ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಸಿಯ ಎಣ್ಣೆ
ಕ್ಯಾಸಿಯ ಎಣ್ಣೆ
ಲಾರೇಸೀ ಕುಟುಂಬಕ್ಕೆ ಸೇರಿದ ಸಿನಮೋಮಮ್ ಕ್ಯಾಸಿಯ (ಚೈನೀಸ್ ಸಿನಮಮ್) ಎಂಬ ಮರದ ತೊಗಟೆಯಿಂದ ಪಡೆಯಲಾಗುವ ಸುವಾಸಿತ ಚಂಚಲ ತೈಲ (ಆಯಿಲ್ ಆಫ್ ಕ್ಯಾಸಿಯ). ತೊಗಟೆಗೂ ಎಣ್ಣೆಗೂ ದಾಲ್ಚಿನ್ನಿಯ (ಇದು ಕೂಡ ಲಾರೇಸೀ ಕುಟುಂಬಕ್ಕೆ ಸೇರಿದೆ) ವಾಸನೆಯೆ ಇರುವುದಾದರೂ ದಾಲ್ಚಿನ್ನಿಗಿಂತ ರುಚಿಯಲ್ಲಿ ಹೆಚ್ಚು ಕಟು ಮತ್ತು ವಾಸನೆಯಲ್ಲಿ ಹೆಚ್ಚು ಒರಟು. ತೊಗಟೆಯನ್ನು (ಕೆಲವು ಸಲ ಎಲೆಯನ್ನು) ಬಟ್ಟಿಯಿಳಿಸಿ ಕ್ಯಾಸಿಯ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ. ಎಣ್ಣೆಯಲ್ಲಿ 80-95% ರಷ್ಟು ಸಿನಮಾಲ್ಡಿಹೈಡ್ ಎಂಬ ವಸ್ತುವಿದೆ. ಕೆಲವು ಬಗೆಯ ಔಷಧಿಗಳು, ದಂತಚೂರ್ಣ, ಕ್ಯಾಂಡಿ, ಚೂಯಿಂಗ್ ಗಮ್, ಕೋಲ ಪಾನೀಯಗಳು ಮುಂತಾದವಕ್ಕೆ ವಾಸನೆಕಟ್ಟಲು ಕ್ಯಾಸಿಯ ಎಣ್ಣೆಯನ್ನು ಬಳಸುತ್ತಾರೆ. ದಾಲ್ಚಿನ್ನಿಯ ವಾಸನೆ ಇರುವುದರಿಂದ ಅದರ ಬದಲಿಗೆ ಉಪಯೋಗಿಸುವುದೂ ಉಂಟು. ದಕ್ಷಿಣ ಯೂರೋಪಿನಲ್ಲಿ ದಾಲ್ಚಿನ್ನಿಗಿಂತ ಕ್ಯಾಸಿಯ ತೊಗಟೆಗೇ ಹೆಚ್ಚು ಬೇಡಿಕೆ ಇದೆ. ಕ್ಯಾಸಿಯ ಎಣ್ಣೆಯನ್ನು ಬೂಷ್ಟು ನಾಶಕವಾಗಿ ಬಳಸುವುದಿದೆ. ಸಾಬೂನು ತಯಾರಿಕೆಯಲ್ಲಿ ಇದರ ಉಪಯೋಗ ಉಂಟು. (ಆರ್.ಎಸ್.ಎನ್.)