ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆರ್, ಜಾನ್
ಕೆರ್, ಜಾನ್ 1824-1907. ಬ್ರಿಟನ್ನಿನ ಭೌತವಿಜ್ಞಾನಿ. ಬೆಳಕು ಮತ್ತು ಸ್ಥಾಯೀ ವಿದ್ಯುತ್ ಕ್ಷೇತ್ರಗಳ ಪರಸ್ಪರ ಸಂಬಂಧವನ್ನು ಅನುಮಾನಿಸಿ ಮೊದಲು ಗುರುತಿಸಿದಾತ. ಸಾಮಾನ್ಯ ಗಾಜು, ಎಣ್ಣೆ ಮೊದಲಾದವು ಪಾರದರ್ಶಕಗಳಾಗಿದ್ದು ಬೆಳಕಿನ ಒಂದು ವರ್ಣದ ಒಂದು ಕಿರಣವನ್ನು ಒಂದೇ ನಿಶ್ಚಿರ ದಿಕ್ಕಿನಲ್ಲಿ ಹಾಯಗೊಡುತ್ತವೆ. ಆದರೆ ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ ಇಂಥ ಪಾರದರ್ಶಕ ವಸ್ತುಗಳನ್ನಿಟ್ಟರೆ ಮೇಲಿನ ಬೆಳಕಿನ ಕಿರಣ ಪೃಥಕ್ಕಾದ ಎರಡು ದಿಕ್ಕುಗಳಲ್ಲಿ ಚಲಿಸುತ್ತದೆ. ಇದನ್ನು ದ್ವಿರಿಫ್ರೇಕ್ಷಣ (ಡಬಲ್ ರಿಫ್ರಾಕ್ಷನ್) ಎನ್ನುತ್ತಾರೆ. ಕೆರ್ ಈ ವೈಚಿತ್ರ್ಯವನ್ನು 1875ರಲ್ಲಿ ತನ್ನ ಪ್ರಯೋಗಗಳ ಮೂಲಕ ತೋರಿಸಿದ. ಇದಕ್ಕೆ ಬೆಳಕಿನ ಕೆರ್ ಪರಿಣಾಮ ಎಂದು ಹೆಸರು. ಪರಸ್ಪರ ಲಂಬವಾದ ನಿಲುವುಳ್ಳ ಎರಡು ನಿಕ್ಕಲ್ ಆಶ್ರಯಗಳ ನಡುವೆ ನೈಟ್ರೋಬೆನ್ಜೀನನ್ನು ಇರಿಸಿ ಇದರ ಸುತ್ತಲೂ ಆವರ್ತಶೀಲ ವಿದ್ಯುತ್ ಕ್ಷೇತ್ರವನ್ನು ಉಂಟುಮಾಡಿದರೆ ಕಿರಣ ಬೆಳಕು ಕತ್ತಲುಗಳ ಕಣ್ಣು ಮುಚ್ಚಾಲೆಯಾಡುತ್ತದೆ. ಇದನ್ನು ಗಮನಿಸಿ ತಕ್ಕ ಅಳತೆಗಳಿಂದ ಬೆಳಕಿನ ವೇಗವನ್ನು ನಿರ್ಣಯಿಸಲಾಗಿದೆ (1926), ಮಾತ್ರವಲ್ಲದೆ ಕೆರ್ ಪರಿಣಾಮ ಕಾಂತಕ್ಷೇತ್ರ ಮತ್ತು ಬೆಳಕಿನ ಸಂಬಂಧದ ಪರಿಣಾಮವನ್ನು ಅನುಮಾನಿಸಲು ನೆರವಾಗಿದೆ.
(ಯು.ಎಲ್.ಎ.)