ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇನ್ಸ್ ಯೋಜನೆ
ಕೇನ್ಸ್ ಯೋಜನೆ
ಎರಡನೆಯ ಮಹಾಯುದ್ಧದ ಅನಂತರದಲ್ಲಿ ಅಂತರರಾಷ್ಟ್ರೀಯ ಹಣ ವ್ಯವಸ್ಥೆ ಹೇಗಿರಬೇಕೆಂಬ ವಿಚಾರವನ್ನು ಪರಿಶೀಲಿಸಲು ಅಮೆರಿಕ ಸಂಯುಕ್ತಸಂಸ್ಥಾನದ ಬ್ರೆಟನ್‍ವೂಡ್ಸ್‍ನಲ್ಲಿ 1944ರಲ್ಲಿ ಸೇರಿದ್ದ ತಜ್ಞರ ಸಮ್ಮೇಳನದಲ್ಲಿ ಬ್ರಿಟಿಷ್ ಸರ್ಕಾರದ ಪರವಾಗಿ ಜೆ.ಎಂ. ಕೇನ್ಸ್ ಮಂಡಿಸಿದ ಯೋಜನೆ (ಕೇನ್ಸ್ ಪ್ಲಾನ್). ಇದು ಕೇನ್ಸ್‍ನೇ ರಚಿಸಿದ್ದಾದ್ದಾರಿಂದ ಇದಕ್ಕೆ ಈ ಹೆಸರು ಬಂದಿದೆ. ಇದೇ ರೀತಿ ಅಮೆರಿಕ ಸಂಯುಕ್ತ ಸಂಸ್ಥಾನದ ಪರವಾಗಿ ಹ್ಯಾರಿ ಡೆಕ್ಸ್‍ಟರ್ ಹ್ವೈಟನಿಂದ ಯೋಜನೆ ಮಂಡಿತವಾಗಿತ್ತು. ಮತ್ತೆ ಕೆಲವು ರಾಷ್ಟ್ರಗಳೂ ತಂತಮ್ಮ ಯೋಜನೆಗಳನ್ನು ಮುಂದಿಟ್ಟಿದ್ದುವು. ಆದರೆ ಇವುಗಳಲ್ಲಿ ಕೇನ್ಸ್ ಮತ್ತು ಹ್ವೈಟ್ ಯೋಜನೆಗಳು ಪ್ರಸಿದ್ಧವಾದವು. ಅಂತರರಾಷ್ಟ್ರೀಯ ಧನ ನಿಧಿ ಸಂಸ್ಥೆ ರೂಪುಗೊಂಡಿದ್ದು ಈ ಸಮ್ಮೇಳನದ ಫಲ.
ಕೇನ್ಸ್ ಯೋಜನೆಯ ಪ್ರಮುಖ ಲಕ್ಷಣವೆಂದರೆ ಕೇಂದ್ರೀಯ ಬ್ಯಾಂಕಿನ ಲಕ್ಷಣವಿರುವ ಒಂದು ಅಂತರರಾಷ್ಟ್ರೀಯ ತೀರುವೆ ಒಕ್ಕೂಟದ (ಇಂಟರ್‍ನ್ಯಾಷನಲ್ ಕ್ಲಿಯರಿಂಗ್ ಯೂನಿಯನ್) ಸ್ಥಾಪನೆ. ಬ್ಯಾಂಕಾರ್ ಎಂಬ ಅಂತರರಾಷ್ಟ್ರೀಯ ನಾಣ್ಯಘಟಕ ಇದಕ್ಕೆ ಆಧಾರ. ಈ ಘಟಕದ ಮೌಲ್ಯ ಚಿನ್ನದ ಲೆಕ್ಕದಲ್ಲಿ ನಿಶ್ಚಿತವಾಗಿರುತ್ತದೆ. ಆದರೆ ಈ ಮೌಲ್ಯ ಎಂದೆಂದೂ ಬದಲಾಗಕೂಡದೆಂಬ ಕಡ್ಡಾಯವೇನೂ ಇಲ್ಲ. ಈ ನಾಣ್ಯಘಟಕ ಒಂದು ಪರಿಕಲ್ಪನೆ ಮಾತ್ರ. ವಾಸ್ತವವಾಗಿ ಇಂಥ ನಾಣ್ಯ ಚಲಾವಣೆಯಲ್ಲಿರುವುದಿಲ್ಲ. ಅಂತರರಾಷ್ಟ್ರೀಯ ಲೇಣೆ-ದೇಣೆಗಳನ್ನು ಚುಕ್ತಾ ಮಾಡುವುದರಲ್ಲಿ ಬ್ಯಾಂಕಾರ್‍ನ ನಿಶ್ಚಿತ ಸುವರ್ಣಮೌಲ್ಯವನ್ನು ಎಲ್ಲ ಸದಸ್ಯ ರಾಷ್ಟ್ರಗಳೂ ಒಪ್ಪಬೇಕು. ಸದಸ್ಯರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ಅಂತರರಾಷ್ಟ್ರೀಯ ತೀರುವೆ ಒಕ್ಕೂಟದಲ್ಲಿ ಲೆಕ್ಕಗಳನ್ನಿಟ್ಟಿರುತ್ತದೆ. ಅಂತರರಾಷ್ಟ್ರೀಯ ತೀರುವೆ ಒಕ್ಕೂಟಕ್ಕೆ ಚಂದಾ ಎತ್ತಿದ ಬಂಡವಾಳ ಇರುವುದಿಲ್ಲ. ಆದರೆ ಸದಸ್ಯ ರಾಷ್ಟ್ರಗಳ ಅಂತರರಾಷ್ಟ್ರೀಯ ವ್ಯಾಪಾರದ ಪರಿಮಾಣಕ್ಕೆ ಅನುಗುಣವಾಗಿ ಅವಕ್ಕೆ ಒಕ್ಕೂಟದಿಂದ ಮೀರೆಳೆತದ (ಓವರ್‍ಡ್ರಾಫ್ಟ್) ಸೌಲಭ್ಯ ನೀಡಲಾಗಿರುತ್ತದೆ. ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಒಂದು ಸದಸ್ಯರಾಷ್ಟ್ರ ಇತರ ರಾಷ್ಟ್ರಗಳಿಗೆ ಪಾವತಿ ಮಾಡಬೇಕಾದ್ದಕ್ಕಿಂತ ಇತರ ರಾಷ್ಟ್ರಗಳು ಆ ರಾಷ್ಟ್ರಕ್ಕೆ ಪಾವತಿ ಮಾಡಬೇಕಾದ್ದು ಹೆಚ್ಚಾಗಿದ್ದಾಗ ಆ ಹೆಚ್ಚುವರಿ ಆ ರಾಷ್ಟ್ರದ ಲೆಕ್ಕಕ್ಕೆ ಧನಿಕೆಯಾಗುತ್ತದೆ (ಕ್ರೆಡಿಟ್). ವರ್ಷೇವರ್ಷೇ ಈ ಹೆಚ್ಚುವರಿ ಸ್ಥಿತಿಯೇ ಇದ್ದರೆ ಅದರ ಧನಿಕೆ ಶಿಲ್ಕು ಅಧಿಕವಾಗುತ್ತಿರುತ್ತದೆ. ಮತ್ತೊಂದು ರಾಷ್ಟ್ರದ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಪಾವತಿ ಕೊರತೆ ಸಂಭವಿಸುತ್ತಿದ್ದರೆ ಅದರ ಅಂತರರಾಷ್ಟ್ರೀಯ ತೀರುವೆ ಒಕ್ಕೂಟದಲ್ಲಿ ಅದರ ಲೆಕ್ಕಕ್ಕೆ ಋಣಿಕೆಯಾಗುತ್ತಿರುತ್ತದೆ (ಡೆಬಿಟ್), ಋಣಿಕೆ ಧನಿಕೆ ಶಿಲ್ಕುಗಳೆರಡರ ಮೇಲೂ ಬಡ್ಡಿಯ ಲೆಕ್ಕಾಚಾರವುಂಟು. ಅಂತರರಾಷ್ಟ್ರೀಯ ತೀರುವೆ ಒಕ್ಕೂಟ ಒಂದು ಸಂವೃತ ವ್ಯವಸ್ಥೆ. ಇದರ ಹೊರಗಡೆ ಯಾವ ರಾಷ್ಟ್ರವೂ ಇನ್ನೊಂದು ರಾಷ್ಟ್ರಕ್ಕೆ ಪಾವತಿ ಮಾಡುವ ಹಾಗಿಲ್ಲ. ಬ್ಯಾಂಕಾರ್ ಎಂಬುದು ಲೆಕ್ಕದ ನಾಣ್ಯ ಘಟಕ ಮಾತ್ರ. ಬ್ಯಾಂಕಾರನ್ನು ಇನ್ನೊಂದು ನಾಣ್ಯಕ್ಕೆ ಅಥವಾ ಚಿನ್ನಕ್ಕೆ ಪರಿವರ್ತಿಸುವಂತಿಲ್ಲ. ಸದಸ್ಯ ರಾಷ್ಟ್ರಗಳಲ್ಲಿ ಕೆಲವಕ್ಕೆ ಧನಿಕೆ ಶಿಲ್ಕು ಇದ್ದರೆ ಇನ್ನು ಕೆಲವಕ್ಕೆ ಋಣಿಕೆ ಶಿಲ್ಕು ಇರುತ್ತದೆ. ಎಲ್ಲ ಋಣಿಕೆ ಶಿಲ್ಕುಗಳ ಮೊತ್ತ ಎಲ್ಲ ಧನಿಕೆ ಶಿಲ್ಕುಗಳ ಮೊತ್ತಕ್ಕೆ ಸಮನಾಗಿಯೇ ಇರುತ್ತದೆ. ಆದ್ದರಿಂದ ಸದಸ್ಯರಾಷ್ಟ್ರಗಳಿಗೆ ನಿಗದಿಯಾದ ಹಸುಗೆಯ (ಕೋಟಾ) ಮಿತಿಯಲ್ಲಿ ಅವುಗಳ ಉದ್ದರಿ ಅಗತ್ಯಗಳನ್ನು ಪೂರೈಸುವುದಕ್ಕೆ ತೊಂದರೆಯಾಗದು. ಪ್ರಾರಂಭದಲ್ಲಿ ಸದಸ್ಯರಾಷ್ಟ್ರಗಳು ಬ್ಯಾಂಕಾರಿನ ಲೆಕ್ಕದಲ್ಲಿ ತಂತಮ್ಮ ನಾಣ್ಯಗಳ ಸಮಮೌಲ್ಯಗಳನ್ನು (ಪಾರ್ ವ್ಯಾಲ್ಯೂ) ನಿರ್ಧರಿಸಿಕೊಳ್ಳಬೇಕು. ಅನಂತರ ಅವುಗಳಲ್ಲಿ ಬದಲಾವಣೆ ಆಗಬೇಕಾದರೆ ಅದಕ್ಕೆ ಅಂತರರಾಷ್ಟ್ರೀಯ ತೀರುವೆ ಒಕ್ಕೂಟದ ಒಪ್ಪಿಗೆ ಅಗತ್ಯ. ಒಂದು ಸದಸ್ಯರಾಷ್ಟ್ರ ಸತತವಾಗಿ ಕೊರತೆಯ ಪರಿಸ್ಥಿತಿಯನ್ನೇ ಎದುರಿಸಬೇಕಾದರೆ ಅದರ ನಾಣ್ಯದ ಮೌಲ್ಯ ದೃಢವಾಗಿಲ್ಲವೆಂದು ಅರ್ಥ. ಆ ಸದಸ್ಯರಾಷ್ಟ್ರದ ನಾಣ್ಯದ ಮೌಲ್ಯಛೇದನ (ಡೀವ್ಯಾಲ್ಯೂ) ಆಗಬೇಕೆಂದು ಅದಕ್ಕೆ ಒಕ್ಕೂಟ ಸೂಚನೆ ನೀಡಬಹುದು. ಅದು ಒಕ್ಕೂಟಕ್ಕೆ ಕೊಡಬೇಕಾದ ಋಣದಲ್ಲಿ ಒಂದು ಭಾಗವನ್ನು ತನ್ನ ಸ್ವಂತ ಚಿನ್ನ ಮತ್ತು ವಿದೇಶಿ ವಿನಿಮಯ ಸಂಚಿತಿಯಿಂದ ಪಾವತಿ ಮಾಡಬೇಕೆಂದೂ ಕೇಳಬಹುದು. ಇದು ಸ್ಥೂಲವಾಗಿ ಕೇನ್ಸ್ ಯೋಜನೆಯ ಪ್ರಕಾರ ಅಂತರರಾಷ್ಟ್ರೀಯ ಹಣವ್ಯವಸ್ಥೆಯ ಕಾರ್ಯವಿಧಾನ.
ಒಂದು ರಾಷ್ಟ್ರದೊಳಗೆ ವಾಣಿಜ್ಯ ಬ್ಯಾಂಕುಗಳ ನಡುವೆ ಪರಸ್ಪರ ಚೆಕ್ಕು ತೀರುವೆಗೆ ಯಾವ ವ್ಯವಸ್ಥೆಯನ್ನಳವಡಿಸಲಾಗಿರುತ್ತದೆಯೋ ಅದೇ ರೀತಿ ಅಂತರರಾಷ್ಟ್ರೀಯ ತೀರುವೆ ಒಕ್ಕೂಟವೂ ಕೆಲಸ ಮಾಡುವುದಾದರೂ ಇದರಲ್ಲೊಂದು ವ್ಯತ್ಯಾಸವುಂಟು. ಬ್ಯಾಂಕುಗಳ ನಡುವೆ ಆಯಾ ದೇಶಗಳ ನಾಣ್ಯಗಳ ಲೆಕ್ಕದಲ್ಲಿ ಶಿಲ್ಕು ಬದಲಾವಣೆ ಆಗುತ್ತದೆ. ಅಂತರರಾಷ್ಟ್ರೀಯ ಒಕ್ಕೂಟದಲ್ಲಿ ಬ್ಯಾಂಕಾರ್‍ಗಳ ವರ್ಗಾವಣೆಯಾಗುತ್ತದೆ. ಪಾವತಿ ಶಿಲ್ಕಿನಲ್ಲಿ ಹೆಚ್ಚುವರಿ ಇರುವ ದೇಶದ ಬ್ಯಾಂಕಾರ್ ಠೇವಣಿ ಅಂತರರಾಷ್ಟ್ರೀಯ ತೀರುವೆ ಒಕ್ಕೂಟದಲ್ಲಿ ಶೇಖರವಾಗುತ್ತ ಹೋಗುತ್ತದೆ. ಪಾವತಿ ಶಿಲ್ಕಿನಲ್ಲಿ ಕೊರತೆ ಇರುವ ದೇಶದ ಬ್ಯಾಂಕಾರ್ ಠೇವಣಿ ಕಡಿಮೆಯಾಗುತ್ತ ಹೋಗಿ ಅನಂತರ ಏನೂ ಇಲ್ಲದಂತಾಗಿ, ಕೊನೆಗೆ ತೀರುವೆ ಒಕ್ಕೂಟಕ್ಕೆ ಸಾಲಗಾರ ದೇಶವಾಗುತ್ತದೆ.
ಸದಸ್ಯರಾಷ್ಟ್ರಗಳಿಗೆ ಮೊದಲು ಬ್ಯಾಂಕಾರ್ ಹಣವನ್ನು ಒಕ್ಕೂಟ ಹಂಚುವಾಗ ಆಯಾ ದೇಶದ ಹಿಂದಿನ ಆಮದು-ರಫ್ತು ವ್ಯಾಪಾರಗಳ ಮೌಲ್ಯವನ್ನು ಆಧಾರವಾಗಿಟ್ಟುಕೊಂಡಿರುತ್ತದೆ. ಆಮೇಲೆ ಪ್ರತಿವರ್ಷವೂ ಬ್ಯಾಂಕಾರ್ ಹಂಚಿಕೆ ಮಾಡುವಾಗ ಪುನ: ಪರಿಶೀಲನೆ ಮಾಡಲಾಗುವುದು. ವಾಸ್ತವಿಕವಾಗಿ ಹಂಚಿರುವ ಬ್ಯಾಂಕಾರ್‍ಗಳಿಗಿಂತ ಹೆಚ್ಚಿಗೆ ಶೇಖರಿಸಿದಲ್ಲಿ ಅಥವಾ ಎಲ್ಲವನ್ನೂ ವ್ಯಯಮಾಡಿ ಋಣೋದ್ಭವವಾಗಿದ್ದಲ್ಲಿ ದೇಶಗಳು ತೀರುವೆ ಒಕ್ಕೂಟದ ನಿಯಮವನ್ನು ಮುರಿದಿದ್ದಕ್ಕಾಗಿ ಜುಲ್ಮಾನೆ ಕೊಡಬೇಕಾಗುತ್ತದೆ. ಅಂದರೆ ಪಾವತಿ ಶಿಲ್ಕಿನಲ್ಲಿ ಹೆಚ್ಚುವರಿ ಇರುವ ಒಂದು ರಾಷ್ಟ್ರ ತನ್ನ ಪಾಲಿನ ಬ್ಯಾಂಕಾರ್‍ಗಳಿಗಿಂತ ಶೇಕಡಾ 25ಕ್ಕಿಂತ ಹೆಚ್ಚಿಗೆ ಶೇಖರಿಸಿದಲ್ಲಿ, ಆ ರಾಷ್ಟ್ರ ಹೆಚ್ಚಿನ ಶೇಖರಣೆಗೆ ಶೇ. ಒಂದು ಬ್ಯಾಂಕಾರನ್ನು ಶೇ.50ಕ್ಕಿಂತ ಹೆಚ್ಚಿಗೆ ಶೇಖರಿಸಿದಲ್ಲಿ ತೀರುವೆ ಒಕ್ಕೂಟಕ್ಕೆ ಸೇ. 2 ಬ್ಯಾಂಕಾರ್‍ಗಳನ್ನು ಜುಲ್ಮಾನೆ ಕೊಡಬೇಕಾಗುತ್ತದೆ. ಅದೇ ರೀತಿ ಪಾವತಿ ಶಿಲ್ಕಿನಲ್ಲಿ ಕೊರತೆ ಇರುವ ದೇಶ ತನ್ನ ಪಾಲಿಗೆ ಬಂದಿದ್ದ ಎಲ್ಲ ಬ್ಯಾಂಕಾರ್‍ಗಳನ್ನು ಖರ್ಚುಮಾಡಿ ಸಾಲಗಾರ ದೇಶವಾದಾಗಲೂ ಮೇಲೆ ಹೇಳಿದಂತೆಯೇ ಜುಲ್ಮಾನೆ ತೆರಬೇಕಾಗುತ್ತದೆ. ಈ ರೀತಿ ಕೇನ್ಸ್ ಯೋಜನೆಯಲ್ಲಿ ಪಾವತಿಶಿಲ್ಕಿನಲ್ಲಿ ಹೆಚ್ಚುವರಿ ಇರುವ ದೇಶಗಳಿಗೂ ತಂತಮ್ಮ ಅಂತರರಾಷ್ಟ್ರೀಯ ಪಾವತಿಶಿಲ್ಕು ವಿಷಯದಲ್ಲಿ ಹೊಂದಾವಣೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡುತ್ತದೆ. ಪಾವತಿ ಶಿಲ್ಕಿನಲ್ಲಿ ಕೊರತೆ ಇರುವ ರಾಷ್ಟ್ರಗಳು ತಮ್ಮ ಪಾಲಿನ ಬ್ಯಾಂಕಾರ್‍ಗಳನ್ನು ಖರ್ಚುಮಾಡಿ, ತಮ್ಮ ಪಾಲಿನ ಸೇ.50ರಷ್ಟಕ್ಕಿಂತ ಹೆಚ್ಚು ಬ್ಯಾಂಕಾರ್‍ಗಳನ್ನು ಉದ್ಧರಿ ಪಡೆಯಲು ಬಯಸಿದರೆ ಈ ರಾಷ್ಟ್ರಗಳ ಮೀರೆಳೆತಕ್ಕೆ ಚಿನ್ನ, ವಿದೇಶಿ ವಿನಿಮಯ ಅಥವಾ ಬಾಂಡ್‍ಗಳನ್ನು ತೀರುವೆ ಒಕ್ಕೂಟಕ್ಕೆ ಆಧಾರವಾಗಿ ಕೊಡಬೇಕಾಗುತ್ತದೆ; ಕೊರತೆ ಇರುವ ರಾಷ್ಟ್ರದ ದ್ರವತೆಯ (ಲಿಕ್ವಿಡಿಟಿ) ಆವಶ್ಯಕತೆ ಹೆಚ್ಚಾದಾಗ ತೀರುವೆ ಒಕ್ಕೂಟದಿಂದ ಮೀರೆಳೆತದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉದ್ದರಿ ಪಡೆಯಬಹುದು. ಮತ್ತೊಂದು ಗಮನಾರ್ಹ ವಿಷಯವೇನೆಂದರೆ, ಬಂಡವಾಳದ ಸಂಚಾರದಿಂದಲೂ ಪಾವತಿ ಶಿಲ್ಕಿನ ಹೊಂದಾವಣೆ ಮಾಡಿಕೊಳ್ಳಲು ಈ ಯೋಜನೆ ಅವಕಾಶ ನೀಡಿ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬಂಡವಾಳ ಸಂಚಾರಕ್ಕೆ ಪ್ರೋತ್ಸಾಹ ನೀಡುತ್ತದೆ. ಪಾವತಿ ಶಿಲ್ಕಿನಲ್ಲಿ ಹೆಚ್ಚುವರಿ ಇರುವ ರಾಷ್ಟ್ರವಾಗಲಿ, ಕೊರತೆ ಇರುವ ದೇಶವಾಗಲಿ, ಒಕ್ಕೂಟಕ್ಕೆ ಜುಲ್ಮಾನೆ ತೆರುವುದನ್ನು ತಪ್ಪಿಸಿಕೊಳ್ಳಬೇಕಾದರೆ ಉಳಿದಿರುವ ಒಂದೇ ಮಾರ್ಗವೆಂದರೆ, ಕೊರತೆ ಇರುವ ರಾಷ್ಟ್ರ ಹೆಚ್ಚುವರಿ ಇರುವ ರಾಷ್ಟ್ರದಿಂದ ಸಾಲ ಪಡೆಯುವುದು. ಅದೇ ರೀತಿ ಹೆಚ್ಚುವರಿ ಇರುವ ರಾಷ್ಟ್ರ ಕೊರತೆ ಇರುವ ರಾಷ್ಟ್ರಕ್ಕೆ ಸಾಲ ನೀಡುವುದು.
ಪಾವತಿ ಶಿಲ್ಕಿನಲ್ಲಿ ಕೊರತೆ ಇರುವ ದೇಶಗಳು ಒಂದೇ ಸಮನೆ ಬ್ಯಾಂಕಾರ್‍ಗಳನ್ನು ಪಡೆಯುತ್ತಿದ್ದು ಅವು ಭಾರಿ ಋಣಿ ರಾಷ್ಟ್ರಗಳಾದಾಗ ಆ ರಾಷ್ಟ್ರಗಳು ತಮ್ಮ ವಿನಿಮಯದವರನ್ನು ಬದಲಾಯಿಸಬೇಕು. ಬಂಡವಾಳ ಸಂಚಾರದ ನಿಯಂತ್ರಣಕ್ಕೆ ಒಡಂಬಡಬೇಕು; ತೀರುವೆ ಒಕ್ಕೂಟಕ್ಕೆ ಕೊಡಬೇಕಾದ ಋಣದ ಒಂದು ಭಾಗಕ್ಕೆ ಚಿನ್ನ ಕೊಡಬೇಕು; ಅಥವಾ ವಿದೇಶಿ ವಿನಿಮಯ ಕೊಡಬೇಕು-ಎಂದು ಒಕ್ಕೂಟ ತೀರ್ಮಾನಿಸುತ್ತದೆಯಷ್ಟೆ. ಈ ಋಣದ ಒಂದು ಮಿತಿಯನ್ನು ಮೀರಿದರೆ, ಒಕ್ಕೂಟ ಮತ್ತೆ ಅಂಥ ರಾಷ್ಟ್ರಕ್ಕೆ ಉದ್ದರಿ ಒದಗಿಸುವುದನ್ನು ನಿಲ್ಲಿಸುತ್ತದೆ. ಇದೇ ರೀತಿ ಪಾವತಿ ಶಿಲ್ಕನಲ್ಲಿ ಹೆಚ್ಚುವರಿ ಇರುವ ದೇಶಗಳು ತಮ್ಮ ಪಾಲಿಗಿರುವ ಬ್ಯಾಂಕಾರ್‍ಗಳಿಗಿಂತ ಹೆಚ್ಚಾಗಿ ಶೇಖರಣೆ ಮಾಡುತ್ತ ಹೋದಲ್ಲಿ ಒಕ್ಕೂಟ ಆ ದೇಶಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಸದಸ್ಯರಾಷ್ಟ್ರಗಳ ವಿನಿಮಯ ಹೊಂದಾವಣೆಯ ವಿಷಯದಲ್ಲಿ ದೇಶದಲ್ಲಿ ಹಣದುಬ್ಬರ ಮತ್ತು ಹಣದ ಇಳಿತಾಯಗಳನ್ನು ಹೊರಿಸುವ ವಿಷಂiÀiದಲ್ಲಿ ಮತ್ತು ಹಣ ಪಾವತಿ ವಿಷಯದಲ್ಲಿ ಬಿಗಿಯಾದ ಆಚರಣೆಗೆ ಅಪ್ಪಣೆ ಕೊಡುವ ಅಧಿಕಾರ ತೀರುವೆ ಒಕ್ಕೂಟಕ್ಕೆ ಇರುತ್ತದೆ. ಆದರೆ ಈ ಅಧಿಕಾರ ಪಾವತಿಶಿಲ್ಕಿನಲ್ಲಿ ಕೊರತೆ ಇರುವ ರಾಷ್ಟ್ರಗಳಿಗೂ ಹೆಚ್ಚುವರಿ ಇರುವ ರಾಷ್ಟ್ರಗಳಿಗೂ ಒಂದೇ ರೀತಿ ಅನ್ವಯವಾಗುತ್ತದೆ.
ಆವಶ್ಯಕತೆ ಬಂದ ಹಾಗೆ ಒಟ್ಟು ಅಂತರರಾಷ್ಟ್ರೀಯ ದ್ರವತಾ ಮಟ್ಟವನ್ನು ಮೇಲಕ್ಕಾಗಲಿ ಕೆಳಕ್ಕಾಗಲಿ ಹೊಂದಾವಣೆ ಮಾಡಬಹುದು. ಸದಸ್ಯರಾಷ್ಟ್ರಗಳ ಬ್ಯಾಂಕಾರ್ ಪಾಲನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಬದಲಾವಣೆ ಮಾಡುವುದರ ಮೂಲಕ ಇದು ಸಾಧ್ಯವಾಗುತ್ತದೆ. ಪ್ರಪಂಚದಲ್ಲಿ ಹಣದ ಉಬ್ಬರ ಹೆಚ್ಚುತ್ತಿದೆ ಎಂದು ಕಂಡಾಗ ಸದಸ್ಯರಾಷ್ಟ್ರಗಳ ಬ್ಯಾಂಕಾರ್ ಹಸುಗೆಗಳನ್ನು ಕಡಿಮೆ ಮಾಡಬಹುದು; ಅಥವಾ ಹಣದ ಇಳಿತ ಪರಿಸ್ಥಿತಿ ಒದಗಿದಾಗ ಬ್ಯಾಂಕಾರ್ ಹಸುಗೆಗೆಳನ್ನು ಹೆಚ್ಚಿಸಬಹುದು.
ಕೇನ್ಸ್ ಯೋಜನೆಯಲ್ಲಿ ಚಿನ್ನಕ್ಕೂ ಪಾತ್ರವುಂಟು. ಅಂತರರಾಷ್ಟ್ರೀಯ ಪಾವತಿ ಶಿಲ್ಕಿನ ಕೊರತೆಯನ್ನು ಸರಿಪಡಿಸಲು ಬ್ಯಾಂಕಾರ್‍ಗಳೇ ಸಾಕಾಗಿದ್ದರೂ, ರಾಷ್ಟ್ರಗಳು ಚಿನ್ನದ ಮೂಲಕವೂ ಪಾವತಿ ಶಿಲ್ಕಿನ ಕೊರತೆಯನ್ನು ಹೊಂದಾವಣೆ ಮಾಡಿಕೊಳ್ಳಲು ಒಪ್ಪಿಕೊಳ್ಳುತ್ತವೆ. ತೀರುವೆ ಒಕ್ಕೂಟ ಒಂದು ನಿರ್ದಿಷ್ಟ ಬೆಲೆಯಲ್ಲಿ ಬ್ಯಾಂಕಾರ್‍ಗಳನ್ನು ಕೊಟ್ಟು ಚಿನ್ನವನ್ನು ಕಂಡುಕೊಳ್ಳುತ್ತದೆ. ಆದರೆ ಈ ಒಕ್ಕೂಟ ಬ್ಯಾಂಕಾರ್‍ಗಳನ್ನು ತೆಗೆದುಕೊಂಡು ಚಿನ್ನವನ್ನು ಮಾರಬೇಕೆಂಬ ಕಡ್ಡಾಯವಿಲ್ಲ. ಈ ರೀತಿ ಬ್ಯಾಂಕಾರ್ ಮತ್ತು ಚಿನ್ನಗಳ ಪರಿವರ್ತನೆಯನ್ನು ಏಕಮುಖಗೊಳಿಸಬೇಕೆಂಬುದು ಒಂದು ದಿಟ್ಟ ಹೆಜ್ಜೆ. ಅಂತರರಾಷ್ಟ್ರೀಯ ಪಾವತಿ ಪದ್ಧತಿಗೆ ಅಡಿಪಾಯವಾದ ಚಿನ್ನವನ್ನು ಕ್ರಮೇಣ ತೆಗೆದುಹಾಕಲು ಇದು ಪ್ರಥಮ ಕ್ರಮ.
ಅಂದರೆ ಕೇನ್ಸ್ ಯೋಜನೆ ಅಲ್ಪಾವಧಿಯಲ್ಲಿ ವಿನಿಮಯ ದರದ ಅಪುಟಿತತೆಯನ್ನೂ, ದೀರ್ಘಾವಧಿಯಲ್ಲಿ ವಿನಿಮಯ ದರದ ಪುಟಿತತೆಯನ್ನೂ ಸ್ಥಾಪಿಸುತ್ತದೆ. ಹೊಸದಾಗಿ ಸೃಷ್ಟಿಮಾಡುವ ಬ್ಯಾಂಕಾರ್ ನಾಣ್ಯ ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಕನಿಷ್ಠ ಪಕ್ಷ ಅರ್ಧಕ್ಕಾದರೂ ಚಿನ್ನದ ಬಳಕೆಯನ್ನು ಕಡಿಮೆ ಮಾಡುತ್ತದೆ. ಕೇನ್ಸ್ ಯೋಜನೆಯಲ್ಲಿ ಉದ್ದರಿ ನಿರ್ಮಾಣ ನಿಯಮಗಳು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ದ್ರವತೆಯನ್ನು ಸ್ವಯಮೇವ ಹೆಚ್ಚಿಸುತ್ತದೆ. ಈ ಯೋಜನೆಯಲ್ಲಿ ಹೊಂದಾವಣೆಯ ವಿಷಯದಲ್ಲಿ ವಿಧಿಸಲಾಗಿರುವ ನಿಯಮಗಳು ಪಾವತಿ ಶಿಲ್ಕಿನಲ್ಲಿ ಕೊರತೆ ಇರುವ ರಾಷ್ಟ್ರಗಳಿಗೂ ಹೆಚ್ಚುವರಿ ಇರುವ ರಾಷ್ಟ್ರಗಳಿಗೂ ಒಂದೇ ರೀತಿ ಅನ್ವಯಿಸುತ್ತವೆ. ಈಗಿರುವ ವ್ಯವಸ್ಥೆಯಲ್ಲಿ ಕೊರತೆ ಇರುವ ರಾಷ್ಟ್ರ ಹೊಂದಾವಣೆಯ ವಿಷಯದಲ್ಲಿ ಪೂರ್ಣ ಜವಾಬ್ದಾರಿಯನ್ನು ಹೊರಬೇಕೆಂದು ಅಧ್ಯಾಹೃತವಾಗಿರುತ್ತದೆ. ಕೇನ್ಸ್ ಯೋಜನೆಯಲ್ಲಿ, ಕೊರತೆ ರಾಷ್ಟ್ರಗಳಿಗೆ ಈ ಹಣದ ಇಳಿತಾಯ ನೀತಿಯ ಪ್ರೇರಣೆಯ ಆವಶ್ಯಕತೆ ಇರುವುದಿಲ್ಲ.
ಒಟ್ಟಿನಲ್ಲಿ ಕೇನ್ಸ್ ಯೋಜನೆ ಅನೇಕ ಆಕರ್ಷಕ ಗುಣಲಕ್ಷಣಗಳಿಂದ ಕೂಡಿದೆ. ಅದರ ವ್ಯಾಪ್ತಿ ಬಹಳ ಮಿತಿಯುಳ್ಳದ್ದು. ಒಂದು ಅಂತರರಾಷ್ಟ್ರೀಯ ತೀರುವೆ ಒಕ್ಕೂಟದ ಸ್ಥಾಪನೆ, ಅಂತರರಾಷ್ಟ್ರೀಯ ನಾಣ್ಯವಾಗಿ ಬ್ಯಾಂಕಾರಿನ ಸೃಷ್ಟಿ, ಇವು ಅದರ ಎರಡು ಮುಖ್ಯ ಸೂಚನೆಗಳು. ಅಷ್ಟರಮಟ್ಟಿಗೆ ಈ ಯೋಜನೆ ಒಂದು ವಿಶ್ವ ಕೇಂದ್ರೀಯ ಬ್ಯಾಂಕಿನ ಕಡೆಗೆ ನಡೆಯುತ್ತದೆ. ಆದರೆ ಪರಿಪೂರ್ಣವಾದ ವಿಶ್ವ ಕೇಂದ್ರೀಯ ಬ್ಯಾಂಕನ್ನು ಸೃಷ್ಟಿಸುವುದಕ್ಕಾಗಲಿ ಪ್ರಪಂಚದ ಹಣ ನೀತಿಗಳನ್ನು ಪರಸ್ಪರ ಸರಿ ಹೊಂದಿಸುವ ಗೋಜಿಗಾಗಲಿ ಇದು ಹೋಗುವುದಿಲ್ಲ. ಕೇನ್ಸ್ ಯೋಜನೆ ಒಂದು ದೃಢವಾದ ಉದ್ದರಿ ಯೋಜನೆ. ಇದು ಹೊಂದಾವಣೆಯ ಮತ್ತು ಬಂಡವಾಳ ಸಂಚಾರದ ಪಾತ್ರವನ್ನು ಅಡಕವಾಗಿಯಾದರೂ ಒತ್ತಿ ಹೇಳುತ್ತದೆ. ಆದರೂ ಕೇನ್ಸ್ ಯೋಜನೆಯಲ್ಲಿ ಕೆಲವು ದೋಷಗಳುಂಟು. ಉದಾಹರಣೆಗೆ, ಅಂತರರಾಷ್ಟ್ರೀಯ ವ್ಯವಹಾರಗಳ ಆಯವ್ಯಯದ ಲೆಕ್ಕಗಳನ್ನು ಸಮತೋಲನದಲ್ಲಿಡುವುದು ಸಾಧ್ಯವೆಂಬ ನಂಬಿಕೆ ತುಂಬ ಆಶಾದಾಯಕವಾದ್ದು. ಕೇನ್ಸ್ ಯೋಜನೆ ಪರಿಪೂರ್ಣ ಹಂತವನ್ನು ಮುಟ್ಟಿದಾಗ ಎಲ್ಲ ರಾಷ್ಟ್ರಗಳ ಅಂತರರಾಷ್ಟ್ರೀಯ ಆಯವ್ಯಯಗಳ ಲೆಕ್ಕದಲ್ಲಿ ಸಮತೋಲ ಸಾಧಿತವಾಗುತ್ತದೆ. ಆದ್ದರಿಂದ ಅಂತರರಾಷ್ಟ್ರೀಯ ದ್ರವತೆಯ ಆವಶ್ಯಕತೆ ಒದಗುವುದಿಲ್ಲವೆನ್ನಬಹುದು. ಆದರೆ ಪ್ರಕೃತ ಪ್ರಪಂಚದ ಸ್ಥಿತಿಗತಿಗಳನ್ನು ನೋಡಿದರೆ ಇದು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಕೊನೆಯದಾಗಿ, ಕೇನ್ಸ್ ಯೋಜನೆ ಆ ಕಾಲಕ್ಕೆ ಬಹಳ ಮುಂದುವರಿದ ಮತ್ತು ತಜ್ಞರ ಚಿಂತನೆಯನ್ನು ಇನ್ನಷ್ಟು ಕೆರಳಿಸುವಂಥ ಯೋಜನೆಯಾಗಿತ್ತು. ಇದು ಸುವರ್ಣ ಪ್ರಮಿತಿ ಪದ್ಧತಿಯನ್ನು ಅನುಸರಿಸುವುದನ್ನು ಬಿಟ್ಟು ಹೊಸ ಮಾರ್ಗ ಅನುಸರಿಸಲು ಮಾಡಿದ ಪ್ರಯತ್ನ. ಈ ಯೋಜನೆಯನ್ನು ಬ್ರೆಟನ್‍ವೂಡ್ಸ್ ಸಮ್ಮೇಳನದಲ್ಲಿ ತಳ್ಳಿಹಾಕಲು ಇದು ಮುಖ್ಯ ಕಾರಣ. ಆದರೆ ಇಪ್ಪತ್ತು ವರ್ಷಗಳ ಅನಂತರ ಕೇನ್ಸ್ ಯೋಜನೆಯನ್ನು ಹೋಲುವ ಅನೇಕ ಯೋಜನೆಗಳು ಮಂಡಿತವಾಗಿವೆ. ವಿಶ್ವರಾಷ್ಟ್ರ ಸಮುದಾಯ ಅವನ್ನು ಸಹಾನುಭೂತಿಯಿಂದ ಪರಿಶೀಲಿಸುತ್ತಿದೆ. ರಾಬರ್ಟ್ ಟ್ರಿಫಿನ್ ಯೋಜನೆ ಒಂದು ಉದಾಹರಣೆ. ಇದೇ ರೀತಿ ಇತ್ತೀಚೆಗೆ ಅಂತರರಾಷ್ಟ್ರೀಯ ಹಣನಿಧಿ ಸೃಷ್ಟಿಮಾಡುತ್ತಿರುವ ಎಸ್.ಡಿ.ಆರ್.ಗಳು (ಸ್ಪೆಷಲ್ ಡ್ರಾಯಿಂಗ್ ರೈಟ್ಸ್) ಸಹ ಕೇನ್ಸ್ ಯೋಜನೆಯ ಇನ್ನೊಂದು ರೂಪ ಎನ್ನಬಹುದು. (ಎಂ.ಎ.ಎಂ.)