ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯೂಬ

ವಿಕಿಸೋರ್ಸ್ ಇಂದ
Jump to navigation Jump to search

ಕ್ಯೂಬ

ವೆಸ್ಟ್ ಇಂಡೀಸಿನ ಗ್ರೇಟರ್ ಆಂಟಿಲಿಸ್ ದ್ವೀಪಗಳ ಪೈಕಿ ಅತ್ಯಂತ ದೊಡ್ಡದಾದ ಮತ್ತು ಅತ್ಯಂತ ಹೆಚ್ಚಿನ ಜನಸಂಖ್ಯೆಯುಳ್ಳ ದ್ವೀಪ. ಅಮೆರಿಕ ಸಂಯುಕ್ತಸಂಸ್ಥಾನದ ಫ್ಲಾರಿಡಕ್ಕೆ 90 ಮೈ. ದಕ್ಷಿಣದಲ್ಲಿರುವ ಈ ದ್ವೀಪದ ಉದ್ದ ಪೂರ್ವ-ಪಶ್ಚಿಮವಾಗಿ 746 ಮೈ. ಇದರ ಸರಾಸರಿ ಅಗಲ 62 ಮೈ. ಇದರ ಅಗಲ 22 ಮೈ.ಗಳಿಂದ 124 ಮೈ. ವರೆಗೆ ವ್ಯತ್ಯಾಸವಾಗುತ್ತದೆ. ತೀರದ ಬಳಿಯ ಈಸ್ಲಾ ದ ಪಿನೋಸ್ ಮತ್ತು ಸುಮಾರು 1,600 ಕಿರುದ್ವೀಪಗಳೂ ಸೇರಿ ಇದರ ವಿಸ್ತೀರ್ಣ 44,218 ಚ.ಮೈ. ಜನಸಂಖ್ಯೆ 79,37,200 (1967). ಉ.ಅ.190 49'-230 15' ಮತ್ತು ಪ.ರೇ.740 8' ಮತ್ತು 840 57' ನಡುವೆ, ಮೆಕ್ಸಿಕೋ ಕೊಲ್ಲಿಯ ದ್ವಾರದ ಬಳಿ, ಉತ್ತರಕ್ಕೆ ಬಾಗಿದ ಬಿಲ್ಲಿನಂತೆ ಇರುವ ಕ್ಯೂಬದ ಸನ್ನಿವೇಶ ಮಹತ್ವದ್ದು. ವಸಾಹತು ಯುಗದ ಆದಿಕಾಲದಲ್ಲಿ ಸ್ಪೇನಿನವರು ಇದನ್ನು ಹೊಸ ಜಗತ್ತಿನ ಬೀಗದಕೈ ಎಂದು ವರ್ಣಿಸುತ್ತಿದ್ದರು. ಈಗಲೂ ರಾಜಕೀಯವಾಗಿಯೂ ಆರ್ಥಿಕವಾಗಿಯೂ ಇದರ ಆಯಕಟ್ಟಿನ ಸ್ಥಾನಮಹತ್ತ್ವ ಕಡಿಮೆಯಾಗಿಲ್ಲ. ಅಮೆರಿಕ ಸಂಯುಕ್ತಸಂಸ್ಥಾನದ ಪೂರ್ವ ರಾಜ್ಯಗಳ ಜನನಿಬಿಡ ಕೇಂದ್ರಗಳಿಗೆ ಸನಿಯದಲ್ಲಿರುವುದರಿಂದ ಕ್ಯೂಬ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಬೃಹದ್ ರಾಷ್ಟ್ರಗಳ ಗಮನ ಸೆಳೆದಿದೆ.

ಭೌತಲಕ್ಷಣ: ಕ್ಯೂಬ ಬಹುತೇಕ ವಿಶಾಲ ಕಣಿವೆಗಳಿಂದ ಕೂಡಿದ ನಾಡು. ಒಟ್ಟು ವಿಸ್ತೀರ್ಣದ ಕಾಲುಭಾಗ ಪರ್ವತಪ್ರದೇಶ. ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಇದು ಹಬ್ಬಿದೆ. ಪರ್ವತಶ್ರೇಣಿಗಳ ನಡುವೆ ವಿಶಾಲವಾದ ಮೈದಾನಗಳಿವೆ. ಕೃಷಿಯ ದೃಷ್ಟಿಯಿಂದ ಅಮೂಲ್ಯವಾಗಿವೆ. ಸಾರಿಗೆ ಬೆಳವಣಿಗೆಗೂ ಅನುಕೂಲವಾಗಿವೆ.

ಕ್ಯೂಬದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 325'. ಸಿಯೆರಾ ಮೇಸ್ತ್ರ ಶ್ರೇಣಿಯ ಪಿಕೋ ಟಕ್ರ್ವಿನೊ (6,578') ಅತ್ಯುನ್ನತ ಶಿಖರ. ಆಗ್ನೇಯ ತುದಿಯ ಪರ್ವತಪ್ರದೇಶದ ಕೆಲವು ಭಾಗಗಳ ಗರಿಷ್ಠ ಎತ್ತರ 2,000'ಗಿಂತ ಹೆಚ್ಚು. ಕಾಮಾಗ್ವೆಯಿಯ ಬೆಟ್ಟಗಳ ಗರಿಷ್ಠ ಇತ್ತರ ಸುಮಾರು 1,000'. ದಕ್ಷಿಣ ಲಾಸ್ ವಿಲಾಸ್‍ನ ಟ್ರಿನಿಡಾಡ್ ಪರ್ವತಗಳ ಅತ್ಯುನ್ನತ ಶಿಖರ 3,800' ಇದೆ. ಉತ್ತರ ತೀರದ ಬಳಿಯ ಪೀನಾರ್ ದೆಲ್ ರೀಯೊ ಪ್ರದೇಶದಲ್ಲಿ ಅತ್ಯಂತ ಎತ್ತರದ ಸ್ಥಳ 2,389'.

ಕ್ಯೂಬದಲ್ಲಿ 200ಕ್ಕೂ ಹೆಚ್ಚು ನದಿಗಳಿವೆ. ಇವುಗಳಲ್ಲಿ ಬಹುತೇಕ ನದಿಗಳು ಉತ್ತರಕ್ಕೋ ದಕ್ಷಿಣಕ್ಕೋ ಹರಿಯುತ್ತವೆ. ಕೆಲವು ನದಿಗಳ ಅಳಿವೆಗಳು ಆಳವಾಗಿಯೂ ಅಗಲವಾಗಿಯೂ ಉಂಟು. ಇವು ನೌಕಾಸಂಚಾರಕ್ಕೆ ಅನುಕೂಲಕರ. ಕ್ಯೂಬ ದ್ವೀಪದ ಅಗಲ ಕಿರಿದಾದ್ದರಿಂದ ಬಹುತೇಕ ನದಿಗಳು ಮೊಟಕಾಗಿವೆ. ಅತ್ಯಂತ ಉದ್ದದ ನದಿ ಕಾಟೊ (155 ಮೈ.). ಪಶ್ಚಿಮ ಓರಿಯೆಂಟೆಯ ಅಗಲವಾದ ಮೈದಾನದಲ್ಲಿ ಸಿಯೆರಾ ಮೇಸ್ತ್ರಕ್ಕೆ ಸಮಾನಾಂತರದಲ್ಲಿ ಇದು ಹರಿಯುತ್ತದೆ. ಕ್ಯೂಬದ ಕಡಲ ಕಿನಾರೆಯ (ಕೋಸ್ಟ್ ಲೈನ್) ಉದ್ದ ಸುಮಾರು 2,200 ಮೈ. ಇದರ ಉದ್ದಕ್ಕೂ ಅನೇಕ ಒಳ್ಳೆಯ ಬಂದರುಗಳಿವೆ.

ಕ್ಯೂಬವನ್ನು ಅದರ ಮೇಲ್ಮೈ ಲಕ್ಷಣಗಳಿಗೆ ಅನುಗುಣವಾಗಿ ನಾಲ್ಕು ಮುಖ್ಯ ಭೌಗೋಳಿಕ ಪ್ರದೇಶಗಳಾಗಿ ಹೀಗೆ ವಿಂಗಡಿಸಬಹುದು: 1. ಪಶ್ಚಿಮದ ಮೂರು ಪ್ರಾಂತ್ಯಗಳನ್ನೊಳಗೊಂಡ ಆಕ್ಸಿಡೆಂಟ್; 2. ಕೇಂದ್ರ ಪ್ರಾಂತ್ಯದ ಬಹು ಭಾಗವನ್ನಾವರಿಸಿರುವ ಲಾಸ್ ವಿಲಾಸ್; 3. ಕಾಮಾಗ್ವೆಯಿ ಮತ್ತು ಓರಿಯೆಂಟೆ ಪ್ರಾಂತ್ಯದ ವಾಯವ್ಯಭಾಗ; 4 ಓರಿಯೆಂಟೆಯ ಉಳಿದೆಲ್ಲ ಭಾಗ.

ವಾಯುಗುಣ: ಕ್ಯೂಬದ್ದು ಸಾಮಾನ್ಯವಾಗಿ ಸಾಗರಿಕ ಉಷ್ಣವಲಯ ವಾಯುಗುಣ. ಕ್ಯೂಬದ ಯಾವ ಭಾಗವೂ ಸಮುದ್ರದಿಂದ ಬಹು ದೂರ ಇಲ್ಲವಾದ್ದರಿಂದ ಅದು ಸಮುದ್ರದ ಪ್ರಭಾವಕ್ಕೆ ಒಳಗಾಗಿದೆ. ಜನವರಿಯಲ್ಲಿ ಮಧ್ಯಕ ಉಷ್ಣತೆ 700 ಫ್ಯಾ., ಜುಲೈಯಲ್ಲಿ 810 ಫ್ಯಾ. ಅಲ್ಲಿ 900 ಫ್ಯಾ.ಗೂ ಹೆಚ್ಚಿನ ಗರಿಷ್ಠ ಉಷ್ಣತೆ ಬರ್ಫ ಬಿಂದುವಿಗಿಂತ ಕೆಳಕ್ಕೆ ಇಳಿಯುವುದುಂಟು. ವರ್ಷವೆಲ್ಲ ಬೀಸುವ ವ್ಯಾಪಾರಮಾರುತಗಳಿಂದ ತೀರಪ್ರದೇಶ ಹೆಚ್ಚು ತಂಪಾಗಿರುತ್ತದೆ. ಇವು ಚಳಿಗಾಲದಲ್ಲಿ ಈಶಾನ್ಯದಿಂದಲೂ ಬೇಸಗೆಯಲ್ಲಿ ಪೂರ್ವ-ಆಗ್ನೇಯಗಳಿಂದಲೂ ಬೀಸುತ್ತವೆ. ಅಪರೂಪವಾಗಿ ಅಮೆರಿಕ ಸಂಯುಕ್ತಸಂಸ್ಥಾನದ ಖಂಡಪ್ರದೇಶದಿಂದ ಮೊತ್ತವಾಗಿ ಬೀಸುವ ಚಳಿಗಾಳಿಯ ಪ್ರಭಾವಕ್ಕೆ ಉತ್ತರ ತೀರಪ್ರದೇಶ ಒಳಗಾಗುವುದುಂಟು.

ಕ್ಯೂಬದಲ್ಲಿ ಮಳೆ ಧಾರಾಳ; ವಾರ್ಷಿಕ ಸರಾಸರಿ 54". ಪೀನ್ ದೆಲ್ ರೀಯೊ ಪರ್ವತಭಾಗದಲ್ಲಿ ಗರಿಷ್ಠ ಮಳೆಯಾಗುತ್ತದೆ (65"). ಓರಿಯೆಂಟೆಯ ದಕ್ಷಿಣ ತೀರದಲ್ಲಿ 30"ಗಿಂತ ಕಡಿಮೆ. ಮೇ-ನವೆಂಬರ್ ಮಳೆಗಾಲ. ವರ್ಷದ ಮಳೆಯ ಮುಕ್ಕಾಲು ಪಾಲು ಬೀಳುವುದು ಈ ಕಾಲದಲ್ಲಿ. ಕ್ಯೂಬ ಚಂಡಮಾರುತಗಳಿಗೆ ತುತ್ತಾಗುವುದಂಟು. ವೇಗದಿಂದ ಬೀಸುವ ಗಾಳಿ, ಅತಿಯಾದ ಮಳೆ ಮತ್ತು ಅಲೆಯ ಹೊಡೆತಗಳಿಂದ ಮನೆ, ಬೆಳೆಗಳೂ ಜನರೂ ಹಾನಿಗೆ ಒಳಗಾಗುವುದುಂಟು. ಪೂರ್ವದಲ್ಲಿ ಇವುಗಳ ಹಾವಳಿ ಹೆಚ್ಚು.

ಸಸ್ಯಗಳು, ಪ್ರಾಣಿಗಳು: ಕ್ಯೂಬದ ಸಸ್ಯರಾಶಿ ವೈವಿಧ್ಯಪೂರಿತ. ವೆಸ್ಟ್ ಇಂಡೀಸ್, ದಕ್ಷಿಣ ಫ್ಲಾರಿಡ, ಮೆಕ್ಸಿಕೋ, ಮಧ್ಯ ಅಮೆರಿಕ ಇವುಗಳ ಪ್ರಭೇದಗಳು ಇಲ್ಲುಂಟು. ಹಲವಾರು ಹೊಸ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಕಬ್ಬು, ಕಾಫಿ, ಕೆಕಾವೊ, ಬಾಳೆ ಉದಾಹರಣೆಗಳು. ಕ್ಯೂಬದ ಫಲವತ್ತಾದ ಮೈದಾನಗಳಲ್ಲಿ ಹಲವಾರು ಅಮೂಲ್ಯ ಮರಗಳ ಕಾಡುಗಳು ಹಬ್ಬಿದ್ದುವು. ಅವನ್ನೆಲ್ಲ ಬಹುತೇಕ ಕೃಷಿಗಾಗಿ ಕಡಿಯಲಾಗಿದೆ. ಪರ್ವತಗಳ ಮೇಲೆ ಕಾಡುಗಳು ಉಳಿದುಕೊಂಡಿವೆ. ಕ್ಯೂಬದ ಕಾಲುಭಾಗವನ್ನು ಉಷ್ಣವಲಯದ ಹುಲ್ಲುಗಾಡು ಆವರಿಸಿತ್ತು. ತೀರಪ್ರದೇಶದಲ್ಲಿ-ಮುಖ್ಯವಾಗಿ ದಕ್ಷಿಣದ ಕರಾವಳಿಯಲ್ಲಿ-ಗುಲ್ಮವೃಕ್ಷಗಳಿವೆ.

ಕ್ಯೂಬದ ಪ್ರಾಣಿ ಪ್ರಭೇದಗಳೂ ಬಗೆಗಳೂ ವೈವಿಧ್ಯಮಯ. ಇವುಗಳಲ್ಲಿ ಕಶೇರುಕಗಳಿಗಿಂತ ಅಕಶೇರುಕಗಳು ಅಧಿಕ. ಅನೇಕ ಪ್ರಭೇದಗಳು ಸ್ಥಳೀಯವಾದವುಗಳು. ಬಾವಲಿಗಳ, ದಂಶಕಗಳ ಹಲವು ಪ್ರಭೇದಗಳುಂಟು. ಅತ್ಯಂತ ದೊಡ್ಡ ಬಾವಲಿ ಸಣ್ಣ ಮೀನುಗಳನ್ನು ತಿನ್ನುತ್ತದೆ. ಅತಿ ಸಣ್ಣ ಬಾವಲಿಗೆ ಚಿಟ್ಟೆ ಬಾವಲಿ ಎಂದು ಹೆಸರು. ದೊಡ್ಡ ಇಲಿಗಳ ಮೂರು ಪ್ರಭೇದಗಳು ಇಲ್ಲುಂಟು. ನದೀಮುಖಗಳಲ್ಲಿ ಕಡಲು ಹಸುಗಳಿವೆ. ಕ್ಯೂಬದಲ್ಲಿ ಹಕ್ಕಿಗಳ 297 ಪ್ರಭೇದಗಳೂ ಉಪಪ್ರಭೇದಗಳೂ ಉಂಟು. ಇವುಗಳಲ್ಲಿ 70 ಮಾತ್ರ ದೇಶೀಯವಾದವು. ಉರಗಗಳೂ ಸ್ಥಲ ಜಲೋಭಯ ಜೀವಿಗಳೂ ವಿರಳ. ಇಲ್ಲಿಯ ಬಲು ದೊಡ್ಡ ಹಲ್ಲಿ ಇಗ್ವಾನ. ಕೇಮನ್, ಕೊಕೊಡ್ರಿಲೊ ಎಂಬ ಎರಡು ಪ್ರಭೇದಗಳ ಮೊಸಳೆಗಳೂ ಸೀನೀರಿನ ಆಮೆಗಳೂ ಇವೆ. ಆದರೆ ವಿಷಸರ್ಪಗಳಿಲ್ಲ. ಸಮುದ್ರಮತ್ಸ್ಯಗಳೂ 4,000 ಮೃದ್ವಸ್ತಿ ಜಂತುಗಳ ಪ್ರಭೇದಗಳೂ ಬಸವನಹುಳುಗಳೂ ಉಂಟು. ಕ್ಯೂಬದ ಕೀಟ ಪ್ರಪಂಚವೂ ವೈವಿಧ್ಯಮಯ. ಹಳದಿ ಜ್ವರ ಹರಡುವ ಸೊಳ್ಳೆಯನ್ನು 1902ರಲ್ಲಿ ಬಹುತೇಕ ನಿರ್ನಾಮ ಮಾಡಲಾಯಿತು.

ಆರ್ಥಿಕತೆ: ಇಪ್ಪತ್ತನೆಯ ಶತಮಾನದ ಆದಿಯಿಂದ ಕ್ಯೂಬದ ಆರ್ಥಿಕತೆ ಮುಖ್ಯವಾಗಿ ಕಬ್ಬಿನ ಬೆಳೆ ಮತ್ತು ಸಕ್ಕರೆ ತಯಾರಿಕೆಯನ್ನೇ ಆಧರಿಸಿದೆ. ಕ್ಯೂಬದ ಆದ್ಯಂತ ಕಬ್ಬನ್ನು ಬೆಳೆಯುತ್ತಾರೆ. ಆದರೆ ಕ್ಯೂಬದ ಪೂರ್ವಾರ್ಧದಲ್ಲಿ ಇದರ ಬೆಳೆ ಹೆಚ್ಚು. ಕ್ಯೂಬದಲ್ಲಿ ಕಚ್ಚಾ ಸಕ್ಕರೆ ತಯಾರಿಸುವ 160 ಕಾರ್ಖಾನೆಗಳಿದ್ದರೂ ಅದರ ಪರಿಷ್ಕರಣಕಾರ್ಯ ಅಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ಮೊದಮೊದಲು ಕ್ಯೂಬದ ಸಕ್ಕರೆ ಕೈಗಾರಿಕೆ ಪ್ರವರ್ಧಮಾನಕ್ಕೆ ಬಂತಾದರೂ ಅನಂತರ ಇದರಲ್ಲಿ ಪದೇ ಪದೇ ಏರಿಳಿತಗಳು ಸಂಭವಿಸಿವೆ. ಸಕ್ಕರೆ ಕೈಗಾರಿಕೆಯನ್ನು ಹಲವು ನಿಯಂತ್ರಣಗಳಿಗೆ ಒಳಪಡಿಸಲಾಗಿದೆ. ಕ್ಯೂಬದ ಇತರ ಬೆಳೆಗಳು ಹೊಗೆಸೊಪ್ಪು, ಆಹಾರಧಾನ್ಯಗಳು, ಬಾಳೆ, ಅನಾನಸ್ ಮತ್ತು ಪರಂಗಿ. ಕ್ಯೂಬದ ಹೊಗೆಸೊಪ್ಪನ್ನು ಚುಟ್ಟಾ ತಯಾರಿಕೆಗೆ ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಕ್ಯೂಬದಿಂದ ಹಲವು ಗಟ್ಟಿ ಮರಗಳನ್ನು ನಿರ್ಯಾತ ಮಾಡಲಾಗುತ್ತಿತ್ತು. ಈಗ ಇದನ್ನು ನಿಷೇಧಿಸಲಾಗಿದೆ.

ಕ್ಯೂಬದ ಗಣಿಗಾರಿಕೆಯೂ ಮುಖ್ಯವಾದ್ದು. ಪಿನಾರ್ ದೆಲ್ ರೀಯೊದಲ್ಲಿ ತಾಮ್ರದ ನಿಕ್ಷೇಪಗಳಿವೆ. ಓರಿಯೆಂಟೆ ಪ್ರಾಂತ್ಯದಲ್ಲಿ ಕಡಿಮೆ ದರ್ಜೆಯ ಕಬ್ಬಿಣದ ಅದುರು ಧಾರಾಳವಾಗುಂಟು. ಇದನ್ನು ಅಭಿವೃದ್ಧಿಪಡಿಸಿಲ್ಲ. ಮೋವ ಕೊಲ್ಲಿ ಪ್ರದೇಶದಲ್ಲಿ ನಿಕಲ್ ಸಿಗುತ್ತದೆ. ಗಣಿ ಕೈಗಾರಿಕೆಯನ್ನು ಬಹುತೇಕ ರಾಷ್ಟ್ರೀಕರಣಗೊಳಿಸಲಾಗಿದೆ. ಕ್ಯೂಬದಲ್ಲಿ ಕಲ್ಲಿದ್ದಲು ಇಲ್ಲ. ವಿದ್ಯುತ್ ವಿಭವವೂ ಹೆಚ್ಚಾಗಿ ಇಲ್ಲ. ಮನೆಯ ಇಂಧನ ಇದ್ದಿಲು. ಸೌದೆಯಿಂದ ಇದನ್ನು ತಯಾರಿಸಲಾಗುತ್ತದೆ. ಕಬ್ಬಿನ ಹಿಪ್ಪೆಯನ್ನು ಸಕ್ಕರೆ ಕೈಗಾರಿಕೆಯಲ್ಲಿ ಇಂಧನವಾಗಿ ಉಪಯೋಗಿಸುತ್ತಾರೆ. ಸಕ್ಕರೆಯ ಜೊತೆಗೆ ತಯಾರಾಗುವ ಪದಾರ್ಥಗಳು ರಂ ಮತ್ತು ಕೈಗಾರಿಕಾ ಮದ್ಯ ಸಾರ. ಕೈಗಾರಿಕಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮೀನುಗಾರಿಕೆಯನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದೆ.

ಸಾರಿಗೆ, ನಗರಗಳು: ರೈಲುಮಾರ್ಗಗಳೂ ರಸ್ತೆಗಳೂ ಕ್ಯೂಬದ ಮುಖ್ಯ ಪಟ್ಟಣಗಳ ಮತ್ತು ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸಿವೆ. 3,000 ಮೈ. ರೈಲುಮಾರ್ಗಗಳೂ 5,083 ಮೈ. ಸರ್ವಋತು ರಸ್ತೆಗಳೂ ಉಂಟು. ಕ್ಯೂಬ ಭೌಗೋಳಿಕವಾಗಿ ನೌಕಾ ಮತ್ತು ವಾಯುಮಾರ್ಗಗಳ ನಾಭಿಯಂತಿದೆ. ಹವಾನ (10,08,500) ರಾಜಧಾನಿ. ಮುಖ್ಯ ವಾಣಿಜ್ಯ ಕೇಂದ್ರ. ಕ್ಯೂಬದ ನಾಣ್ಯ ಪೇಸೋ ಭಾಷೆ ಸ್ಪ್ಯಾನಿಷ್.

ಸರ್ಕಾರ: 1959ರ ಕ್ರಾಂತಿಯ ಅನಂತರ ಕ್ಯೂಬದ ಆಡಳಿತವನ್ನು ಗಣರಾಜ್ಯದ ಮೂಲ ಕಾಯಿದೆಯ ಪ್ರಕಾರ ನಡೆಸಲಾಗುತ್ತಿದೆ. ಇಪ್ಪತ್ತು ಮಂತ್ರಿಗಳ ಸಹಾಯದಿಂದ ದೇಶವನ್ನಾಳುವವನು ಪ್ರಧಾನಮಂತ್ರಿ. ಅವನೇ ಅಧ್ಯಕ್ಷನನ್ನು ನೇಮಿಸುತ್ತಾನೆ. ಆಡಳಿತಕ್ಕಾಗಿ ದೇಶವನ್ನು ಆರು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. (ಜೆ.ಇ.ಸಿ.)