ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೋಲಿಯಸ್

ವಿಕಿಸೋರ್ಸ್ದಿಂದ

ಕೋಲಿಯಸ್

ಇದೊಂದು ಸುಪ್ರಸಿದ್ಧ ಅಲಂಕಾರ ಎಲೆಸಸ್ಯ. ಹಚ್ಚನೆ ಹಸಿರಾಗಿರುವ ಎಲೆಗಳ ಮೇಲೆ ಬಿಳಿ, ನೀಲಿ, ಕೆಂಪು ಮುಂತಾದ ಹಲವು ಬಣ್ಣದ ಚುಕ್ಕೆಗಳಿರುವುದರಿಂದ ಈ ಸಸ್ಯ ಬಲು ಸುಂದರವಾಗಿ ಕಾಣುತ್ತದೆ. ಜೊತೆಗೆ ಎಲೆಯ ಅಂಚು ತಳಿಗಳಿಗೆ ಅನುಸಾರವಾಗಿ ವಿವಿಧ ಆಕಾರಗಳಲ್ಲಿ ಸೊಗಸಾಗಿ ಭಾಗವಾಗಿರುವುದರಿಂದ ಇದರ ಅಂದ ದ್ವಿಗುಣಗೊಂಡಿದೆ. ಇದನ್ನು ಕುಂಡಸಸ್ಯ, ಅಂಚುಸಸ್ಯ, ಕಲ್ಲೇರಿ ಸಸ್ಯ ಮುಂತಾಗಿ ಹಲವು ರೀತಿಗಳಲ್ಲಿ ಬೆಳೆಸುತ್ತಾರೆ. ಗ್ರೀಕ್ ಭಾಷೆಯಲ್ಲಿ ಕೋಲಿಯಸ್ ಎಂದರೆ ಪೊರೆ ಎಂದು ಅರ್ಥ. ಈ ಸಸ್ಯದ ಕೇಸರಗಳಿಗೆ ಪೊರೆ ಇರುವುದರಿಂದ ಈ ಹೆಸರು ಬಂದಿದೆ.

ಕೋಲಿಯಸ್ ಲೇಬಿಯೇಟೀ ಕುಟುಂಬಕ್ಕೆ ಸೇರಿದೆ. ಇದರಲ್ಲಿ 90ಕ್ಕೂ ಹೆಚ್ಚು ಬಹುವಾರ್ಷಿಕ ಪ್ರಭೇದಗಳಿವೆ. ಕೆಲವನ್ನು ಏಕವಾರ್ಷಿಕ ಗಿಡಗಳಾಗಿ ಬೆಳೆಸುವುದುಂಟು. ಬಹುಪಾಲು ಪ್ರಭೇದಗಳು 4' ಎತ್ತರ ಮೀರಿ ಬೆಳೆಯುವುದಿಲ್ಲ. ಕಾಂಡ ನಾಲ್ಕು ಮೂಲೆಗಳುಳ್ಳದ್ದು, ಎಲೆಗಳು ಸರಳ ಮಾದರಿಯವು. ಅವುಗಳ ಜೋಡಣೆ ಅಭಿಮುಖ ರೀತಿಯದು. ಅವಕ್ಕೆ ತೊಟ್ಟಿರಬಹುದು. ಅಂಚು ಗರಗಸದಂತೆ ಇಲ್ಲವೆ ಹಲ್ಲುಗಳಂತೆ ಇದೆ. ಹೂಗೊಂಚಲು ಮಧ್ಯಾರಂಭಿ ಮಾದರಿಯದು; ರೆಂಬೆಗಳ ತುದಿಯಲ್ಲಿ ಇಲ್ಲವೆ ಎಲೆಗಳ ಕಂಕುಳಲ್ಲಿ ಹುಟ್ಟುತ್ತದೆ. ಹೂಗಳು ದ್ವಿಲಿಂಗಿಗಳು. ಒಂದೊಂದು ಹೂವಿನಲ್ಲೂ 5 ಪುಷ್ಪಪತ್ರಗಳು, 5 ದಳಗಳು, 4 ಕೇಸರಗಳು, ಉಚ್ಚಸ್ಥಾನದ ಅಂಡಾಶಯ ಇವೆ. ಕಳಗಳ ಕೂಡುವಿಕೆಯಿಂದ ಉಂಟಾಗುವ ದಳ ಸಮೂಹ ಎರಡು ತುಟಿಗಳಾಗಿ ಭಾಗವಾಗಿದೆ.

ಉದ್ಯಾನಪ್ರಾಮುಖ್ಯ ಪಡೆದಿರುವ ಹಲವಾರು ಕೋಲಿಯಸ್ ಪ್ರಭೇದಗಳಲ್ಲಿ ಬಹಳ ಮುಖ್ಯವಾದವು ಕೋ.ಬ್ಲೂಮಿಯೈ. ಕೋ.ತೈರ್ಸಾಯ್ಡಿಯಸ್, ಕೋ.ಶಿರನ್ಸಿಸ್ ಎಂಬುವು. ಕೋ.ಬ್ಲೂಮಿಯೈ ಎಂಬುದು ಬಹುಶಃ ಕೋ.ಲ್ಯಾಸಿನಿಯೇಟಸ್, ಕೋ.ಬೈಕಲರ್ ಮತ್ತು ಇತರ ಬಗೆಗಳಿಂದ ಪಡೆಯಲಾದ ಅಡ್ಡತಳಿ ಇರಬೇಕೆಂದು ಅಭಿಪ್ರಾಯ ಪಡಲಾಗಿದೆ. ಹಳದಿ, ಮಾಸಲು ಹಾಗೂ ಕಡುಗೆಂಪು ಬಣ್ಣಗಳ ಮಿಶ್ರಣವನ್ನು ಪ್ರದರ್ಶಿಸುವ ಎಲೆಗಳಿಂದಾಗಿ ಈ ಪ್ರಭೇದ ಬಲು ಆಕರ್ಷಕವೆನಿಸಿದೆ.

ಕೋಲಿಯಸ್ ಸಸ್ಯವನ್ನು ಬೀಜ ಮತ್ತು ಕಾಂಡದ ತುಂಡುಗಳಿಂದ ವೃದ್ಧಿ ಮಾಡುತ್ತಾರೆ. ಬೀಜಗಳಿಂದ ವೃದ್ಧಿ ಮಾಡುವುದು ಹೆಚ್ಚು ಸಮಯ ಹಿಡಿಯುತ್ತದೆ. ಕಾಂಡ ತುಂಡುಗಳಿಂದ ಬೆಳೆಸುವುದೇ ಸುಲಭವಾದ ಮತ್ತು ವಾಡಿಕೆಯಲ್ಲಿರುವ ಕ್ರಮ. ಕಾಂಡ ತುಂಡುಗಳನ್ನು ಮರಳು ನೆಲದಲ್ಲಿ ನಾಟಿಮಾಡಿದಾಗ ಯಶಸ್ವಿಯಾಗಿ ಬೇರು ಬಿಡುತ್ತವೆ. ಗಿಡಗಳು ಚಿಕ್ಕವಾಗಿರುವಾಗ ನೆರಳು ಅಗತ್ಯ. ಹತ್ತು ದಿನಗಳಿಗೊಮ್ಮೆ ಕುದುರೆ ಗೊಬ್ಬರ ಹಾಕಬೇಕು. ಹೂಗೊಂಚಲುಗಳು ಹುಟ್ಟಿದಂತೆ ಅವನ್ನು ಕಿತ್ತು ಹಾಕುತ್ತಿರಬೇಕು. ಇದರಿಂದ ಎಲೆಗಳು ದೊಡ್ಡವಾಗಿ ಗಿಡದ ಅಂದ ಹೆಚ್ಚುತ್ತದೆ. (ಬಿ.ಎ.ಸಿ.)