ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನ್ಸಸ್ ನಗರ 1
ಕ್ಯಾನ್ಸಸ್ ನಗರ 1
ಅಮೆರಿಕ ಸಂಯುಕ್ತಸಂಸ್ಥಾನದ ಕ್ಯಾನ್ಸಸ್ ರಾಜ್ಯದಲ್ಲಿರುವ ಒಂದು ನಗರ. ವಿಯಾನ್‍ಡಾಟ್ ಕೌಂಟಿಯ ಕೇಂದ್ರ, ಕ್ಯಾನ್ಸಸ್ ರಾಜ್ಯದ ಪಶ್ಚಿಮ ಗಡಿಯಲ್ಲಿ, ಕ್ಯಾನ್ಸಸ್ ಮತ್ತು ಮಿಸೂóರಿ ನದಿಗಳ ಸಂಗಮ ಸ್ಥಳದಲ್ಲಿದೆ. ಇದೂ ಮಿಸೂóರಿ ರಾಜ್ಯದ ಕ್ಯಾನ್ಸಸ್ ನಗರವೂ ಕೂಡಿದಂತಿದ್ದು, ಎರಡಕ್ಕೂ ನಡುವೆ ಈ ರಾಜ್ಯಗಳ ಗಡಿರೇಖೆ ಹಾಯ್ದು ಹೋಗುತ್ತದೆ. ಕ್ಯಾನ್ಸಸ್ ನದಿಯ ದಡದಲ್ಲಿರುವ ಬೆಟ್ಟಗುಡ್ಡಗಳ ಮೇಲೆ ಹಬ್ಬಿರುವ ನಗರವಿದು.
ಕ್ಯಾನ್ಸಸ್ ಯೋಜನಾಬದ್ಧವಾಗಿ ನಿರ್ಮಿತವಾದ ನಗರವಲ್ಲ. ಅಮೆರಿಕನ್ ಅಂತರ್ಯುದ್ಧ ಮುಗಿದಮೇಲೆ ಪಶುಪಾಲನೆ ಮತ್ತು ಮಾಂಸ ರಫ್ತಿನ ಉದ್ಯಮ ತ್ವರಿತವಾಗಿ ಅಭಿವೃದ್ಧಿ ಹೊಂದಿದಾಗ ಸ್ಥಾಪಿತವಾದ ಸಣ್ಣಪುಟ್ಟ ನಗರಗಳು ಒಟ್ಟಾಗಿ ಕ್ಯಾನ್ಸಸ್ ನಗರವಾಯಿತು. 1843ರಲ್ಲಿ ವಿಯಾನ್‍ಡಾಟ್ ಇಂಡಿಯನ್ ಜನ ಈ ನಗರವಿರುವ ಪ್ರದೇಶವನ್ನು ಡೆಲವೇರ್ ಇಂಡಿಯನರಿಂದ ಕೊಂಡು ಇಲ್ಲಿ ನೆಲೆಸಿದರು. ಆದರೆ, ಬಿಳಿಯರು ಬಹುಸಂಖ್ಯೆಯಲ್ಲಿ ಬಂದು ನೆಲೆಸಿದಾಗ ಅವರು ಈ ಪ್ರದೇಶವನ್ನು ನಗರ ನಿರ್ಮಾಣ ಸಂಸ್ಥೆಯೊಂದಕ್ಕೆ ಮಾರಿ ಹೊರಟುಹೋದರು. ಈ ಸ್ಥಳದಲ್ಲಿ ನಗರನಿರ್ಮಾಣ ಸಂಸ್ಥೆ ವಿಯಾನ್‍ಡಾಟ್ ನಗರಕ್ಕಾಗಿ ನಿವೇಶನ ರಚಿಸಿತು. ಮಿಸೂóರಿ ಕ್ಯಾನ್ಸಸ್ ರಾಜ್ಯಗಳ ಅಂಚಿನಲ್ಲಿ ಸಂಚಾರಮಾರ್ಗ ಏರ್ಪಟ್ಟಮೇಲೆ ನದಿತೀರದ ಈ ಸಣ್ಣ ನಗರ ಬೃಹತ್ತಾಗಿ ಬೆಳೆಯತೊಡಗಿತು. ಈ ನಗರದ ಸಮೀಪದಲ್ಲಿ 1856ರಲ್ಲಿ ಮಿಸೂóರಿ ನದಿಯ ದಡದಲ್ಲಿ ಕಟ್ಟಿದ ಕ್ವಿನ್‍ಡಾರೋ ನಗರ ಅಂತರ್ಯುದ್ಧದ ಕಾಲದಲ್ಲಿ ಅವನತಿ ಹೊಂದಿದಾಗ ಅಲ್ಲಿಯ ಜನ ಆ ವೇಳೆಗಾಗಲೇ ವ್ಯಾಪಿಸುತ್ತಿದ್ದ ಕ್ಯಾನ್ಸಸ್ ನಗರದಲ್ಲಿ ನೆಲೆಸಿದರು.
1859ರ ಜೂನ್ 29ರಂದು ವಿಯಾನ್‍ಡಾಟ್ ಸಂಘಟಿತ ನಗರವೆಂದು ಅಧಿಕೃತವಾಗಿ ಘೋಷಿತವಾಯಿತು. ಅದೇ ವರ್ಷ ಜುಲೈ ತಿಂಗಳಲ್ಲಿ ಕ್ಯಾನ್ಸಸ್ ರಾಜ್ಯದ ಸಂವಿಧಾನ ಈ ನಗರದಲ್ಲಿ ರಚನೆಯಾಗಿ, 1861ರಲ್ಲಿ ಕ್ಯಾನ್ಸಸ್ ರಾಜ್ಯ ಅಮೆರಿಕ ಒಕ್ಕೂಟಕ್ಕೆ ಸೇರಿತು. 1863ರಲ್ಲಿ ಕ್ಯಾನ್ಸಸ್ ನಗರ ಯೂನಿಯನ್ ಪೆಸಿಫಿಕ್ ರೈಲು ಮಾರ್ಗಕ್ಕೆ ಪೂರ್ವದ ಕೊನೆಯ ನಿಲ್ದಾಣವಾಯಿತು. ರೈಲುಮಾರ್ಗ ಹಾಕಿದ ಮೇಲೆ ಲೆವೆನ್‍ವರ್ತ್ (ಕ್ಯಾನ್ಸಸ್) ಮತ್ತು ಕ್ಯಾನ್ಸಸ್ ನಗರ (ಮಿಸೂರಿ)ಗಳಿಗಿಂತ ದೊಡ್ಡದಾಗಿ ಬೆಳೆಯುವುದೆಂದು ಜನ ನಿರೀಕ್ಷಿಸಿದ್ದರು. ಆದರೆ, ಮಧ್ಯ ಮತ್ತು ದಕ್ಷಿಣ ಕ್ಯಾನ್ಸಸ್ ಕಡೆ ರೈಲುಮಾರ್ಗ ನಿರ್ಮಿಸುವ ಸಂಬಂಧದಲ್ಲಿ ಕ್ಯಾಮರನ್ (ಮಿಸೂóರಿ) ಮತ್ತು ಕ್ಯಾನ್ಸಸ್ (ಮಿಸೂóರಿ) ನಗರಗಳ ನಡುವೆ ಶಾಖಾ ಮಾರ್ಗವೊಂದನ್ನು ನಿರ್ಮಿಸಿದಾಗ ಇದರ ಬೆಳವಣಿಗೆಯ ವೇಗ ಸ್ವಲ್ಪ ಕಡಿಮೆಯಾಯಿತು.
ಜಾನುವಾರುಗಳ ವಿಕ್ರಯ ಮತ್ತು ಮಾಂಸರಫ್ತಿನ ಉದ್ಯಮ ಅಭಿವೃದ್ಧಿಹೊಂದಿದ ಮೇಲೆ ಕ್ಯಾನ್ಸಸ್ ನಗರ (ಮಿಸೂóರಿ) ಪ್ರಮುಖಸ್ಥಾನ ಪಡೆಯಿತು. 1869ರಲ್ಲಿ ಕ್ಯಾನ್ಸಸ್ ನದಿ ಮತ್ತು ಮಿಸೂóರಿ ರಾಜ್ಯದ ನಡುವಣ ಭಾಗ ಕ್ಯಾನ್ಸಸ್ ನಗರಕ್ಕೆಂದು (ಕ್ಯಾನ್ಸಸ್) ಗುರುತಿಸಲಾಯಿತು. ಸ್ವಲ್ಪಕಾಲಾನಂತರ ವಿಯಾನ್‍ಡಾಟ್, ಆರ್ಮರ್‍ಡೇಲ್, ಕ್ಯಾನ್ಸಸ್ ನಗರ ಮತ್ತು ಆರ್ಮ್‍ಸ್ಟ್ರಾಂಗ್ ನಗರಗಳು ಸಂಘಟಿತವಾಗಿ ಅವುಗಳ ಒಟ್ಟು ಪ್ರದೇಶವನ್ನು ಕ್ಯಾನ್ಸಸ್ ನಗರವೆಂದು ಕರೆಯಲಾಯಿತು. ಈ ನಗರದಲ್ಲಿ ಉದ್ಯಮಾವಕಾಶಗಳಿದ್ದುದರಿಂದ 19ನೆಯ ಶತಮಾನದ ಉತ್ತರಾರ್ಧದಲ್ಲಿ ಐರೋಪ್ಯ ವಲಸೆಗಾರರು ಇಲ್ಲಿ ನೆಲೆಸಿದರು. ಹೀಗಾಗಿ, ಕ್ಯಾನ್ಸಸ್(ಮಿಸೂóರಿ) ಮಹಾನಗರಕ್ಕಿಂತ ಈ ನಗರದಲ್ಲಿ ಹೊರ ಬುಡಕಟ್ಟುಗಳ ಬಿಳಿಯರು ಹೆಚ್ಚು. ಅಂತರ್ಯುದ್ಧದ ಕಾಲದಲ್ಲಿ ನೀಗ್ರೋಜನ ಇಲ್ಲಿಗೆ ಬಂದರು. ಒಟ್ಟು ಜನಸಂಖ್ಯೆಯಲ್ಲಿ ಅವರು ಶೇ.20ರಷ್ಟು ಇದ್ದಾರೆ. ಈ ನಗರದ ಜನಸಂಖ್ಯೆ 1,21,901 (1960).
ಕ್ಯಾನ್ಸಸ್ ರಾಜ್ಯ ಮುಖ್ಯ ಕೈಗಾರಿಕೆ ನಗರ. ಇಲ್ಲಿ ಐದು ನಿರ್ದಿಷ್ಟ ಕೈಗಾರಿಕಾ ಬಡಾವಣೆಗಳಿವೆ. ರಾಸಾಯನಿಕ ವಸ್ತುಗಳು, ಕಾಗದದ ಸಾಮಾನುಗಳು, ಮೋಟಾರು ವಾಹನಗಳು, ರೈಲುಗಾಡಿಗಳು, ಯಂತ್ರೋಪಕರಣಗಳು, ವ್ಯವಸಾಯದ ಮುಟ್ಟುಗಳು ಇಲ್ಲಿ ತಯಾರಾಗುತ್ತವೆ. ಅನೇಕ ಹಿಟ್ಟಿನ ಗಿರಣಿಗಳಿವೆ, ಸಾಬೂನು ತಯಾರಿಸುವ ಕಾರ್ಖಾನೆಗಳಿವೆ. ಮಾಂಸಸಂವೇಷ್ಟನ ಕೈಗಾರಿಕೆಯೂ ಬೆಳೆದಿದೆ.
ಕ್ಯಾನ್ಸಸ್ ನಗರದಲ್ಲಿ ಅನೇಕ ಉದ್ಯಾನಗಳೂ ಸಾರ್ವಜನಿಕ ಸಭಾಂಗಣಗಳೂ ಭವನಗಳೂ ಉಂಟು. ನಗರದ ಯೋಧ ಸ್ಮಾರಕ ಭವನದಲ್ಲಿ 4,000 ಪ್ರೇಕ್ಷಕರಿಗೆ ಸ್ಥಳಾವಕಾಶವುಂಟು. ಇಲ್ಲಿ ಎರಡು ಜೂನಿಯರ್ ಕಾಲೇಜುಗಳೂ ವೈದ್ಯ ಶಿಕ್ಷಣ ಶಾಲೆಯೂ ಇವೆ. (ವಿ.ಜಿ.ಕೆ.)