ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊನ್ನಾರಿಗೆಡ್ಡೆ
ಕೊನ್ನಾರಿಗೆಡ್ಡೆ
ಹೊಲಗದ್ದೆ ಮುಂತಾದೆಡೆಗಳಲ್ಲಿ ಕಳೆಯಾಗಿ ಬೆಳೆಯುವ ಒಂದು ಮೂಲಿಕೆ ಸಸ್ಯ. ಸೈಪರೇಸೀ ಕುಟುಂಬಕ್ಕೆ ಸೇರಿದೆ. ನೋಡುವುದಕ್ಕೆ ಹುಲ್ಲಿನಂತೆಯೇ ಕಾಣುತ್ತದೆ. ಸೈಪರಸ್ ರೊಟಂಡಸ್ ಇದರ ವೈಜ್ಞಾನಿಕ ಹೆಸರು. ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ನಟ್ ಗ್ರಾಸ್ ಅಥವಾ ಕೋಕೋ ಗ್ರಾಸ್ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ ಕೊನ್ನಾರಿಹುಲ್ಲು, ತುಂಗೆಹುಲ್ಲು, ತುಂಗೆಗೆಡ್ಡೆ ಎಂಬ ಹೆಸರುಗಳೂ ಇವೆ. ಪ್ರಪಂಚದಾದ್ಯಂತ ಇದರ ವ್ಯಾಪ್ತಿ ಉಂಟು. ಭಾರತದಲ್ಲಿ ಇದು ಸಮುದ್ರಮಟ್ಟದಿಂದ ಹಿಡಿದು 6,000' ಎತ್ತರದ ವರೆಗಿನ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದನ್ನೆ ಹೋಲುವ ಸೈಪರಸ್ ಎಸ್ಕುಲೆಂಟಸ್, ಸೈಪರಸ್ ಬಲ್ಬೋಸಸ್, ಸೈಪರಸ್ ಸಿರ್ಪಸ್ ಎಂಬ ಪ್ರಭೇದಗಳೂ ಭಾರತದಲ್ಲಿ ಬೆಳೆಯುತ್ತಿದ್ದು ಇವನ್ನೂ ಕೊನ್ನಾರಿಗೆಡ್ಡೆಯೆಂದೇ ನಿರ್ದೇಶಿಸುದುಂಟು.
ಕೊನ್ನಾರಿಗೆಡ್ಡೆ ಬಹುವಾರ್ಷಿಕ, ತಾನು ಬೆಳೆಯುವ ಪರಿಸ್ಥಿತಿಯನ್ನು ಅನುಸರಿಸಿ ಸುಮಾರು 0.5'-2' ಎತ್ತರಕ್ಕೆ ಬೆಳೆಯುತ್ತದೆ. ಇದರ ಕಾಂಡ ಗೆಣ್ಣುಕಾಂಡವೆಂಬ (ಕಲ್ಮ್) ಭೂಮಿಯ ಮೇಲಿನ ಭಾಗವನ್ನೂ ಪ್ರಕಂದ (ರೈeóÉೂೀಮ್) ಎಂಬ ಭೂಗತ ಭಾಗವನ್ನೂ ಒಳಗೊಂಡಿದೆ. ಪ್ರಕಂದಭಾಗ ಭೂಮಿಯ ಒಳಗೆ ಅದಕ್ಕೆ ಸಮಾಂತರವಾಗಿ ವಿಪುಲವಾಗಿ ಹರಡಿಕೊಂಡು ಬೆಳೆಯುತ್ತದೆ. ಅಲ್ಲಲ್ಲಿ ಇದು ಉಬ್ಬಿಕೊಂಡು ಗೆಡ್ಡೆಗಳಾಗಿ (ಟ್ಯೂಬರ್ಸ್) ರೂಪುಗೊಂಡಿರುತ್ತದೆ. ಗೆಡ್ಡೆಗಳು ಎಳೆಯವಾಗಿದ್ದಾಗ ಬಿಳಿಯಾಗಿದ್ದು ರಸವತ್ತಾಗಿರುತ್ತವೆ; ಬಲಿತಾಗ ಕಪ್ಪುಬಣ್ಣಕ್ಕೆ ತಿರುಗುವುವಲ್ಲದೆ ಗಟ್ಟಿಯಾಗಿಬಿಡುತ್ತದೆ; ಆಗ ಪ್ರಕಂದಭಾಗದಿಂದ ಬೇರುಗಳೂ ಹುಟ್ಟಿಕೊಳ್ಳುತ್ತವೆ. ಗೆಣ್ಣುಕಾಂಡ ಮುಮ್ಮೂಲೆಯಾಗಿದೆ. ಅದರ ಬುಡದಿಂದ ಉದ್ದನೆಯ ಹಾಗೂ ಹುಲ್ಲಿನ ಎಸಳನ್ನು ಹೋಲುವ ಎಲೆಗಳು ಹೊರಡುತ್ತವೆ. ಹೂಗೊಂಚಲು ಸಂಯುಕ್ತ ಛತ್ರಮಂಜರಿ (ಕಾಂಪೌಂಡ್ ಅಂಬೆಲ್) ಮಾದರಿಯದು; ಚಿಕ್ಕಗಾತ್ರದ ಅಸಂಖ್ಯ ಹೂಗಳನ್ನು ಇಲ್ಲವೆ ತೆನೆಗಳನ್ನು (ಸ್ಟೈಕ್‍ಲೆಟ್ಸ್) ಒಳಗೊಂಡಿದೆ. ತೆನೆಗಳ ಬುಡದಲ್ಲಿ ಅವನ್ನು ಸುತ್ತುವರಿದಂತೆ 2-4 ಉಪಪತ್ರಗಳಿವೆ. ಹೂಗಳು ದ್ವಿಲಿಂಗಿಗಳು; ಒಂದೊಂದರಲ್ಲೂ ಒಣಹುಲ್ಲಿನ ಇಲ್ಲವೆ ಕಂದುಬಣ್ಣದ 2 ಪುಚ್ಛಗಳೂ (ಗ್ಲೂಮ್ಸ್) 3 ಕೇಸರಗಳೂ ಒಂದೇ ಕಾರ್ಪೆಲಿನಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯವೂ ಇವೆ. ಅಂಡಕೋಶದ ಒಳಗೆ ಒಂದೇ ಒಂದು ಅಂಡಕವಿದೆ. ಫಲ ನಟ್ ಮಾದರಿಯದು; ದೀರ್ಘ ಅಂಡಾಕಾರದ್ದೂ ಬಲುಗಟ್ಟಿಯಾದುದೂ ಆಗಿದೆ.
ಎಲ್ಲ ಬಗೆಯ ಹವಾಗುಣಕ್ಕೂ ಮಣ್ಣುಗಳಿಗೂ ಹೊಂದಿಕೊಂಡು ಸಮೃದ್ಧವಾಗಿ ಬೆಳೆಯಬಲ್ಲ ಸಾಮಥ್ರ್ಯ ಕೊನ್ನಾರಿಗೆಡ್ಡೆಗಿದೆ; ಹೊಲದಲ್ಲೊ ಗದ್ದೆಯಲ್ಲೋ ಒಂದು ಕಡೆ ಕಾಣಿಸಿಕೊಂಡರೆ ಸಾಕು ಬಲುಬೇಗ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಆಕ್ರಮಿಸಿಬಿಡುತ್ತದೆ. ಪ್ರಕಂದದಲ್ಲಿರುವ ಗೆಡ್ಡೆಗಳೇ ಈ ಪುನರುತ್ಪತ್ತಿಗೆ ಮುಖ್ಯಕಾರಣ. ಗಿಡದಿಂದ ಗೆಡ್ಡೆಯೊಂದನ್ನು ಬೇರ್ಪಡಿಸಿ ಬೇರೆಡೆಯಲ್ಲಿ ನೆಟ್ಟರೆ, ಸುಮಾರು 3 ವಾರಗಳ ಅನಂತರ ಅದರಿಂದ ಹೊಸಗೆಡ್ಡೆಯೊಂದು ಹುಟ್ಟಿಕೊಳ್ಳುವುದೆಂದೂ ಸುಮಾರು 3 1/2 ತಿಂಗಳ ಅನಂತರ 146 ಗೆಡ್ಡೆಗಳು ರೂಪುಗೊಳ್ಳುವುವೆಂದೂ ಹಸಿರುಮಂದಿರಗಳಲ್ಲಿ (ಗ್ರೀನ್ ಹೌಸ್) ನಡೆಸಿರುವ ಪ್ರಯೋಗಗಳಿಂದ ಕಂಡುಬಂದಿದೆ. ಹೀಗೆ ಕೊನ್ನಾರಿಗೆಡ್ಡೆಯಲ್ಲಿ ಗೆಡ್ಡೆಗಳೇ ಸಂತಾನೋತ್ಪತ್ತಿಯ ಪ್ರಮುಖ ಸಾಧನಗಳಾಗಿವೆ. ಬೀಜಗಳಿಂದ ಪುನರುತ್ಪತ್ತಿ ಇಲ್ಲವೆಂದಲ್ಲ. ಆದರೆ ಬೀಜಗಳ ಮೂಲಕ ಸಂತಾನೋತ್ಪತ್ತಿಯಾಗುವುದು ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ. ತನ್ನ ಅಬೀಜ ಪುನರುತ್ಪತ್ತೀಯ ಸಾಮಥ್ರ್ಯದಿಂದಾಗಿ ಈ ಗಿಡ ಒಂದು ಪ್ರಮುಖ ಬಗೆಯ ಕಳೆಗಿಡವಾಗಿದೆ. ಅಲ್ಲದೆ ಇದರ ನಿರ್ಮೂಲನೆಯೂ ಕಷ್ಟಕರವಾದ ಸಮಸ್ಯೆಯಾಗಿದೆ. ಪ್ರಪಂಚದ ಹಲವಾರು ದೇಶಗಳಲ್ಲಿ ಇದರ ನಿರ್ಮೂಲನೆಯ ವಿಷಯವಾಗಿ ವಿಶದವಾಗಿ ಪರಿಶೀಲನೆಗಳು ನಡೆದಿವೆ. ಭೂಮಿಯ ಮೇಲಿನ ಇದರ ಕಾಂಡ ಭಾಗಗಳನ್ನು ಪದೇಪದೇ ಕತ್ತರಿಸುವುದರಿಂದ ಗೆಡ್ಡೆಗಳ ಶಕ್ತಿಶೋಷಣವಾಗಿ ಅವು ಸತ್ತುಹೋಗುತ್ತವೆ ಎಂದು ಹೇಳಲಾಗಿದೆ. ಆದರೆ ಈ ಕ್ರಮ ಬಹಳ ಸಮಯ ಹಿಡಿಯುವುದಲ್ಲದೆ ಶ್ರಮದಾಯಕ. ಭೂಮಿಯನ್ನು ಚೆನ್ನಾಗಿ ಮತ್ತು ಆಳವಾಗಿ ಉಳುವುದರಿಂದ ಸುಮಾರು 6" ಆಳದಲ್ಲಿ ಹುದುಗಿರುವ ಗೆಡ್ಡೆಗಳನ್ನು ನಾಶಪಡಿಸಬಹುದು. ಬೇಸಗೆಯಲ್ಲಿ ಭೂಮಿಯನ್ನು ಆಳವಾಗಿ ಉತ್ತು, ಮಣ್ಣನ್ನು ತಿರುವಿಹಾಕಿ ಗೆಡ್ಡೆಗಳನ್ನು ಸುಮಾರು 45 ದಿವಸಗಳ ಕಾಲ ಬಿಸಿಲಿಗೆ ಒಡ್ಡುವುದರಿಂದ ಅವನ್ನು ಸಂಪೂರ್ಣವಾಗಿ ನಾಶಪಡಿಸಬಹುದು. ಹಸಿರುಗೊಬ್ಬರವಾಗಿ ಬಳಕೆಯಾಗುವ ಯಾವುದಾದರೂ ಬೆಳೆಯನ್ನು ದಟ್ಟವಾಗಿ ಬೆಳೆಸಿ ಅದನ್ನು ಭೂಮಿಯೊಳಗೇ ಉತ್ತುಬಿಡುವುದರಿಂದಲೂ ಕೊನ್ನಾರಿಗೆಡ್ಡೆಯನ್ನು ನಿರ್ಮೂಲ ಮಾಡಬಹುದೆಂದು ತಿಳಿದುಬಂದಿದೆ. ಈ ವಿಧಾನಗಳಲ್ಲದೆ ಕ್ಲೋರಪಿಕ್ರಿನ್ ಎಂಬ ರಾಸಾಯನಿಕ ದ್ರಾವಣದ ಹೊಗೆಯನ್ನು ಹಾಕುವುದರಿಂದಲೂ ಇದನ್ನು ನಾಶಪಡಿಸಬಹುದೆಂದು ಗೊತ್ತಾಗಿದೆ. ಆದರೆ ಈ ವಿಧಾನ ಬಹಳ ಖರ್ಚಿನದು. ನೆಲವನ್ನು ಸುಮಾರು 5"-6" ಆಳಕ್ಕೆ ಉತ್ತು, ಮಣ್ಣನ್ನು ತಿರುವಿಹಾಕಿ, ಸೋಡಿಯಮ್ ಕ್ಲೋರೇಟ್ ಮತ್ತು ಕ್ಯಾಲ್ಸಿಯಮ್ ಥಯೋಸಯನೈಟ್ ದ್ರಾವಣಗಳನ್ನು ಪ್ರಯೋಗಿಸುವುದರಿಂದ ಕೊನ್ನಾರಿಗೆಡ್ಡೆಯನ್ನು ಸಂಪೂರ್ಣವಾಗಿ ನಾಶಪಡಿಸಬಹುದೆಂದು ಖಚಿತಪಡಿಸಲಾಗಿದೆ.
ಕೊನ್ನಾರಿಗೆಡ್ಡೆ ಕಳೆಗಿಡವೆಂದು ಹೆಸರಾಗಿದ್ದರೂ ಇದಕ್ಕೆ ಉಪಯುಕ್ತ ಗುಣಗಳೂ ಇಲ್ಲದಿಲ್ಲ. ಗೆಡ್ಡೆಗಳು ಸುವಾಸನಾಯುಕ್ತವಾಗಿರುವುದರಿಂದ ಇವನ್ನು ಒಣಗಿಸಿ ಔಷಧಿ ಮತ್ತು ಸುಗಂಧ ದ್ರವ್ಯಗಳ ಹಾಗೂ ಅಗರಬತ್ತಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೆಡ್ಡೆಗಳಿಗೆ ಔಷಧೀಯ ಗುಣವೂ ಉಂಟು. ಉತ್ತೇಜನಕಾರಿ, ಶಕ್ತಿವರ್ಧಕ, ಜಂತುನಾಶಕ, ಪಚನಕಾರಿ, ಸ್ವೇದಕಾರಿ, ಪ್ರತಿಬಂಧಕ, ಮೂತ್ರಸ್ರಾವ ಉತ್ತೇಜಕ, ಶಾಮಕ ಮುಂತಾದುದೆಂದು ಇದು ಹೆಸರುವಾಸಿಯಾಗಿದೆ. ಗೆಡ್ಡೆಗಳಿಂದ ತಯಾರಿಸಲಾಗುವ ಕಷಾಯವನ್ನು ಜ್ವರ, ಅತಿಸಾರ, ಆಮಶಂಕೆ, ವಾಂತಿ, ಅಜೀರ್ಣ ಮುಂತಾದ ವಿಕಾರಗಳಲ್ಲಿ ಉಪಯೋಗಿಸುತ್ತಾರೆ. ಗೆಡ್ಡೆಗಳನ್ನು ಹೆರೆದು, ಹಸಿ ಶುಂಠಿಯೊಂದಿಗೆ ಜಜ್ಜಿ, ಜೇನುತುಪ್ಪದೊಂದಿಗೆ ಮಿಶ್ರಮಾಡಿ ಆಮಶಂಕೆ ಹಾಗೂ ಕರುಳು ವಿಕಾರಗಳಿಗೆ ಶಾಮಕವಾಗಿ ಕೊಡುತ್ತಾರೆ. ಹೊಸದಾಗಿ ತೆಗೆದ ಗೆಡ್ಡೆಗಳನ್ನು ಕುಟ್ಟಿ ಲೇಪಮಾಡಿ ಮೊಲೆಗಳಿಗೆ ಹಚ್ಚುವುದರಿಂದ ಕ್ಷೀರಸ್ರಾವ ಸುಲಭವಾಗುವುದೆಂದು ಹೇಳಲಾಗಿದೆ. ಚೇಳುಕಡಿತದ ಉರಿಯನ್ನಿಳಿಸಲೂ ಕೆಲವು ಬಗೆಯ ವ್ರಣಗಳ ನಿವಾರಣೆಗೂ ಇದರ ಲೇಪವನ್ನು ಹಚ್ಚುವುದುಂಟು. ಕೊನ್ನಾರಿಗೆಡ್ಡೆಯನ್ನು ರಕ್ತಚಂದನ, ಲಾವಂಚ, ಕಲ್ಲಸಬತ್ರಸೀಗೆ, ಬಾಲರಕ್ಕಸಿಗಿಡ ಮತ್ತು ಒಣಶುಂಠಿ ಹಾಗೂ ನೀರಿನೊಂದಿಗೆ ಸೇರಿಸಿ ಕುದಿಸಿ ತಯಾರಿಸಲಾಗುವ ಕಷಾಯವನ್ನು ಜ್ವರದ ತಾಪ ಇಳಿಸುವುದಕ್ಕೂ ಬಾಯಾರಿಕೆಯನ್ನು ನಿವಾರಿಸುವುದಕ್ಕೂ ಬಳಸುತ್ತಾರೆ. (ಎಸ್.ಡಿ.ಕೆ.)