ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಾಗ್, ಆಗಸ್ಟ್‌

ವಿಕಿಸೋರ್ಸ್ದಿಂದ

ಕ್ರಾಗ್, ಆಗಸ್ಟ್ 1874-1949. ಡೆನ್ಮಾರ್ಕಿನ ಅಂಗಕ್ರಿಯಾ ವಿಜ್ಞಾನಿ. ರಕ್ತಪರಿಚಲನ ಮಂಡಲದಲ್ಲಿ ಅತಿಸೂಕ್ಷ್ಮ ರಕ್ತನಾಳಗಳ ಪಾತ್ರದ ಅರಿವನ್ನು ಪ್ರಯೋಗಗಳ ಮೂಲಕ ತೋರಿಸಿಕೊಟ್ಟವ. ಗ್ರಿನಾದಲ್ಲಿ ಜನನ. ಕಪ್ಪೆಗಳ ಉಸಿರಾಟದ ಮೇಲೆ ಪ್ರೌಢಪ್ರಬಂಧ ಬರೆದು ಡಾಕ್ಟೊರೇಟ್ ಪದವಿ ಪಡೆದ (1903). ಕೋಪೆನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಉಸಿರಾಡುವಾಗ ಪುಪ್ಪುಸಗಳಲ್ಲಿ ಆಗುವ ಅನಿಲದ ವಿನಿಮಯವನ್ನು ಕುರಿತು ಪ್ರಯೋಗಗಳನ್ನು ನಡೆಸಿ ವಿಯೆನ್ನದ ವಿಜ್ಞಾನ ಅಕೆಡಮಿಯಿಂದ ಬಹುಮಾನ ಪಡೆದ (1906). ಪುಪ್ಪುಸಗಳು ಆಮ್ಲಜನಕವನ್ನು ಹೀರಿ ಇಂಗಾಲದ ಡೈ ಆಕ್ಸೈಡನ್ನು ಬಿಡುವುವೇ ಹೊರತು ಬೇರೆ ಏನನ್ನೂ ಸುರಿಸುವುದಿಲ್ಲವೆಂದೂ, ರಕ್ತಕ್ಕೆ ಆಮ್ಲಜನಕ ಸೇರಲು ಕೇವಲ ಭೌತಪಸರಿಕೆ ಮಾತ್ರ ಕಾರಣವೆಂದೂ ತೋರಿಸಿಕೊಟ್ಟ. ಒಬ್ಬನ ದುಡಿತದ ಕೆಲಸವನ್ನು ಅಳೆವ ಬೈಸಿಕಲ್, ಉಸಿರಾಟವನ್ನು ಅಳೆವ ಶ್ವಾಸಮಾಪಿ, ರಕ್ತಪ್ರಮಾಣಮಾಪಿ ಇವನ್ನೆಲ್ಲ ತಯಾರಿಸಿದ. ಪ್ರಪಂಚದ ಎಲ್ಲೆಡೆಗಳಿಂದಲೂ ವಿಜ್ಞಾನಿಗಳು ಬಂದು ಇವನೊಂದಿಗೆ ಕೆಲಸ ಮಾಡಿದರು. ಇದಕ್ಕಾಗಿ ರಾಕ್‍ಫೆಲ್ಲರ್ ಪ್ರತಿಷ್ಠಾನದ ವತಿಯಿಂದ ಇವನಿಗಾಗಿ ಒಂದು ಪ್ರಾಣಿ ಅಂಗಕ್ರಿಯಾಶಾಸ್ತ್ರ ಇಲಾಖೆ ಊರ್ಜಿತವಾಯಿತು. ಸ್ನಾಯುಗಳಿಗೆ ಆಮ್ಲಜನಕ ಒದಗಿಸಲು ರಕ್ತ ಸಾಗುವುದನ್ನು ರಕ್ತಲೋಮನಾಳಗಳು ಹೇಗೆ ಹತೋಟಿಗೊಳಿಸುವುವೆಂದೂ ಸ್ನಾಯು ಚಟುವಟಿಕೆಗೆ ತಕ್ಕಷ್ಟು ಲೋಮನಾಳಗಳೂ ತೆರೆÉದುಕೊಂಡು ರಕ್ತ ಹರಿಸುತ್ತವೆಂದೂ ತೋರಿಸಿಕೊಟ್ಟುದಕ್ಕಾಗಿ ನೊಬೆಲ್ ಬಹುಮಾನ ದೊರೆಯಿತು (1920). (ಡಿ.ಎಸ್.ಎಸ್.)