ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೈವಾರ

ವಿಕಿಸೋರ್ಸ್ದಿಂದ

ಕೈವಾರ :- ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಿಂದ 8 ಮೈ. ದೂರದಲ್ಲಿರುವ ಗ್ರಾಮ. ಇದು ಪುರಾಣಕಾಲದ ಏಕಚಕ್ರಪುರವೆಂದು ಪ್ರಸಿದ್ಧವಾಗಿದೆ. ಅರಗಿನ ಮನೆಯಿಂದ ತಪ್ಪಿಸಿಕೊಂಡು ಹೋದ ಪಾಂಡವರು ಕೆಲಕಾಲ ಇಲ್ಲಿ ವಾಸಿಸುತ್ತಿದ್ದರೆಂದೂ ನೆರೆಯ ಬೆಟ್ಟದಲ್ಲಿ ಸೇರಿಕೊಂಡು ಅಲ್ಲಿಯ ಜನರಿಗೆ ತೊಂದರೆ ಕೊಡುತ್ತಿದ್ದ ಬಕಾಸುರನನ್ನು ಭೀಮ ಕೊಂದು ಅವನ ಶವವನ್ನು ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿದನೆಂದೂ ಐತಿಹ್ಯವಿದೆ.

ಕೈವಾರದಲ್ಲಿ ಹಲವಾರು ಹಳೆಯ ದೇವಾಲಯಗಳ ಅವಶೇಷಗಳುಂಟು. 1283ಕ್ಕೂ ಹಿಂದಿನಿಂದಲೂ ಅಮರನಾರಾಯಣ, ಭೀಮೇಶ್ವರ ಮತ್ತು ಸಹದೇವೇಶ್ವರ ವಿಗ್ರಹಗಳಿದ್ದುವೆಂಬುದು ಇಲ್ಲಿ ದೊರಕಿರುವ ತಮಿಳು ಮತ್ತು ಗ್ರಂಥಲಿಪಿಗಳ ಮಿಶ್ರಶಾಸನಗಳಿಂದ ತಿಳಿದುಬರುತ್ತದೆ. ಈಗಿರುವ ದೇವಸ್ಥಾನಗಳನ್ನು ಬಹುಶಃ 1280ರಲ್ಲಿ ಕಟ್ಟಿಸಿ, ಅವಕ್ಕೆ ದತ್ತಿಗಳನ್ನು ಬಿಟ್ಟಂತೆ ತಿಳಿದುಬರುತ್ತದೆ. ಅಮರನಾರಾಯಣ ದೇವಾಲಯ ಇಲ್ಲಿಯ ಮುಖ್ಯ ವಾಸ್ತುಕೃತಿ. ಇಟ್ಟಿಗೆಗಳಿಂದ ಕಟ್ಟಿದ ಶಿಖರವನ್ನುಳ್ಳ ಗರ್ಭಗೃಹ, ಸಣ್ಣ ಸುಕನಾಸಿ, ನಾಲ್ಕು ಕಂಬಗಳಿರುವ ನವರಂಗ, ಉತ್ತರ ಭಾಗದಲ್ಲಿ ಒಂದು ಸಣ್ಣ ಗುಡಿ ಮತ್ತು ಮುಖಮಂಟಪಗಳಿಂದ ಇದು ಕೂಡಿದೆ.

ಮುಖಮಂಟಪ ಬಹಳ ಸುಂದರ. ಮುಂಭಾಗದ ಎರಡು ಕಂಬಗಳ ಮೇಲೆ ಅಮೋಘವಾದ ವಿಮಾನ, ಸಿಂಹ ಮತ್ತು ಇತರ ಪ್ರಾಣಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಹಾರುತ್ತಿರುವ ಸಿಂಹ, ಮಕರ ಮತ್ತು ಗಂಧರ್ವರ ಚಿತ್ರಗಳನ್ನು ಉತ್ತರ ಭಾಗದ ಕಂಬದ ಮೇಲೆ ಕೆತ್ತಲಾಗಿದೆ. ನವರಂಗದ ಮಹಾದ್ವಾರ ಉತ್ತಮವಾದ ಕೆತ್ತನೆಗಳಿಂದ ತುಂಬಿದೆ; ದಾಲವಂದದ ಮೇಲೆ ನೃತ್ಯಗಾಯನಗಳಲ್ಲಿ ತೊಡಗಿರುವ ಗಂಧರ್ವರ ಮಧ್ಯೆ ಇರುವ ಕಲಶದಿಂದ ಹೂಬಳ್ಳಿಗಳು ಹಬ್ಬುತ್ತಿರುವಂತೆ ಚಿತ್ರಿಸಲಾಗಿದೆ. ದಕ್ಷಿಣದ ದ್ವಾರಸ್ತಂಭದ ಮೇಲೆ ಹಂಸ, ನವಿಲು, ಸಿಂಹ, ಹುಲಿ ಮತ್ತು ಸವಾರಿ ಆನೆಗಳನ್ನು ಚಿತ್ರಿಸಿದೆ. ಉತ್ತರ ದ್ವಾರಸ್ತಂಭ ಮತ್ತು ದಾಲವಂದಗಳ ಮೇಲೆ ಗಂಧರ್ವರ ಚಿತ್ರಗಳನ್ನು ಕೆತ್ತಲಾಗಿದೆ. ದಾಲವಂದದ ಮಧ್ಯದಲ್ಲಿ ಕೆತ್ತಿರುವ ಚಿತ್ರ ಸಿಂಹಮುಖ. 25 ಅಡಿ ಚಚ್ಚೌಕದ ನವರಂಗದ ದಕ್ಷಿಣಭಾಗದಲ್ಲಿ ಕಲ್ಲಿನ ಕಿಟಕಿಯೂ ಉತ್ತರ ಭಾಗದಲ್ಲಿ ವಿಜಯನಗರಸಾಮ್ರಾಜ್ಯದ ಕಾಲದ, ಸೀತಾರಾಮಲಕ್ಷ್ಮಣರ ಪ್ರತಿಮೆಗಳಿರುವ, ಸಣ್ಣ ಗುಡಿಯೂ ಇವೆ. ನವರಂಗದ ಚಾವಣಿಯ ಮಧ್ಯದಲ್ಲಿ ಒಂಬತ್ತು ಫಲಕಗಳುಂಟು. ನಡುವೆ ಹಂಸವಾಹನ ತ್ರಿಮುಖ ಬ್ರಹ್ಮನನ್ನೂ ಸುತ್ತಲೂ ಅಷ್ಟದಿಕ್ಪಾಲಕರನ್ನೂ ಕಡೆಯಲಾಗಿದೆ. ಇಲ್ಲಿಯ ಕಂಬಗಳ ಮೇಲೆ ವಿವಿಧ ದೇವತೆಗಳ, ಗಂಧರ್ವರ ಮತ್ತು ಸಿಂಹಗಳ ಚಿತ್ರಗಳಿವೆ. ಸಣ್ಣದಾದ ಸುಕನಾಸಿ, ಅನಂತರ ಗರ್ಭಗುಡಿ; ಅಲ್ಲಿ ಸ್ಥಾಪಿಸಿರುವ ಸುಂದರ ಪ್ರತಿಮೆ ಅಮರನಾರಾಯಣನದು.

ಭೀಮೇಶ್ವರ ದೇವಾಲಯ ಅಮರನಾರಾಯಣ ದೇವಾಲಯಕ್ಕಿಂತಲೂ ದೊಡ್ಡದು. ಅದರಲ್ಲಿ ಗರ್ಭಗುಡಿ, ಸುಕನಾಸಿ, ಅರ್ಧಮಂಟಪ ಮತ್ತು ರಂಗಮಂಟಪಗಳುಂಟು. ಅಲ್ಲಿರುವ ಹದಿನಾರು ಮುಖಗಳ ಕಂಬಗಳ ಮೇಲೆ, ದೇವತೆಗಳ, ವೀರರ, ಹೂ ಮತ್ತು ಎಲೆಗಳ ಚಿತ್ರಗಳನ್ನು ಕೆತ್ತಲಾಗಿದೆ. ನವರಂಗದ ಮತ್ತು ಮುಂಭಾಗದ ಕಂಬಗಳು ವಿಜಯನಗರದ ಶೈಲಿಗೆ ಸೇರಿದವು. ಚಾವಣಿಯ ಕೆತ್ತನೆಗಳು ಮತ್ತು ಕೆಲವು ತಮಿಳು ಶಾಸನಗಳು 1294ರ ಸುಮಾರಿಗೆ-ಹೊಯ್ಸಳ ಮುಮ್ಮಡಿ ವೀರಬಲ್ಲಾಳನ ಕಾಲಕ್ಕೆ-ಸೇರುತ್ತವೆ. ಆಗ ಇದ್ದ ದೇವಾಲಯವನ್ನು ಅಚ್ಯುತರಾಯ-ಕೃಷ್ಣದೇವರಾಯರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿರಬಹುದು.

ಅಲ್ಲಿರುವ ಇತರ ದೇವಾಲಯಗಳಿಲ್ಲಿ ಸಹದೇವೇಶ್ವರ ಮತ್ತು ನಕುಲೇಶ್ವರ ಮಂದಿರಗಳು ಸಣ್ಣವು. ಸಹದೇವೇಶ್ವರ ಮಂದಿರದ ಗೋಡೆಗಳ ಮೇಲೆ ಅನೇಕ ತಮಿಳು ಶಾಸನಗಳುಂಟು. ಬಹಶಃ ಹೊಯ್ಸಳ ಸಾಮಂತನಾಗಿದ್ದ, 1280-1290ರ ಸುಮಾರಿನಲ್ಲಿ ಕೈವಾರ ನಾಡಿನ ರಾಜ್ಯಪಾಲನಾಗಿದ್ದ, ಚೋಳ ದುಟ್ಟರಾದಿತ್ಯ ರಾಜನಾರಾಯಣನ ಉಲ್ಲೇಖ ಈ ಶಾಸನಗಳಲ್ಲಿವೆ. ಇಲ್ಲಿಯ ಶಿವದೇವಾಲಯಗಳನ್ನು ಈತ ಕಟ್ಟಿಸಿರಬಹುದು. (ಬಿ.ಕೆ.ಜಿ.)