ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೈಟಿನ್

ವಿಕಿಸೋರ್ಸ್ದಿಂದ
Jump to navigation Jump to search

ಕೈಟಿನ್

ಸಂಧಿಪದಿಗಳ, ವಲಯವಂತಗಳ ಮತ್ತು ಬಹುಪಾಲು ಬಗೆಯ ಶಿಲೀಂಧ್ರಗಳ ಶರೀರ ರಚನೆಯಲ್ಲಿ ಕಾಣಬರುವ ಪ್ರಮುಖ ಬಗೆಯ ಬಹುಶರ್ಕರ (ಪಾಲಿಸ್ಯಾಕರೈಡ್). ಕವಲೊಡೆಯದ ಬಲು ಉದ್ದವಾದ ಸರಪಳಿಯಂತಿರುವ ಕೈಟಿನ್ ಅಣು ಓ-ಅಸಿಟೈಲ್-ಜ-ಗ್ಲೂಕೋಸಮೈನಿನ ಸಾವಿರಾರು ಘಟಕಗಳಿಂದ ರಚಿತವಾಗಿದೆ. ಈ ಘಟಕಗಳು (-1, 4 ಗ್ಲೈಕೊಸಿಡಿಕ್ ಬಂಧಗಳಿಂದ ಪರಸ್ಪರ ಸೇರಿಕೊಂಡಿವೆ. ಎಕ್ಸ್‍ಕಿರಣ ನಮನ ಅಭ್ಯಾಸಗಳ ಫಲವಾಗಿ ಕೈಟಿನ್ನಿನಲ್ಲಿ (, ( ಮುಂತಾದ ಹಲವಾರು ಸ್ಫಟಿಕಸಂರಚನಾತ್ಮಕ ಪ್ರರೂಪಗಳಿರುವುದು ಕಂಡುಬಂದಿದೆ. ಸ್ವಾಭಾವಿಕವಾಗಿ ಕೈಟಿನ್ ಪ್ರೋಟೀನುಗಳೊಂದಿಗೆ ಕೂಡಿಕೊಂಡು ಗ್ಲೈಕೋ ಪ್ರೋಟೀನ್ ರೂಪದಲ್ಲಿ ಸ್ಥಿತವಾಗಿರುತ್ತದೆ. ಪೊಟಾಸಿಯಮ್ ಇಲ್ಲವೆ ಸೋಡಿಯಮ್ ಹೈಡ್ರಾಕ್ಸೈಡುಗಳೊಂದಿಗೆ ಕಾಯಿಸಿ ಅನಂತರ ಸಾರರಿಕ್ತ ಆಮ್ಲ ಮತ್ತು ಪ್ರಬಲವಾದ ಉತ್ಕರ್ಷಣಕಾರಿಯೊಂದಿಗೆ ವರ್ತಿಸುವುದರಿಂದ ಕೈಟಿನ್ನನ್ನು ಶುದ್ಧ ರೂಪದಲ್ಲಿ ಪಡೆಯಬಹುದು. ಶುದ್ಧರೂಪದ ಕೈಟಿನ್ ಬಣ್ಣವಿಲ್ಲದ ಪುಡಿಯಂತಿರುತ್ತದೆ; ನೀರಿನಲ್ಲಾಗಲಿ ಸಾರರಿಕ್ತ ಆಮ್ಲ ಇಲ್ಲವೆ ಕ್ಷಾರಗಳಲ್ಲಾಗಲೀ ಕರಗುವುದಿಲ್ಲ. ಆದರೆ ಸಾರ ಆಮ್ಲಗಳೊಂದಿಗೆ ಇಲ್ಲವೆ ಕೈಟಿನೇಸ್ ಎಂಬ ಕಿಣ್ವದೊಂದಿಗೆ ಸೇರಿಸಿ ಬಹುಕಾಲ ಇಟ್ಟರೆ ಜಲವಿಶ್ಲೇಷಣೆಗೊಳಗಾಗುತ್ತದೆ. ಕೈಟಿನ್ನಿನ ಸ್ವಾಭಾವಿಕ ಸಂಶ್ಲೇಷಣೆಗೆ UಆP-ಓ-ಅಸಿಟೈಲ್ ಗ್ಲೂಕೋಸಮೈನ್ ಎಂಬ ಪೂರ್ವಗಾಮಿ ಸಂಯುಕ್ತ ಹಾಗೂ ನಿರ್ದಿಷ್ಟ ಬಗೆಯ ಕಿಣ್ವ ಬೇಕು. ಅಲ್ಲದೆ ಅತ್ಯಲ್ಪ ಮೊತ್ತದಲ್ಲಿ ಮೊದಲೇ ತಯಾರಾದ ಈ ಬಹುಶರ್ಕರವಾಗಲೀ ಅದರಿಂದ ಉತ್ಪತ್ತಿಯಾಗುವ ಕಡಿಮೆ ಅಣುತೂಕದ ಡೆಕ್ಸ್‍ಟ್ರಿನ್ ಆಗಲಿ ಅವಶ್ಯಕ ಎಂದು ತೋರುತ್ತದೆ. ಇವು ಹೊಸ ಕೈಟಿನ್ ಅಣುಗಳ ಸಂಶ್ಲೇಷಣೆಗೆ ಮಾದರಿಗಳಾಗುತ್ತವೆ. ಬಸವನಹುಳು, ಭೂಮಿಯಲ್ಲಿ ವಾಸಿಸುವ ಬ್ಯಾಕ್ಟೀರಿಯ, ಎರೆಹುಳು ಮುಂತಾದ ಪ್ರಾಣಿಗಳಲ್ಲಿ ಕೈಟಿನ್ನನ್ನು ವಿಭಜಿಸುವ ಕಿಣ್ವವಾದ ಕೈಟನೇಸ್ ಎಂಬುದು ಕಂಡುಬರುತ್ತದೆ. (ಎಂ.ಆರ್.ಆರ್.)