣವನ್ನು ನಾನು ತಡೆಯಲಾರೆ ಎಂದು ದೊರೆ ಆ ಆಸ್ಥಾನಿಕರಿಗೆ ಹೇಳಿದನಂತೆ. ಅಖಿಲ ಇಂಗ್ಲೆಂಡನ್ನು ರೂಪಿಸಿ, ಆಳ್ವಿಕೆ ಸ್ಥಾಪಿಸಿದ ಮೊದಲನೆಯ ದೊರೆ ಕೆನ್ಯೂಟ್. ಇಂಗ್ಲಿಷ್ ಮತ್ತು ಡೇನ್ ಜನರ ಪ್ರೇಮವನ್ನು ಈತ ಸಂಪಾದಿಸಿದ್ದ. ನಾರ್ವೇಯನ್ನು ತನ್ನ ಆಳ್ವಿಕೆಗೆ ಸೇರಿಸುವ ಸಲುವಾಗಿ ಪಿತೂರಿಗಳನ್ನು ನಡೆಸಿ, ಯುದ್ಧ ಹೂಡಿ ಜಯಶಾಲಿಯಾದರೂ ಕೊನೆಗೂ ನಾರ್ವೇ ಇವನ ಕೈ ತಪ್ಪಿತು. ಚರ್ಚು, ಮಠ ಮೊದಲಾದ ಧಾರ್ಮಿಕ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿ ಜನತೆಗೋಸ್ಕರ ಉಪಯುಕ್ತ ಸುಧಾರಣೆಗಳನ್ನು ಮಾಡಿದ. ಕೆನ್ಯೂಟ್ ದಕ್ಷತೆಯಿಂದ ಹತ್ತೊಂಬತ್ತು ವರ್ಷ ರಾಜ್ಯವಾಳಿದ.

(ಎ.ಎಸ್.ಆರ್.ಎ.)