ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇರಳ ಪತ್ರಿಕಾ

ವಿಕಿಸೋರ್ಸ್ದಿಂದ

ಕೇರಳ ಪತ್ರಿಕಾ

1884ರಲ್ಲಿ ಕೇರಳದ ಕೋಳಿಕ್ಕೋಡಿನಲ್ಲಿ ಪ್ರಾರಂಭವಾದ ಒಂದು ಪತ್ರಿಕೆ. ಸಿ. ಕುನ್ಹಿರಾಮನ್ ಮೆನನ್ ಸ್ಥಾಪಕ-ಸಂಪಾದಕ. ಅದರ ಇಡೀ ಜೀವಿತ ಕಾಲದಲ್ಲಿ ಪ್ರಭಾವಶಾಲಿಗಳೂ ಕ್ರಿಯಾಶೀಲರೂ ಆದರ್ಶ ಪತ್ರಿಕೋದ್ಯಮಿಗಳೂ ಆದಂಥವರು ಅದರ ಮೇಲ್ವಿಚಾರಕರಾಗಿದ್ದರು. ಆರಂಭದಿಂದ ಇದು ಸರ್ಕಾರಿ ನೌಕರರ ಲಂಚಗುಳಿತನವೇ ಮುಂತಾದ ಭ್ರಷ್ಟಾಚಾರಗಳನ್ನೂ ಸರ್ಕಾರದ ಕಾರ್ಯನೀತಿಯನ್ನೂ ನಿರ್ಭಯದಿಂದಲೂ ನಿರ್ದಾಕ್ಷಿಣ್ಯವಾಗಿಯೂ ಖಂಡಿಸಿ ಜನಪ್ರಿಯತೆ ಸಂಪಾದಿಸಿತ್ತು. ಜನರ ನೈತಿಕ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ನಿರತವಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ಇಂಥ ಕೆಲಸ ಸುಲಭ ಸಾಧ್ಯವಾಗಿರಲಿಲ್ಲ. ಕೇಸರಿ ಎಂಬ ಅಂಕಿತದಲ್ಲಿ ಅಂಕಣಲೇಖಕ ವೆಂಗಾಯಲ್ ಕುನ್ಹಿರಾಮನ್ ನಾಯನಾರ್ ಪತ್ರಿಕೆಗಾಗಿ ಬರೆಯುತ್ತಿದ್ದ ಲೇಖನಗಳೂ ಪತ್ರಿಕೆಯ ಜನಪ್ರಿಯತೆಗೆ ಮುಖ್ಯ ಕಾರಣ. ವ್ಯಕ್ತಿಗಳ ಮತ್ತು ಸರ್ಕಾರದ ಕಾರ್ಯನೀತಿಗಳ ಬಗ್ಗೆ ನಾಯನಾರ್ ಮಾಡುತ್ತಿದ್ದ ವಿಮರ್ಶೆಗಳು ಗಂಭೀರವಾಗಿಯೂ ವಸ್ತುನಿಷ್ಠವಾಗಿಯೂ ಇರುತ್ತಿದ್ದುವು. ಇದು ಮಲಯಾಳದ ಪ್ರಸಿದ್ಧ ಸಾಹಿತಿಗಳ ವಿಚಾರ ವೇದಿಕೆಯೂ ಆಗಿತ್ತು. ಪತ್ರಿಕೆಯ ಪುಟಗಳಲ್ಲಿ ಸ್ವಾರಸ್ಯವೂ ವಿದ್ವತ್ಪೂರ್ಣವೂ ಆದ ಚರ್ಚೆಗಳಿರುತ್ತಿದ್ದುವು.

ಕುನ್ಹಿರಾಮನ್ ಮೆನನ್ ಸಂಪಾದಕತ್ವದಲ್ಲಿ ಪತ್ರಿಕೆ ಸುಮಾರು 48 ವರ್ಷಗಳ ಕಾಲ ನಡೆಯಿತು. ಅನಂತರ ಮೆನನ್ ಸೋದರಳಿಯನ ಸಂಪಾದಕತ್ವದಲ್ಲಿ ಸ್ವಲ್ಪ ಕಾಲ ಮುಂದುವರಿಯಿತು. ಆಮೇಲೆ ಎಂ. ರಾಮುಣ್ಣಿ ನಾಯರ್ ಸಂಪಾದಕತ್ವದಲ್ಲಿ ಇನ್ನೂ ಪ್ರಗತಿ ಗಳಿಸಿತು. ಸಂಜಯನ್ ಎಂಬ ಲೇಖನನಾಮದಿಂದ ಪ್ರಸಿದ್ಧಿ ಗಳಿಸಿದ್ದ ನಾಯರ್ ಬರವಣಿಗೆಯಲ್ಲಿ ಹಾಸ್ಯ ತುಂಬಿರುತ್ತಿತ್ತು. ನ್ಯಾಯವಾದ ಕಾರಣಗಳನ್ನು ನಿರ್ಭಯವಾಗಿ ಎತ್ತಿ ಹಿಡಿಯುವುದೂ ಸಾಮಾಜಿಕ ಕೆಡುಕುಗಳನ್ನು ತಪ್ಪದೆ ಖಂಡಿಸುವುದೂ ಉತ್ತಮ ಮಟ್ಟದ ಸಾಹಿತ್ಯ ವಿಮರ್ಶೆಯೂ ಅವರ ಸಂಪಾದಕೀಯದ ವೈಶಿಷ್ಟ್ಯ. ಪತ್ರಿಕೆಯ ಮಾಲೀಕತ್ವ ಕೆ.ವಿ. ಅಚ್ಚುತನ್ ನಾಯರದಾಗಿತ್ತು.

20ನೆಯ ಶತಮಾನದ ನಲವತ್ತರ ದಶಕದಲ್ಲಿ ರಾಮುಣ್ಣಿನಾಯರ್ ಅನಾರೋಗ್ಯ ನಿಮಿತ್ತ ಪತ್ರಿಕೆಯ ಸಂಪಾದಕತ್ವವನ್ನು ತ್ಯಜಿಸಿದ ಮೇಲೆ ಪತ್ರಿಕೆ ಕ್ಷೀಣದೆಶೆಗೆ ಬಂದು ಕೊನೆಗೆ ನಿಂತುಹೋಯಿತು. (ಕೆ.ಟಿ.)