ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಂಡಕಾವ್ಯ

ವಿಕಿಸೋರ್ಸ್ದಿಂದ

ಖಂಡಕಾವ್ಯ- ಮಹಾಕಾವ್ಯಕ್ಕೆ ಹೇಳಿರುವ ಲಕ್ಷಣಗಳಲ್ಲಿ ಕೆಲವು ಮಾತ್ರ ಇರುವ ಪದ್ಯಕಾವ್ಯಕ್ಕೆ ಈ ಹೆಸರಿದೆ. ಈಗ ಖಂಡಕಾವ್ಯಗಳೆಂದು ಪರಿಗಣಿತವಾಗಿರುವ ಸಂಸ್ಕøತಕಾವ್ಯಗಳನ್ನು ಪರಿಶೀಲಿಸಿದರೆ ಅವು ಕೆಲವು ಸನ್ನಿವೇಶ ವಿಶೇಷಗಳಲ್ಲಿ ಕವಿಗುಂಟಾದ ರಸಮಯ ಅನುಭವವನ್ನೋ ಅಥವಾ ಆಗ ಕವಿಯಲ್ಲಿ ತಾನಾಗಿ ಮೂಡಿ ಒಂದು ಭಾವಗಳನ್ನೋ ಪ್ರಕಟಪಡಿಸುವ, ಲಿರಿಕ್ ಪೊಯಮ್ ಎಂದು ಇಂಗ್ಲಿಷಿನಲ್ಲಿ ಸಿದ್ಧವಾಗಿರುವ ಕಾವ್ಯರೂಪಗಳೇ ಆಗಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಭಾವಗೀತಾತ್ಮಕ ಖಂಡಕಾವ್ಯಗಳಲ್ಲಿ ಭಕ್ತಿಪ್ರಧಾನವಾದ ಶೃಂಗಾರಪ್ರಧಾನವಾದ ಎರಡು ಬಗೆಗಳಿವೆ. ಭಕ್ತಿಪ್ರಧಾನವಾದ ಭಾವಗೀತೆಗಳನ್ನು ಋಗ್ವೇದ, ರಾಮಾಯಣ, ಭಾರತ ಮುಂತಾದುವುಗಳಲ್ಲೂ ಅನಂತರ ಕಾಲದ ಭಗವತ್ ಸ್ತೋತ್ರಗಳಲ್ಲೂ ವಿಶೇಷವಾಗಿ ಕಾಣಬಹುದು. ಶೃಂಗಾರ ಪ್ರಧಾನವಾದುವು ಮುಕ್ತಕಗಳಾಗಿಯೂ ಸರ್ಗಾತ್ಮಕ ವಿದ್ಯಕಾವ್ಯಗಳಾಗಿಯೂ ಹೇರಳವಾಗಿವೆ. ಇವುಗಳಲ್ಲಿ ಶೃಂಗಾರಮಯ ಸನ್ನಿವೇಶಗಳೂ ಹಾವಭಾವಗಳ ವರ್ಣನೆಯೂ ಪ್ರಮುಖವಾಗಿದ್ದರೂ ಪ್ರಕೃತಿಸೌಂದರ್ಯ ಚಿತ್ರಣ ಅವುಗಳೊಡನೆ ಹೆಣೆದುಕೊಂಡಿರುತ್ತದೆ. ಈಗ ಉಪಲಬ್ಧವಾಗಿರುವ ಈ ಬಗೆಯ ಕಾವ್ಯಗಳಲ್ಲಿ ಕಾಳಿದಾಸನ ಎರಡು ಸರ್ಗಗಳುಳ್ಳ ಮೇಘದೂತ ಅತ್ಯಂತ ಪ್ರಾಚೀನವಷ್ಟೇ ಅಲ್ಲದೆ ಉತ್ತಮವಾದುದೂ ಹೌದು. ಅದೇ ಕವಿಯ ಋತುಸಂಹಾರ, ಬಿಲ್ಹಣನ ಚೋರಪಂಚಾಶಿಕೆ, ಭರ್ತೃಹರಿಯ ಶೃಂಗಾರಶತಕ, ಅಮರು ಕವಿಯ ಅಮರುಶತಕ, ವೇದಾಂತ ದೇಶಿಕರ ಹಂಸಸಂದೇಶ, ಜಯದೇವನ ಗೀತಗೋವಿಂದ ಇವು ಇತರ ಕೆಲವು ಉಲ್ಲೇಖನೀಯ ಖಂಡಕಾವ್ಯಗಳು. ಸಂಸ್ಕøತದಲ್ಲಿ ಹೇರಳವಾಗಿರುವ ನೀತಿಬೋಧಕ ಕಾವ್ಯಗಳೂ ಖಂಡಕಾವ್ಯಗಳೇ.

ಕನ್ನಡದಲ್ಲಿ ಬೇಂದ್ರೆಯವರ ಸಖೀಗೀತವನ್ನೂ ಎಸ್.ವಿ. ಪರಮೇಶ್ವರಭಟ್ಟರ ಇಂದ್ರಚಾಪದಲ್ಲಿನ ಆತ್ಮಕಥಾರೂಪದ ಮೊದಲ 300 ಸಾಂಗತ್ಯಗಳ ಕಂತನ್ನೂ ಖಂಡಕಾವ್ಯಗಳೆನ್ನಬಹುದು. (ಎಸ್.ಆರ್.ಎ.ಎನ್.)