ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ವಾಷಿಯೋರ್ಕರ್

ವಿಕಿಸೋರ್ಸ್ ಇಂದ
Jump to navigation Jump to search

ಕ್ವಾಷಿಯೋರ್ಕರ್

ಮೆಕ್ಕೆಜೋಳವನ್ನು ಸೇವಿಸುವ ಮಕ್ಕಳಲ್ಲಿ ಆಹಾರ ನ್ಯೂನತೆಯಿಂದ ತಲೆದೋರುವ ಕಾಯಿಲೆ. ದಕ್ಷಿಣ ಆಫ್ರಿಕದಲ್ಲಿ ಸಾಮಾನ್ಯ. ಪ್ರೋಟೀನು ಮತ್ತು ವಿಟಮಿನ್ನುಗಳ ಅಂಶಗಳು ಆಹಾರದಲ್ಲಿ ಸಾಕಷ್ಟು ಇಲ್ಲದಾಗ ಈ ಕಾಯಿಲೆ ಬರುವುದೆಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಈ ರೋಗದ ಲಕ್ಷಣಗಳಲ್ಲಿ ಮುಖ್ಯವಾದ ಅಂಶಗಳಿವು : 1. ಎದೆ ಹಾಲು ಬಿಡಿಸಿದ ತರುವಾಯ ಕಂಡುಬರುವ ದೈಹಿಕ ಮತ್ತು ಮಾನಸಿಕ ಕ್ಷೀಣತೆ. 2. ಕೂದಲು ಮತ್ತು ಚರ್ಮದ ಬಣ್ಣದಲ್ಲಿ ಬದಲಾವಣೆ. 3. ಶರೀರದ ಊತ, ವಾಂತಿ, ಭೇದಿ ಮತ್ತು ಇತರ ಬದಲಾವಣೆಗಳು. 4. ಮಗುವಿನಲ್ಲಿ ಕಂಡುಬರುವ ಆಸಕ್ತಿಹೀನತೆ ಅಥವಾ ನಿರುತ್ಸಾಹ. 5. ಪರಿಹಾರ ಕ್ರಮಗಳನ್ನು ಉಪಯೋಗಿಸದಿದ್ದಾಗ ಉಂಟಾಗುವ ಇತರ ರೋಗಗಳು ಮತ್ತು ಕಡೆಗೆ ಸಾವು.

ಮಗು ತಾಯಿಯ ಹಾಲಿನಿಂದ ಬೆಳೆಯುವ ಮೊದಲ ಕೆಲವು ತಿಂಗಳುಗಳಲ್ಲಿ ಅದರ ಆರೋಗ್ಯ ಸಹಜವಾಗಿಯೇ ಇರುತ್ತದೆ. ಆದರೆ ತಾಯಿ ಹಾಲನ್ನು ಬಿಡಿಸಿ ಕೃತಕ ಹಾಲು ಮತ್ತು ಇತರ ಆಹಾರಗಳನ್ನು ಉಪಯೋಗಿಸಿದಾಗ ಈ ರೋಗದ ಚಿಹ್ನೆಗಳು ಕಾಣಿಸುವುವು. 4 ತಿಂಗಳಿಂದ 5 ವರ್ಷದ ವಯೋಮಿತಿಯಲ್ಲಿ ಸಂಭವಿಸಬಹುದಾದ ಈ ಕಾಯಿಲೆ 85% ರಷ್ಟು 7 ತಿಂಗಳಿನಿಂದ 3 ವರ್ಷದ ಮಕ್ಕಳಲ್ಲಿ ಕಂಡುಬರುತ್ತದೆ. ಹಸುವಿನ ಹಾಲನ್ನು ಉಪಯೋಗಿಸುವ ಮಕ್ಕಳಿಗೆ ಈ ಕಾಯಿಲೆ ಬರುವುದು ಅಪರೂಪ. ದೈಹಿಕಬೆಳೆವಣಿಗೆಯ ನ್ಯೂನತೆಯಿಂದ ತೂಕ ಕ್ರಮೇಣ ಕಡಿಮೆಯಾಗುವುದು. ಹೆಚ್ಚಾಗಿ ದೇಹದಲ್ಲಿ ಊತ ಕಂಡುಬಂದರೂ ತೂಕ ಕ್ರಮೇಣ ಕುಗ್ಗುವುದು ಒಂದು ಮುಖ್ಯವಾದ ಅಂಶ. ಮೂಳೆಗಳ ಮತ್ತು ಮಾಂಸಖಂಡಗಳ ಬೆಳೆವಣಿಗೆಗೂ ಕುಂದು ಉಂಟಾಗಿ ಅಕೃತಿಯೇ ಬದಲಾವಣೆಗೊಂಡು ಮಗು ಕೃಶವಾಗುವುದು. ಕಾಲುಗಳಲ್ಲಿ ಕಂಡುಬಂದ ಊತ ಕ್ರಮೇಣ ಮುಖ, ಕೈ ಮತ್ತು ಜನನಾಂಗಗಳಿಗೂ ಹರಡುವುದು. ಮೂತ್ರದ ಉತ್ಪಾದನೆ ಕಡಿಮೆಯಾಗಿ ಮೂತ್ರದಲ್ಲಿ ಅಲ್ಬುಮಿನ್ ಹೆಚ್ಚು ಪರಿಮಾಣದಲ್ಲಿ ಕಂಡುಬರುವುದು. ಕೂದಲಿನ ಮತ್ತು ಚರ್ಮದ ಸ್ವಾಭಾವಿಕವಾದ ಬಣ್ಣದ ತೇಲುವಿಕೆ ಅಥವಾ ಬದಲಾವಣೆ ಈ ರೋಗದ ಪ್ರಧಾನ ಲಕ್ಷಣ. ಕೂದಲಿನ ಗುಂಗುರು ಸ್ವಭಾವ ಬದಲಾಯಿಸಿ ಅದು ನೆಟ್ಟಗೂ ಒಣಗಿದಂತೆಯೂ ಕಾಣುವುದು; ಬೆಳ್ಳಗಾಗುವುದೂ ಉಂಟು. ಚರ್ಮ ಒಣಗುವುದು ಮತ್ತು ಬಿರುಕು ಬಿಡುವುದು ಸಾಮಾನ್ಯವಾಗಿ ಇರುತ್ತದೆ. ಅದು ಕಪ್ಪಾಗಿ, ಸಿಪ್ಪೆ ಸುಲಿಯುವುದೂ ಉಂಟು. ಕ್ರಮೇಣ ಬುದ್ಧಿಮಾಂದ್ಯ, ನಿರುತ್ಸಾಹ ಮತ್ತು ನಿಶ್ಯಕ್ತಿ ತಲೆದೋರಿ ನಿಲುಗಡೆಯಿಲ್ಲದೆ ಭೇದಿಯಿಂದ ಮಗು ನಿರ್ಬಲವಾಗುತ್ತದೆ. ರಕ್ತಹೀನತೆಯೂ ವಿಶೇಷವಾಗಿ ಕಂಡುಬರುವುದು.

ರೋಗ ಬೇರೂರಿದ ಬಳಿಕ ಚಿಕಿತ್ಸೆ ಕಷ್ಟ.. ನಿಯತ ಪ್ರಮಾಣದಲ್ಲಿ ಬೆರೆಸಿದ ಪ್ರೋಟೀನ್ ಪದಾರ್ಥಗಳು ಮತ್ತು ವಿಟಮಿನ್ನುಗಳಿರುವ ಹಾಲನ್ನೂ ಮೈನೀರನ್ನು ಮೂತ್ರದ ಮೂಲಕ ವಿಸರ್ಜಿಸಲು ಉಪಯೋಗಿಸುವ ಮೂತ್ರೋತ್ತೇಜಕ ಔಷಧಿಗಳನ್ನೂ ತಿಂಗಳುಗಟ್ಟಲೆ ಉಪಯೋಗಿಸಬೇಕಾಗುತ್ತದೆ. (ಎ.ಜಿ.ಕೆ.ಆರ್)