ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಟಲೋನಿಯ
ಗೋಚರ
ಕ್ಯಾಟಲೋನಿಯ
ಸ್ಪೇನಿನ ಈಶಾನ್ಯ ಭಾಗದಲ್ಲಿರುವ ಒಂದು ಪ್ರಾಂತ್ಯ. ಪಿರನೀಸ್ ಪರ್ವತದ ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರದ ತೀರದಲ್ಲಿದೆ. ಬೆಟ್ಟಗುಡ್ಡಗಳಿಂದ ಕೂಡಿದ್ದರೂ ಅಲ್ಲಲ್ಲಿ ಫಲವತ್ತಾದ ಮೈದಾನಗಳಿವೆ. ದ್ರಾಕ್ಷಾರಸ ಮತ್ತು ಆಲೀವ್ ಎಣ್ಣೆ ಇಲ್ಲಿನ ಮುಖ್ಯ ವ್ಯವಸಾಯೋತ್ಪನ್ನಗಳು. ಬಟ್ಟೆ ಮತ್ತು ಯಂತ್ರಗಳ ತಯಾರಿಕೆ ಮುಖ್ಯ ಕೈಗಾರಿಕೆಗಳು.
ಕ್ಯಾಟಲನ್ ಕಲೆ ಮುಖ್ಯವಾಗಿ ಮಧ್ಯಯುಗೀನ ಮತ್ತು ಬೌದ್ಧಿಕ ಪುನರುತ್ಥಾನ ಯುಗದ ಮತೀಯ ಕಲೆಗೆ ಸಂಬಂಧಿಸಿದ್ದು. ಈ ಕಲೆ ಸು. 15ನೆಯ ಶತಮಾನದ ವೇಳೆಗೆ ಕೊನೆಗೊಂಡಿತೆಂದು ಹೇಳಬಹುದಾದರೂ ಈಗಲೂ ಇಲ್ಲಿನ ಕಲಾವಿದರು ಪ್ರಸಿದ್ಧರಾಗಿದ್ದಾರೆ. ಚರ್ಚುಗಳಲ್ಲಿ ಭಿತ್ತಿಚಿತ್ರಣ, ಕಟ್ಟಡಗಳ ಅಲಂಕರಣಕ್ಕಾಗಿ ತಯಾರಿಸಿದ ಮೂರ್ತಿಶಿಲ್ಪಗಳು ಮತ್ತು ಮತೀಯ ಗ್ರಂಥಗಳಿಗೆ ಸಂಬಂಧಿಸಿದ ಹಸ್ತಪ್ರತಿಗಳ ಚಿತ್ರಣ, ಈ ಚಿತ್ರಕಲೆಯ ಪ್ರಮುಖ ಕೊಡುಗೆಗಳು. *