ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊವಲ್, ಎಡ್ವರ್ಡ್‌ ಬೈಲ್ಸ್‌

ವಿಕಿಸೋರ್ಸ್ದಿಂದ

ಕೊವಲ್, ಎಡ್‍ವರ್ಡ್ ಬೈಲ್ಸ್ 1826-1903. ಪ್ರಸಿದ್ಧ ಸಂಸ್ಕøತ ವಿದ್ವಾಂಸ. ಹುಟ್ಟಿನಿಂದ ಆಂಗ್ಲೇಯ. ಜನನ ಇಫ್ಸ್‍ವಿಚ್‍ನಲ್ಲಿ. ಆಕ್ಸ್‍ಫರ್ಡಿನ ಮ್ಯಾಗ್ಡಲೀನ್ ಕಾಲೇಜಿನಲ್ಲಿ ಓದಿ ಪದವೀಧರನಾದ (1854). ವಿದ್ಯಾರ್ಥಿ ದೆಶೆಯಲ್ಲೇ ಪುರಾತನ ಭಾಷೆಗಳಲ್ಲಿ ಆಸ್ಥೆ ತಳೆದಿದ್ದ ಈತ ಕಾಳಿದಾಸನ ವಿಕ್ರಮೋರ್ವಶೀಯದ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿದ್ದಲ್ಲದೆ (1851). ಅನೇಕ ವಿದ್ವತ್‍ಪೂರ್ಣ ಲೇಖನಗಳನ್ನೂ ಬೊಡೆಲಿಯನ್ ಗ್ರಂಥಾಲಯದ ಹಸ್ತಲಿಖಿತ ಗ್ರಂಥಗಳ ಸೂಚಿಯನ್ನೂ ತಯಾರಿಸಿದ. 1854ರಲ್ಲಿ ವರರುಚಿಯ ಪ್ರಾಕೃತ ಪ್ರಕಾಶವನ್ನೂ ಸಂಪಾದಿಸಿದ. ಟೆನಿಸನ್, ಥ್ಯಾಕರೆ, ಜೊವೆಟ್, ಮ್ಯಾಕ್ಸ್ ಮುಲ್ಲರ್ ಮತ್ತು ಎಚ್.ಎಚ್.ವಿಲ್ಸನ್ನರಂಥ ಪ್ರಸಿದ್ಧ ವಿದ್ವಾಂಸರ ಮನ್ನಣೆಗೆ ಈತ ಪಾತ್ರನಾಗಿದ್ದ.

1856ರಲ್ಲಿ ಕೊವಲ್ ಭಾರತಕ್ಕೆ ಬಂದು ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕನಾದ. 1858ರಲ್ಲಿ ಅಲ್ಲಿನ ಸಂಸ್ಕøತ ಕಾಲೇಜಿನ ಪ್ರಾಚಾರ್ಯನಾದ. ಅಲ್ಲಿದ್ದ ಉಮರನ ಒಸಗೆಯ ಪಾರಸಿ ಮೂಲದ ಹಸ್ತಪ್ರತಿಯನ್ನು ಶೋಧಿಸಿ ಎಡ್‍ವರ್ಡ್ ಫಿಟ್ಸ್‍ಜೆóರಾಲ್ಡ್ ಅವರಿಗೆ ಕೊಟ್ಟು ಸಹಾಯ ಮಾಡಿದ. ಬಂಗಾಳದ ಏಷ್ಯಾಟಿಕ್ ಸೊಸೈಟಿಯ ಆಶ್ರಯದಲ್ಲಿ ಹೊರಡುತ್ತಿದ್ದ ಬಿಬ್ಲಿಯೋಥೆಕ ಇಂಡಿಕ ಗ್ರಂಥಮಾಲೆಗೆ ಅನೇಕ ಗ್ರಂಥಗಳನ್ನು ಸಂಪಾದಿಸಿಕೊಟ್ಟ. ಉದಯನನ ನ್ಯಾಯಕುಸುಮಾಂಜಲಿ, ಕೃಷ್ಣಯಜುರ್ವೇದಸಂಹಿತ ಮುಂತಾದುವು ಇವನ ಕಾಲದಲ್ಲಿ ಪ್ರಕಟಗೊಂಡುವು. 1864ರಲ್ಲಿ ಈತ ಬರೆದ ಪ್ರಾಕೃತ ವ್ಯಾಕರಣ ಇಂಗ್ಲೆಂಡ್. ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಅಪಾರ ಮನ್ನಣೆ ಗಳಿಸಿತು. ನಿಶಿತಮತಿಯೂ ಸದಾ ಅಭ್ಯಾಸನಿರತನೂ ಆದ ಈತ ಸಂಸ್ಕøತ ಮತ್ತು ಪ್ರಾಕೃತ ಭಾಷೆಗಳಲ್ಲಿ ಆಳವಾದ ಪಾಂಡಿತ್ಯ ಪಡೆದಿದ್ದ. ಜೊತೆಗೆ ಬಂಗಾಳಿ, ಉರ್ದು, ಹಿಂದೂಸ್ತಾನಿ, ಮರಾಠಿ ಮೊದಲಾದವುಗಳ ಪರಿಚಯವೂ ಇತ್ತು. ಬೌದ್ಧಗಾಥೆಗಳ ಮತ್ತು ಅಶೋಕನ ಶಿಲಾಶಾಸನಗಳ ಭಾಷಾವಿಶೇಷವಲ್ಲದೆ ಪಾರಸಿ, ಅರಬ್ಬೀ, ಗ್ರೀಕ್, ಲ್ಯಾಟಿನ್ ಮತ್ತು ಸ್ಪ್ಯಾನಿಷ್ ಭಾಷೆಗಳೂ ಈತನಿಗೆ ತಿಳಿದಿದ್ದುವು. ಪ್ರಾಕ್ತನ ಸಂಶೋಧನೆ, ವಾಸ್ತುಶಿಲ್ಪ, ಸಸ್ಯಶಾಸ್ತ್ರ, ಭೂವಿಜ್ಞಾನಗಳಲ್ಲೂ ಈತ ಪಂಡಿತನಾಗಿದ್ದ.

1864ರಲ್ಲಿ ಇಂಗ್ಲೆಂಡಿಗೆ ತೆರಳಿದ ಈತ 1867ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಪ್ರಪ್ರಥಮ ಸಂಸ್ಕøತ ಪ್ರಾಧ್ಯಾಪಕನಾಗಿ ತನ್ನ ಕೊನೆಯ ದಿನಗಳವರೆಗೂ ಸಂಸ್ಕøತ ಭಾಷೆ ಮತ್ತು ಸಾಹಿತ್ಯ ಸೇವೆಯಲ್ಲಿ ನಿರತನಾದ. ಅಲ್ಲಿ ಭಾಷಾ ಶಾಸ್ತ್ರ ಸಂಘವೊಂದನ್ನು ಸ್ಥಾಪಿಸಿದ್ದಲ್ಲದೆ ತನ್ನ ವಿದ್ಯಾರ್ಥಿಮಿತ್ರರೊಡಗೂಡಿ ಅನೇಕ ಸಂಸ್ಕøತ ಗ್ರಂಥಗಳನ್ನು ಸಂಪಾದಿಸಿ ಭಾಷಾಂತರಿಸಿ ಪ್ರಕಟಿಸಿದ. ಅವುಗಳಲ್ಲಿ ಸರ್ವದರ್ಶನ ಸಂಗ್ರಹ (1882), ಬಾಣನ ಹರ್ಷಚರಿತ(1897) ಮತ್ತು ಅಶ್ವಘೋಷನ ಬುದ್ಧಚರಿತೆ ಮುಂತಾದ ಕೃತಿಗಳು ಮುಖ್ಯವಾದವು. ಕೋವಲ್‍ಗೆ 1875ರಲ್ಲಿ ಎಡಿನ್‍ಬರೊ ವಿಶ್ವವಿದ್ಯಾಲಯ ಎಲ್.ಎಲ್.ಡಿ ಪ್ರಶಸ್ತಿಯನ್ನೂ, 1866ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಡಿ.ಸಿ.ಎಲ್. ಪ್ರಶಸ್ತಿಯನ್ನೂ 1898ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಸುವರ್ಣಪದಕವನ್ನೂ, 1902ರಲ್ಲಿ ಬ್ರಿಟಿಷ್ ಅಕೆಡಮಿ ಮೂಲ ಸದಸ್ಯತ್ವವನ್ನೂ ಇತ್ತು ಗೌರವಿಸಿದುವು. (ಸಿ.ಜಿ.ಪಿ; ವಿ.ಎಸ್.ಬಿ.)