ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಶಿ ರಾಜ

ವಿಕಿಸೋರ್ಸ್ದಿಂದ

ಕೇಶಿರಾಜ

ಕೇಶಿರಾಜ ಸು.1260. "ಶಬ್ದಮಣಿದರ್ಪಣಂ" ಎಂಬ ಪ್ರಸಿದ್ಧವಾದ ಹಳಗನ್ನಡ ವ್ಯಾಕರಣ ಗ್ರಂಥವನ್ನು ಬರೆದ ಶಾಸ್ತ್ರಕಾರ. ಅದೇ ಗ್ರಂಥದ ಕೊನೆಯ ಒಂದು ಪದ್ಯದಿಂದ ಈ ಶಾಸ್ತ್ರಕಾರ ಚೋಲಪಾಲಕ ಚರಿತಂ. ಶ್ರೀ ಚಿತ್ರಮಾಲೆ, ಸುಭದ್ರಾಪಹರಣಂ, ಪ್ರಬೋಧಚಂದ್ರಂ, ಕಿರಾತಂ ಎಂಬ ಬೇರೆ ಐದು ಗ್ರಂಥಗಳನ್ನೂ ಬರೆದಿರುವಂತೆ ತಿಳಿದು ಬಂದಿದೆ. ಆದರೆ ಶಬ್ದಮಣಿದರ್ಪಣದ ಹೊರತು ಈತನ ಬೇರೆ ಯಾವ ಗ್ರಂಥವೂ ಈ ವರೆಗೆ ನಮಗೆ ದೊರೆತಿಲ್ಲ. ಆ ಕೃತಿಗಳ ಕೆಲವು ಪದ್ಯಗಳಾದರೂ ಕವಿಯ ತಂದೆ ಚಿದಾನಂದ ಮಲ್ಲಿಕಾರ್ಜುನ ಕವಿಯ (ಸು.1245 ಸೂಕ್ತಿಸುಧಾರ್ಣವಂ ಎಂಬ ಸಂಕಲನಗ್ರಂಥದಲ್ಲಿ ಸೇರಿಕೊಂಡಿರುವ ಸಾಧ್ಯತೆಯಿದೆಯೆಂದು ವಿದ್ವಾಂಸರು ಸಕಾರಣವಾಗಿಯೇ ಊಹಿಸಿದ್ದಾರೆ. ಹೊಯ್ಸಳ ಇಮ್ಮಡಿ ನರಸಿಂಹನಿಗೆ (1220-1235) ಸಂಬಂಧಿಸಿದ ಅಲ್ಲಿಯ ಕೆಲವು ಪದ್ಯಗಳು ಕೇಶಿರಾಜನ ಚೋಲಪಾಲಕ ಚರಿತೆಯದಾಗಿರಬಹುದು ಎಂಬುದೂ ಅಲ್ಲಿಯೇ ದೊರೆಯುವ ಆತನ ಸ್ತುತಿರೂಪವಾದ ಒಂದು ಪದ್ಯ ಆತನೇ ಬರೆದುದಾಗಿರಬಹುದು ಎಂಬುದೂ ಅವರ ಊಹೆಗೆ ಅವಕಾಶ ಮಾಡಿಕೊಟ್ಟಿರುವ ಕಾರಣಗಳಲ್ಲಿ ಮುಖ್ಯವಾದುವು. ಈಗಂತೂ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ಕೇಶಿರಾಜ ವೈಯಾಕರಣನಾಗಿ ಪ್ರಸಿದ್ಧನಾಗಿದ್ದಾನೆ.

ಕೇಶಿರಾಜ ಜೈನ. ಕೆಲವರು ವಿದ್ವಾಂಸರು ಈತ ಸ್ಮಾರ್ತಬ್ರಾಹ್ಮಣನೆಂದು ವಾದಿಸಿರುವುದುಂಟು. ಆದರೆ ಅದಕ್ಕೆ ಸರಿಯಾದ ಆಧಾರಗಳಿಲ್ಲ. ಈತ ಪ್ರಸಿದ್ಧ ಕವಿಗಳ ಹಾಗೂ ಪ್ರತಿಷ್ಠಿತ ವಿದ್ವಾಂಸರ ಮನೆತನಕ್ಕೆ ಸೇರಿದವ. ತಂದೆ ಶ್ರೇಷ್ಠ ಹಾಗೂ ಆದ್ಯ ಹಳಗನ್ನಡ ಸಂಕಲನಗ್ರಂಥ ಸೂಕ್ತಿಸುಧಾರ್ಣವದ ಕರ್ತೃ ಚಿದಾನಂದ ಮಲ್ಲಿಕಾರ್ಜುನ; ತಾಯಿಯ ತಂದೆ ಹೊಯ್ಸಳ ಇಮ್ಮಡಿ ನರಸಿಂಹನಲ್ಲಿ ಕಟಕೋಪಾಧ್ಯಾಯನೂ ಜೈನ ಪುರಾಣಕರ್ತೃವೂ ಆಗಿದ್ದ ಕವಿಸುಮನೋಬಾಣ; ಸೋದರಮಾವ ಜನ್ಮಕವಿ. ಇವರ ನಡುವೆ ಬೆಳೆದು ಕಲಿತು ಕೇಶಿರಾಜ ಕವಿಯೂ ಪಂಡಿತನೂ ಆದುದು ಸಹಜವೇ ಆಗಿದೆ. ಈತ ಎಂಥ ಒಳ್ಳೆಯ ವಿದ್ವಾಂಸನಾಗಿದ್ದನೆಂಬುದನ್ನೂ ವಿದ್ವಾಂಸನಾಗಿಯೂ ಎಷ್ಟರಮಟ್ಟಿಗೆ ಉತ್ಕøಷ್ಟ ಕವಿಮನೋಧರ್ಮವನ್ನು ಹೊಂದಿದ್ದ ರಸಿಕನಾಗಿದ್ದನೆಂಬುದನ್ನೂ ಶಬ್ದಮಣಿದರ್ಪದಿಂದಲೇ ತಿಳಿಯಬಹುದಾಗಿದೆ. ಈತ ತನಗೆ ಹಿಂದಿನ ಪ್ರಾಚೀನ ಕನ್ನಡ ಕಾವ್ಯಪುರಾಣಗಳನ್ನೂ ವ್ಯಾಕರಣಾದಿ ಶಾಸ್ತ್ರಗ್ರಂಥಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದುದ್ದಕ್ಕೆ ಇವನ ವ್ಯಾಕರಣ ಗ್ರಂಥ ಒಳ್ಳೆಯ ಸಾಕ್ಷ್ಯವಾಗಿದೆ. ಲಾಕ್ಷಣಿಕವಾಗಿ ಇವನ ಖ್ಯಾತಿಯನ್ನು ಕವಿಮಲ್ಲ (ಸು.1400) `ನಿರುತಂ ಕರ್ನಾಟಕದೊಳ್ | ಪರಿಕಿಸೆ ಶಬ್ದಗ್ನ ನಾವನೊರ್ವನೇ ಲೋಕ || ಕ್ಕರಿದಲ್ತೆ ಭಾಪು ಕವಿ ಕುಂ |ಜರ ಕೇಶವರಾಜ ಗೋಚರಿಸು ಮನ್ಮನದೊಳ್ ಎಂದೂ ಈಶ್ವರಕವಿ (ಸು.1450) `ಲಕ್ಷಣ ಶಿಕ್ಷಾಚಾರ್ಯ ಸು | ಲಕ್ಷಣಿ ಕೇಶವ ' ಎಂದೂ ಕೊಂಡಾಡಿದ್ದಾರೆ. ನಿಟ್ಟೂರು ನಂಜಯ್ಯ(ಸು.1725) ಬರೆದ ಟೀಕೆಯೂ ಲಿಂಗಣಾರಾಧ್ಯ ಬರೆದ ವೃತ್ತಿಯೂ ಕೆಲವು ಪ್ರಾಚೀನ ಅರ್ವಾಚೀನ ವ್ಯಾಖ್ಯಾನಗಳು ಕನ್ನಡ ವ್ಯಾಕರಣದ ಅಭ್ಯಾಸದಲ್ಲಿ ಶಬ್ದಮಣಿದರ್ಪಣದ ಉಪಯುಕ್ತತೆಯನ್ನು ಸಾರಿ ಹೇಳತಕ್ಕವಾಗಿವೆ.

ಶಬ್ದಮಣಿದರ್ಪಣದ ರಚನೆಯ ಕಾಲವನ್ನು ಆ ಗ್ರಂಥದಲ್ಲಿ ನೇರವಾಗಿ ಸೂಚಿಸಿಲ್ಲವಾದ್ದರಿಂದ ಕವಿಯ ಕಾಲವನ್ನು ಬೇರೆ ಆಧಾರಗಳಿಂದ ಗುರುತಿಸಬೇಕಾಗಿದೆ. ಸೂಕ್ತಿ ಸುಧಾರ್ಣವಾದ ಮಲ್ಲಿಕಾರ್ಜುನ ಕವಿ 1233ರಿಂದ 1254ರ ವರೆಗೆ ಆಳಿದ ಹೊಯ್ಸಳ ಸೋಮೇಶ್ವರನ ಕಾಲದಲ್ಲಿ ಇದ್ದುದರಿಂದ, ಆತನ ಮಗನಾದ ಕೇಶಿರಾಜನ ಕಾಲವನ್ನು ಸುಮಾರು 1260 ಎಂಬುದಾಗಿ ಕವಿಚರಿತೆಕಾರರು ಸೂಚಿಸಿದ್ದಾರೆ.

ಶಬ್ದಮಣಿದರ್ಪಣ

ಇದು ಹಳಗನ್ನಡ ಭಾಷೆಗೆ ಬರೆದ ವ್ಯಾಕರಣ ಗ್ರಂಥವಾಗಿದ್ದು, 13ನೆಯ ಶತಮಾನಕ್ಕೆ ಮೊದಲು ಹಳಗನ್ನಡ ಭಾಷೆಯ ಸ್ಥಿತಿಗತಿಗಳು ಹೇಗಿದ್ದವೆಂಬ ಬಗೆಗೆ ಸವಿಸ್ತಾರವೂ ಸಪ್ರಮಾಣವೂ ಆದ ವಿವೇಚನೆಯನ್ನು ಒಳಗೊಂಡಿದೆ. ಪೂರ್ವಕವಿಪ್ರಯೋಗಗಳ ಪರಿಶೀಲನೆಯಿಂದ ಭಾಷೆಯ ಸಾಮಾನ್ಯ ನಿಯಮಗಳನ್ನು ಇಲ್ಲಿ ಗುರುತಿಸಿ ಸೂತ್ರೀಕರಿಸಲಾಗಿದೆ. ಗ್ರಂಥದಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ, ಅಖ್ಯಾತ, ಧಾತು, ಅಪಭ್ರಂಶ, ಅವ್ಯಯ-ಎಂಬ 8 ಪ್ರಕರಣಗಳಿವೆ. ಗ್ರಂಥದ ಆದಿಯಲ್ಲಿ ಮುಖ್ಯವಾಗಿ ಗ್ರಂಥ-ಗ್ರಂಥಕಾರ ಪರಿಚಯಾತ್ಮಕವಾದ ಒಂದು ಪೀಠಿಕೆಯ ಭಾಗವೂ ಅಂತ್ಯದಲ್ಲಿ ಪ್ರಯೋಗಸಾರವೆಂಬ ಒಂದು ಚಿಕ್ಕ ಶಬ್ಧಾರ್ಥನಿರ್ಣಯ ಭಾಗವೂ ಸೇರಿಕೊಂಡಿದೆ. ಆಯಾ ಪ್ರಕರಣಕ್ಕೆ ಸಬಂಧಿಸಿದ ವ್ಯಾಕರಣಾಂಶಗಳಲ್ಲಿ ಒಂದೊಂದನ್ನು ಮೊದಲು ಸೂತ್ರ ರೂಪವಾಗಿ ಕಂದಪದ್ಯದಲ್ಲಿ ಸಂಗ್ರಹಿಸಿ, ಅನಂತರದಲ್ಲಿ ಸೂತ್ರಾರ್ಥದ ವಿವರಣೆಗೆ ಸ್ವಕೀಯವಾದ ವೃತ್ತಿಯನ್ನು ಗದ್ಯರೂಪದಲ್ಲಿ ಬರೆದು, ಕೊನೆಗೆ ಸೂತ್ರ ವೃತ್ತಿಗಳಲ್ಲಿ ಉಕ್ತವಾದ ವ್ಯಾಕರಣಾಂಶಗಳನ್ನು ಅಧೀಕರಿಸಿಕೊಂಡ ಪೂರ್ವಕವಿ ಪ್ರಯೋಗಗಳನ್ನು ಉಚಿತಕ್ಕೆ ತಕ್ಕಷ್ಟುಮಟ್ಟಿಗೆ ಉದಾಹರಿಸುವ ಕ್ರಮವನ್ನು ಇಲ್ಲಿ ಅನುಸರಿಸಿದೆ. ಒಂದು ಎಣಿಕೆಯಂತೆ ಸೂತ್ರಗಳ ಒಟ್ಟು ಸಂಖ್ಯೆ 337. ಸಮಾಪ್ತಿಭಾಗದ ಪದ್ಯಗಳೂ ಸೇರಿ ಒಟ್ಟು ಪದಸಂಖ್ಯೆ 343. ಈ ಸೂತ್ರ, ವೃತ್ತಿ ಮತ್ತು ಪ್ರಯೋಗಗಳ ವಿಷಯದಲ್ಲಿ ಕೆಲವು ಸಮಸ್ಯೆಗಳನ್ನು ವಿದ್ವಾಂಸರು ಗುರುತಿಸಿ ವಿಚಾರ ಮಾಡಿ, ಶಬ್ದಮಣಿದರ್ಪಣದ ಸರ್ವಪಾಠಭೇದಗಳನ್ನೂ ಒಳಗೊಂಡ ಸಶಾಸ್ತ್ರೀಯ ಸವಿಮರ್ಶ ಪರಿಷ್ಕರಣ ಮುಂದೆ ಸಿದ್ಧವಾಗಬೇಕಾದ ಅವಶ್ಯಕತೆಯಿದೆ-ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಬ್ದಮಣಿದರ್ಪಣದ ವಿಷಯಾನುಕ್ರಮ ಈ ರೀತಿಯಾಗಿದೆ; ಸಂಜ್ಞಾ ಪ್ರಕರಣದಲ್ಲಿ ವರ್ಣ ಸಮಾಮ್ನಾಯ, ಶಿಥಲದ್ವಿತ್ವ ವಿಚಾರ-ಇತ್ಯಾದಿ; ಸಂಧಿ ಪ್ರಕರಣದಲ್ಲಿ ಸ್ವರವ್ಯಂಜನ ಸಂಧಿಗಳು, ಸಂಧಿ ವಿಸಂಧಿಗಳು, ಸಂಧಿ ದೋಷಗಳು, ಸಂಧಿ ಕಾರ್ಯದಲ್ಲಿ ದ್ವಿತ್ವಾದ್ವಿತ್ವಗಳು; ನಾಮಪ್ರಕರಣದಲ್ಲಿ ಕೃತ್ತಾದಿಯಾದ ಲಿಂಗಚತುಷ್ಟಯ, ನಾಮಭೇದಗಳು, ಸರ್ವನಾಮಗಳು, ಲಿಂಗವಚನ ವಿಭಕ್ತಿಗಳು ಇತ್ಯಾದಿ; ಸಮಾಸ ಪ್ರಕರಣದಲ್ಲಿ ಲೋಪಾಗಮಾದೇಶಗಳು, ತತ್ಪುರುಷ ಕರ್ಮಧಾರಯ ಅವ್ಯಯೀಭಾವ ಕ್ರಿಯಾಗಮಕ ಮುಂತಾದ ಸಂಸ್ಕøತ ಕನ್ನಡ ಸಮಾಸಗಳು; ತದ್ದಿತ ಪ್ರಕರಣದಲ್ಲಿ ಬಗೆಬಗೆಯ ಅರ್ಥಗಳನ್ನು ಕೊಡುವ ತದ್ದಿತ ಪ್ರತ್ಯೆಯಗಳನ್ನು ಹಚ್ಚಿದ ಪುಂಸ್ತ್ರೀವಾಚಕಗಳಾದ ತದ್ದಿತ ನಾಮಗಳು ಹಾಗೂ ತದ್ದಿತ ಭಾವನಾಮಗಳು; ಅಖ್ಯಾತ ಪ್ರಕರಣದಲ್ಲಿ ಪುರುಷವಾಚಕ ಮತ್ತು ಕಾಲವಾಚಕ ಪ್ರತ್ಯಯಗಳು ಸೇರತಕ್ಕ ರೀತಿ ಪರಿಸರಗಳು, ವಿದ್ಯರ್ಥ ಮತ್ತು ಸತಿಸಪ್ತಮಿಗಳು; ಧಾತುಪ್ರಕರಣದಲ್ಲಿ ಧಾತುಗಳು ಮತ್ತು ಅವುಗಳ ಅರ್ಥ ವಿವರಣೆ; ಅಪಬ್ರಂಶಪ್ರಕರಣದಲ್ಲಿ ಕನ್ನಡದಲ್ಲಿ ಬಳಕೆಯಾಗುವ ರೂಢಿಯ ಸಂಸ್ಕøತ ಪದಗಳು ಹಾಗೂ ಸಂಸ್ಕøತ ಸಮಾಸಪದಗಳ ತದ್ಭವ ರೂಪಗಳು, ಸಂಸ್ಕøತ ಕನ್ನಡ ಪದಗಳೊಡನೆ ಸಮಾನವಾಗಿ ಕೂಡಿ ಸಮಾಸವಾಗಬಹುದಾದ ತತ್ಸಮ ಶಬ್ದಗಳು-ಇತ್ಯಾದಿ; ಅವ್ಯಯ ಪ್ರಕರಣದಲ್ಲಿ ಬೇರೆ ಬೇರೆ ಸಂದರ್ಭಗಳಿಗೆ ಅರ್ಥಗಳಿಗೆ ಬಳಸತಕ್ಕ ಅವ್ಯಯಗಳು; ಕೊನೆಯದಾಗಿ ಪ್ರಯೋಗಸಾರದಲ್ಲಿ ಕೆಲವು ಕ್ಲಿಷ್ಟಪದಗಳ ಅರ್ಥ ವಿವರಣೆ.

ಕನ್ನಡದಲ್ಲಿಯೇ ರಚಿತವಾಗಿರುವ ಸ್ವತಂತ್ರ ಕನ್ನಡ ವ್ಯಾಕರಣಗಳಲ್ಲಿ ಶಬ್ದಮಣಿದರ್ಪಣವೇ ಮೊದಲನೆಯದು. ಇದಕ್ಕೆ ಮೊದಲು ಇಮ್ಮಡಿ ನಾಗವರ್ಮನ (ಸು.1145) ಶಬ್ದಸ್ಮøತಿಯೂ (ಕರ್ನಾಟಕ) ಭಾಷಾ ಭೂಷಣವೂ ಕನ್ನಡ ವ್ಯಾಕರಣಗಳಾಗಿ ರಚಿತವಾಗಿದ್ದವಾದರೂ ಇವುಗಳಲ್ಲಿ ಮೊದಲನೆಯದು ಅಲಂಕಾರ ಗ್ರಂಥವಾದ ಕಾವ್ಯಾವಲೋಕನದ ಪ್ರಥಮಾದಿಕಾರಣವಾಗಿ ಸೇರಿಸಿಕೊಂಡು ಬಂದದ್ದು ಹಾಗೂ ಸಂಕ್ಷೇಪವಾದ್ದು ಎನ್ನುವುದರಿಂದಲೂ ಎರಡನೆಯದು ಸ್ವಲ್ಪ ವಿಸ್ತಾರವಾದುದಾಗಿದ್ದರೂ ಸಂಸ್ಕøತ ಭಾಷೆಯಲ್ಲಿ ರಚಿತವಾದ್ದು ಎನ್ನುವುದರಿಂದಲೂ ಕೇಶೀರಾಜನ ಗ್ರಂಥಕ್ಕೆ ಇರುವ ಪ್ರಸಿದ್ಧಿ, ವ್ಯಾಪ್ತಿ ಅವುಗಳಿಗೆ ಇಲ್ಲವಾಗಿದೆ. ಕೇಶಿರಾಜ ನಾಗವರ್ಮನ ಆ ಎರಡು ವ್ಯಾಕರಣ ಗ್ರಂಥಗಳನ್ನೇ ಸೂತ್ರ, ವೃತ್ತಿ, ಮತ್ತು ಪ್ರಯೋಗಗಳಲ್ಲಿ ಮುಖ್ಯವಾಗಿ ಆಧರಿಸಿದ್ದಾನೆ. ಆದರೆ ಹಳಗನ್ನಡ ಭಾಷಾ ಸಮರೂಪವನ್ನು ಹೆಚ್ಚು ಗಾಢವಾಗಿಯೂ ವಿವರವಾಗಿಯೂ ಅಭ್ಯಾಸಮಾಡಿದ್ದರ ಫಲವಾಗಿ ಹಿಂದೆ ಹೇಳಿದ್ದ ವಿಷಯಗಳನ್ನು ವಿಸ್ತರಿಸಿಯೂ ಹೆಚ್ಚಿನ ವಿಷಯಗಳನ್ನು ಸೇರಿಸಿಯೂ ತನ್ನ ಗ್ರಂಥವನ್ನು ಹೆಚ್ಚು ಉಪಯುಕ್ತವಾಗುವಂತೆ ಮಾಡಿದ್ದಾನೆ. ಹೊಸದಾಗಿ ಸೇರಿಸಿರುವ ಹಾಗೂ ಬೆಲೆಯುಳ್ಳವಾದ ಸಹಜ ರಳಗಳ ಪಟ್ಟಿ, ಧಾತುಪಾಠ, ಪ್ರಯೋಗಸಾರ-ಇವು ಗ್ರಂಥದ ಉಪಯುಕ್ತತೆಯನ್ನು ಹೆಚ್ಚಿಸಿವೆ. 13ನೆಯ ಶತಮಾನದ ನಡುಗಾಲದವರೆಗೆ ಬೆಳೆದುಬಂದ ಹಳಗನ್ನಡ ಭಾಷೆಯ ಸ್ವರೂಪವನ್ನು ಪ್ರಾಮಾಣಿಕವಾದ ಪ್ರಯೋಗ ಪರೀಕ್ಷೆಯಿಂದ ವಿಶ್ಲೇಷಿಸಿ ಶಾಸ್ತ್ರಬದ್ಧವಾಗಿ ನಿಯಂತ್ರಿಸಲು ಯತ್ನಿಸಿರುವುದು ಇಲ್ಲಿ ಕಾಣುತ್ತದೆ. ಪ್ರಧಾನವಾಗಿ, ಶಬ್ದಮಣಿದರ್ಪಣ ವಿದ್ಯಾತ್ಮಕ ಅಥವಾ ಆದರ್ಶ(ಪ್ರಿಸ್ಕಿಪ್ಟಿವ್) ರೀತಿಯ ವ್ಯಾಕರಣ, ಆದರೆ ವಿವರಣಾತ್ಮಕ ಅಥವಾ ವರ್ಣನಾತ್ಮಕ (ಡಿಸ್ಕ್ರಿಪ್ಟಿವ್) ರೀತಿಯನ್ನು ನಿರೂಪಣಾ ದೃಷ್ಟಿಯನ್ನು ಅದು ಒಳಗೊಂಡಿದೆ. ವ್ಯಾಕರಣಾಂಶಗಳ ವಿಶ್ಲೇಷಣೆಯಲ್ಲಿಯೂ ನಿರೂಪಣಕ್ರಮದಲ್ಲಿಯೂ ಅಲ್ಲಲ್ಲಿ ಕೆಲವು ಲೋಪದೋಷಗಳನ್ನು ಅನೌಚಿತ್ಯಗಳನ್ನು ಭಾಷಾತಜ್ಞರು ಎತ್ತಿರುವುದುಂಟು. ಹೀಗಿದ್ದು ಹಳಗನ್ನಡ ಭಾಷಾಸ್ವರೂಪವನ್ನು ಪ್ರಮಾಣಿಕವಾದ ರೀತಿಯಲ್ಲಿ ನಿಷ್ಟೆಯಿಂದ ವಿವರಿಸುವ ಪ್ರಯತ್ನದಿಂದಾಗಿ ಅದು ಪ್ರಸಿದ್ಧವಾಗಿದೆ. ನಿರಾಧಾರವಾಗಿ ಏನನ್ನೂ ಹೇಳದೆ ಪ್ರಯೋಗಬಲವನ್ನು ಅವಲಂಬಿಸಿರುವ ಶಾಸ್ತ್ರಪ್ರಜ್ಞೆ, ಪ್ರಾಮಾಣಿಕತೆಗಳು, ಸಂದೇಹಬಂದಲ್ಲಿ ಹಾಗೆಂದು ಒಪ್ಪುವುದು, ವಿಷಯವನ್ನು ನಿರ್ಣಾಯಕವಾಗಿ ಹೇಳಲಾಗದಿದ್ದಾಗ ತೋರುವ ತಾಟಸ್ತ್ಯ, ತನಗೆ ಒಪ್ಪಿಗೆ ಇಲ್ಲದಿರುವುದನ್ನು ಕಂಠೋಕ್ತವಾಗಿ ನಿಷೇಧಿಸುವುದು, ಗುಣದೋಷಗಳೆರಡಕ್ಕೂ ಒಬ್ಬನೇ ಕವಿಯ ಪ್ರಯೋಗಗಳನ್ನು ಕೂಡುವುದರಲ್ಲಿ ಕಾಣಿಸಿರುವ ನಿಷ್ಪಕ್ಷಪಾತ ದೃಷ್ಟಿ, ಆತ್ಮವಂಚನೆ ಪರವಂಚನೆಗಳ ಅಭಾವ-ಇವೆಲ್ಲ ಕೇಶಿರಾಜನ ವೈಜ್ಞಾನಿಕ ಮನೋಧರ್ಮವನ್ನು ತೋರಿಸುತ್ತವೆ. ಇವೆಲ್ಲಕ್ಕೂ ತಕ್ಕ ನಿದರ್ಶನಗಳನ್ನು ಅವನ ವ್ಯಾಕರಣದಲ್ಲಿ ನೋಡಬಹುದು. ಪ್ರಯೋಗಗಳ ಸಂಗ್ರಹಣೆಯೂ, ಸಂಯೋಜನೆಯೂ ವ್ಯಾಕರಣಾಂಶಗಳ ವಿಶದೀಕರಣಕ್ಕೆ ಸಹಾಯಕವಾಗಿರುವಂತೆಯೇ ಈತನ ಕಾವ್ಯಮನೋಧರ್ಮ, ಸರಸ ಪ್ರವೃತ್ತಿಯ ಪ್ರತೀಕಗಳು ಆಗಿ ಪರಿಣಮಿಸಿವೆ. ಇದರಿಂದ, ಶುಷ್ಕವಾಗಬಹುದಾಗಿದ್ದ ವ್ಯಾಕರಣದ ಅಭ್ಯಾಸ ಆಕರ್ಷಕವಾಗಿದೆ. ವೈಯಾಕರಣ ಪ್ರಯೋಗ ಶರಣನೆಂಬ ಮಾತು ಕೇಶಿರಾಜನಿಗೆ ಚೆನ್ನಾಗಿ ಒಪ್ಪುತ್ತದೆ; ಪ್ರಸಿದ್ಧರಾದ ಪಂಪ, ಪೊನ್ನ, ರನ್ನ ನೇಮಿಚಂದ್ರ, ಜನ್ನ- ಈ ಮುಂತಾದವರ ಕೃತಿಗಳಿಂದಲೂ ಈಗ ಕೃತಿಗಳು ದೊರೆಯುತ್ತಿಲ್ಲದ ಗಜಗ,ಗುಣನಂದಿ, ಮನಸಿಜ, ಅಸಗ-ಈ ಮುಂತಾದವರ ಕೃತಿಗಳಿಂದಲೂ ಈತ ಪ್ರಯೋಗಗಳನ್ನು ಸ್ವೀಕಾರಮಾಡಿದ್ದಾನೆ; ಕೆಲವು ಶಾಸನಗಳಿಂದಲೂ ಪ್ರಯೋಗಗಳನ್ನು ಎತ್ತಿಕೊಂಡಿರುವಂತೆ ತೋರುತ್ತದೆ. ಕೇಶಿರಾಜನ ಕನ್ನಡ ಸಾಹಿತ್ಯ ಪರಿಚಯ ಸಾಕಷ್ಟು ವಿಸ್ತಾರವಾದುದು ಎನ್ನುವುದು ಇದರಿಂದ ತಿಳಿಯುತ್ತದೆ. (ಟಿ.ವಿ.ವಿ)

ಕೇಶಿರಾಜನ ವ್ಯಾಕರಣವನ್ನು ಅಧ್ಯಯನ ಮಾಡಿದ ಯಾರಿಗೆ ಆಗಲಿ ಇವನು ಶುಷ್ಕ ವೈಯಾಕರಣನೆನಿಸುವುದಿಲ್ಲ. ಈತ ಬರೆದಿರುವ ಸೂತ್ರಗಳು ಶಾಸ್ತ್ರವತ್ತಾಗಿದ್ದರೆ, ಆರಿಸಿಕೊಟ್ಟಿರುವ ಪ್ರಯೋಗಗಳು ರಸವತ್ತಾಗಿವೆ. ಇದಲ್ಲದೆ, ಇವನ ಕನ್ನಡ ಪ್ರಜ್ಞೆ ತುಂಬಾ ಪ್ರಶಂಸನೀಯವಾದುದು; ಸಾಂಪ್ರದಾಯಿಕವಾಗಿ ಹೇಳಬೇಕಾದುದನ್ನು ಹೇಳಿ, ಬಳಿಕ ತನ್ನ ನಿಲುವನ್ನು ಈತ ಆಗಿಂದಾಗ್ಗೆ ವ್ಯಕ್ತಪಡಿಸುತ್ತಾನೆ. ಆಧುನಿಕ ಭಾಷಾ ವಿಜ್ಞಾನಿಗಳು ಸಮಕಾಲೀನ ಭಾಷೆಯ ಸ್ವರೂಪವನ್ನು ವಿವರಿಸಲು ಹೇಗೆ ಆಸಕ್ತಿ ತೋರುವರೋ ಹಾಗೆಯೇ ಕೇಶೀರಾಜ ಹಳಗನ್ನಡದ ಹೆಸರಿನಲ್ಲಿ ನುಸುಳಿ ಉನ್ನತಿ ಬರುತ್ತಿದ್ದ ನಡುಗನ್ನಡದ ಎಷ್ಟೋ ಅಂಶಗಳನ್ನು ಸಂದರ್ಭೋಚಿತವಾಗಿ ಸೂಚಿಸಿದ್ದಾನೆ. ಕನ್ನಡ ವರ್ಣಮಾಲೆಯನ್ನು ನಿರ್ಣಯಿಸುವಾಗ ದೇಶೀಯ ಅಕ್ಷರಗಳಾದ ರೇಪೆ, ಳ ಮತ್ತು ಎ, ಒ ಗಳ ಚರಿತ್ರೆಯನ್ನು ಬಹಳ ಚೆನ್ನಾಗಿ ತಿಳಿಸಿದ್ದಾನೆ. ಳ್ ಮತ್ತು ಲ ಕಾರಗಳ ಉಚ್ಛಾರಣೆಯ ಸ್ಥಾನವನ್ನು ಹೇಳುವ ಇವನ ಕ್ರಮ ತುಂಬಾ ವಿಚಾರಣೀಯವಾದದ್ದು. ತನ್ನ ಕಾಲಕ್ಕಾಗಲೇ ಬಳಕೆ ತಪ್ಪಿದ್ದ ಳ್ ದ ಇತಿಹಾಸವನ್ನೇ ಬಹಳ ಪರಿಶ್ರಮವಹಿಸಿ ವಿಚಾರಮಾಡಿದ್ದಾನೆ. ಕುಳ ಮತ್ತು ಕ್ಷಳಗಳ ಅಂತರವನ್ನು ಬಹಳ ಚೆನ್ನಾಗಿ ಮನಗಂಡಿದ್ದಾನೆ. ಎ, ಒ ಎಂಬ ವರ್ಣಗಳು ಸ್ವಭಾವತಃ ಸ್ವತಂತ್ರವಾದ ಸ್ಥಾನವನ್ನು ಪಡೆದಿವೆ ಎನ್ನುವುದನ್ನು ಸಮರ್ಥಿಸುವ ಇವನ ವಿಧಾನ ಆಧುನಿಕ ಭಾಷಾ ವಿಜ್ಞಾನಿಗಳು ಒಪ್ಪುವಂತಿವೆ. ಹಳಗನ್ನಡದ ವ್ಯಂಜನಾಂತ ಶಬ್ದಗಳು ಸ್ವರಾಂತವಾಗುತ್ತಿದ್ದ ವಿಚಾರ, ಲಾಂತಾ ಶಬ್ದಗಳು ಳಾಂತಾವಾಗಿ ಬಳಕೆಗೆ ಬರುತ್ತಿದ್ದ ಅಂಶ, ಬಿಂದುಲೋಪ, ಬಿಂದು ವಿಕಲ್ಪ, ಶಿಥಿಲದ್ವಿತ್ವ-ಈ ಹಲವಾರು ಸಂಗತಿಗಳನ್ನು ಕೇಶಿರಾಜ ತನ್ನದೇ ಆದ ನೂತನ ಸರಣಿಯಲ್ಲಿ ಪ್ರಸ್ತಾಪಿಸಿದ್ದಾನೆ. ಸಂಧಿಕಾರ್ಯಗಳನ್ನು ಪ್ರಸ್ತಾಪಿಸುವಲ್ಲಿಯೂ ಕನ್ನಡಕ್ಕೆ ಸಹಜವಾದ ಲೋಪ, ಆಗಮ, ಆದೇಶ ಸಂಧಿಗಳನ್ನು ಸ್ವೀಕರಿಸಿದ್ದಾನೆ ವಿನಾ ಸಂಸ್ಕøತದ ಸಂಧಿಕಾರ್ಯಗಳ ಸೊಲ್ಲನ್ನು ಎತ್ತಿಲ್ಲ. ನಾಮಪ್ರಕರಣದಲ್ಲಿ ಸಮಸಂಸ್ಕøತಕ್ಕೆ ಕೇಶಿರಾಜ ಕೊಟ್ಟಿರುವ ಅನ್ಯದೇಶದ ಸ್ಥಾನವು ಗಮನಾರ್ಹವಾದುದು. ಇಂತೆಯೇ ಇವನ ತತ್ಸಮದ ಕಲ್ಪನೆ ಇತರ ವೈಯಾಕರಣರಂತಿಲ್ಲ. ಪಾಕಾರಾದಿಯ ದೇಶ್ಯಶಬ್ದ ಹಕಾರವಾಗತೊಡಗಿರುವುದನ್ನು ಈತ ಮನಗಂಡು ಅದಕ್ಕೆ ಅಂಗೀಕಾರದ ಮುದ್ರೆಯನ್ನೊತ್ತಿದ್ದಾನೆ. ಕನ್ನಡದ ದ್ವಿವಚನ ಪ್ರಯೋಗ, ಮೂರು ಲಿಂಗಗಳು ಮಾತ್ರ ಆದರಣೀಯವೆಂಬ ಅಭಿಪ್ರಾಯ, ಪ್ರಥಮ ವಿಭಕ್ತಿಯ ಸ್ವರೂಪ ವೈಶಿಷ್ಟ್ಯ, ತೃತೀಯ, ಪಂಚಮಿ ವಿಭಕ್ತಿಗಳ ಸಮೀಕರಣ, ವಿಭಕ್ತಿ ಪಲ್ಲಟದಲ್ಲಿ ವ್ಯಾವಹಾರಿಕ ಭಾಷೆಯ ಪಾತ-ಮೊದಲಾದವು ಇಂದಿನ ಭಾಷಾ ತಜ್ಞರ ವಿಚಾರಸರಣಿಯನ್ನೇ ಹೋಲುತ್ತವೆ. ಕನ್ನಡದ ವಾಕ್ಯ ರಚನೆಗೆ ಸಂಬಂಧಿಸಿದಂತೆ ಕರ್ಮಣಿ ಪ್ರಯೋಗದ ಕೃತಕತೆಯನ್ನು ಗಮನಿಸಿ ಅದರ ಕಡೆಗೆ ತನ್ನ ಲಕ್ಷ್ಯವನ್ನೇ ಹೊರಳಿಸದಿರುವ ಕೇಶಿರಾಜನ ಕೆಚ್ಚು ಮೆಚ್ಚಬೇಕಾದದ್ದು. ಕೇಶಿರಾಜ ಕಲ್ಪಿಸಿರುವ ಗಮಕ ಸಮಾಸದ ಸ್ವರೂಪವು ಕುತೂಹಲಕಾರಿಯಾದದ್ದು. ಸಮಾಸಕಾರ್ಯವಾವುದೂ ಇಲ್ಲದೆ, ಸಮಾಸದ ಮೌಲ್ಯವನ್ನು ಪಡೆಯುವ ನಿದರ್ಶನಗಳನ್ನು ಆಧುನಿಕ ಭಾಷಾ ವಿಜ್ಞಾನಿಗಳು ವಿಶ್ಲೇಷಿಸುವ ಶಬ್ದ ಸಂಯೋಗದ ವಿವಿಧ ವಿನ್ಯಾಸಗಳಿಗೆ ಅಳವಡಿಸಿ ನೋಡಿದ್ದೇ ಆದರೆ ಈ ಬಗ್ಗೆ ಹೆಚ್ಚು ವಿಚಾರ ಬೆಳಕಿಗೆ ಬರಬಹುದು. ಕೇಶಿರಾಜ ಎಷ್ಟರಮಟ್ಟಿಗೆ ಸಾಂಪ್ರದಾಯಕ ವೈಯಾಕರಣನೋ ಅದಕ್ಕೂ ಮಿಗಿಲಾಗಿ ಸ್ವತಂತ್ರವಿಚಾರಪರನಾದ ಭಾಷಾ ವಿಜ್ಞಾನಿಯೂ ಹೌದು. ತನ್ನನ್ನು ಕವಿ ಕೇಶವನೆನ್ ಎಂದು ಹೇಳಿಕೊಂಡು ಹೆಮ್ಮೆಪಟ್ಟಿದ್ದರೂ ಇವನ ಮನೋಧರ್ಮದಲ್ಲಿ ಅಡಗಿರುವ ಶಾಸ್ತ್ರ ತುಂಬಾ ಶ್ಲಾಘ್ಯವಾದುದು. ಇದಲ್ಲದೆ ಈತ ಉತ್ತಮನಾದ ನಿಘಂಟುಕಾರನೂ ಹೌದು. ನಾನಾರ್ಥವನ್ನು ತಿಳಿಸುವ ಳ್ ಸಮೇತವಾದ ಶಬ್ದಗಳ ಕೋಶವಾಗಲಿ, ನಿತ್ಯಬಿಂದು, ವಿಕಲ್ಪ ಬಿಂದು, ನಿತ್ಯದ್ವಿತ್ವ, ಶಿಥಿಲದ್ವಿತ್ವಗಳನ್ನು ತಿಳಿಸುವ ಪದಗಳ ಪಟ್ಟಿಯಾಗಲೀ, ಕನ್ನಡ ಧಾತುಗಳನ್ನು ಕುರಿತ ಶಬ್ದಸಂಗ್ರಹವಾಗಲಿ, ಪ್ರಯೋಗಸಾರವೆಂಬ ಶಬ್ದಾರ್ಥಕೋಶವಾಗಲಿ ಇದಕ್ಕೆ ಸಾಕ್ಷಿಯಾಗಿವೆ. ಕೇಶಿರಾಜನ ವ್ಯಾಕರಣವನ್ನು ಆಧುನಿಕ ಭಾಷಾ ವಿಜ್ಞಾನಿಗಳ ದೃಷ್ಟಿಯಿಂದ ಅಧ್ಯಯನ ಮಾಡಬೇಕೆಂಬ ಕುತೂಹಲ ಇದೀಗ ಮೊದಲಾಗಿದೆ. ಈ ಪ್ರಯತ್ನ ಸಫಲವಾದಂದು, ಕನ್ನಡದ ಈ ವ್ಯಾಕರಣಕ್ಕೆ ಕನ್ನಡಿಗರು ಮಾತ್ರವಲ್ಲದೆ, ಇತರ ದ್ರಾವಿಡ ಭಾಷಾ ವಿಜ್ಞಾನಿಗಳು ಹೆಮ್ಮೆಪಡುವಂತಾಗಬಹುದು.

 (ವಿ.ಜಿ.)