ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನ್ಸಸ್

ವಿಕಿಸೋರ್ಸ್ದಿಂದ

ಕ್ಯಾನ್ಸಸ್

ಅಮೆರಿಕ ಸಂಯುಕ್ತಸಂಸ್ಥಾನದ ಮಧ್ಯಭಾಗದಲ್ಲಿರುವ ರಾಜ್ಯ. ಉ.ಅ.37 ಲಿ-40 ಲಿ ಮತ್ತು ಪ.ರೇ. 94 ಲಿ37-102 ಲಿ 3 ನಡುವೆ ಇರುವ ಈ ರಾಜ್ಯ ಸ್ಥೂಲವಾಗಿ ಸಮಚತುಷ್ಕೋಣಾಕಾರವಾಗಿದೆ. ಇದರ ಉದ್ದ ಉತ್ತರದಿಂದ ದಕ್ಷಿಣಕ್ಕೆ 332 ಕಿ.ಮೀ.; ಅಗಲ ಪೂರ್ವದಿಂದ ಪಶ್ಚಿಮಕ್ಕೆ 645 ಕಿ.ಮೀ. ಒಟ್ಟು ವಿಸ್ತೀರ್ಣ 82.264 ಚ.ಮೈ. ಇದು ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳಲ್ಲಿ 14ನೆಯದು. ಉತ್ತರಕ್ಕೆ ನೆಬ್ರ್ಯಾಸ್ಕ ರಾಜ್ಯ. ಪೂರ್ವಕ್ಕೆ ಮಿಸೂರಿ ರಾಜ್ಯ. ದಕ್ಷಿಣಕ್ಕೆ ಓಕ್ಲಹೋಮ ರಾಜ್ಯ. ಪಶ್ಚಿಮಕ್ಕೆ ಕಾಲೊರಾಡೋ ರಾಜ್ಯ-ಇವು ಮೇರೆಗಳು. ರಾಜಧಾನಿ ಟೊಪೀಕ.

ಭೌತಲಕ್ಷಣ : ಈ ರಾಜ್ಯವನ್ನು ಸಾಮಾನ್ಯವಾಗಿ ಚಪ್ಪಟೆಯ ಭೂಪ್ರದೇಶವೆಂದು ವರ್ಣಿಸಲಾಗಿದ್ದರೂ ಇಲ್ಲಿ ಸಾವಿರಾರು ಬೆಟ್ಟಗುಡ್ಡಗಳೂ ಕಣಿವೆಗಳೂ ಇವೆ. ಭೌತಲಕ್ಷಣಗಳಿಗೆ ಅನುಗುಣವಾಗಿ ರಾಜ್ಯವನ್ನು ಎಂಟು ವಿಭಾಗಗಳಾಗಿ ವಿಂಗಡಿಸಬಹುದು: 1. ಆಗ್ನೇಯ ಭಾಗದಲ್ಲಿರುವುದು ಚೆರೊಕೀ ಬಯಲು. ಅದು ಓಜಾóಕ್ರ್ಸ್ ಪರ್ವತಶ್ರೇಣಿಯ ಮುಂದುವರಿದ ಭಾಗ. ಅಲ್ಲಿ ಖನಿಜ ನಿಕ್ಷೇಪಗಳುಂಟು. 2. ಉತ್ತರಕ್ಕೆ ಇಳಿಬಂಡೆಗಳಿಂದ ಕೂಡಿದ ಒಸೇಜ್ ನದಿಯ ಇಳುಕಲು ಪ್ರದೇಶವಿದೆ. ಈ ಭಾಗದ ಭೂಮಿ ಫಲವತ್ತಾದ್ದು. 3. ನೀರ್ಗಲ್ಲ ಯುಗದ ನಿಕ್ಷೇಪಗಳಿದ್ದ ಸೂಚನೆಗಳು ಕಂಡುಬರುವ ನುಣುಪುಗಲ್ಲಿನ ಪ್ರದೇಶ ಈಶಾನ್ಯದಲ್ಲಿದೆ. 4. ಈ ಮೂರು ವಿಭಾಗಗಳ ಪಶ್ಚಿಮಕ್ಕೆ ಫ್ಲಿಂಟ್ ಹಿಲ್ಸ್ ಸಾಲುಗಳಿವೆ. ಇದು ಹುಲ್ಲುಗಾವಲುಗಳಿಂದ ಕೂಡಿದ ಪ್ರದೇಶ. ಇಲ್ಲಿ ಸುಣ್ಣಕಲ್ಲು ನಿಕ್ಷೇಪಗಳುಂಟು. 5. ಫ್ಲಿಂಟ್‍ಹಿಲ್ಸ್ ಪಶ್ಚಿಮಕ್ಕೆ ಫಲವತ್ತಾದ ಮೇಲುಭೂಮಿಗಳುಂಟು. 6. ಸ್ಮೋಕಿ ಹಿಲ್ಸ್ ನದಿಯ ಉತ್ತರದಲ್ಲಿರುವ ಭೂಮಿ ಮರಳುಗಲ್ಲುಗಳಿಂದ ಕೂಡಿದ್ದು. 7. ಈ ನದಿಯ ದಕ್ಷಿಣಕ್ಕೆ, ಆರ್ಕೆನ್ಸಾ ನದಿಯ ಆಪ್ಪುಗೆಗೆ ಒಳಗಾದಂತೆ, ಗ್ರೇಟ್ ಬೆಂಡ್ ಹುಲ್ಲುಗಾವಲುಗಳಿವೆ. 8. ಇದರ ದಕ್ಷಿಣಕ್ಕೆ ಸಿಮರಾನ್ ಬ್ರೇಕ್ಸ್ ಕಣಿವೆಯುಂಟು. ಈ ರಾಜ್ಯದ ನೆಲಪೂರ್ವಕ್ಕೆ ಇಳಿಜಾರಾಗಿದೆ. ಪಶ್ಚಿಮದಲ್ಲಿ ಕಾಲೊರಾಡೋ ಎಲ್ಲೆಯ ಬಳಿ ಇದರ ಎತ್ತರ ಸಮುದ್ರಮಟ್ಟದಿಂದ 4,135 ಪಶ್ಚಿಮದಲ್ಲಿ 700.

ಕ್ಯಾನ್ಸಸ್ ರಾಜ್ಯದ ಮುಖ್ಯ ನದೀವ್ಯವಸ್ಥೆಗಳು ಮೂರು: ಕ್ಯಾನ್ಸಸ್ ಮತ್ತು ಅದರ ಉಪನದಿಗಳಾದ ಸ್ಮೋಕಿಹಿಲ್ಸ್, ಬ್ಲೂ ಮತ್ತು ರಿಪಬ್ಲಿಕನ್‍ಗಳು ರಾಜ್ಯದ ಉತ್ತರಾರ್ಧದಲ್ಲಿ ಹರಿಯುತ್ತವೆ. ಆರ್ಕೆನ್ಸಾ ಮತ್ತು ಅದರ ಉಪನದಿಗಳು ಹರಿಯುವುದು ರಾಜ್ಯದ ನೈಋತ್ಯ ಭಾಗದಲ್ಲಿ. ಮೆರೇಸ್ ಡೆಸ್ ಸಿಗ್ನೆಸ್, ನಿಯೋಷೋ ಮತ್ತು ವಡಿಗ್ರೀಸ್ ನದಿ ವ್ಯವಸ್ಥೆ ಮೂರನೆಯದು. ಈ ನದಿಗಳು ಆಗ್ನೇಯದಲ್ಲಿ ಹರಿಯುತ್ತವೆ. ಕ್ಯಾನ್ಸಸ್‍ನ ಅನೇಕ ನದಿಗಳ ಅತಿ ಪ್ರವಾಹದಿಂದ ಆಗಾಗ್ಗೆ ಅನಾಹುತ ಆಗುವುದುಂಟು. ನದಿಗಳಿಗೆ ಅನೇಕ ಕಟ್ಟೆಗಳನ್ನು ಕಟ್ಟಿ ಅವುಗಳ ನೀರನ್ನು ಕೃಷಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಪ್ರವಾಹನಿಯಂತ್ರಣವೂ ಸಾಧ್ಯವಾಗಿದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಕೃತಕ ಸರೋವರಗಳುಂಟು.

ವಾಯುಗುಣ : ಖಂಡಾಂತರ ವಾಯುಗುಣದ ಲಕ್ಷಣಗಳು ಇಲ್ಲಿ ಕಂಡುಬರುತ್ತವೆ. ಉಷ್ಣತೆಯಲ್ಲಿ ಅಂತರ ಹೆಚ್ಚು. ಆದರೂ ಚಳಿಗಾಲ ಹೆಚ್ಚು ತೀವ್ರವಾಗಿರುವುದಿಲ್ಲ. ಬೇಸಗೆಯಲ್ಲಿ ಪ್ರೇರಿ ಹುಲ್ಲುಗಾವಲಿನ ಗಾಳಿ ಬೀಸುವುದರಿಂದ ತಂಪಾಗಿರುತ್ತದೆ. ಗರಿಷ್ಠ ಕನಿಷ್ಠ ಉಷ್ಣತೆಗಳು 120 ಲಿ ಫ್ಯಾ . ಮತ್ತು 40 ಫ್ಯಾ. ಸರಾಸರಿ ಮಳೆ 27.

ಸಸ್ಯಗಳು, ಪ್ರಾಣಿಗಳು : ಕ್ಯಾನ್ಸಸ್ ರಾಜ್ಯದ ಬಹುಭಾಗ ಹುಲ್ಲುನೆಲ. ಪೂರ್ವ ಪಶ್ಚಿಮಗಳಲ್ಲಿ ಅನುಕ್ರಮವಾಗಿ ನೀಲಿ ಹುಲ್ಲು ಮತ್ತು ಎಮ್ಮೆ ಹುಲ್ಲು ಬೆಳೆಯುತ್ತಿದ್ದುವು. ಮಧ್ಯದ ನೆಲದಲ್ಲಿ ಈ ಎರಡೂ ಬಗೆಯ ಹುಲ್ಲುಗಳಿದ್ದುವು. ಓಕ್, ಕಾಟನ್‍ವುಡ್, ಹಿಕರಿ ಮತ್ತು ವಾಲ್ನಟ್ ಮರಗಳು ರಾಜ್ಯದ ಪೂರ್ವಾರ್ಧದಲ್ಲಿ ನದಿಗಳ ದಂಡೆಗಳ ಮೇಲೆ ಬೆಳೆಯುತ್ತಿದ್ದುವು. ವಲಸೆಗಾರರು ಅವನ್ನೆಲ್ಲ ಬಹುತೇಕ ಕಡಿದಿದ್ದಾರೆ. ಈಚೆಗೆ ಅಲ್ಲಿ ಅನೇಕ ಕಾಡುಗಳನ್ನು ಬೆಳೆಸಲಾಗಿದೆ.

ಕ್ಯಾನ್ಸಸಿನಲ್ಲಿ ಕಾಡೆಮ್ಮೆ, ಜಿಂಕೆ, ಹುಲ್ಲೆ, ಎಲ್ಕ್, ಕೂಯೋಟ್ ಮುಂತಾದ ಪ್ರಾಣಿಗಳು ಹೇರಳವಾಗಿದ್ದುವು. 19ನೆಯ ಶತಮಾನದ ಕೊನೆಯಲ್ಲಿ ಕಾಡೆಮ್ಮೆಗಳ ಬೇಟೆಗೆ ಇದು ಪ್ರಸಿದ್ಧವಾಗಿ. ವನ್ಯಮೃಗಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಟರ್ಕಿಕೋಳಿ, ಮೆಡೊ ಲಾರ್ಕ್, ಕವುಜುಗ ಮೊದಲಾದ ಪಕ್ಷಿಗಳು ಈ ರಾಜ್ಯದಲ್ಲಿವೆ ಬೇಟೆಯಿಂದ ಅರಣ್ಯದ ಪ್ರಾಣಿಗಳು ನಾಶವಾಗದಂತೆ ಅವುಗಳಿಗಾಗಿ ಈಚೆಗೆ ಮೀಸಲು ಅರಣ್ಯಗಳನ್ನು ಏರ್ಪಡಿಸಲಾಗಿದೆ.

ಆರ್ಥಿಕತೆ : ಕ್ಯಾನ್ಸಸ್ ರಾಜ್ಯದಲ್ಲಿ 1/3ರಷ್ಟು ಜನ ಕೃಷಿ ಮತ್ತು ಪಶುಪಾಲನೆ ಅವಲಂಬಿಸಿದ್ದಾರೆ. ಅಲ್ಲಿಯ ಕೃಷಿ ನೆಲದ ವಿಸ್ತೀರ್ಣ 5,00,00,000 ಎಕರೆ, ಗೋಧಿ ಹೆಚ್ಚಾಗಿ ಬೆಳೆಯುವುದರಿಂದ ರಾಜ್ಯವನ್ನು `ವಿಶ್ವದ ರೊಟ್ಟಿಯ ಬುಟ್ಟಿ ಎಂದು ಕರೆಯುತ್ತಾರೆ. ಇಡೀ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬೆಳೆಯುವ ಗೋಧಿಯಲ್ಲಿ 1/5 ಭಾಗ ಇಲ್ಲಿ ಬೆಳೆಯುತ್ತದೆ. ಫ್ಲಾಕ್ಸ್, ಸೋಯಬೀನ್ಸ್, ಓಟ್ಸ್, ಬಾರ್ಲಿ ಕುದುರೆಮಸಾಲೆ ಸೊಪ್ಪು, ಆಲೂಗೆಡ್ಡೆ, ಸಕ್ಕರೆ ಬೀಟ್, ಸೇಬು ಮುಂತಾದವು ಬೆಳೆಯುತ್ತದೆ. ಕೋಳಿ ಮತ್ತು ಜಾನುವಾರುಗಳ ಸಾಕಣೆ ಹಾಗೂ ಹೈನುಗಾರಿಕೆ ಹೆಚ್ಚಾಗಿ ನಡೆಯುತ್ತದೆ.

ಕ್ಯಾನ್ಸಸ್ ರಾಜ್ಯದ ಹುಲ್ಲುಗಾವಲುಗಳಲ್ಲಿ ಪಶುಪಾಲನೆಗೆ ಯಥೇಚ್ಛವಾದ ಅವಕಾಶವುಂಟು. ಫ್ಲಿಂಟ್ ಹಿಲ್ಸ್ ಮೊದಲಾದ ಪ್ರದೇಶಗಳಲ್ಲಿ ಪಶುಪಾಲನೆಯ ಉದ್ಯಮ ಪ್ರಾರಂಭವಾಯಿತು. ರೈಲುಮಾರ್ಗಗಳನ್ನು ಹಾಕಿದ ಮೇಲೆ ಈ ಉದ್ಯಮಕ್ಕೆ ಮತ್ತಷ್ಟು ಅನುಕೂಲವಾಯಿತು. ರೈಲುಮಾರ್ಗಗಳ ಅಂಚಿನಲ್ಲಿ ಅನೇಕ ಪಶುಸಂಗೋಪನ ನಗರಗಳು ಸ್ಥಾಪಿತವಾದುವು. ಬ್ಯಾಕ್‍ಸ್ಟರ್, ಸ್ಪ್ರಿಂಗ್ಸ್, ಚೆಟೋಪ, ಅಬಿಲೀನ್, ಎಲಿಸ್‍ವರ್ತ್, ವಿಚಿಟಾ, ನ್ಯೂಟನ್, ಡಾಜ್ ಮೊದಲಾದವು ಪಶುಸಂಗೋಪನ ಕೇಂದ್ರಗಳು. ಕ್ಯಾನ್ಸಸ್ ರಾಜ್ಯಕ್ಕೆ ಗೋಧಿ ಬೆಳೆಯಷ್ಟೇ ಪಶುಪಾಲನೆಯಿಂದಲೂ ಲಾಭವಿದೆ.

1940ರಿಂದ ಕೈಗಾರಿಕೆಯಲ್ಲಿ ಈ ರಾಜ್ಯ ತ್ವರಿತ ಪ್ರಗತಿ ಸಾಧಿಸಿದೆ. ಕೃತಕ ದಾರದ ತಯಾರಿಕೆಯಿಂದ ಹಿಡಿದು ವಿಮಾನ ತಯಾರಿಕೆಯವರೆಗೆ ಎಲ್ಲ ಬಗೆಯ ಕೈಗಾರಿಕೆಗಳೂ ಉಂಟು. ಯಂತ್ರ, ರಾಸಾಯನಿಕ ಗೊಬ್ಬರ ಮತ್ತು ಮೋಟಾರು ವಾಹನಗಳ ತಯಾರಿಕೆಯ ಕಾರ್ಖಾನೆಗಳು ದೊಡ್ಡ ಕೈಗಾರಿಕೆಗಳು. ಮಾಂಸವನ್ನು ಡಬ್ಬಗಳಲ್ಲಿ ತುಂಬಿ ಇಲ್ಲಿಂದ ರಫ್ತು ಮಾಡುತ್ತಾರೆ. ಹಿಟ್ಟಿನ ಗಿರಣಿಗಳೂ ಹೆಚ್ಚಾಗಿವೆ.

ಈ ರಾಜ್ಯದ ಪ್ರಮುಖ ಖನಿಜ ಪೆಟ್ರೋಲಿಯಂ. ಇಪ್ಪತ್ತನೆಯ ಶತಮಾನದ ಪ್ರಥಮಾರ್ಧದಲ್ಲಿ ಇಲ್ಲಿಯ ಪೆಟ್ರೋಲಿಯಂ ಉತ್ಪನ್ನ 12,40,00,000 ಬ್ಯಾರೆಲ್‍ಗಳು. ಈ ರಾಜ್ಯದಲ್ಲಿ ಅನೇಕ ತೈಲಪರಿಷ್ಕರಣ ಕೇಂದ್ರಗಳಿವೆ. ಪೆಟ್ರೋಲ್ ಮತ್ತು ಅನಿಲವನ್ನು ಸಾಗಿಸಲು 15,000 ಮೈಲಿಗಳಷ್ಟು ಉದ್ದದ ಕೊಳವೆಗಳನ್ನು ಹಾಕಿದ್ದಾರೆ. ಲವಣ, ಸಿಮೆಂಟ್, ಶಿಲೆ, ಕಲ್ಲಿದ್ದಲು-ಇವು ಈ ರಾಜ್ಯದ ಇತರ ಖನಿಜಗಳು.

ಕ್ಯಾನ್ಸಸ್ ರಾಜ್ಯದಲ್ಲಿ 1,25,000 ಮೈಲಿಗಳ ಫೆಡರಲ್, ರಾಜ್ಯ ಹಾಗೂ `ಕೌಂಟಿ' ರಸ್ತೆಗಳುಂಟು. 8,000 ಮೈಲಿಗಳಷ್ಟು ದೂರದ ರೈಲುಮಾರ್ಗಗಳಿವೆ. ವಾಣಿಜ್ಯ ವಿಮಾನ ಸಂಚಾರ ಬಹುಮಟ್ಟಿಗೆ ಖಾಸಗಿ ಮಾಲೀಕತ್ವದಲ್ಲಿದೆ. ಕ್ಯಾನ್ಸಸ್ ನಗರ, ಲೆವೆನ್‍ವರ್ತ್ ಮತ್ತು ಆಚಿಸನ್ ನಗರಗಳಿಗೆ ಮಿಸೂóರಿ ನದಿಯ ಮೂಲಕ ಹಡಗು ಸಂಚಾರವಿದೆ.

ರಾಜ್ಯದ ಅತ್ಯಂತ ದೊಡ್ಡ ನಗರ ವಿಚಿಟಾ. ಇದರ ಜನಸಂಖ್ಯೆ 2,54,698 (1960). ಕ್ಯಾನ್ಸಸ್ ನಗರ (1,21,901) ಮತ್ತು ಟೊಪೀಕ (1,19,484) ಇನ್ನೆರಡು ದೊಡ್ಡ ನಗರಗಳು.

ಆಡಳಿತ : ಜನವರಿ 29, 1861ರಲ್ಲಿ ಜಾರಿಗೆ ಬಂದ ಮೂಲ ರಾಜ್ಯಸಂವಿಧಾನ ಕ್ಯಾನ್ಸಸ್ ರಾಜ್ಯಕ್ಕೆ ಅನ್ವಯವಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಇತರ ರಾಜ್ಯಗಳಲ್ಲಿರುವಂಥದೇ ಇಲ್ಲಿಯ ಆಡಳಿತ ವ್ಯವಸ್ಥೆಕೂಡ 7 ಮಂದಿ ನ್ಯಾಯಾಧೀಶರಿಂದ ಕೂಡಿದ ಪರಮೋಚ್ಛ ನ್ಯಾಯಾಲವೂ 51 ಮಂದಿ ನ್ಯಾಯಾಧೀಶರಿಂದ ಕೂಡಿದ 38 ಜಿಲ್ಲಾ ನ್ಯಾಯಾಲಯಗಳೂ ಇವೆ. ಶಿಕ್ಷಣ : ರಾಜ್ಯದ ಶಿಕ್ಷಣ ಉನ್ನತಮಟ್ಟದ್ದು, ಅನಕ್ಷರಸ್ಥರು ಕಡಿಮೆ. ಸರ್ಕಾರಿ ಉಚಿತ ಶಾಲೆಗಳು ಬಹುಸಂಖ್ಯೆಯಲ್ಲಿ ಏರ್ಪಟ್ಟಿವೆ. ಅನೇಕ ಖಾಸಗಿ ಶಾಲೆಗಳೂ ಇವೆ. ಉಚ್ಚ ಶಿಕ್ಷಣಕ್ಕೆ ರಾಜ್ಯದ ನೆರವುಂಟು. ಕ್ಯಾನ್ಸಸ್ ವಿಶ್ವವಿದ್ಯಾಲಯ (1865) ಇರುವುದು ಲಾರೆನ್ಸ್‍ನಲ್ಲಿ. ಕ್ಯಾನ್ಸಸ್ ರಾಜ್ಯದ ಈಶಾನ್ಯದಲ್ಲಿರುವ ಮ್ಯಾನ್‍ಹ್ಯಾಟನ್ ನಗರದಲ್ಲಿ ಕ್ಯಾನ್ಸಸ್ ರಾಜ್ಯ ಕೃಷಿ ವಿಶ್ವವಿದ್ಯಾಲಯವಿದೆ. ಸಮಾಜಕಲ್ಯಾಣ : ರಾಜ್ಯದ ಸಮಾಜಕಲ್ಯಾಣ ಮಂಡಲಿ ರಾಜ್ಯದ ಧರ್ಮ ಸಂಸ್ಥೆಗಳ ಮೇಲ್ವಿಚಾರಣೆ ನಡೆಸುತ್ತದೆ. ರಾಜಧಾನಿ ಟೊಪೀಕದಲ್ಲಿ ಮಾನಸಿಕ ರೋಗಗಳಿಗೆ ಸಂಬಂಧಪಟ್ಟ ಆಸ್ಪತ್ರೆಯುಂಟು. ವಿನ್‍ಫೀಲ್ಡ್ ನಗರದಲ್ಲಿ ಮಾನಸಿಕ ಅಸ್ವಸ್ಥರಿಗೆ ಧರ್ಮಾರ್ಥ ವೈದ್ಯಶಾಲೆಯೂ ನಾರ್ಟನ್ ನಗರದಲ್ಲಿ ಕ್ಷಯರೋಗದ ಆಸ್ಪತ್ರೆಯೂ ಆಚಿಸನ್ ನಗರದಲ್ಲಿ ಅನಾಥಾಲಯವೂ ಫೋರ್ಟ್ ಡಾಜ್ ಪಟ್ಟಣದಲ್ಲಿ ಸೈನಿಕರ ರಕ್ಷಣಾಗೃಹವೂ ಒಲೇತಿ ನಗರದಲ್ಲಿ ಕಿವುಡರ ಶಾಲೆಯೂ ಇವೆ. ಬೆಲೋಯಿಟ್ ನಗರದಲ್ಲಿ ಬಾಲಕಿಯರಿಗೂ ಟೊಪೀಕದಲ್ಲಿ ಬಾಲಕರಿಗೂ ವೃತ್ತಿ ಶಿಕ್ಷಣ ಶಾಲೆಗಳುಂಟು. ರಾಜ್ಯದ ಬಂದೀಖಾನೆ ಇರುವುದು ಲಾನ್ ಸಿಂಗ್ ನಗರದಲ್ಲಿ ತಪ್ಪಿತಸ್ಥರ ಸುಧಾರಣಾ ಗೃಹ ಹಚಿನ್‍ಸನ್ ನಗರದಲ್ಲಿದೆ. ವೃದ್ಧರು, ಅಂಧರು, ಅಂಗವಿಕಲರು ಮತ್ತು ಅನಾಥ ಮಕ್ಕಳ ರಕ್ಷಣೆಗೆ ಕೇಂದ್ರ ಸರ್ಕಾರ ನೆರವು ನೀಡುತ್ತದೆ. ಇಡೀ ರಾಜ್ಯದಲ್ಲಿ ಸು.300 ವಾರಪತ್ರಿಕೆಗಳೂ 50 ದಿನಪತ್ರಿಕೆಗಳೂ ಪ್ರಕಟವಾಗುತ್ತವೆ. ದಿನಪತ್ರಿಕೆಗಳ ಪೈಕಿ `ಎಂಪೋರಿಯ ಗೆeóÉಟ್ ಪ್ರಸಿದ್ಧವಾದ್ದು. (ವಿ.ಜಿ.ಕೆ; ಸಿ.ಎಂ.)

ಕ್ಯಾನ್ಸಸ್‍ನ ಇತಿಹಾಸ : `ಕಾ ಇಂಡಿಯನರು ಕ್ಯಾನ್ಸಸ್ ಭಾಗದ ಆದಿವಾಸಿಗಳು. ಅವರ ಜೀವನವನ್ನು ಕುರಿತ ವಿಷಯವನ್ನು ಬಿಟ್ಟರೆ ಕ್ಯಾನ್ಸಸ್ ರಾಜ್ಯದ ಬಗ್ಗೆ ಐತಿಹಾಸಿಕ ಮಾಹಿತಿಗಳು ನಮಗೆ ದೊರಕುವುದು ಕ್ರಿ.ಶ.1541ರಲ್ಲಿ-ಸ್ಪೇನಿನ ದಳಪತಿ ಫ್ರಾನ್‍ಸಿಸ್ಕೊ ಡ ಕೊರೊನಾಡೊ, ಎಂಬುವನು ಕ್ಯುವಿರಾ ಎಂಬ ಕಾಲ್ಪನಿಕ ರಾಜ್ಯದ ಸಿರಿಯನ್ನು ಕಂಡುಹಿಡಿಯುವ ಉದ್ದೇಶದಿಂದ ತನ್ನ ಸೈನ್ಯವನ್ನು ಮೆಕ್ಸಿಕೋ ದೇಶದ ಮುಖಾಂತರ ಕೊಂಡೊಯ್ದಾಗ. ತರುವಾಯ ಫ್ರೆಂಚರು 1719-25ರ ನಡುವೆ ಈ ಪ್ರದೇಶವನ್ನು ಪ್ರವೇಶಿಸಿದರೂ 1803ರ ವರೆಗೆ ಅದು ಇಂಡಿಯನರ ವಶದಲ್ಲಿತ್ತು. ಆ ವರ್ಷ ಅಮೆರಿಕ ಸಂಯುಕ್ತಸಂಸ್ಥಾನ ಸರ್ಕಾರ ಪ.ರೇ.100 ಲಿ ಗಳ ಪಶ್ಚಿಮಕ್ಕೆ ಹಾಗೂ ಆರ್ಕೆನ್ಸಾ ನದಿಯ ದಕ್ಷಿಣಕ್ಕೆ ಇರುವ ಪ್ರದೇಶಗಳನ್ನು ಬಿಟ್ಟು, ಉಳಿದ ಭಾಗಗಳನ್ನು ಲೂಸಿóಯಾನ ಪರ್ಚೇಸ್ ವಹಿವಾಟಿಗೆ ಸೇರಿದಂತೆ ಕೊಂಡುಕೊಂಡಿತು. 1803ರಿಂದ 1820ರ ನಡುವಣ ಅವಧಿಯಲ್ಲಿ ಕ್ಯಾನ್ಸಸ್ ಪ್ರದೇಶವನ್ನು ಭೌಗೋಳಿಕವಾಗಿ ಶೋಧಿಸಲಾಯಿತು. 1804ರಲ್ಲಿ ಲೂಯಿಸ್ ಮತ್ತು ಕ್ಲಾರ್ಕ್ ಎಂಬ ಇಬ್ಬರು ಪರಿಶೋಧಕರು ಪೆಸಿಫಿಕ್ ತೀರಕ್ಕೆ ಪ್ರಯಾಣ ಮಾಡುವಾಗ ಕ್ಯಾನ್ಸಸ್ ರಾಜ್ಯದ ಈಶಾನ್ಯ ಭಾಗವನ್ನು ಮುಟ್ಟಿದರು. 1806ರಲ್ಲಿ ಜೆóಬುಲಾನ್ ಎಂ.ಪೈಕ್ ನೈಋತ್ಯಾಭಿಮುಖವಾಗಿ ಪ್ರಯಾಣ ಮಾಡುತ್ತಿದ್ದಾಗ ಈ ರಾಜ್ಯದ ಮೂಲಕ ಸಂಚರಿಸಿದ. 1819ರಲ್ಲಿ ಮೇಜರ್ ಸ್ಟೀಫನ್ ಎಚ್.ಲಾಂಗ್ ಈ ಪ್ರದೇಶದಲ್ಲಿ ತನ್ನ ವೈಜ್ಞಾನಿಕ ತಂಡದೊಡನೆ ಸಂಚರಿಸಿ ಅದು ಮರಳ್ಗಾಡು ಪ್ರದೇಶವೆಂದು ವರದಿಮಾಡಿದ. ಆದರೆ, ಪಶ್ಚಿಮಕ್ಕೆ ಹೋಗುವ ಮುಖ್ಯಮಾರ್ಗ ಕ್ಯಾನ್ಸಸ್ ಮೂಲಕ ಹೋಗುವುದಾಗಿತ್ತು; 1821ರಲ್ಲಿ ವಿಲಿಯಂ ಬೆಕ್ನೆಲ್ ಕ್ಯಾನ್ಸಸ್ ಪ್ರಾಂತ್ಯದ ಮೂಲಕ ಫ್ರಾಂಕ್ಲಿನ್ ಮತ್ತು ಸಾಂಟ ಫಿ ನಗರಗಳ ನಡುವಣ ಲಾಭದಾಯಕ ವ್ಯಾಪಾರ ನಡೆಸುತ್ತಿದ್ದ. ಚಿನ್ನ ಹುಡುಕಲು ಹೊರಟವರು ಮತ್ತು ತುಪ್ಪುಳ ವ್ಯಾಪಾರಿಗಳು ಹೊಸ ಮಾರ್ಗಗಳನ್ನು ಕಂಡುಹಿಡಿದರು. ಕ್ಯಾನ್ಸಸ್ ಪ್ರದೇಶ ಮರುಭೂಮಿ ಎಂಬ ಕಲ್ಪನೆಯನ್ನು ದೂರಮಾಡಲು ಈ ಎಲ್ಲ ಘಟನೆಗಳೂ ಕಾರಣವಾದುವು. 1854ರಲ್ಲಿ ಪ್ರಾದೇಶಿಕ ಸ್ಥಾನಮಾನಗಳು ದೊರಕುವವರೆಗೆ ಈ ಪ್ರದೇಶ ಇಂಡಿಯನರ ವಶದಲ್ಲೇ ಇತ್ತು. ಪುರಾತತ್ವಜ್ಞರು ಈ ಭಾಗದ ಪ್ರಾಚೀನ ಇಂಡಿಯನ್ ಸಂಸ್ಕøತಿಯನ್ನು ಕಂಡುಹಿಡಿದಿದ್ದಾರೆ. ರಿಪಬ್ಲಿಕನ್ ನದಿಯ ಉತ್ತರ ಭಾಗ ಹಾಗೂ ಬ್ಲೂ ನದಿಯ ಬಯಲಿನಲ್ಲಿ ವ್ಯವಸಾಯ ಪ್ರಧಾನವಾದ ನಾಗರಿಕತೆ ಇತ್ತು. ಬಿಳಿಯರು ಅಲ್ಲಿಗೆ ಕಾಲಿಟ್ಟಾಗ ಕ್ಯಾನ್ಸಸ್, ಒಸೇಜ್, ವಿಚಿಟಾ, ಪಾನೀ ಮತ್ತು ಪ್ಯೂಬ್ಲೊ ಜನಾಂಗದವರು ಅಲ್ಲಿ ವಾಸಿಸುತ್ತಿದ್ದರು. ಕಿಯೊವ, ಕೊಮಾಂಚೆ, ಅರಪೊ, ಷೈಯೆನ್ ಮತ್ತು ಅಪಾಷಿ ಬೇಟೆಯ ಬಣಗಳು ಕ್ಯಾನ್ಸಸ್ ರಾಜ್ಯದಲ್ಲಿ ಅಲೆದಾಡುತ್ತಿದ್ದುವು. 1830ರಲ್ಲಿ ಇಂಡಿಯನ್ ಬಣಗಳ ಬೇರ್ಪಡೆಯ ಅಧಿನಿಯಮ ಜಾರಿಗೆ ಬಂದ ಮೇಲೆ ಫೆಡರಲ್ ಸರ್ಕಾರ ಅನೇಕ ಆದಿವಾಸಿ ಇಂಡಿಯನ್ ಬಣಗಳಿಗಾಗಿ ಕ್ಯಾನ್ಸಸ್ ರಾಜ್ಯದ ಕಾಲಭಾಗದಷ್ಟು ಭೂಮಿಯನ್ನು ಮೀಸಲಿಟ್ಟಿತು. ಹೋಲ್ಟನ್ ಬಳಿಯ ಪೊಟ ವಾಟೊಮಿ ಎಂಬುದು ಇಂಡಿಯನರು ವಾಸಮಾಡುವ ಅತಿ ದೊಡ್ಡ ಮೀಸಲು ಸ್ಥಳ. ಈಗ ಕ್ಯಾನ್ಸಸ್ ರಾಜ್ಯದಲ್ಲಿ ಬಹು ಮಂದಿ ಇಂಡಿಯನರು ವಾಸವಾಗಿಲ್ಲದಿದ್ದರೂ ಅನೇಕ ಸ್ಥಳಗಳಿಗೆ ಅವರ ಭಾಷೆಯ ಹೆಸರುಗಳೇ ಇವೆ. ಕ್ಯಾನ್ಸಸ್ ಪ್ರದೇಶಕ್ಕೆ ಬಂದು ನೆಲಸಿದ ಬಿಳಿಯರು 1827ರಲ್ಲಿ ಲೆವೆನ್‍ವರ್ತ್ ಕೋಟೆಯನ್ನೂ 1842ರಲ್ಲಿ ಸ್ಕಾಟ್ ಕೋಟೆಯನ್ನೂ 1853ರಲ್ಲಿ ರಿಲೆ ಕೋಟೆಯನ್ನೂ 1845 ಮತ್ತು 1854ರ ನಡುವೆ ಮಾನ್, ಮೆಕೋಯ್ ಮತ್ತು ಆಟ್ಕಿನ್‍ಸನ್ ಕೋಟೆಗಳನ್ನೂ ಕಟ್ಟಿಕೊಂಡರು. ಕ್ರೈಸ್ತಪಂಥಗಳ ಅನೇಕ ಮತಪ್ರಚಾರಕರು 1837ರ ಹೊತ್ತಿಗೆ ಮತಪ್ರಚಾರ ಮಾಡುತ್ತಿದ್ದರು.

ಗುಲಾಮ ಪದ್ಧತಿಯ ವಿರುದ್ಧ ಹೋರಾಟ : 1852ರ ಹೊತ್ತಿಗೆ ವ್ಯವಸ್ಥಿತ ರಾಜ್ಯದ ನಿರ್ಮಾಣಕ್ಕಾಗಿ ಚಳವಳಿ ಪ್ರಾರಂಭವಾಯಿತು. ಕ್ಯಾನ್ಸಸ್-ನೆಬ್ರಾಸ್ಕ ವಿಧೇಯಕದ ಮೇರೆಗೆ ಕ್ಯಾನ್ಸಸ್ ದಾಸ್ಯಪದ್ಧತಿಯಿಂದ ಕೂಡಿದ ರಾಜ್ಯವಾಗಿರಬೇಕೆ ಎಂಬುದನ್ನು ನಿರ್ಧರಿಸಬೇಕಾಯಿತು. ಈ ವಿಧೇಯಕ 1857ರಲ್ಲಿ ಅಧಿನಿಯಮವಾಗಿ ಜಾರಿಗೆ ಬಂದಿತು. ಕ್ಯಾನ್ಸಸ್ ಮತ್ತು ನೆಬ್ರಾಸ್ಕಗಳಲ್ಲಿ ದಾಸ್ಯರಾಜ್ಯವನ್ನು ಸ್ಥಾಪಿಸಲು ನಾಲ್ಕು ವರ್ಷಗಳ ಕಾಲ ಘರ್ಷಣೆಗಳು ನಡೆದು ರಕ್ತಪಾತವಾಯಿತು. ಬಿಳಿಯ ಜನ ಪಶ್ಚಿಮ ಮತ್ತು ದಕ್ಷಿಣ ಕ್ಯಾನ್ಸಸ್ ಭಾಗಗಳನ್ನು ಆಕ್ರಮಿಸಿಕೊಂಡು ಇಂಡಿಯನರ ಮೀಸಲು ಸ್ಥಳಗಳನ್ನು ನಾಶಮಾಡಿದಾಗ ಇಂಡಿಯನರು ಚದರಿಹೋದರು. 1855ರ ಚುನಾವಣೆಗಳಲ್ಲಿ ಮಿಸೂóರಿಯ ದಾಸ್ಯವಾದಿಗಳು ಮತದಾನಮಾಡಲು ಕ್ಯಾನ್ಸಸ್ ರಾಜ್ಯವನ್ನು ಪ್ರವೇಶಿಸಿದರು. ಫೆಡರಲ್ ಸರ್ಕಾರ ಕೂಡ ದಾಸ್ಯಪದ್ಧತಿಗೆ ಉತ್ತೇಜನ ಕೊಡುವಂತೆ ತೋರಿತು. ಕೊನೆಗೆ ಸ್ವಾತಂತ್ರ್ಯ ವಾದಿಯಾದ ರಾಬಿನಸನ್ ದಾಸ್ಯರಹಿತ ರಾಜ್ಯವನ್ನು ಸ್ಥಾಪಿಸಲು ಲಾರೆನ್ಸ್ ನಗರ ವಾಸಿಗಳೊಡನೆ ಮುಂದೆ ಬಂದ. ಸ್ವಾತಂತ್ರ್ಯವಾದಿಗಳ ನೆರವಿಗಾಗಿ ಜೇಮ್ಸ್ ಎಚ್ ಲೇನ್ ಸೈನ್ಯವನ್ನು ಜಮಾಯಿಸಿದ. ದಾಸ್ಯವಾದಿಗಳ ಸೈನ್ಯ ಸಾಮ್ಯುಯೆಲ್ ಜೆ.ಜೋನ್ಸ್‍ನ ನಾಯಕತ್ವದಲ್ಲಿ ಲಾರೆನ್ಸ್ ನಗರದ ಮೇಲೆ ದಾಳಿಮಾಡಿ ಭೀಕರ ಹೋರಾಟ ನಡೆಸಿತು. ಈ ಯುದ್ಧ ವಿಷಮಘಟ್ಟವನ್ನು ಮುಟ್ಟಿದರೂ ವಾಷಿಂಗ್‍ಟನ್ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಆಸಕ್ತಿ ವಹಿಸಲಿಲ್ಲ. ಕೊನೆಗೆ ಪೊಟ ವಾಟೊಮಿ ಇಂಡಿಯನ್ ಬಣದ ಹತ್ಯಾಕಾಂಡದ ತರುವಾಯ, 1856ರಲ್ಲಿ ಕ್ಯಾನ್ಸಸ್ ಪ್ರಾಂತ್ಯದ ಗವರ್ನರ್ ಜಾನ್ ಗಿಯರಿ ಕೇಂದ್ರದ ಈ ಸೈನ್ಯದ ನೆರವನ್ನು ಪಡೆದು ಪರಿಸ್ಥಿತಿಯನ್ನು ಹದಕ್ಕೆ ತಂದ. ದಾಸ್ಯವಾದಿಗಳು ತಮ್ಮ ಅಕ್ರಮಗಳಿಂದಲೇ ಸೋತರು. ಇಷ್ಟಾದರೂ ಲಿಕಾಂಪ್ಟನ್ ನಗರದಲ್ಲಿ 1857ರಲ್ಲಿ ರಚಿತವಾದ ಸಂವಿಧಾನವನ್ನು ಕ್ಯಾನ್ಸಸ್ ಸ್ವತಂತ್ರ ವಿಧಾನಮಂಡಲ ರದ್ದುಗೊಳಿಸಲಾಗಲಿಲ್ಲ. ಕ್ಯಾನ್ಸಸ್ ಪ್ರಾಂತ್ಯಕ್ಕೆ ರಾಜ್ಯದ ಸ್ಥಾನಮಾನಗಳನ್ನು ಕೊಡಲು ಕಾಂಗ್ರೆಸ್ ನಿಧಾನಿಸಿತು. ವಿಲಿಯಂ ಹೇಡನ್ ಇಂಗ್ಲಿಷ್ ಎಂಬಾತ ಮಂಡಿಸಿದ ವಿಧೇಯಕದ ಮೇರೆಗೆ ದಾಸ್ಯವಾದಿಗಳ ಲಿಕಾಂಪ್ಟನ್ ಸಂವಿಧಾನವನ್ನು ಸ್ವೀಕರಿಸಿ ಹೊಸರಾಜ್ಯ ಸ್ಥಾಪನೆ ಮಾಡಬೇಕಾಗಿತ್ತು. ಆದರೆ ಈ ವಿಧೇಯಕವನ್ನು ಆಗಸ್ಟ್ 21, 1858ರಲ್ಲಿ ಕ್ಯಾನ್ಸಸ್ ಶಾಸನಸಭೆ ಬಹುಮತದಿಂದ ತಿರಸ್ಕರಿಸಿತು. ದಾಸ್ಯವಾದಿಗಳು ತಮಗುಂಟಾದ ಸೋಲಿನಿಂದಾಗಿ ಕ್ಯಾನ್ಸಸ್ ರಾಜ್ಯವನ್ನು ಕ್ರಮಕ್ರಮವಾಗಿ ಬಿಟ್ಟುಹೋದರು. ದಾಸ್ಯ ಸಮಸ್ಯೆ ಕ್ಯಾನ್ಸಸ್ ರಾಜ್ಯದಿಂದ ದೇಶದ ಇತರ ಭಾಗಗಳಿಗೂ ಹರಡಿತು. ಅದೇ ರಾಷ್ಟ್ರದ ಬಹು ಮುಖ್ಯ ಸಮಸ್ಯೆಯಾಯಿತು. ವಿಯಾನ್ ಡಾಟ್ ಸಂವಿಧಾನದಲ್ಲಿ ಕ್ಯಾನ್ಸಸ್ ರಾಜ್ಯಕ್ಕೆ ಜನವರಿ 29, 1861ರಲ್ಲಿ ರಾಜ್ಯದ ಸ್ಥಾನಮಾನಗಳನ್ನು ಕೊಡಲಾಯಿತು.

ಅಮೆರಿಕ ಅಂತರ್ಯುದ್ಧ : 1860ರಲ್ಲಿ ಕ್ಯಾನ್ಸಸ್ ಕ್ಷಾಮಕ್ಕೆ ಒಳಗಾಯಿತು. 1861ರಲ್ಲಿ ಅದಕ್ಕೆ ಸ್ವತಂತ್ರ ರಾಜ್ಯದ ಸ್ಥಾನಮಾನಗಳು ದೊರೆತ ಮೇಲೆ, ಅಮೆರಿಕದ ಅಂತರ್ಯುದ್ಧ ಕಾಲದಲ್ಲಿ(1861-65) ಫೆಡರಲ್ ಸರ್ಕಾರದ ನೆರವಿಗೆ 30,000 ಸೈನಿಕರನ್ನು ಕಳುಹಿಸಬೇಕಾಯಿತು. ಇಂಡಿಯನ್ ಜನರ ಮತ್ತು ಸಂಚುಗಾರರ ದಾಳಿಗಳಿಂದ ಗಡಿಗಳನ್ನು ರಕ್ಷಿಸುವ ಉದ್ದೇಶದಿಂದ ಅಲ್ಲಿ ಸೈನ್ಯದ ಒಂದು ಭಾಗವನ್ನು ಇಡಲಾಯಿತು. ಸೈನ್ಯದ ಬಹುಭಾಗ ರಾಜ್ಯದ ಹೊರಗೆ ಸೇವೆ ಸಲ್ಲಿಸಿತು. ಯುದ್ಧದಲ್ಲಿ ವಿಲಿಯಂ ಸಿ.ಕ್ಯಾನ್‍ಟ್ರಿಲ್ ಎಂಬಾತ ಲಾರೆನ್ಸ್ ನಗರದ ಮೇಲೆ ನಡೆಸಿದ ದಾಳಿಯಿಂದ ಕ್ಯಾನ್ಸಸ್ ರಾಜ್ಯಕ್ಕೆ ಭಾರಿ ನಷ್ಟ ಉಂಟಾಯಿತು. ಈ ಯುದ್ಧಕಾಲದಲ್ಲಿ ಕ್ಯಾನ್ಸಸ್ ರಾಜ್ಯದಲ್ಲಿ ನಡೆದ ಭಾರಿ ಕದನ ಮೇನ್ ಕ್ರೀಕ್ ಕದನ (1864). ಯುದ್ಧದಲ್ಲಿ ಸಂಚುಕೂಟದ ಜನರಲ್ ಸ್ಟರ್ಲಿಂಗ್ ಪ್ರೈಸ್ ಪರಾಜಿತನಾಗಿ, ಪಶ್ಚಿಮದಲ್ಲಿ ಸಂಚುಗಾರರ ನಿಯಂತ್ರಣ ಕೊನೆಗೊಂಡಿತು. ಅಂತರ್ಯುದ್ಧದ ತರುವಾಯ 1868ರಲ್ಲಿ ಕ್ಯಾನ್ಸಸ್ ಆದಿವಾಸಿ ಬಣಗಳನ್ನು ಇಂಡಿಯನ್ ಜನರಿಗೆ ಮೀಸಲಾದ ಪ್ರಾಂತ್ಯಕ್ಕೆ ತ್ವರಿತವಾಗಿ ಸಾಗಿಸಿದರೂ 1870ರ ವರೆಗೆ ಈ ರಾಜ್ಯಕ್ಕೆ ಇಂಡಿಯನರಿಂದ ದಾಳಿಗಳು ತಪ್ಪಲಿಲ್ಲ.

ರಾಜಕೀಯ ಇತಿಹಾಸ : ರಾಜ್ಯ ಮತ್ತು ರಾಷ್ಟ್ರ ಹಣತಗಳೆರಡರಲ್ಲೂ ಕ್ಯಾನ್ಸಸ್ ಇತಿಹಾಸ ಮೂಲತಃ ಗಣರಾಜ್ಯದ ಇತಿಹಾಸವಾಗಿದೆ. ದಾಸ್ಯವನ್ನು ತೊಡೆದುಹಾಕಿ ಕ್ಯಾನ್ಸಸ್ ರಾಜ್ಯವನ್ನು ಸ್ವತಂತ್ರ ನಾಗರಿಕ ರಾಜ್ಯವನ್ನಾಗಿ ಮಾಡಲು ಬಹುಮಂದಿ ಏಬ್ರಹಾಂ ಲಿಂಕನ್ ಪಕ್ಷವನ್ನು ಸೇರಿದರು. ಅಮೆರಿಕನ್ ಅಂತರ್ಯುದ್ಧ ಕೊನೆಗೊಂಡ ಮೇಲೆ ಫೆಡರಲ್ ಸರ್ಕಾರದ ನುರಿತ ರಾಜಕಾರಣಿಗಳು ಈ ರಾಜ್ಯಕ್ಕೆ ಬಂದು ನೆಲೆಸಿದರು. ಇದರಿಂದ ರಿಪಬ್ಲಿಕನ್ ಪಕ್ಷಕ್ಕೆ ರಾಜಕೀಯದಲ್ಲಿ ಭದ್ರವಾದ ಸ್ಥಾನ ದೊರಕಿತು. ಆದರೆ 1870ರಿಂದ ಗ್ರಾಂಜರ್ಸ್, ರೈತಸಂಥ ಮತ್ತು ಪಾಪ್ಯುಲಿಸ್ಟ್ ಪಕ್ಷ ಹುಟ್ಟಿಕೊಂಡವು. ಪಾಪ್ಯುಲಿಸ್ಟ್ ಪಕ್ಷ 1892-94 ಮತ್ತು 1896-98ರ ಕಾಲದಲ್ಲಿ ರಾಜ್ಯದ ನಿಯಂತ್ರಣ ಪಡೆದಿತ್ತು. ಕ್ಯಾನ್ಸಸ್‍ನ ಮೊದಲ 100 ವರ್ಷಗಳ ರಾಜಕೀಯ ಇತಿಹಾಸದಲ್ಲಿ 35 ಗವರ್ನರುಗಳಾದರು. ಅವರಲ್ಲಿ 6 ಮಂದಿ ಡೆಮೊಕ್ರಾಟ್ ಪಕ್ಷದವರು. ಇಬ್ಬರು ಪಾಪ್ಯುಲಿಸ್ಟ್ ಪಕ್ಷದವರು. ಉಳಿದವರು ರಿಪಬ್ಲಿಕನ್ ಪಕ್ಷದವರು. ಎರಡನೆಯ ಮಹಾಯುದ್ಧದ ತರುವಾಯ ಡೆಮೊಕ್ರಾಟಿಕ್ ಪಕ್ಷ ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಯಶಸ್ವಿಯಾಗಿದೆ.

ಕ್ಯಾನ್ಸಸ್ ರಾಜ್ಯದ ಮೊದಲ ಸಂವಿಧಾನದ ಪ್ರಕಾರ ಸ್ವತ್ತಿನ ವಿಚಾರದಲ್ಲಿ ಸ್ತ್ರೀಯರಿಗೆ ಪುರುಷರೊಂದಿಗೆ ಸಮಾನ ಹಕ್ಕು ಲಭಿಸಿತು. ಈ ರಾಜ್ಯದ ಮೊದಲ ಶಾಸನಮಂಡಲ ಸ್ತ್ರೀಯರಿಗೆ ಶಾಲಾ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕನ್ನು ನೀಡಿ, 1887ರಲ್ಲಿ ಆ ಹಕ್ಕನ್ನು ಪೌರಚುನಾವಣೆಗಳಿಗೂ ವಿಸ್ತರಿಸಿತು. 1912ರಲ್ಲಿ ಸ್ತ್ರೀಯರಿಗೆ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕು ಲಭಿಸಿತು. 1880ರಿಂದ 1948ರ ವರೆಗೆ ಕ್ಯಾನ್ಸಸ್ ರಾಜ್ಯದಲ್ಲಿ ಪಾನನಿರೋಧ ಕಾಯಿದೆ ಜಾರಿಯಲ್ಲಿತ್ತು. (ವಿ.ಜಿ.ಕೆ.)