ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಲ್ಲಿಪಾಕಿ

ವಿಕಿಸೋರ್ಸ್ದಿಂದ

ಕೊಲ್ಲಿಪಾಕಿ

ಆಂಧ್ರಪ್ರದೇಶದ ನಲಗೊಂಡ ರಾಜ್ಯಕ್ಕೆ ಸೇರಿದ ಒಂದು ಸ್ಥಳ. ಭೊನಗಿರ್ (ಭುವನಗಿರಿ) ಜಿಲ್ಲೆ ಆಲೇರು ನಿಲ್ದಾಣಕ್ಕೆ ಸಮೀಪದಲ್ಲಿದೆ. ಇದಕ್ಕೆ ಕೊಲನುಪಾಕ ಎಂಬ ಇನ್ನೊಂದು ಹೆಸರೂ ಇದೆ. ಇದು ಜೈನ ಹಾಗೂ ವೀರಶೈವರ ಪವಿತ್ರ ಸ್ಥಳ ಎನಿಸಿದೆ. ಇಲ್ಲಿ ವೃಷಭನಾಥನ (ಮಾಣಿಕ್ಯದೇವ) ಬಸದಿ ಹಾಗೂ ಈಶ್ವರನ ದೇವಾಲಯಗಳಿವೆ. ವರ್ಷಕ್ಕೊಮ್ಮೆ ವೃಷಭನಾಥನ ಜಾತ್ರೆ ನಡೆಯುತ್ತದೆ. ಇಲ್ಲಿ ಕಾಕತೀಯರ ಶಾಸನಗಳು ದೊರೆತಿವೆ. ಕಲ್ಯಾಣ ಚಾಳುಕ್ಯರ ಒಂದನೆಯ ಸೋಮೇಶ್ವರ ಕೆಲಕಾಲ ಇಲ್ಲಿದ್ದನೆಂದು ತಿಳಿದುಬರುತ್ತದೆ.

ವೀರಶೈವ ಪಂಚಾಚಾರ್ಯರಲ್ಲಿ ಒಬ್ಬರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು (ರೇವಣಸಿದ್ದೇಶ್ವರರು) ಕೊಲ್ಲಿಪಾಕಿ ಸೋಮೇಶ್ವರ ಲಿಂಗದಿಂದ ಅವತರಿಸಿದರೆಂದು ವೀರಶೈವ ಪುರಾಣಗಳಲ್ಲಿ ಹೇಳಿದೆ. ಓರಂಗಲ್ಲಿನ ಪ್ರತಾಪರುದ್ರದೇವನ ಸಮಾಧಿ ಇರುವುದು ಇಲ್ಲೆ. ಇಲ್ಲಿ ವೀರಶೈವರ ಅಷ್ಟಾದಶ ಮಠಗಳಿವೆ. ಈ ಎಲ್ಲ ಮಠಗಳಿಗೂ ಜಂಗಮರು ಗುರುಗಳಾಗಿದ್ದಾರೆ. ಕಲ್ಯಾಣಕ್ಕೆ ಮೊದಲೂ ಕಲ್ಯಾಣದ ಅನಂತರವೂ ಕೊಲ್ಲಿಪಾಕಿ ವೀರಶೈವ ಧರ್ಮದ ಕೇಂದ್ರವೆನಿಸಿದಂತೆ ತೋರುತ್ತದೆ. ಶ್ರೀಶೈಲ, ದ್ರಾಕ್ಷಾರಾಮ ಮತ್ತು ಕೊಲ್ಲಿಪಾಕಿ ಕ್ಷೇತ್ರಗಳ ಪ್ರಸಿದ್ಧ ಈಶ್ವರ ಲಿಂಗಗಳಿಂದಲೇ ತೆಲುಗು ದೇಶಕ್ಕೆ ತ್ರಿಲಿಂಗ ದೇಶ ಎಂಬ ಹೆಸರು ಬರಲು ಕಾರಣವೆನ್ನಲಾಗಿದೆ. ಕೊಲ್ಲಿಪಾಕಿ ಕ್ಷೇತ್ರದ ಮಹಿಮೆಯನ್ನು ಹೇಳುವ ಕೆಲವು ಗ್ರಂಥಗಳೂ ಇವೆ. (ಬಿ.ಎಸ್.)