ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರೇನ್, ಸ್ಟೀವನ್

ವಿಕಿಸೋರ್ಸ್ದಿಂದ

ಕ್ರೇನ್, ಸ್ಟೀವನ್

1871-1900. ಅಮೆರಿಕೆಯ ಯುದ್ಧ ಬಾತ್ಮೀದಾರ, ಕವಿ, ಕಾದಂಬರಿಕಾರ. ನ್ಯೂ ಜರ್ಸಿಯ ನ್ಯೂಯಾರ್ಕ್‍ನ ಮೆಥಾಡಿಸ್ಟ್ ಕ್ರೈಸ್ತ ಪಾದ್ರಿಯೊಬ್ಬನ 14ನೆಯ ಮಗ. ಸೈರಾಕ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬೇಸ್‍ಬಾಲ್ ಟೀಮಿನ ಮುಖಂಡತ್ವವನ್ನು ವಹಿಸಿದ್ದ. ಅನಂತರ ಪತ್ರಿಕೋದ್ಯಮಿಯಾದ. ಮ್ಯಾಗಿ: ಎ ಗರ್ಲ್ ಆಫ್ ದಿ ಸ್ಟ್ರೀಟ್ಸ್ (1892) ಈತನ ಪ್ರಥಮ ಕೃತಿ. ಜನರ ಗಮನ ಸೆಳೆಯದಿದ್ದರೂ ಇದು ಈತನ ಪ್ರೌಢ ಸಾಹಿತ್ಯ ಶಕ್ತಿಗೆ ಸಾಕ್ಷಿಯಾಗಿದೆ. ಮರುವರ್ಷ ದಿ ರೆಡ್ ಬ್ಯಾಡ್ಜ್ ಆಫ್ ಕರೇಜ್ ಎಂಬ ಕಾದಂಬರಿಯನ್ನು ಅಮೆರಿಕ ಅಂತರ್ಯುದ್ಧದ ಹಿನ್ನೆಲೆಯನ್ನಿಟ್ಟುಕೊಂಡು ರಚಿಸಿದ. ಇದು ತುಂಬ ಜನಪ್ರಿಯತೆಯನ್ನು ಗಳಿಸಿತು. ಅಲ್ಲಿಂದ ಮುಂದಿನ ಈತನ ಜೀವನ ಯುದ್ಧಗಳನ್ನು ನೋಡುವುದರಲ್ಲಿಯೂ ಅವುಗಳನ್ನು ನಿರೂಪಿಸಿ ಬರೆಯುವುದರಲ್ಲಿಯೂ ಕಳೆಯಿತು. 1896ರಲ್ಲಿ ಲಂಡನಿಗೆ ಬಂದು ಕಾನ್ರಾಡನ ಸ್ನೇಹ ಗಳಿಸಿದ. ಅನಂತರ ಸ್ಪ್ಯಾನಿಷ್ ಅಮೆರಿಕನ್ ಯುದ್ಧದ ಹಿನ್ನೆಲೆಯನ್ನು ಇಟ್ಟುಕೊಂಡು ವೂಂಡ್ಸ್ ಇನ್ ದಿ ರೇನ್ (1900) ಕೃತಿಯನ್ನು ರಚಿಸಿದ. ಈತನ ಕವನ ಸಂಕಲನಗಳಲ್ಲಿ ದಿ ಬ್ಲ್ಯಾಕ್ ರೈಡರ್ಸ್ (1895) ಮತ್ತು ವಾರ್ ಈಸ್ ಕೈಂಡ್ (1900) ಎಂಬುವು ಸೇರಿವೆ. ಕ್ಷಯ ರೋಗಕ್ಕೆ ತುತ್ತಾದ ಈತ ಜರ್ಮನಿಯಲ್ಲಿ ಸತ್ತ. ವ್ಯವಸ್ಥೆಗೆಟ್ಟ ಈ ಜಗತ್ತಿನಲ್ಲಿ ಸಿಗಬಹುದಾದ ಒಂದು ಸಮಾಧಾನ ವ್ಯಕ್ತಿ-ವ್ಯಕ್ತಿಗಳ ನಡುವಿನ ಸ್ನೇಹ ಸಂಬಂಧದಿಂದ-ಎಂಬುದನ್ನು ದಿ ರೆಡ್ ಬ್ಯಾಡ್ಜ್ ಆಫ್ ಕರೇಜ್ ಕಾದಂಬರಿಯ ಮುಖೇನ ಈತ ಸಾರಿದ್ದಾನೆ. ದಿ ಓಪನ್ ಬೋಟ್ ಮೊದಲಾದ ಶ್ರೇಷ್ಠ ಸಣ್ಣ ಕಥೆಗಳನ್ನೂ ಈತ ರಚಿಸಿದ್ದಾನೆ. ಕ್ರೇನನ ಸಮಗ್ರ ಸಾಹಿತ್ಯ 1926ರಲ್ಲಿ 12 ಸಂಪುಟಗಳಲ್ಲಿ ಪ್ರಕಟವಾಗಿದೆ. (ಎನ್.ಎಸ್.ಎಲ್.)