ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೈಮೀರ ಮೀನು

ವಿಕಿಸೋರ್ಸ್ದಿಂದ

ಕೈಮೀರ ಮೀನು

ಕಾಂಡ್ರಿಕ್ಥಿಸ್ ವರ್ಗದ ಹೋಲೊಸೆಫಾಲಿ ಉಪವರ್ಗಕ್ಕೆ ಸೇರಿದ ಕೈಮಿರಿಡೆ ಕುಟುಂಬದ ಮೀನುಗಳಿಗಿರುವ ಸಾಮಾನ್ಯ ಹೆಸರು. ಇವುಗಳಿಗೆ ಇಲಿಮೀನು, ಮೊಲಮೀನು, ಇತ್ಯಾದಿ ಪರ್ಯಾಯ ನಾಮಗಳಿವೆ. ಇವು ಸಮುದ್ರದಂತರಾಳದಲ್ಲಿ ತೀರದ ಆಳ ನೀರುಗಳಲ್ಲಿ ವಾಸಿಸುತ್ತವೆ. ಪೂರ್ವ ಅಟ್ಲಾಂಟಿಕ್, ಮೆಡಿಟರೇನಿಯನ್ ಸಮುದ್ರಗಳಲ್ಲಿ ಹೆಚ್ಚಾಗಿ ಕಂಡಿಬರುತ್ತವೆ. ಇವು ಮಧ್ಯಮ ಗಾತ್ರದವುಗಳಾಗಿದ್ದು ಸುಮಾರು 2 ರಿಂದ 6 ಅಡಿವರೆಗೆ ಬೆಳೆಯುತ್ತವೆ. ಕೈಮೀರ, ಹೈಡ್ರೋಗಾಲಸ್ ಜಾತಿಯ ಮೀಣುಗಳು ದುಂಡಾದ ಅಥವಾ ಶಂಕಾಕೃತಿ ಮೂತಿಯನ್ನು ಹೊಂದಿವೆ, ಹ್ಯಾರಿಯೊಟ್ಟ ಜಾತಿಯ ಮೀನು ಉದ್ದದ ಚೂಪಾದ ಮೂತಿಯನ್ನು ಹೊಂದಿದೆ. ನೋಡಲು ಇವು ಬಲು ವಿಚಿತ್ರ ಬಗೆಯ ಮೀನುಗಳು. ದೊಡ್ಡ ಕಣ್ಣುಗಳು, ತೆಳುವಾದ ಚಾಟಿಯಂತಿರುವ ಬಾಲ, ದೊಡ್ಡ ಭುಜದ ಈಜುರೆಕ್ಕೆ, ಮೊದಲ ಬೆನ್ನು ಈಜುರೆಕ್ಕೆಯ ಮುಂದೆ ಮುಳ್ಳು ಇದ್ದು ಕೆಲವು ಮೀನುಗಳಲ್ಲಿ ಈ ಮುಳ್ಳಿನಲ್ಲಿ ವಿಷವಿರುತ್ತದೆ. ತಲೆಯ ಇಕ್ಕೆಲದಲ್ಲಿ ನಾಲ್ಕು ಜೊತೆ ಕಿವಿರುಗಳು ಮತ್ತು ಅವನ್ನು ಮುಚ್ಚುವ ಕಿವಿರು ಮುಚ್ಚಳಗಳು, ಹುರುಪೆಗಳಿಲ್ಲದ ನಯವಾದ ಚರ್ಮ, ಮೃದ್ವಸ್ಥಿಯಿಂದ ರಚಿತವಾಗಿರುವ ಅಸ್ಥಿ ಪಂಜರ, ಸಂಪೂರ್ಣವಾಗಿ ಬೆನ್ನೆಲುಬಾಗಿ ಮಾರ್ಪಾಡಾಗಿರದ ನೋಟೋಕಾರ್ಡ್, ಚೆನ್ನಾಗಿ ರೂಪುಗೊಂಡಿರುವ ಪಾಶ್ರ್ವರೇಖೆಯ ಜ್ಞಾನೇಂದ್ರಿಯ, ತಲೆಬುರುಡೆಯೊಂದಿಗೆ ಐಕ್ಯವಾಗಿರುವ ಮೇಲ್ದವಡೆ - ಇವು ಕೈಮೀರ ಮೀನುಗಳ ವಿಶಿಷ್ಟ ಲಕ್ಷಣಗಳು. ಇವಕ್ಕೆ ಕ್ಲೋಯಕಾ ವಿಸರ್ಜನಾ ದ್ವಾರವಾಗಲೀ, ಅನುಷಂಗಿಕ ಶ್ವಾಸನೇಂದ್ರಿಯವಾಗಲಿ ಇಲ್ಲ. ಈ ಮೀನುಗಳು ನಿಶಾಚರಿಗಳಾಗಿದ್ದು ಕೆಲವು ಸಣ್ಣ ಅಕಶೇರುಕಗಳು, ಮತ್ತು ಮೀನುಗಳನ್ನು ತಿನ್ನುತ್ತವೆ. ಗಂಡು ಕೈಮೀರ ಮೀನುಗಳಿಗೆ ಐದು ಆಲಿಂಗನಾಂಗಗಳಿವೆ (ಕ್ಲಾಸ್ಪರ್ಸ್). ತಲೆಯ ಭಾಗದಲ್ಲಿರುವ ಆಲಿಂಗನಾಂಗಕ್ಕೆ ಸೆಫಾಲಿಕ್ ಕ್ಲಾಸ್ಪರ್ ಎಂದು ಹೆಸರು. ಸಂತಾನೊತ್ಪತ್ತಿಯ ಸಮಯದಲ್ಲಿ ಇವು ಹೆಣ್ಣಿನ ಪುಷ್ಠ ಭಾಗದ ರೆಕ್ಕೆಗಳನ್ನು ಬಲವಾಗಿ ತಬ್ಬಿಕೊಳ್ಳಲು ಸಹಾಯಕವಾಗಿವೆ.

(ಬಿ.ಆರ್.ಸಿ.ಆರ್.; ಟಿ.ಎಸ್.ವಿಶ್ವನಾಥ್)