ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಜಾನೆ ಠೇವಣಿ ರಸೀತಿ

ವಿಕಿಸೋರ್ಸ್ದಿಂದ

ಖಜಾನೆ ಠೇವಣಿ ರಸೀತಿ

ಎರಡನೆಯ ಮಹಾಯುದ್ಧದ ಕಾಲದಲ್ಲಿ ಇಂಗ್ಲೆಂಡಿನ ಸರ್ಕಾರ ವಾಣಿಜ್ಯ ಬ್ಯಾಂಕುಗಳಿಂದ ಪಡೆದುಕೊಂಡ ಕಡ್ಡಾಯದ ಸಾಲಕ್ಕೆ ಪ್ರತಿಯಾಗಿ ನೀಡುತ್ತಿದ್ದ ರಸೀತಿ (ಟ್ರೆಷರಿ ಡಿಪಾಸಿಟ್ ರೆಸಿಟ್). ಇದನ್ನು ಪ್ರಥಮವಾಗಿ ನೀಡಲಾದ್ದು 1940ರ ಜುಲೈ ತಿಂಗಳಲ್ಲಿ. ಖಜಾನೆ ಠೇವಣಿ ರಸೀತಿಗಳ ಹಣದ ಮೇಲೆ ನೀಡುತ್ತಿದ್ದ ಬಡ್ಡಿ 1 1/2%. ಇವು ಐದು, ಆರು ಮತ್ತು ಏಳು ತಿಂಗಳುಗಳ ಅವಧಿಯವುಗಳಾಗಿದ್ದುವು. ಇವನ್ನು ಹಣ ಮಾರುಕಟ್ಟೆಯಲ್ಲಿ ವಿಕ್ರಯ ಮಾಡುವಂತಿರಲಿಲ್ಲ; ಅಥವಾ ನಗದು ರೂಪಕ್ಕೆ ಪರಿವರ್ತಿಸಲು ಬರುವಂತಿರಲಿಲ್ಲ. ಅಂಥ ರಸೀತಿಗಳನ್ನು ಅವಧಿಗೆ ಮೊದಲೇ ನಗದಿಗೆ ಮುರಿಸಲು ಇದ್ದ ಒಂದೇ ಒಂದು ಸಾಧ್ಯತೆಯೆಂದರೆ, ಇಂಗ್ಲೆಂಡಿನ ಬ್ಯಾಂಕಿನಲ್ಲಿ ವಟಾಯಿಸುವುದು. ಆದರೆ ಹೀಗೆ ಮಾಡುವಾಗ ಇಂಗ್ಲೆಂಡಿನ ಬ್ಯಾಂಕು ತನ್ನ ಅಧಿಕೃತ ದರವನ್ನು (ಬ್ಯಾಂಕು ದರ) ವಿಧಿಸುತ್ತಿದ್ದುದರಿಂದ ಬ್ಯಾಂಕುಗಳಿಗೆ ನಷ್ಟವಾಗುತ್ತಿತ್ತು. ಆದ್ದರಿಂದ ಇವು ಕರೆ ಹಣ, ವಟಾಯಿಸಿದ ಹುಂಡಿ ಮುಂತಾದವಕ್ಕಿಂತ ಕಡಿಮೆ ದ್ರವತ್ವವುಳ್ಳ ಪ್ರತಿಭೂತಿಗಳೆಂದು (ಸೆಕ್ಯೂರಿಟೀಸ್) ಬ್ಯಾಂಕುಗಳು ಭಾವಿಸುತ್ತಿದ್ದವು. ಕಡಿಮೆ ಬಡ್ಡಿ ದರದಿಂದಾಗಿ ಇವು ಲಾಭಪ್ರದವೂ ಆಗಿರಲಿಲ್ಲ. ಇವು ಕೇವಲ ಯುದ್ಧಕಾಲದಲ್ಲಿ ಹಣ ಎತ್ತುವ ಸಾಧನವಾಗಿದ್ದುವು. 1945ರಲ್ಲಿ ಖಜಾನೆ ಠೇವಣಿ ರಸೀತಿಗಳ ಮೊತ್ತ 180 ಕೋಟಿ ಪೌಂ. ಆಗಿತ್ತು. ಅನಂತರ ಅವುಗಳ ಸ್ಥಾನದಲ್ಲಿ ಕ್ರಮಕ್ರಮವಾಗಿ ಖಜಾನೆ ಹುಂಡಿ (ನೋಡಿ- ಖಜಾನೆ-ಹುಂಡಿ) ಗಳು ಬಂದವು. ಇವು ಅದೃಶ್ಯವಾಗುವುದೆಂದು ತಿಳಿದಾಗ ಬ್ಯಾಂಕುಗಳು ಆ ತೀರ್ಮಾನವನ್ನು ಸ್ವಾಗತಿಸಿದುವು. 1956ರಲ್ಲಿ ಇವನ್ನು ಪುನಃ ಜಾರಿಗೆ ತರುವ ವಿಚಾರವನ್ನು ಪರಿಶೀಲಿಸಲಾಯಿತಾದರೂ ಆ ಸೂಚನೆಯನ್ನು ತಳ್ಳಿಹಾಕಲಾಯಿತು. ಬ್ರಿಟನ್ನಿನ ಹಣ ವ್ಯವಸ್ಥೆಯ ಬಗ್ಗೆ 1959ರಲ್ಲಿ ಸಲ್ಲಿಸಲಾದ ರ್ಯಾಡ್ ಕ್ಲಿಫ್ ಸಮಿತಿಯ ವರದಿಯಲ್ಲೂ ಇವನ್ನು ಮತ್ತೆ ಜಾರಿಗೆ ತರಬೇಕೆಂದು ಹೇಳಿಲ್ಲ. (ಸಿ.ಸಿ.ಪಿ.)