ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖ

ವಿಕಿಸೋರ್ಸ್ದಿಂದ

ಕನ್ನಡ ವರ್ಣಮಾಲೆಯಲ್ಲಿನ ಕವರ್ಗದಲ್ಲಿ ಎರಡನೆಯದು. ಮಹಾಪ್ರಾಣಾಕ್ಷರ. ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಮೌರ್ಯರ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅಶೋಕನ ಶಾಸನಗಳಲ್ಲಿ ಇದು ಪ್ರಶ್ನಾರ್ಥಕ ಚಿಹ್ನೆಯಂತಿತ್ತು. ಅನಂತರದ ಶಾತವಾಹನ ಕಾಲದಲ್ಲಿ ಕೆಳಗಿನ ಬಿಂದುವಿನ ಬದಲು ಒಂದು ಸಣ್ಣ ಅಡ್ಡರೇಖೆ ಬಂದು ಸೇರಿತು. ಕದಂಬರ ಕಾಲದಲ್ಲಿ ಮೇಲಿನ ಕೊಂಡಿ ಸಣ್ಣದಾದುದು ಮಾತ್ರವಲ್ಲದೆ ಪೇಟಿಕಾಶಿರದ ತಲೆಕಟ್ಟು ಪ್ರಮುಖವಾಯಿತು. ಬಾದಾಮಿಯ ಚಾಳುಕ್ಯರ ಕಾಲಕ್ಕೆ ಈ ರೂಪದಲ್ಲಿ ಸ್ವಲ್ಪ ಬದಲಾವಣೆಗಳಾದವು. ಅಕ್ಷರ ಅಗಲವಾಯಿತು. ರಾಷ್ಟ್ರಕೂಟರ ಕಾಲಕ್ಕಾಗಲೆ ಇದಕ್ಕೆ ಈಗಿನ ರೂಪ ಬರತೊಡಗಿತ್ತು. ಅಲ್ಲಿಂದ ಮುಂದೆ ಅದೇ ರೂಪ ಸ್ಥಿರವಾಗಿ, ಅಕ್ಷರ ಇನ್ನೂ ದುಂಡಗಾಗಿ ಕಲ್ಯಾಣದ ಚಾಳುಕ್ಯರ ಮತ್ತು ವಿಜಯನಗರ ಕಾಲಗಳಲ್ಲಿಯೂ ಅನಂತರದ ಕಾಲಗಳಲ್ಲಿಯೂ ನಡೆದು ಬರುತ್ತಿರುವುದನ್ನು ಗುರುತಿಸಬಹುದಾಗಿದೆ. ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ಮಹಾಪ್ರಣ ಧ್ವನಿಯನ್ನು ಸೂಚಿಸುತ್ತದೆ. (ಎ.ವಿ.ಎನ್.)