ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಷಾರಸಸ್ಯಗಳು
ಕ್ಷಾರಸಸ್ಯಗಳು ಲವಣಯುಕ್ತ ಮಣ್ಣಿನಲ್ಲಿ (ಸಮುದ್ರತೀರ ಮುಂತಾದೆಡೆ) ಬೆಳೆಯುವಂಥ ವಿಶಿಷ್ಟ ಬಗೆಯ ಸಸ್ಯಗಳು (ಹ್ಯಾಲೊಫೈಟ್ಸ್). ಉಪ್ಪು ಹೆಚ್ಚಾಗಿರುವ ಇಂಥ ಮಣ್ಣಿನಲ್ಲಿ ನೀರು ಇದ್ದರೂ ಅದನ್ನು ಸಸ್ಯಗಳು ಸುಲಭವಾಗಿ ಹೀರಿಕೊಳ್ಳಲಾರವು. ಆದೆ ನೀರಿಲ್ಲದೆ ಅವು ಬದುಕಲಾರವು. ಆದ್ದರಿಂದ ಅವುಗಳ ದೇಹದ ಒಳ ಹಾಗೂ ಹೊರ ರಚನೆಗಳಲ್ಲಿ ಹಲವಾರು ರೀತಿಯ ಮಾರ್ಪಾಡುಗಳುಂಟಾಗಿ ಈ ಸಸ್ಯಗಳು ರಚನಾ ವೈವಿಧ್ಯವನ್ನು ಪ್ರದರ್ಶಿಸುತ್ತದೆ. ಸಾಮಾನ್ಯವಾಗಿ ಕ್ಷಾರಸಸ್ಯಗಳು ಏಕವಾರ್ಷಿಕ ಬಗೆಯವು. ಹೆಚ್ಚಿನವುಗಳಲ್ಲಿ ದಪ್ಪನೆಯ ಹಾಗೂ ಮೆತು ತಿರುಳಿನ ಎಲೆ ಮತ್ತು ಕಾಂಡಗಳಿವೆ. ತಾವು ಕಷ್ಟಪಟ್ಟು ಹೀರಿಕೊಂಡ ನೀರನ್ನೆಲ್ಲ ಆದೆಷ್ಟು ಜಾಗರೂಕತೆಯಿಂದ ಬಳಸಿಕೊಳ್ಳುವ ಸಲುವಾಗಿ ನೀರನ್ನು ಸಂಗ್ರಹಿಸುತ್ತದೆ. ಇದರಿಂದಾಗಿ ಈ ಸಸ್ಯಗಳು ರಸಭರಿತವಾಗಿರುತ್ತವೆ. ಉದಾಹರಣೆಗೆ ಸ್ಯಾಲಿಕಾರ್ನಿಯ, ಸಾಲ್ಸೊಲ, ಇತ್ಯಾದಿ. ಇವುಗಳ ಜೀವಕೋಶಗಳ ನಡುವಣ ಅವಕಾಶ ಬಲು ಚಿಕ್ಕದು. ಹೆಚ್ಚಿನ ಪ್ರಮಾಣದಲ್ಲಿ ಲೋಳೆ ಅಂಗಾಂಶಗಳನ್ನು ಪಡೆದಿವೆ. ಸಸ್ಯದೇಹದ ಮೇಲೆಲ್ಲ ಮೇಣದ ಇಲ್ಲವೇ ಕೂದಲುಗಳ ಹೊದಿಕೆಯುಂಟು. ಇದರಿಂದ ಎಲೆಗಳಿಂದ ಕಾಂಡದಿಂದ ಆಗುವ ಬಾಷ್ಪವಿಸರ್ಜನೆಯನ್ನು ತಡೆಯಬಹುದಾಗಿದೆ. ಎಲೆಗಳು ಗಾತ್ರದಲ್ಲಿ ಬಲು ಚಿಕ್ಕವು. ತಂತಿಯಂತೆಯೂ ಚಮಚದಂತೆಯೂ ಇರಬಹುದು. ಕೆಲವೊಮ್ಮೆ ಹುರುಪೆಗಳಮತೆ ಮಾರ್ಪಾಡಾಗಿರುವುದುಂಟು. ಕೆಲವು ಪ್ರಭೇದಗಳಲ್ಲಿ ಎಲೆಗಳೇ ಇರುವುದಿಲ್ಲ. ಕಾಂಡವೂ ಅಷ್ಟ, ಹಲವಾರು ವಿಧಗಳಲ್ಲಿ ಮಾರ್ಪಾಡಾಗಿರುತ್ತವೆ. ಬಹುಪಾಲು ಬಗೆಗಳಲ್ಲಿ ಕಾಂಡ ಭೂಮಿಗೆ ಸಮಾಂತರವಾಗಿ ಬಾಗಿದಂತಿರುತ್ತದೆ. ಇವೆಲ್ಲ ಮಾರ್ಪಾಡುಗಳು ಬಾಷ್ಪವಿಸರ್ಜನೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ.
ಕ್ಷಾರಸಸ್ಯಗಳನ್ನು ಅವು ಬೆಳೆಯುವ ನೆಲೆಯನ್ನವಲಂಬಿಸಿ ಹಲವಾರು ವಿಧಗಳಾಗಿ ವಿಂಗಡಿಸಲಾಗಿದೆ. 1 ಕಲ್ಲುಗಳ ಮೇಲೆ ಬೆಳೆಯುವಂಥವು (ಲಿಥೊಫೈಲಸ್ ಹ್ಯಾಲೊ ಫೈಟ್ಸ್), 2 ಮರಳಿನಲ್ಲಿ ಬೆಳೆಯುವ ಕ್ಷಾರಸಸ್ಯಗಳು (ಸಾಮೊಫೈಲಸ್ ಹ್ಯಾಲೊ ಫೈಟ್ಸ್), 3 ಲವಣಮಿಶ್ರಿತ ಗೋಡು ಮಣ್ಣಿನಲ್ಲಿ ಬೆಳೆಯುವಂಥವು (ಪೆಲೆಫೈಲಸ್ ಹ್ಯಾಲೊಫೈಟ್ಸ್) ಮತ್ತು 4 ಮ್ಯಾಂಗ್ರೋವ್ ಬಗೆಯವು. ಇವುಗಳಲ್ಲೆಲ್ಲ ಮ್ಯಾಗ್ರೋವ್ ಬಗೆಯವು ಸ್ವಾರಸ್ಯಪೂರ್ಣವಾದವು. ಇವು ಸಮುದ್ರ ತೀರದಲ್ಲಿ ಮರಗಳ ರೂಪದಲ್ಲಿ ಬೆಳೆಯುತ್ತವೆ. ಇವುಗಳಲ್ಲಿ ಕೆಲವು ಕವಲು ಬೇರುಗಳು ಭೂಮಿಯ ಮೇಲೆ ಹೊರಟು ಮೇಲ್ಮುಖವಾಗಿ ಬೆಳೆದುಕೊಳ್ಳುತ್ತವೆ. ಈ ಬೇರುಗಳ ಮೇಲೆ ಸಣ್ಣ ರಂಧ್ರಗಳಿದ್ದು ಇವು ಸಸ್ಯದ ಉಸಿರಾಡುವಿಕೆಯಲ್ಲಿ ಸಹಾಯ ಮಾಡುತ್ತವೆ. ಇವಕ್ಕೆ ನ್ಯುಮ್ಯಾಟೋಫೋರುಗಳೆಂದು ಹೆಸರು. ಮ್ಯಾಂಗ್ರೋವ್ ಸಸ್ಯಗಳಲ್ಲಿ ಫಲ ಮರದಿಂದ ಕಳಚಿ ಬೀಳುವ ಮೊದಲೇ ಅದರಲ್ಲಿನ ಬೀಜ ಮೊಳೆತು ದಪ್ಪವಾದ ಪ್ರಥಮ ಮೂಲ ಭಾಗ ಹೊರಬಂದಿರುತ್ತದೆ. ಇದರ ತೂಕ ಅಧಿಕವಾಗುವುದರಿಂದ ಫಲ ಮರದಿಂದ ಕಳಚಿಬಿದ್ದು ಕೆಳಗಿನ ಮೆದುವಾದ ಮಣ್ಣಿನಲ್ಲಿ ಭದ್ರವಾಗಿ ಸಿಕ್ಕಿಕೊಂಡು ಮತ್ತೊಂದು ಗಿಡವಾಗಿ ಮೊಳೆಯುತ್ತದೆ. ಈ ರೀತಿಯ ಬೀಜ ಮೊಳೆಯುವಿಕೆಯನ್ನು ವೈವಿಪರಿ ಎಂದು ಕರೆಯಲಾಗುತ್ತದೆ. ಮ್ಯಾಂಗ್ರೋವ್ ಬಗೆಯ ಕ್ಷಾರಸಸ್ಯಗಳಿಗೆ ಬ್ರುಗ್ವೀರ, ಸೀರಿಯಾಪ್ಸ್, ಅವಿಸಿನಿಯ, ರೈಜಾಫೋರ, ಏಜಿಸಿರಾಸ್ ಮುಂತಾದುವು ಮುಖ್ಯ ಉದಾಹರಣೆಗಳು. ಬಂಗಾಳದಲ್ಲಿನ ಸುಂದರ್ಬನಗಳಲ್ಲಿ ಇವು ಕಾಣದೊರೆಯುತ್ತವೆ. (ಬಿ.ಪಿ.)