ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಡುಗೆ
ಕೊಡುಗೆ
ಕೊಡುಗೆ ಶಬ್ದದ ವ್ಯಾಖ್ಯೆಯನ್ನು ಕುರಿತು ವಿವೇಚಿಸುವಾಗ ಭಾರತದ ಸ್ವತ್ತು ವರ್ಗಾವಣೆ ಕಾಯಿದೆ, ಕೊಡುಗೆ ತೆರಿಗೆಗೆ ಸಂಬಂಧಿಸಿದ ಕಾಯಿದೆ, ಹಿಂದೂ ಮತ್ತು ಇಸ್ಲಾಮೀ ನ್ಯಾಯಸೂತ್ರಗಳು ಇವನ್ನು ಗಮನದಲ್ಲಿಡಬೇಕು. ಸಂದರ್ಭಗಳಿಗನುಗುಣವಾಗಿ ಈ ಶಬ್ದದ ವ್ಯಾಖ್ಯೆ ಮತ್ತು ವ್ಯಾಪ್ತಿ ಬದಲಾಗುತ್ತದೆ. ಅಸ್ತಿತ್ವದಲ್ಲಿರುವ, ನಿಶ್ಚಿತವಾದ ಚರ ಅಥವಾ ಸ್ಥಿರ ಸ್ವತ್ತನ್ನು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಸ್ವ ಇಚ್ಛೆಯಿಂದ ಮತ್ತು ಪ್ರತಿಫಲವಿಲ್ಲದೆ ಮಾಡುವ ವರ್ಗಾವಣೆ ಮತ್ತು ಆ ಇನ್ನೊಬ್ಬ ವ್ಯಕ್ತಿಯಿಂದ ಅಥವಾ ಆತನ ಪರವಾಗಿ ಅದರ ಸ್ವೀಕಾರ-ಇದನ್ನು ಕೊಡುಗೆ (ಗಿಫ್ಟ್) ಎಂದು ಭಾರತದ ಸ್ವತ್ತು ವರ್ಗಾವಣೆ ಕಾಯಿದೆಯಲ್ಲಿ ಹೇಳಲಾಗಿದೆ. ಕೊಡುಗೆ ನೀಡುವವನು ದಾನಿ (ಡೋನಾರ್). ಅದನ್ನು ಸ್ವೀಕರಿಸುವವನು ಪ್ರತಿಗ್ರಹಿ (ಡೋನೀ). ಅತ್ಯಂತ ಪ್ರಾಚೀನ ಕಾಲದಿಂದಲೂ ವಿಶ್ವದ ಜನಾಂಗಗಳಲ್ಲಿ ಕೊಡುಗೆಯ ಪದ್ಧತಿ ಬೆಳೆದು ಬಂದಿದೆ. ದೇಶ ಕಾಲ ಸಂದರ್ಭಾನುಗುಣವಾಗಿ ಕೊಡುಗೆಗೆ ಭಿನ್ನಭಿನ್ನ ವ್ಯಾಖ್ಯೆಗಳನ್ನು ಕೊಡಬಹುದಾದರೂ ಅದರ ಮೂಲ ಸ್ವರೂಪಗಳಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಒಬ್ಬ ವ್ಯಕ್ತಿ ಸ್ವ ಇಚ್ಛೆಯಿಂದ ಮತ್ತು ಯಾವೊಂದು ಪ್ರತಿಫಲವಿಲ್ಲದೆ ಕೇವಲ ಪ್ರೀತಿ ಇಲ್ಲವೇ ಸ್ನೇಹ ವಿಶ್ವಾಸಗಳ ದ್ಯೋತಕವಾಗಿ ತನ್ನ ಸ್ಥಿರ ಅಥವಾ ಚರ ಸ್ವತ್ತನ್ನು ಇನ್ನೊಬ್ಬನಿಗೆ ಕೊಡಮಾಡುವುದು ಕೊಡುಗೆಯೆಂಬುದನ್ನು ಸ್ಥೂಲವಾಗಿ ಸ್ವೀಕರಿಸಬಹುದಾಗಿದೆ. ಹಣದ ರೂಪದಲ್ಲಿ ಅಥವಾ ಹಣದ ಮೌಲ್ಯವಿರುವ ಸ್ವತ್ತಿನ ರೂಪದಲ್ಲಿ ಪ್ರತಿಫಲವನ್ನು ಪಡೆದು ಏನನ್ನಾದರೂ ನೀಡಿದರೆ ಅದು ಕೊಡುಗೆ ಎನಿಸುವುದಿಲ್ಲ.
ದಾನಿಯ ಜೀವಿತಕಾಲದಲ್ಲಿ ಕೊಟ್ಟದ್ದು, ಮರಣ ನಿರೀಕ್ಷೆಯಿಂದ ಕೊಟ್ಟದ್ದು ಎಂದು ಕೊಡುಗೆಗಳನ್ನು ಎರಡು ಬಗೆಗಳಾಗಿ ವಿಂಗಡಿಸುವುದು ಸಾಮಾನ್ಯವಾಗಿದೆ. ಈ ವಿಂಗಡಣೆಯ ಪದ್ಧತಿ ಅಮೆರಿಕ ಮುಂತಾದ ಅನೇಕ ದೇಶಗಳಲ್ಲಿ ಇದೆ. ದಾನಿಯ ಜೀವಿತಕಾಲದಲ್ಲಿ ಕೊಟ್ಟ ಕೊಡುಗೆಗಳನ್ನು ಅಪೂರ್ಣ ಕೊಡುಗೆಗಳು ಮತ್ತು ತತ್‍ಕ್ಷಣ ಆಚರಣೆಯಲ್ಲಿ ಬರುವ ಕೊಡುಗೆಗಳು ಎಂಬುದಾಗಿಯೂ ವಿಂಗಡಿಸಲಾಗುತ್ತದೆ. ದಾನಿ ಮತ್ತು ಪ್ರತಿಗ್ರಹಿ ಇಬ್ಬರೂ ಬದುಕಿದ್ದಾಗ ನೀಡಲಾದ ಕೊಡುಗೆಯನ್ನು ಮಾತ್ರ ಭಾರತದ ಸ್ವತ್ತು ವರ್ಗಾವಣೆ ಕಾಯಿದೆಯಲ್ಲಿ ವಿವೇಚಿಸಲಾಗಿದೆ. ಉಯಿಲು ಅಥವಾ ಅಂತಿಮ ಇಷ್ಟಪತ್ರದಿಂದ ಅಥವಾ ವಂಶಪಾರಂಪರ್ಯವಾಗಿ ಬಂದ ಕೊಡುಗೆ ಭಾರತೀಯ ಉತ್ತರಾಧಿಕಾರ ಕಾಯಿದೆಯ ವಿವೇಚನೆಗೆ ಒಳಪಟ್ಟ ವಿಚಾರ, ಮರಣದ ನಿರೀಕ್ಷೆಯಿಂದ ಕೊಡಲಾದ ಕೊಡುಗೆಗಳಿಗೆ ಅನ್ವಯವಾಗುವ ಹಿಂದೂ ಮತ್ತು ಇಸ್ಲಾಮಿ ನ್ಯಾಯ ಸೂತ್ರಗಳು ಸ್ವಲ್ಪ ಭಿನ್ನವಾಗಿವೆ.
ಭಾರತೀಯ ಸ್ವತ್ತುವರ್ಗಾವಣೆ ಕಾಯಿದೆಯ ಪ್ರಕಾರ ಕೊಡುಗೆಯ ವಸ್ತು ಚರ ಅಥವಾ ಸ್ಥಿರ ಸ್ವತ್ತಾಗಿರಬಹುದು. ಅದು ಅಸ್ತಿತ್ವದಲ್ಲಿರಬೇಕು. ಅದು ದಾನಿಯ ಒಡೆತನದಲ್ಲಿದ್ದು ಅವನ ಸ್ವಾಧೀನದಲ್ಲಿರಬೇಕು. ಅವನು ಅದನ್ನು ಕೊಡಲು ಅರ್ಹತೆ ಪಡೆದಿರಬೇಕು. ಸ್ವ ಇಚ್ಛೆಯಿಂದ ಮತ್ತು ಯಾವ ಪ್ರತಿಫಲವನ್ನೂ ಪಡೆಯದೆ ಕೊಡುಗೆಯನ್ನು ಪ್ರತಿಗ್ರಹಿಯ ಸ್ವಾಧೀನಕ್ಕೆ ವಹಿಸಿಕೊಡಬೇಕು. ದಾನಿಯ ಜೀವಿತ ಕಾಲದಲ್ಲಿ ಹಾಗೂ ಕೊಡಲು ಅವನಿಗೆ ಅರ್ಹತೆಯಿದ್ದಾಗಲೇ ಪ್ರತಿಗ್ರಹಿ ಕೊಡುಗೆಯನ್ನು ಸ್ವೀಕರಿಸಬೇಕು. ಸ್ವತ್ತಿನ ವರ್ಗಾವಣೆ ಕೊಡುಗೆಯ ಅಂತಿಮ ಘಟ್ಟ. ಭಾರತದ ಸ್ವತ್ತು ವರ್ಗಾವಣೆ ಕಾಯಿದೆಯ 122ನೆಯ ಪ್ರಕರಣದಲ್ಲಿ ಹೇಳಲಾಗಿರುವ ಈ ತತ್ತ್ವಗಳು ಸ್ಥೂಲವಾಗಿ ಇಂಗ್ಲಿಷ್ ನ್ಯಾಯದ ತತ್ತ್ವಗಳಿಗೆ ಅನುಗುಣವಾಗಿವೆ.
ಕೊಡುಗೆಯ ಸ್ವತ್ತು ವರ್ಗ ಕೊಡಲು ಸಾಧ್ಯವಾಗದ ಸ್ವರೂಪದ್ದಾಗಿದ್ದರೆ ಅಂಥ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಸ್ವತ್ತಿನ ವರ್ಗಾವಣೆಯ ಅವಶ್ಯಕತೆಯಿಲ್ಲ. ಪ್ರತಿಗ್ರಹಿ ಅದರ ಒಡೆಯನೆಂಬಂತೆ ನಡೆದುಕೊಳ್ಳಲು ಸಾಧ್ಯವಾಗುವಂತೆ ಸ್ವತ್ತನ್ನು ವಹಿಸಿಕೊಟ್ಟರೆ ಸಾಕು.
ಕೊಡುಗೆಗಳನ್ನು ವರ್ಗಾಯಿಸುವ ವಿಧಾನವನ್ನು ಭಾರತದ ಸ್ವತ್ತು ವರ್ಗಾವಣೆ ಕಾಯಿದೆಯ 123ನೆಯ ಪ್ರಕರಣದಲ್ಲಿ ಹೇಳಲಾಗಿದೆ. ಸ್ಥಿರ ಸ್ವತ್ತಿನ ರೂಪದ ಕೊಡುಗೆಗಳನ್ನು ವರ್ಗಾಯಿಸಬೇಕಾದರೆ ತತ್ಸಂಬಂಧದ ಕೊಡುಗೆ ಪತ್ರಕ್ಕೆ ದಾನಿ ಸಹಿ ಮಾಡಿರಬೇಕು. ಅದನ್ನು ಪುಷ್ಟೀಕರಿಸಲು ಇಬ್ಬರು ಸಾಕ್ಷಿಗಳ ಸಹಿ ಇರಬೇಕು. ಮತ್ತು ಆ ಪತ್ರವನ್ನು ನೋಂದಾಯಿಸಿ ಪ್ರತಿಗ್ರಹಿಗೆ ವಹಿಸಿಕೊಡಬೇಕು. ಚರ ಸ್ವತ್ತಿನ ರೂಪದ ಕೊಡುಗೆಗಳನ್ನು ಮೇಲೆ ಕಾಣಿಸಿದ ರೀತಿಯಲ್ಲಿ ವರ್ಗಾಯಿಸಬಹುದು. ಇಲ್ಲವೆ ಅವನ್ನು ಪ್ರತಿಗ್ರಹಿಯ ಸ್ವಾಧೀನಕ್ಕೆ ವಹಿಸಿಕೊಡಬಹುದು. ಇಂಗ್ಲೆಂಡಿನಲ್ಲಿ ವಂಚನೆಗಳಿಗೆ ಸಂಬಂಧಿಸಿದ ಕಾಯಿದೆಯನ್ವಯ, ಕೊಡುಗೆಯ ಸ್ವತ್ತು ವರ್ಗಾವಣೆ ಪತ್ರಗಳು ವಿಲೇಖ ರೂಪದಲ್ಲಿರಬೇಕಾಗುತ್ತದೆ.
ಕೊಡುಗೆ ದುರುದ್ದೇಶದಿಂದ ಪ್ರೇರಿತವಾಗಿರಬಾರದು. ಯಾರನ್ನಾದರೂ ವಂಚಿಸಲು ಅಥವಾ ತನ್ನ ಸ್ವತ್ತಿನ ಮೇಲಿನ ಋಣದಿಂದ ಅದನ್ನು ವಿಮೋಚನಗೊಳಿಸುವ ಉದ್ದೇಶದಿಂದ ನೀಡಲಾದ ಕೊಡುಗೆಗಳನ್ನು ಸಂಬಂಧಪಟ್ಟವರು ನ್ಯಾಯಾಲಯದಲ್ಲಿ ಪ್ರಶ್ನಿಸಿ ಆ ಬಗ್ಗೆ ಪರಿಹಾರ ಪಡೆಯಬಹುದು.
ಪ್ರಾಚೀನ ಕಾಲದಿಂದಲೂ ಭಾರತದ ಜನಪದದಲ್ಲಿ ಕೊಡುಗೆ ಪ್ರೀತಿಯ ದ್ಯೋತಕವಾಗಿತ್ತು ಎಂಬುದಕ್ಕೆ ಈಗಲೂ ಹಳ್ಳಿಗಳಲ್ಲಿ ಕೊಡುವ ಜನ್ನಿಗೆ ಮತ್ತು ಬಳುವಳಿಗಳು ನಿದರ್ಶನ. ಆದರೆ ಹಲವಾರು ರೀತಿಯ ತೆರಿಗೆಗಳು ಮತ್ತು ಶುಲ್ಕಗಳನ್ನು ತಪ್ಪಿಸಲು ಕೊಡುಗೆ ಒಂದು ಅಕ್ರಮ ಮಾರ್ಗವಾಗಹತ್ತಿತ್ತು. ಇದರಿಂದಾಗಿ ಕೊಡುಗೆ ತೆರಿಗೆ (ನೋಡಿ- ಕೊಡುಗೆ-ತೆರಿಗೆ) ಅಸ್ತಿತ್ವಕ್ಕೆ ಬಂತು. (ಎಲ್.ಎಸ್.ಜೆ.)