ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಥರಿನ್
ಕ್ಯಾಥರಿನ್
ಯೂರೋಪಿನ ಇತಿಹಾಸದಲ್ಲಿ ಈ ಹೆಸರಿನವರು ಅನೇಕರುಂಟು. ಅವರಲ್ಲಿ ಮುಖ್ಯರಾದವರನ್ನು ಮುಂದೆ ಕೊಟ್ಟಿದೆ.
ಕ್ಯಾಥರಿನ್ I: 1684-1727. ರಷ್ಯದ ಚಕ್ರವರ್ತಿನಿ; ಬಡ ತಂದೆತಾಯಿಯರ ಮಗಳು. ಮೂರು ವರ್ಷಗಳಾಗಿದ್ದಾಗ ಇವಳು ತಬ್ಬಲಿಯಾದಳು. 1701ರಲ್ಲಿ ಮೆರೀನ್‍ಬರ್ಗ್‍ನ ಸೈನಿಕನೊಬ್ಬನನ್ನು ವಿವಾಹವಾದಳು. 1702ರಲ್ಲಿ ರಷ್ಯನರು ಈ ಪಟ್ಟಣವನ್ನು ವಶಪಡಿಸಿಕೊಂಡಾಗ ಇವಳನ್ನು ಮಾಸ್ಕೋಗೆ ಸಾಗಿಸಲಾಯಿತು. ಅಲ್ಲಿ ಇವಳು ಮೊದಲ ಬಾರಿಗೆ ಪೀಟರ್ ಮಹಾಶಯನನ್ನು ಸಂಧಿಸಿ ಅವನ ಪ್ರೇಯಸಿಯಾದಳು. 1712ರಲ್ಲಿ ಪೀಟರ್ ಇವಳನ್ನು ವಿವಾಹವಾದ. 1725ರಲ್ಲಿ ಪೀಟರನ ಮರಣಾನಂತರ ಇವಳೇ ಚಕ್ರವರ್ತಿನಿಯಾದಳು. ಇವಳ ಆಳ್ವಿಕೆಯ ಕಾಲದಲ್ಲಿ ಅಕ್ಯಾಡೆಮಿ ಆಫ್ ಸೈನ್ಸಸ್ ಎಂಬ ಸಂಸ್ಥೆ ಸ್ಥಾಪಿತವಾಯಿತು (1725). 1726ರಲ್ಲಿ ಪ್ರಿವಿ ಕೌನ್ಸಿಲ್ ಸ್ಥಾಪಿತವಾಗಿ, ವಿಧಾನಸಭೆಗಳ ಹಕ್ಕುಗಳು ಮೊಟಕುಗೊಂಡುದರಿಂದ ಅಧಿಕಾರ ಕೆಲವರ ಹಸ್ತಗತವಾಗುವಂತಾಯಿತು. ಇವಳ ಕಾಲದಲ್ಲಿ ರಷ್ಯಕ್ಕೂ ಬ್ರಿಟನ್ನಿಗೂ ವಿರಸ ಉಂಟಾಗಿ ಬ್ರಿಟಿಷರ ವಿರುದ್ಧ ಕೂಟವನ್ನು ರಷ್ಯಾ ಸೇರಿತು. 1727ರಲ್ಲಿ ಈಕೆ ತೀರಿಕೊಂಡಳು.
ಕ್ಯಾಥರಿನ್ II: ರಷ್ಯದ ಚಕ್ರವರ್ತಿನಿ. ಕ್ಯಾಥರಿನ್ ಮಹಾಶಯೆ ಎಂದು ಪ್ರಸಿದ್ಧಳಾಗಿದ್ದಾಳೆ. ಇವಳ ಮೊದಲ ಹೆಸರು ಸೋಫಿಯಾ ಅಗಸ್ಟಾ ಫ್ರೆಡೆರಿಕಾ. ಜರ್ಮನ್ ರಾಜಮನೆತನವೊಂದರಲ್ಲಿ ಹುಟ್ಟಿದಳು. ರಷ್ಯದ ಚಕ್ರವರ್ತಿನಿ ಎಲಿಜûಬೆತಳ ಸಮೀಪಬಂಧುವಾಗಿದ್ದ ಪೀಟರನೊಡನೆ 1745ರಲ್ಲಿ ಇವಳ ವಿವಾಹವಾಯಿತು. ಪತಿ ಕುರೂಪಿಯಾಗಿದ್ದುದರಿಂದ ಇವಳು ಅನೈತಿಕ ಜೀವನ ನಡೆಸಿದರೂ ಅಧಿಕಾರದಾಹದಿಂದ ಅವನನ್ನು ತ್ಯಜಿಸದೆ ಸಮಯ ಕಾಯುತ್ತಿದ್ದಳು. ಎಲಿಜûಬೆತ್ 1762ರಲ್ಲಿ ತೀರಿಕೊಂಡಾಗ ಪೀಟರ್ ಸಿಂಹಾಸನವನ್ನೇರಿದ. ಆದರೆ ಅವನು ಚಕ್ರವರ್ತಿಯಾಗಿದ್ದದ್ದು ಕೇವಲ ಕೆಲವು ತಿಂಗಳುಗಳು ಮಾತ್ರ. ಕ್ಯಾಥರಿನ್ ತನ್ನ ಪ್ರೇಮಿ ಗ್ರಿಗೊರಿ ಆರ್ಲಾಫ್ ಮತ್ತು ಇತರರ ಸಂಚಿನೊಡನೆ ಪೀಟರನನ್ನು ಸಿಂಹಾಸನದಿಂದ ಕೆಳಕ್ಕಿಳಿಸಿ ಕಾರಾಗೃಹದಲ್ಲಿರಿಸಿ, ತರುವಾಯ ಕೊಲ್ಲಿಸಿದಳು. ತಾನೇ ಚಕ್ರವರ್ತಿಯಾಗಿ ಸಿಂಹಾಸನವನ್ನೇರಿ 34 ವರ್ಷಗಳ ಕಾಲ ಆಳಿದಳು.
ಪೋಲೆಂಡಿನ ದೊರೆ 3ನೆಯ ಆಗಸ್ಟಸ್ ತೀರಿಕೊಂಡಾಗ ಕ್ಯಾಥರಿನ್ ತನಗೆ ಬೇಕಾದವನೊಬ್ಬನನ್ನು ಅಲ್ಲಿಯ ಸಿಂಹಾಸನವನ್ನೇರುವಂತೆ ಮಾಡಿದಳು. ಇದರಿಂದ ಆ ದೇಶದ ವಿಭಜನೆಯಾಗಿ ಅವಳಿಗೆ ಅನುಕೂಲವಾಯಿತು. ತುರ್ಕರೊಡನೆ ಯುದ್ಧ ನಡೆಸಿ ಕ್ರಿಮಿಯವನ್ನು ವಶಪಡಿಸಿಕೊಂಡು, ರಷ್ಯದ ನೌಕಾಪಡೆ ಕಪ್ಪು ಸಮುದ್ರವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಿದಳು. ಆ ಯುದ್ಧ ಅವಳ ಆಳ್ವಿಕೆಯ ಬಹುಕಾಲವನ್ನು ತೆಗೆದುಕೊಂಡಿತು. ಆದರೆ ಯೂರೋಪಿನಿಂದ ತುರ್ಕರನ್ನು ಬಡಿದಟ್ಟುವ ಹಾಗೂ ಬಿeóÁಂಟೈನ್ ಚಕ್ರಾಧಿಪತ್ಯವನ್ನು ಪುನಃ ಸ್ಥಾಪಿಸುವ ಅವಳ ಕನಸು ಸಾರ್ಥಕವಾಗಲಿಲ್ಲ. ಅವಳು ರಾಜ್ಯಾಡಳಿತದಲ್ಲಿ ಸುಧಾರಣೆಗಳನ್ನು ತಂದಳು. ನ್ಯಾಯಾಡಳಿತವನ್ನು ತಿದ್ದಿದಳು. ಅವಳ ಕಾಲದಲ್ಲಿ ನಾಲೆಗಳ ನಿರ್ಮಾಣವಾಯಿತು. ಒಟ್ಟಿನಲ್ಲಿ ನಾನಾ ಬಗೆಗಳಿಂದ ದೇಶದ ಜಾಗೃತಿ ಮತ್ತು ಅಭ್ಯುದಯಕ್ಕೆ ಕಾರಣವಾದಳು. ಅವಳು ಶ್ರೀಮಂತರಿಗೆ ನೀಡಿದ ಸನ್ನದಿನಿಂದ ಜೀತಗಾರರ ದಾಸ್ಯ ಸಂಪೂರ್ಣವಾದಂತಾಯಿತು. ಅವಳದು ಸಾಮ್ರಾಜ್ಯವಾದಿ ವಿದೇಶಾಂಗ ನೀತಿ. ಫ್ರಾನ್ಸಿನ ಕ್ರಾಂತಿಗೆ ಅವಳು ತೀವ್ರ ಪ್ರತಿಕ್ರಿಯೆ ಸೂಚಿಸಿದಳು. ಅಲಾಸ್ಕದಲ್ಲಿ ವಸಾಹತು ನಿರ್ಮಿಸುವ ಕಾರ್ಯದಲ್ಲೂ ತೊಡಗಿದ್ದಳು.
ಕ್ಯಾಥರಿನ್ ಬಹುಮುಖ ಪ್ರತಿಭಾವಂತೆ. ನಾಟಕ, ಕಥೆ ಮುಂತಾದವನ್ನು ಫ್ರೆಂಚ್ ಮತ್ತು ರಷ್ಯನ್ ಭಾಷೆಗಳಲ್ಲಿ ಬರೆದಿದ್ದಾಳೆ. ಆಧುನಿಕ ರಷ್ಯನ್ ಸಾಹಿತ್ಯ ಜನ್ಮತಳೆಯಲು ಅವಳ ಪ್ರೋತ್ಸಾಹವೂ ಕಾರಣ. ಅವಳ ಪ್ರೇಮಿಗಳು ಹಲವಾರು ಮಂದಿ. ಅವರ ಪೈಕಿ ಆರ್ಲಾಫ್ ಮತ್ತು ಪೊಟೆಮ್ಕಿನ್ ಮುಖ್ಯರಾದವರು. 1796ರ ನವೆಂಬರ್ 17ರಂದು ಸೇಂಟ್ ಪೀಟರ್ಸ್‍ಬರ್ಗಿನಲ್ಲಿ ಕ್ಯಾಥರಿನ್ ತೀರಿಕೊಂಡಳು.
ಕ್ಯಾಥರಿನ್ ಡಿ ಮೆಡಿಚಿ: 1519-1589. ಫ್ರಾನ್ಸಿನ 2 ನೆಯ ಹೆನ್ರಿಯ ಹೆಂಡತಿ; 9ನೆಯ ಚಾರಲ್ಸನ ಬಾಲ್ಯದಲ್ಲಿ ಅವನ ಪೋಷಕಿ. ಲೊರೆಂeóÉೂ ಡಿ ಮೆಡಿಚಿಯ ಮಗಳು. ಮೊದಲು ಆರ್ಲಿಯನ್ನಿನ ಡುನ್ನಿರ್ಲಿಯನ್ನಿರ್ಲಿಯನ್ನಿ ಫ್ರಾನ್ಸಿನ ರಾಜನಾದ 2ನೆಯ ಹೆನ್ರಿಯನ್ನು ವಿವಾಹವಾದಳು. ಇವಳ ಐವರು ಪುತ್ರರಲ್ಲಿ ಮೂವರು ಫ್ರಾನ್ಸಿನ ದೊರೆಗಳಾದರು. ಇವಳಿಗೆ ಪುತ್ರಿಯರೂ ಐವರು. 1559ರಲ್ಲಿ ಹೆನ್ರಿಯ ಅನಂತರ ಹಿರಿಯ ಮಗ ಫ್ರಾನ್ಸಿಸಿನ ಆಳ್ವಿಕೆಯಲ್ಲಿ ಕ್ಯಾಥರಿನ್ ದೇಶದ ವಿಚಾರಗಳಲ್ಲಿ ವಿಶೇಷ ಆಸಕ್ತಿ ತೋರುತ್ತಿದ್ದಳು. 1560ರಲ್ಲಿ ಅವನ ಮರಣಾನಂತರ 9ನೆಯ ಚಾರಲ್ಸನ ಪರವಾಗಿ ಆಡಳಿತ ವಹಿಸಿಕೊಂಡು ಉದ್ದಕ್ಕೂ ಅಧಿಕಾರ ನಡೆಸಿದಳು. ಕೆಥೊಲಿಕ್ ಮತ್ತು ಪ್ರಾಟೆಸ್ಟಂಟರ ಕಾದಾಟದಲ್ಲಿ ಪ್ರಾಟೆಸ್ಟಂಟರು ಸಂಧಾನಮಾರ್ಗ ಅನುಸರಿಸುವಂತೆ ಪ್ರಯತ್ನಿಸಿ ಕೊನೆಗೆ ಕೆಥೊಲಿಕರಿಗೆ ಬೆಂಬಲ ನೀಡಲಾರಂಭಿಸಿದಳು. 1672ರಲ್ಲಿ ಸೇಂಟ್ ಬಾರ್ತ್‍ಲೋಮಿಯೋದಿನದ ಪ್ರಾಟೆಸ್ಟೆಂಟ್ ಕೊಲೆಗೆ ಸಂಚು ಮಾಡಿದವಳು ಇವಳೇ. 1574ರಲ್ಲಿ ಚಾರಲ್ಸನ ಮರಣಾನಂತರ 3ನೆಯ ಹೆನ್ರಿ ಚಕ್ರವರ್ತಿಯಾಗಿ ತಾಯಿಯ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಶತ್ರುಗಳು ತಾಯಿಮಕ್ಕಳಿಬ್ಬರನ್ನೂ ಒತ್ತರಿಸಿದರು. 1589ರ ಜನವರಿ 5 ರಂದು ಬ್ಲಾಯಿಸಿನಲ್ಲಿ ಕ್ಯಾಥರಿನ್ ಮರಣ ಹೊಂದಿದಳು.
ಕ್ಯಾಥರಿನ್ ಆಫ್ ಆರಗಾನ್: 1485-1536. ಇಂಗ್ಲೆಂಡಿನ 8ನೆಯ ಹೆನ್ರಿದೊರೆಯ ಹೆಂಡತಿ. ಆರಗಾನಿನ ಫರ್ಡಿನ್ಯಾಂಡನ ಕಿರಿಯ ಮಗಳು. 1501ರಲ್ಲಿ 7ನೆಯ ಹೆನ್ರಿಯ ಪುತ್ರ ಯುವರಾಜ ಆರ್ಥರನ ಸಂಗಡ ಇವಳ ವಿವಾಹವಾಗಿತ್ತು. ವಿವಾಹದ ನಂತರ ಐದು ತಿಂಗಳಲ್ಲೇ ಆರ್ಥರ್ ಮರಣಿಸಿದ. ಆಗ್ಗೆ 7ನೆಯ ಹೆನ್ರಿ ತನ್ನ ಇನ್ನೊಬ್ಬ ಮಗ 8ನೆಯ ಹೆನ್ರಿಯೊಡನೆ ಇವಳ ವಿವಾಹ ಮಾಡಿದ. ಅವನು 1509ರಲ್ಲಿ ದೊರೆಯಾದಾಗ ಕ್ಯಾಥರಿನ್ ರಾಣಿಯಾದಳು. ವಯಸ್ಸಿನಲ್ಲಿ ಇವರಿಬ್ಬರ ನಡುವೆ ತುಂಬ ಅಂತರವಿದ್ದರೂ, ಇಪ್ಪತ್ತು ವರ್ಷಗಳ ಕಾಲ ದೊರೆಯ ಮೇಲೆ ಇವಳ ಪ್ರಭಾವ ಅಧಿಕವಾಗಿತ್ತು. ಈ ಮಧ್ಯೆ ಹೆನ್ರಿಯ ಅನುರಾಗ ಆನಿಬೋಲೀನಳ ಕಡೆಗೆ ತಿರುಗಿ ಕ್ಯಾಥರಿನಳ ವಿವಾಹವಿಚ್ಛೇದನಕ್ಕೆ ಕಾರಣವಾಯಿತು. ರಾಜಕೀಯ ಪ್ರಾಮುಖ್ಯ ಪಡೆದ ಈ ಘಟನೆಯಿಂದ ಇಂಗ್ಲೆಂಡಿನ ಚರ್ಚು ಪೋಪನ ಅಧಿಕಾರದಿಂದ ಹೊರಕ್ಕೆ ಬರಬೇಕಾಯಿತು. ಹೆನ್ರಿ ಮತ್ತು ಕ್ಯಾಥರಿನ್ ದಂಪತಿಗಳಿಗೆ ಒಬ್ಬಳೇ ಮಗಳಾದ ಮೇರಿ ಮುಂದೆ ಇಂಗ್ಲೆಂಡಿನ ರಾಣಿಯಾದಳು. (ಎಂ.ವಿ.ಕೆ.)