ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಂಡ ಮಾವು

ವಿಕಿಸೋರ್ಸ್ ಇಂದ
Jump to navigation Jump to search

ಕೊಂಡ ಮಾವು

ಕಾಮಿಫೋರ ಕಾಡೇಟ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಣ್ಣಗಾತ್ರದ ಮರ. ಬೆಟ್ಟಮಾವು ಪರ್ಯಾಯನಾಮ. ಗುಗ್ಗುಳಮರದ (ಕಾಮಿಫೋರ ಮುಕುಲ್ ಪ್ರಭೇದ) ಹತ್ತಿರ ಸಂಬಂಧಿ. ಬರ್ಸರೇಸೀ ಕುಟುಂಬಕ್ಕೆ ಸೇರಿದೆ. ಏಷ್ಯ ಮತ್ತು ಆಫ್ರಿಕಗಳ ಮೂಲ ವಾಸಿಯಾದ ಇದು ದಕ್ಷಿಣಭಾರತದಲ್ಲೆಲ್ಲ ಬಲುಸಾಮಾನ್ಯ. ಶೀಘ್ರವಾಗಿ ಮತ್ತು ಯಾವ ಬಗೆಯ ಆರೈಕೆಯ ಅಗತ್ಯವಿಲ್ಲದೆ ಬೆಳೆಯುವುದರಿಂದ, ಇದನ್ನು ತೋಟಗಳಲ್ಲಿ, ರಸ್ತೆಗಳ ಬದಿಗಳಲ್ಲಿ, ಬೇಲಿಗಳಲ್ಲಿ ಬೆಳೆಸುವುದಿದೆ. ಕಾಂಡತುಂಡುಗಳನ್ನು ನೆಟ್ಟು ಇದನ್ನು ಬೆಳೆಸುವುದೇ ವಾಡಿಕೆಯಲ್ಲಿರುವ ಕ್ರಮ. ಕೊಂಡಮಾವಿನ ತೊಗಟೆ ಬಹಳ ನವುರಾಗಿದ್ದು ಕಾಗದವನ್ನು ಹೋಲುತ್ತದೆ. ಎಲೆ ಹಾಗೂ ಮರದ ತೊಗಟೆಗಳಿಗೆ ಮಾವಿನಹಣ್ಣಿನ ವಾಸನೆಯಿದೆ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದರಲ್ಲೂ 2-5 ಜೋಡಿ ಕಿರು ಎಲೆಗಳಿವೆ. ಎಲೆಗಳ ಜೋಡಣೆ ಪರ್ಯಾಯ ಮಾದರಿಯದು. ಹೂಗಳೂ ಸಂಕೀರ್ಣ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದು ಹೂವಿನಲ್ಲೂ ಸಾಮಾನ್ಯವಾಗಿ 4 ಪುಷ್ಪಪತ್ರಗಳು, 4 ದಳಗಳು, 8-10 ಕೇಸರಗಳು, ಉಚ್ಚಸ್ಥಾನದ ಅಂಡಾಶಯ ಇವೆ. ಅಂಡಕೋಶದಲ್ಲಿ 2-4 ಕೋಣೆಗಳಿದ್ದು ಒಂದೊಂದರಲ್ಲೂ 2 ಅಂಡಕಗಳಿವೆ. ಫಲ ಅಷ್ಟಿಫಲ ಮಾದರಿಯದು. ಗಾತ್ರ ಬಟಾಣಿ ಕಾಳಿನಷ್ಟು. ಇದರಿಂದ ಉಪ್ಪಿನಕಾಯಿ ಹಾಕುತ್ತಾರೆ. ಈ ಮರದಿಂದ ಗೋಂದು ಮಿಶ್ರಿತ ರೆಸಿóನ್ ವಸ್ತುವನ್ನು ಪಡೆಯಬಹುದಾಗಿದ್ದು ಅದನ್ನು ಧೂಪದಂತೆ ಬಳಸುವುದುಂಟು. (ಬಿ.ಸಿ.)