ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಲತೀಯ
ಕ್ಯಾಲತೀಯ
ಉದ್ಯಾನ ಪ್ರಾಮುಖ್ಯ ಪಡೆದ ಅಲಂಕಾರಿಕ ಎಲೆಸಸ್ಯ. ಇದನ್ನು ಕೆಲವೊಮ್ಮೆ ಮರಂಟ ಎಂಬ ಜಾತಿಯ ಸಸ್ಯವೆಂದೂ ಕರೆಯುತ್ತಾರೆ. ಆದರೆ ಕೆಲವು ಲಕ್ಷಣಗಳಲ್ಲಿ ಇದು ಮರಂಟಕ್ಕಿಂತ ಭಿನ್ನವಾಗಿದೆ. ಮರಂಟದ ಕಾಯಿಗಳಲ್ಲಿ ಒಂದೇ ಬೀಜವಿದೆ. ಹೂಗೊಂಚಲು ಕವಲೊಡೆದಿದೆ. ಕೆಲಾತೀಯದ ಕಾಯಿಯಲ್ಲಿ 3 ಬೀಜಗಳು ಇವೆ. ಹೂಗೊಂಚಲು ಚಂಡಿನಂತಿದೆ. ಕೆಲಾತೀಯವನ್ನು ಕುಂಡಸಸ್ಯ ಮಡಿಸಸ್ಯ ಮುಂತಾಗಿ ಬೆಳೆಸಬಹುದು. ಮರಂಟೇಸೀ ಕುಟುಂಬಕ್ಕೆ ಸೇರಿದ ಸಸ್ಯವಿದು. ಈ ಜಾತಿಯಲ್ಲಿ ನೂರಕ್ಕೂ ಹೆಚ್ಚು ಬಹುವಾರ್ಷಿಕ (ಪೆರಿನಿಯಲ್) ಪ್ರಭೇದಗಳಿವೆ. ಇವುಗಳ ಬೇರುಗಳಲ್ಲಿ ಪಿಷ್ಠ ಶೇಖರಣೆಗೊಂಡು ಅವು ಗೆಡ್ಡೆರೂಪವನ್ನು ತಾಳಿ ನೆಲದೊಳಕ್ಕೆ ಹರಿದು ಬೆಳೆಯುತ್ತವೆ. ಸಾಮಾನ್ಯವಾಗಿ ಈ ಜಾತಿ ಸಸ್ಯಗಳಿಗೆ ಕಾಂಡವಿರುವುದಿಲ್ಲ (ಏಕಾಲೆಸೆಂಟ್). ಇದ್ದರೂ ಬಹಳ ಚಿಕ್ಕದು. ಈ ಜಾತಿಯ ಪ್ರಭೇದಗಳಲ್ಲಿ ಎಲೆಗಳ ಆಕಾರ ಮತ್ತು ಗಾತ್ರ ಬೇರೆ ಬೇರೆಯಾಗಿದ್ದು ಇವುಗಳ ಮೇಲೆ ಪ್ರಭೇದಗಳಿಗೆ ಅನುಗುಣವಾಗಿ ಕೆಂಪು, ಕಂದು, ಹಳದಿ ಮತ್ತು ಬಿಳುಪು ಬಣ್ಣದ ಮಚ್ಚೆಗಳಿರುತ್ತವೆ. ಇದರಿಂದ ಗಿಡಗಳು ಬಹಳ ಆಕರ್ಷಕವಾಗಿ ಕಾಣುತ್ತವೆ. ಹೂಗೊಂಚಲು ಚಂಡಿನಂತಿದೆ (ಕ್ಯಾಪಿಟೇಟ್). ಅದರ ಸುತ್ತ ಸುರುಳಿಯಾಕಾರದ ಉಪದಳ ಒಂದಿದೆ. ಹೂಗಳಲ್ಲಿ ಸಮವಾಗಿರುವ ಮತ್ತು ಬಿಡಿಯಾಗಿರುವ ಮೂರು ಪುಷ್ಪಪತ್ರಗಳಿವೆ. ಹೂದಳಗಳು ಮೂರು. ಇವು ಒಂದರೊಡನೊಂದು ಕೂಡಿಕೊಂಡು ಕೊಳವೆಯಾಕಾರವನ್ನು ತಾಳಿವೆ. ಕೇಸರಗಳು ಮೂರು. ಇವುಗಳಲ್ಲಿ ಎರಡು ಬಂಜೆ ಕೇಸರಗಳು. ಫಲ ಮೂರು ಬೀಜವಿರುವ ಸಂಪುಟ ಮಾದರಿಯದು.
ಬಹುಜನಪ್ರಿಯವಾಗಿರುವ ಕೆಲವು ಪ್ರಭೇದಗಳನ್ನು ಇಲ್ಲಿ ಹೆಸರಿಸಿದೆ-
1 ಕೆಲಾತೀಯ ಮಿಕಾನ್ಸ್ : ಇದು ಕೆಲಾತೀಯ ಜಾತಿಯ ಸಸ್ಯಗಳ ಪೈಕಿ ಬಲು ಚಿಕ್ಕದು. ಎಲೆಗಳು ಆಯುತಾಕಾರ ಅಥವಾ ಬರ್ಜಿಯಾಕಾರದವಾಗಿದ್ದು 2"-3" ಉದ್ದ ಮತ್ತು 1" ಅಗಲ ಇವೆ. ಅವುಗಳ ತುದಿ ಮೊನಚು, ಮೇಲ್ಭಾಗ ಹಸಿರಾಗಿಯೂ ಹೊಳಪಾಗಿಯೂ ಇದೆ. ಬಿಳಿಯ ಬಣ್ಣದ ಉಬ್ಬಿದ ನಾಳವೂ, ತಳಭಾಗದಲ್ಲಿ ನಸುಬಿಳುಪು ಬಣ್ಣದ ಗೆರೆಯೂ ಇವೆ. ಕೇಸರಗಳು ಊದಾ ಬಣ್ಣದವು. ಇದು ಬ್ರಜಿóಲ್ ದೇಶದ ಮೂಲವಾಸಿ. 2 ಕೆಲಾತೀಯ ಆರ್ನೇಟ : ಇದು ಕೆಲಾತೀಯದ ಪ್ರಭೇದಗಳಲ್ಲೆಲ್ಲ ಹೆಚ್ಚು ದೃಢಕಾಯವಾಗಿ ಮತ್ತು ಸಮೃದ್ಧಿಯಾಗಿ ಬೆಳೆಯುವ ಸಸ್ಯವೆಂದು ಪ್ರಸಿದ್ಧಿಯಾಗಿದೆ. ಇದರ ಎತ್ತರ ಸುಮಾರು 3'. ಇದರಲ್ಲಿ ಕದಿರಿನಾಕಾರದ. ಬುಡದಲ್ಲಿ ಆಳವಾಗಿ ಭಾಗವಾಗಿರುವ, ಮೊನಚು ತುದಿಯ, ಅತಿ ಹಸಿರು ಬಣ್ಣದ, ಮತ್ತು ಮಾಸಲು ಕೆಂಪು ಬಣ್ಣದ-ತಳಭಾಗವುಳ್ಳ, 1'-3' ಉದ್ದದ ಎಲೆಗಳಿವೆ. ಎಲೆತೊಟ್ಟು ಸುಮಾರು 2' ಉದ್ದವಿದೆ. ಎಳೆಯ ಎಲೆ ನಾಳಗಳ ಮಧ್ಯಭಾಗದ ಬಣ್ಣ ಕಡುಗೆಂಪು. ಹೂಗೊಂಚಲು ಸ್ಟೈಕ್ ಮಾದರಿಯದು: 3" ಉದ್ದವಿದೆ. ಹೂವಿನಲ್ಲಿ ಇಬ್ಭಾಗವಾಗಿರುವ ಬಂಜೆಕೇಸರ (ಸ್ಟೈಮಿನೋಡ್) ಇದೆ. ಅದರ ಆಕಾರ ಅಂಡಾಕಾರ ಮತ್ತು ಬಣ್ಣ ಹಳದಿ. ಇದು ಗಯಾನ, ಕೊಲಂಬಿಯ ಮತ್ತು ಎಕ್ವಡಾರ್ ದೇಶಗಳ ಮೂಲನಿವಾಸಿ. 3 ಕೆಲಾತೀಯ ವಿಟ್ಟೇಟ : ಸಾಮಾನ್ಯವಾಗಿ ಕುಳ್ಳಾಗಿ ಬೆಳೆಯುವ ಗುಣವುಳ್ಳದ್ದು ಇದು. ಆದರೆ ಕೆಲವು ಸಾರಿ 3' ಎತ್ತರಕ್ಕೂ ಬೆಳೆಯುವುದುಂಟು. ಹೂಗೊಂಚಲು ಚಿಕ್ಕಟೊಟ್ಟಿರುವ ಸ್ಟೈಕ್ ಮಾದರಿಯದು. ಇದರ ತವರೂರು ಕೊಲಂಬಿಯ. 4 ಕೆಲಾತೀಯ ಜೆóಬ್ರಿನ : ಇದರ ಎಲೆಗಳು ಜೀóಬ್ರ ಪ್ರಾಣಿಯ ಬಣ್ಣವನ್ನು ಹೋಲುವುದರಿಂದ ಇದನ್ನು ಜೀಬ್ರ ಸಸ್ಯವೆಂದು ಕರೆಯುತ್ತಾರೆ. ಇದು ಕುಳ್ಳಾಗಿ ಬೆಳೆಯುವ ಗುಣವುಳ್ಳದ್ದು. ಇದು ಬ್ರಜಿóಲ್ ದೇಶದ ಮೂಲವಾಸಿ ಎಂದು ಭಾವಿಸಲಾಗಿದೆ. ಅಲ್ಲದೆ ಕ್ಯಾ.ಲಿಂಡೆನಿಯಾನ, ಕ್ಯಾ.ಇಲಸ್ಟ್ರಿಸ್, ಕ್ಯಾ.ಲೆಪಾರ್ಡೈನ, ಕ್ಯಾ.ಇಂಪೀರಿಯಾಲಿಸ್ ಮುಂತಾದುವೂ ಪ್ರಮುಖವಾಗಿವೆ. (ಬಿ.ಎ.ಸಿ.)
ಕ್ಯಾಲತೀಯದ ಎಲ್ಲ ಪ್ರಭೇದಗಳಿಗೂ ಹೆಚ್ಚಿನ ಉಷ್ಣತೆ ಬೇಕು. ಉಷ್ಣತೆ 180 ಸೆಂ.ಗಿಂತ ಕಡಿಮೆ ಇರಬಾರದು. ಇವನ್ನು ಕಾಂಡ ತುಂಡುಗಳಿಂದ ವೃದ್ದಿಸಬಹುದು. ಗಿಡಗಳನ್ನು ಬೆಳೆಸಲು ವಸಂತಋತು ಉತ್ತಮ ಕಾಲ. ಹುಲ್ಲುಮಿಶ್ರಿತ ಗೋಡುಮಣ್ಣು, ಎಲೆಗೊಬ್ಬರ ಮತ್ತು ಮರಳು ಇವುಗಳ ಮಿಶ್ರಣವಿರುವ ಮಣ್ಣು ಕೆಲಾತೀಯಕ್ಕೆ ಶ್ರೇಷ್ಠ. ನೀರು ಸರಾಗವಾಗಿ ಹರಿದು ಹೋಗುವಂತಿರಬೇಕು. ಕೆಲಾತೀಯದ ಎಲೆಗಳು ಬಹಳ ತೆಳುವಾಗಿದ್ದು ಹೆಚ್ಚು ಬಿಸಿಲನ್ನು ತಡೆದುಕೊಳ್ಳುವುದಿಲ್ಲವಾದ್ದರಿಂದ ನೆರಳು ಅತ್ಯಗತ್ಯ. *