ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೋಕೇನ್
ಕೋಕೇನ್
ಎರಿತ್ರೋeóÉೈಲಮ್ ಕೋಕ ಎಂಬ ಗಿಡೆದ ಮತ್ತು ಅದಕ್ಕೆ ಸಂಬಂಧಿಸಿದ ಜಾತಿಯ ಗಿಡಗಳ ಎಲೆಗಳಿಂದ ಪಡೆಯಲಾಗುವ ಸಸ್ಯಕ್ಷಾರ (ಆಲ್ಕಲಾಯ್ಡ್). ದಕ್ಷಿಣ ಅಮೆರಿಕದ ಮೂಲವಾಸಿಗಳು ಕೋಕೇನ್‍ಗಿಡದ ಎಲೆಗಳಲ್ಲಿ ವೇದನಾ ಸಹಿಷ್ಣುತೆಯನ್ನು ಹೆಚ್ಚಿಸುವ ಶಕ್ತಿ ಇದೆ ಎಂಬುದನ್ನು ಅರಿತಿದ್ದರು ಎಂದು ದಕ್ಷಿಣ ಅಮೆರಿಕದ ಅನ್ವೇಷಕರು 1532ರಲ್ಲಿ ವರದಿ ಮಾಡಿದರು. ಇದರಿಂದ ಆಗಿನ ಕಾಲದ ವೈದ್ಯರಿಗೆ ಈ ಗಿಡದ ಬಗ್ಗೆ ಕುತೂಹಲ ಹುಟ್ಟಿ ಅವರು ಅಧ್ಯಯನವನ್ನು ಪ್ರಾರಂಭಿಸಿದರು. ಎಫ್.ವೋಹ್ಲರ್ ಎಂಬಾತ 1860ರಲ್ಲಿ ಮೊಟ್ಟ ಮೊದಲ ಬಾರಿಗೆ ಕೋಕೇನಿನ ವೇದನ ಪ್ರತಿಬಂಧಕ ಗುಣಗಳನ್ನು ಪ್ರಾಯೋಗಿಕವಾಗಿ ಖಚಿತಪಡಿಸಿದ. ಅನಂತರ 1884ರಲ್ಲಿ ಸಿ.ಕೋಲರ್ ಎಂಬ ವಿಜಾÐನಿ ಇಂದ್ರಿಯ ಸುಪ್ತಿಯನ್ನುಂಟುಮಾಡುವ ಪದಾರ್ಥವನ್ನಾಗಿ ಕೋಕೇನನ್ನು ಬಳಸಬಹುದೆಂದು ತೋರಿಸಿಕೊಟ್ಟ.. ಜರ್ಮನ್ ವಿಜಾÐನಿ ರಿಚರ್ಡ್ ವಿಲ್‍ಸ್ಟಾಟರ್ 1902ರಲ್ಲಿ ಕೋಕೇನನ್ನು ಕೃತಕವಾಗಿ ಸಂಶ್ಲೇಷಿಸಿದ. ಕೋಕೇನಿನ ರಚನೆ:
ಚಿತ್ರ-1
ಕೋಕೇನ್ ಒಂದು ವೇದನಾಜಡತೆ ಬರಿಸುವ ವಸ್ತು. ಇದು ನರಗಳನ್ನು ಮುಖ್ಯವಾಗಿ ಸಂವೇದನಾ ನರಗಳನ್ನು (ಸೆನ್ಸರಿ ನವ್ರ್ಸ್) ನಿಸ್ಸತ್ತ್ವಗೊಳಿಸುತ್ತದಲ್ಲದೆ ಅದರ ಪ್ರಭಾವಕ್ಕೆ ಒಳಪಟ್ಟ ಭಾಗಗಳಲ್ಲಿ ವೇದನಾಸ್ತುಪಿಯುಂಟುಮಾಡುತ್ತದೆ. ರಕ್ತ ಪರಿಚಲನೆಯ ಮೂಲಕ ಅಲ್ಪ ಮೊತ್ತದಲ್ಲಿ ಮಿದುಳನ್ನು ಸೇರಿದರೆ ಕೋಕೇನ್ ಸಂತೋಷ, ಉತ್ತೇಜನಗಳ ಭಾವನೆಯನ್ನು ಮೂಡಿಸುತ್ತದೆ. ಈ ಭಾವನೆಯೇ ಕೆಲವರನ್ನು ಕೋಕೇನಿನ ಚಟಕ್ಕೊಳಗಾಗುವಂತೆ ಪ್ರೇರೇಪಿಸುತ್ತದೆ. ಅಡ್ರಿನಲಿನ್ (ಎಪಿನೆಫ್ರಿನ್) ಉಂಟುಮಾಡುವ ರಕ್ತನಾಳಗಳ ಸಂಕುಚನೆಯನ್ನು ಕೋಕೇನ್ ಹೆಚ್ಚಿಸುವುದರಿಂದ, ಕೋಕೇನನ್ನು ಲೇಪಿಸಿದ ಭಾಗಗಳು ಬಿಳುಪೇರುತ್ತದೆ. ಜೀವಕೋಶಗಳಿಗೆ ಕೋಕೇನ್ ವಿಷವಾಗಬಲ್ಲುದು. ಇದು ಯಾವುದೇ ಅಂಗಾಂಶದಲ್ಲಿ ಹೆಚ್ಚು ಸಮಯ ಉಳಿದರೆ ಅಥವಾ ಅತಿ ಹೆಚ್ಚು ಮೊತ್ತದಲ್ಲಿದ್ದರೆ ಅಲ್ಲಿನ ಜೀವಕೋಶಗಳನ್ನು ಕೊಲ್ಲುತ್ತದೆ.
ಕೋಕೇನ್ ನೇತ್ರ ಶಸ್ತ್ರಚಿಕಿತ್ಸೆಯಲ್ಲಿ ವೇದನಾ ಪ್ರತಿಬಂಧಿಯಾಗಿ ಬಳಕೆಯಲ್ಲಿತ್ತು. ಆದರೆ ಇದು ಕಣ್ಣುಗುಡ್ಡೆಯ ಪಾರದರ್ಶಕ ಪಟಲಕ್ಕೆ ಅಪಾಯವನ್ನುಂಟು ಮಾಡುವುದರಿಂದ, ಅದರ ಬಳಕೆ ಈಗ ನಿಂತುಹೋಗಿದೆ. ಮೂಗು ಮತ್ತು ಗಂಟಲ ಚಿಕಿತ್ಸೆಯಲ್ಲಿ ಕೋಕೇನನ್ನು ವೇದನಾಪ್ರತಿಬಂಧಿಯಾಗಿ ಬಳಸುವುದು ಮಾತ್ರ ರೂಢಿಯಲ್ಲಿದೆ. (ಎಸ್.ಎಂ.ಎಸ್.)