ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಶ್ಯಿಯೋಪಿಯ

ವಿಕಿಸೋರ್ಸ್ದಿಂದ

ಕೆಶ್ಯಿಯೋಪಿಯ

ಉತ್ತರಾಕಾಶದ ಒಂದು ಪ್ರಮುಖ ನಕ್ಷತ್ರ ಪುಂಜ. ಇದರ ವ್ಯಾಪ್ತಿ ಹೀಗಿದೆ: ಘಂಟಾವೃತ್ತಾಂಶ 47o-770 ಉ, ವಿಷುವದಂಶ 23 ಗಂ-3ಗಂ. 35 ಮಿ. ಬಹುಭಾಗ ಆಕಾಶಗಂಗೆಯಲ್ಲೇ ನೆಲೆಸಿದೆ. ಈ ಪುಂಜದಲ್ಲಿ 2ನೆಯ ಮತ್ತು 3ನೆಯ ಕಾಂತಿವರ್ಗಕ್ಕೆ ಸೇರಿದ 5 ನಕ್ಷತ್ರಗಳಿವೆ. ಇವು ಒಟ್ಟಾರೆ ಇಂಗ್ಲಿಷ್‍ನ ತಿ ಅಕ್ಷರದ ರೂಪವನ್ನು ಹೋಲುತ್ತವೆ. ಇದನ್ನು ಕೆಶ್ಯಿಯೋಪಿಯದ ಕುರ್ಚಿ (ಕೆಶ್ಯಿಯೋಪಿಯಾಸ್ ಚೇರ್) ಎಂದು ಕರೆಯುವುದುಂಟು. ಬರಿಕಣ್ಣಿನಿಂದ ಸುಲಭವಾಗಿ ಗುರುತಿಸಬಹುದಾದ ಪುಂಜವಿದು. ಧ್ರುವನಕ್ಷತ್ರದ ಇಕ್ಕೆಲಗಳಲ್ಲಿ (ಜ್ಯಾಮಿತೀಯ ವಿರುದ್ಧ ದಿಕ್ಕಿನಲ್ಲಿ) ಒಂದು ಕಡೆ ಕೆಶ್ಯಿಯೋಪಿಯ, ಮತ್ತೊಂದೆಡೆ ಸಪ್ತರ್ಷಿಮಂಡಲ ಇವೆ. ಮಧ್ಯೋತ್ತರ ಹಾಗೂ ಅದಕ್ಕಿಂತ ಹೆಚ್ಚಿನ ಉತ್ತರ ಅಕ್ಷಾಂಶಗಳಲ್ಲಿ ಈ ಪುಂಜ ಎಂದೂ ವೀಕ್ಷಕನ ಕ್ಷಿತಿಜದ ಕೆಳಗೆ ಹೋಗುವುದೇ ಇಲ್ಲ. ಇಲ್ಲಿನ ತಾರಾಗುಚ್ಛ ಮತ್ತು ಯಮಳಗಳು ಖಗೋಳಶಾಸ್ತ್ರದ ಹವ್ಯಾಸಿಗಳಿಗೆ ಒಳ್ಳೆಯ ದೃಶ್ಯವನ್ನೊದಗಿಸುತ್ತವೆ. ಡೇನಿಷ್ ಖಗೋಳಶಾಸ್ತ್ರಜÐನಾದ ಟೈಕೋಬ್ರಾಹೆ (1546-1601) ಈ ಪುಂಜದಲ್ಲಿ ಒಂದು ನೋವಾ ನಕ್ಷತ್ರವನ್ನು ಕಂಡುಕೊಂಡ (1572) ವರದಿ ಇದೆ. ಆದಕಾರಣ ಅದನ್ನು ಟೈಕೋ ನಕ್ಷತ್ರ ಎಂದು ಕರೆಯುವುದಿದೆ. ಶುಕ್ರಗ್ರಹದ ಪ್ರಕಾಶದಷ್ಟೇ ಪ್ರಕಾಶಮಾನವಾಗಿದ್ದ ಈ ತಾರೆ ಹಲವಾರು ತಿಂಗಳುಗಳವರೆಗೆ ಹಗಲು ಹೊತ್ತಿನಲ್ಲಿಯೂ ಕಾಣಿಸುತ್ತಿದ್ದು ಅನಂತರ ಅದರ ಪ್ರಕಾಶ ಮಂದವಾಯಿತೆಂದು ವರದಿ ಆಗಿದೆ. ಕೆಶ್ಯಿಯೋಪಿಯ ಪುಂಜದ ಸುತ್ತಮುತ್ತಲ ಪ್ರದೇಶದಲ್ಲಿ ಸಿಫಿಯಸ್, ಪರ್ಸಿಯಸ್, ಸಿಗ್ನಸ್, ಆರಿಗಾ, ಆಂಡ್ರೊಮಿಡ ಮುಂತಾದ ನಕ್ಷತ್ರ ಪುಂಜಗಳೂ ಪೆಗಾಸಸ್ ಮಹಾಚೌಕವೂ ಅಲ್ಗಾಲ್‍ನಂಥ ಪ್ರಮುಖ ನಕ್ಷತ್ರಗಳೂ ಕಾಣಸಿಗುತ್ತವೆ.

ಗ್ರೀಕ್ ಪುರಾಣದ ಪ್ರಕಾರ ಇಥಿಯೋಪಿಯದ ದೊರೆ ಸಿಫಿಯಸನ ಹೆಂಡತಿ ಕೆಶ್ಯಿಯೋಪಿಯ. ಇವರ ಮಗಳೇ ಆಂಡ್ರೊಮಿಡ. (ನೋಡಿ- ಆಂಡ್ರೊಮಿಡ) *