ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನನ್, ಗಿಲ್ಬರ್ಟ್

ವಿಕಿಸೋರ್ಸ್ದಿಂದ

ಕ್ಯಾನನ್, ಗಿಲ್ಬರ್ಟ್ 1884-1955. ಆಂಗ್ಲ ಕಾದಂಬರಿಕಾರ ಮತ್ತು ನಾಟಕಕಾರ. ಮ್ಯಾಂಚೆಸ್ಟರ್‍ನಲ್ಲಿ ಹುಟ್ಟಿದ ಈತ ಅಲ್ಲಿ ಮತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಲ್ಲಿ ತನ್ನ ವ್ಯಾಸಂಗ ಪೂರೈಸಿದ. ನ್ಯಾಯಶಾಸ್ತ್ರವನ್ನು ಓದಿ 1908ರಲ್ಲಿ ಬಾರಿಗೆ ಸೇರಿದನಾದರೂ ಹೆಚ್ಚು ಕಾಲ ಆ ವೃತ್ತಿಯಲ್ಲಿರಲಿಲ್ಲ. ವೇಷ ಹಾಕಿಕೊಂಡು ರಂಗಭೂಮಿಗಿಳಿದ. 1909ರಿಂದ ಒಂದು ವರ್ಷ ಪರ್ಯಂತರ ಸ್ಟಾರ್ ಪತ್ರಿಕೆಯ ನಾಟಕ ವಿಮರ್ಶಕನಾಗಿ ದುಡಿದ. ಅನಂತರ ಜಾನ್ ಡ್ರಿಂಕ್ ವಾಟರ್ ಮತ್ತು ಇನ್ನಿತರ ಸ್ನೇಹಿತರೊಡಗೂಡಿ ಮ್ಯಾಂಚೆಸ್ಟರ್ ರೆಪರ್ಟರಿ ಥಿಯೇಟರನ್ನು ಸ್ಥಾಪಿಸಿ ಕಾಂಗ್ರೀವ್‍ನ ವೇ ಆಫ್ ದಿ ವಲ್ರ್ಡ್ ನಾಟಕದಲ್ಲಿ ಸ್ವಯಂ ಅಭಿನಯಿಸತೊಡಗಿದ. ಪೀಟರ್ ಹೋಮುಂಕ್ಯುಲಸ್ (1909) ಈತನ ಮೊದಲ ಕಾದಂಬರಿ. ರೌಂಡ್ ದಿ ಕಾರ್ನರ್ (1913) ಎಂಬ ಕಾದಂಬರಿಯಿಂದ ಈತ ಹೆಚ್ಚಿನ ಖ್ಯಾತಿ ಪಡೆದ. ಈತನ ಕೃತಿಗಳಲ್ಲಿ ರೊಮ್ಯಾನ್ ರೊಲಾನನ ಪ್ರಭಾವವಿದೆ. ರೊಲಾನನ ಜೀನ್ ಕ್ರಿಸ್ಟೋಫೆ ಎಂಬ ಹತ್ತು ಸಂಪುಟಗಳ ಕಾದಂಬರಿಯನ್ನು ಈತ ಭಾಷಾಂತರಿಸಿದ. ಜೆ.ಎಂ.ಬ್ಯಾರಿಯ ಹೆಂಡತಿ ಮೇರಿ ಆನ್ಸೆಲ್‍ಳನ್ನು ಈತ (1910) ಮದುವೆಯಾದ.

ಯಂಗ್ ಅರ್ನೆಸ್ಟ್ (1905), ತ್ರಿ ಪ್ರೆಟಿ ಮೆನ್ (1916), ದಿ ಸ್ಟಕೋ ಹೌಸ್ (1917), ಮಮ್ಮರಿ (1918), ಪಿಂಕ್ ರೋಸಸ್ (1919), ಸೆಂಬಲ್ (1922), ದಿ ಹೌಸ್ ಆಫ್ ಪ್ರಾಫೆಸಿ (1924)-ಇವು ಈತನ ಇತರ ಕಾದಂಬರಿಗಳು.

ಮೈಲ್ಸ್ ಡಿಕ್ಸನ್ (1910), ಜೇಮ್ಸ್ ಅಂಡ್ ಜಾನ್ (1911) ಮೇರೀಸ್ ವೆಡ್ಡಿಂಗ್(1912), ಎವ್ವೆರಿಬಡಿಸ್ ಹಸ್ಬೆಂಡ್ (1917), ದಿ ರಿಲೀಸ್ ಆಫ್ ದಿ ಸೋಲ್ (1920)-ಇವು ಈತನ ಕೆಲವು ನಾಟಕಗಳು. (ಎಚ್.ವಿ.ಎಸ್.)